ಬೆಂಗಳೂರು: ಮಂಗಳೂರು ಕುಕ್ಕರ್ ಸ್ಫೋಟದ ಆರೋಪಿ ಮೊಹಮ್ಮದ್ ಶಾರಿಕ್ ಚೇತರಿಸಿಕೊಂಡ ನಂತರ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಆತನನ್ನು ಕಸ್ಟಡಿಗೆ ತೆಗೆದುಕೊಳ್ಳಲು ಸಿದ್ಧವಾಗಿದೆ ಎಂದು ಮೂಲಗಳು ತಿಳಿಸಿವೆ.
ಸುಟ್ಟ ಗಾಯಗಳಿಂದ ಇಲ್ಲಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಶಾರಿಕ್, ಗಾಯಗಳಿಂದ ಚೇತರಿಸಿಕೊಂಡಿರುವುದಾಗಿ ತಿಳಿದುಬಂದಿದೆ.
ಆತ ಚೇತರಿಸಿಕೊಂಡ ನಂತರ, ಎನ್‌ಐಎ ಆತನನ್ನು ವಿಚಾರಣೆಗಾಗಿ ಕಸ್ಟಡಿಗೆ ತೆಗೆದುಕೊಳ್ಳಲು ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ.
ನವೆಂಬರ್ 19 ರಂದು ಮಂಗಳೂರಿನಲ್ಲಿ ಆಟೋರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದಾಗ ಕೈಯಲ್ಲಿದ್ದ ಕುಕ್ಕರ್ ಬಾಂಬ್ ಸ್ಫೋಟಗೊಂಡು ಶಾರಿಕ್ ಗಾಯಗೊಂಡಿದ್ದನು. ಆತನೊಂದಿಗೆ ಆಟೋ ರಿಕ್ಷಾ ಚಾಲಕನೂ ಗಾಯಗೊಂಡಿದ್ದು, ಆರೋಪಿಗೆ ಶೇ 40ರಷ್ಟು ಸುಟ್ಟ ಗಾಯಗಳಾಗಿವೆ.
ಈ ಕುರಿತು ತನಿಖೆ ನಡೆಸಲು ಆತ ಜೀವಂತವಾಗಿರುವುದು ಅನಿವಾರ್ಯವಾದ ಕಾರಣ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ.
ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ಮೂಲದ ಶಾರಿಕ್, ಭಯೋತ್ಪಾದಕ ಸಂಘಟನೆಯಾದ ಇಸ್ಲಾಮಿಕ್ ಸ್ಟೇಟ್‌ನಿಂದ ಪ್ರೇರಿತನಾಗಿದ್ದನು ಮತ್ತು ಶಿವಮೊಗ್ಗ ಪಟ್ಟಣದಲ್ಲಿ ಇದೇ ರೀತಿಯ ಐಎಸ್ ನೆಲೆಯನ್ನು ಸ್ಥಾಪಿಸಲು ಯೋಜಿಸುತ್ತಿದ್ದನು ಎನ್ನಲಾಗಿದೆ.
Advertisement