ಗದಗ: ದೇಶವೇ ‘ಆಜಾದಿ ಕಾ ಅಮೃತ್ ಮಹೋತ್ಸವ’ ಆಚರಿಸುತ್ತಿರುವಾಗ ಗದಗ ಪಟ್ಟಣದಿಂದ 13 ಕಿ.ಮೀ ದೂರದಲ್ಲಿರುವ ಶ್ಯಾಗೋಟಿ ಗ್ರಾಮದಲ್ಲಿ ಮಂಗಳವಾರ ಅಸ್ಪೃಶ್ಯತೆಯ ಘಟನೆಯೊಂದು ವರದಿಯಾಗಿದೆ.
ಮದುಮಗನಾಗಿದ್ದ ರೈತ ಶರಣು ಮಾದರ ಮತ್ತು ಆತನ ಕುಟುಂಬಸ್ಥರು ದೇವರ ಕಾರ್ಯವೆಂಬ ವಿವಾಹ ಪೂರ್ವ ಆಚರಣೆಗಾಗಿ ದೇವಸ್ಥಾನಕ್ಕೆ ತೆರಳುತ್ತಿದ್ದಾಗ ಈ ಘಟನೆ ನಡೆದಿದೆ. ಅವರು ತೆರಳುತ್ತಿದ್ದಂತೆ ದಾರಿಯುದ್ದಕ್ಕೂ ಎಲ್ಲಾ ಅಂಗಡಿಗಳು ಮತ್ತು ಅವರು ಆಚರಣೆ ಮಾಡಲು ಹೊರಟಿದ್ದ ದ್ಯಾಮವ್ವ ದೇವಸ್ಥಾನವನ್ನು ಸಹ ಮುಚ್ಚಲಾಗಿದೆ. ಮೇಲ್ಜಾತಿಗೆ ಸೇರಿದ ಕೆಲವರ ಆದೇಶದ ಮೇರೆಗೆ ಅಂಗಡಿಗಳು ಮತ್ತು ದೇವಸ್ಥಾನವನ್ನು ಮುಚ್ಚಲಾಗಿದೆ. ಅಲ್ಲದೆ, ಕೆಳವರ್ಗದ ಜನರಿಗೆ ಬೆಂಬಲ ನೀಡಿದರೆ 2,500 ರೂ. ದಂಡ ವಸೂಲಿ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಕುಟುಂಬದವರು ಆರೋಪಿಸಿದ್ದಾರೆ.
ಜನವರಿ 21ರಂದು ನಡೆದ ಕಾರ್ಯಕ್ರಮದಲ್ಲಿ ಅಸ್ಪೃಶ್ಯತೆ ಆಚರಣೆಯ ಸಮಸ್ಯೆಯನ್ನು ಗದಗ ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಗಿದ್ದು, ಗ್ರಾಮಕ್ಕೆ ಭೇಟಿ ನೀಡಿ ಸಮಸ್ಯೆ ಬಗೆಹರಿಸುವಂತೆ ತಹಶೀಲ್ದಾರ್ ಅವರಿಗೆ ಸೂಚಿಸಿದರು. ಆದರೆ, ಯಾವುದೇ ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳದ ಕಾರಣ ಸಮಸ್ಯೆ ಮರುಕಳಿಸಿದ್ದು, ಪೊಲೀಸರನ್ನು ನಿಯೋಜಿಸಬೇಕಾಯಿತು.
ದೇವಸ್ಥಾನವನ್ನು ಏಕೆ ಮುಚ್ಚಲಾಗಿದೆ ಎಂದು ಶರಣು ಅವರ ಕುಟುಂಬಸ್ಥರನ್ನು ವಿಚಾರಿಸಿದಾಗ ಮುಂಜಾನೆಯಿಂದಲೇ ದೇವಸ್ಥಾನವನ್ನು ಮುಚ್ಚಲಾಗಿದೆ ಎಂದು ತಿಳಿಸಿದ್ದಾರೆ. ಈಮಧ್ಯೆ, ಸಂತ್ರಸ್ತರ ಕುಟುಂಬದವರು ತಹಶೀಲ್ದಾರ್‌ಗೆ ದೂರು ನೀಡಿದ್ದಾರೆ. ಅವರ ಪ್ರಕಾರ, ದೇವಾಲಯವು ಬೆಳಿಗ್ಗೆ ತೆರೆದಿತ್ತು ಮತ್ತು ಶರಣು ಅವರ ಕುಟುಂಬ ಸದಸ್ಯರು ಮತ್ತು ಸಂಬಂಧಿಕರು ದೇವಾಲಯಕ್ಕೆ ಹೋಗುತ್ತಿರುವ ಸುದ್ದಿ ಹರಡಿದ ನಂತರವೇ ಸಂಬಂಧಪಟ್ಟವರು ಮುಚ್ಚಿದರು ಎಂದಿದ್ದಾರೆ.
ಶರಣು ಮಾತನಾಡಿ, 'ನಮ್ಮ ಕುಟುಂಬದಲ್ಲಿ ಯಾವುದೇ ಕಾರ್ಯಕ್ರಮಗಳು ನಡೆದಾಗ ಎಲ್ಲಾ ಅಂಗಡಿಗಳನ್ನು ಮುಚ್ಚಲಾಗುತ್ತದೆ. ದಂಡ ಕಟ್ಟಲು ಹೆದರಿ ಅಂಗಡಿ ಮಾಲೀಕರು ಅಂಗಡಿ ಮುಂಗಟ್ಟು ಬಂದ್ ಮಾಡಿದರು. ಹಲವು ಗ್ರಾಮಗಳಲ್ಲಿ ಇದೇ ಪರಿಸ್ಥಿತಿ ಇದೆ. ಅಂಗಡಿಯ ಮಾಲೀಕರು ಬಹಿರಂಗವಾಗಿ ಕಾರಣವನ್ನು ಬಹಿರಂಗಪಡಿಸದಿದ್ದರೂ, ನಾವು ಕೇಳುವ ಉತ್ಪನ್ನವು ಲಭ್ಯವಿಲ್ಲ ಎಂದು ಹೇಳುವ ಮೂಲಕ ನಮಗೆ ನೀಡಲು ನಿರಾಕರಿಸುತ್ತಾರೆ ಎಂದು ತಿಳಿಸಿದರು.
ತಹಶೀಲ್ದಾರ್ ಹಾಗೂ ಅಧಿಕಾರಿಗಳು ಈ ಹಿಂದೆ ದೇವಸ್ಥಾನದಲ್ಲಿ ಶಾಂತಿ ಸಭೆ ನಡೆಸಿದ್ದಾರೆ. ಮೇಲ್ಜಾತಿಯ ಜನರು ಸಭೆಯಲ್ಲಿ ನಿಯಮಗಳನ್ನು ಪಾಲಿಸಲು ಒಪ್ಪುತ್ತಾರೆ ಆದರೆ, ನಂತರ ಪಾಲಿಸುವುದಿಲ್ಲ. ಈ ಪದ್ಧತಿ ಹೊಸದಲ್ಲ, ದಶಕಗಳಿಂದ ಗುಟ್ಟಾಗಿ ನಡೆದುಕೊಂಡು ಬರುತ್ತಿದೆ ಎನ್ನುತ್ತಾರೆ ಗ್ರಾಮಸ್ಥರು.
ಗದಗ ತಹಶೀಲ್ದಾರ್ ಕಿಶನ್ ಕಲಾಲ್ ಮಾತನಾಡಿ, ಸಾಮಾಜಿಕ ಸಮಾನತೆ ಕುರಿತು ಜಾಗೃತಿ ಮೂಡಿಸಲು ಗ್ರಾಮದಲ್ಲಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಿ ಅಧಿಕಾರಿಗಳ ತಂಡವನ್ನು ರಚಿಸಿದ್ದೇವೆ. ಮಂಗಳವಾರ ಯಾವುದೇ ಅಹಿತಕರ ಘಟನೆ ನಡೆದಿಲ್ಲ. ಈ ಪದ್ಧತಿಯನ್ನು ನಿರ್ಮೂಲನೆ ಮಾಡಲು ಕಠಿಣ ನಿಯಮಗಳನ್ನು ತರಲು ನಾವು ಯೋಚಿಸುತ್ತಿದ್ದೇವೆ ಎಂದರು.
Advertisement