ಉಡುಪಿ: ಇಡೀ ಜಗತ್ತಿನಲ್ಲಿ ಶಾಂತಿ ಬಯಸುವ ಏಕೈಕ ಧರ್ಮ ಎಂದರೆ ಅದು ಹಿಂದೂ ಧರ್ಮ ಎಂದು ಆರ್‌ಎಸ್‌ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಅವರು ಭಾನುವಾರ ಹೇಳಿದರು.
ಮಣಿಪಾಲದ ಶಿವಪಾಡಿ ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ಭಾನುವಾರ ನಡೆದ ಧಾರ್ಮಿಕ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಮಾಜದಲ್ಲಿ ಕೆಲ ಪಟ್ಟಭದ್ರ ಹಿತಾಸಕ್ತಿಗಳು ಹಿಂದೂ ಧರ್ಮವನ್ನು ಜಾತ್ಯಾತೀತ ಧರ್ಮ ಎಂದು ಬಿಂಬಿಸಲು ಯತ್ನಿಸುತ್ತಿದ್ದಾರೆ. ಹಲವಾರು ಆಕ್ರಮಣಕಾರರು ಹಿಂದೂ ದೇವಾಲಯಗಳನ್ನು ಧ್ವಂಸ ಮಾಡಲು ಪ್ರಯತ್ನಿಸಿದರೂ, ಹಿಂದೂ ಧರ್ಮವು ಎಲ್ಲಾ ಆಕ್ರಮಣಗಳನ್ನು ಸಹಿಸಿಕೊಂಡಿದೆ ಎಂದು ಹೇಳಿದರು.
ಈಗಲೂ ಹಿಂದೂ ಧರ್ಮವನ್ನು ಕೆಟ್ಟದಾಗಿ ಬಣ್ಣಿಸುವ ವ್ಯವಸ್ಥಿತ ಪ್ರಯತ್ನ ನಡೆಯುತ್ತಿದೆ. “ಕೆಲವರು ಹಿಂದೂ ಧರ್ಮವನ್ನು ಜಾತ್ಯತೀತವಲ್ಲ ಎಂದು ಬಿಂಬಿಸಲು ಪ್ರಯತ್ನಿಸುತ್ತಿರಬಹುದು, ಆದರೆ, ಅದು ವ್ಯರ್ಥ ಪ್ರಯತ್ನವಾಗಿದೆ. ಹಿಂದೂ ಧರ್ಮವು ಸೆಮಿಟಿಕ್ ಧರ್ಮವಲ್ಲ, ಇದು ಜೀವನ ವಿಧಾನವಾಗಿದೆ. ಹಿಂದೂ ಧರ್ಮವು ಧಾರ್ಮಿಕ ಜೀವನವನ್ನು ನಡೆಸಲು ದಾರಿ ತೋರಿಸುತ್ತದೆ. ಮೊಘಲ್ ದೊರೆಗಳು ಮತ್ತು ಕ್ರಿಶ್ಚಿಯನ್ ಧರ್ಮದ ಅನುಯಾಯಿಗಳು ಈ ರಾಷ್ಟ್ರದ ಮೇಲೆ ದಾಳಿ ಮಾಡಿ ಈ ನೆಲದ ಹೆಮ್ಮೆಯನ್ನು ನಾಶಮಾಡಲು ಪ್ರಯತ್ನಿಸಿದರೂ, ಹಿಂದೂ ಧರ್ಮವು ಹಾಗೇ ಉಳಿದಿದೆ ಎಂದು ತಿಳಿಸಿದರು.
ಸ್ತ್ರೀ ರೂಪದಲ್ಲಿ ಭಗವಂತನನ್ನು ಪೂಜಿಸುವ ಏಕೈಕ ರಾಷ್ಟ್ರ ಭಾರತವಾಗಿದೆ. ಭಾರತೀಯರು ಸ್ತ್ರೀ ಶಕ್ತಿಯನ್ನು ಪೂಜಿಸುತ್ತಾರೆ. ಈ ಎಲ್ಲ ಶ್ರೇಷ್ಠ ಸಂಸ್ಕೃತಿಗಳನ್ನು ನಾಶ ಮಾಡುವ ಪ್ರಯತ್ನಗಳು ಹಿಂದೆ ನಡೆದಿದ್ದವು. ಹಿಂದೂಗಳ ನಂಬಿಕೆ ವ್ಯವಸ್ಥೆಗಳನ್ನು ಹಿಂದೆ ಮೂಢ ನಂಬಿಕೆಗಳೆಂದು ತಪ್ಪಾಗಿ ಚಿತ್ರಿಸಲಾಗಿತ್ತು, ಕೆಲವರು ಈಗಲೂ ಆ ಪ್ರಯತ್ನವನ್ನು ಮುಂದುವರೆಸುತ್ತಿದ್ದಾರೆ. ಇದು ದುರದೃಷ್ಟಕರ ಬೆಳವಣಿಗೆ ಎಂದು ಬೇಸರ ವ್ಯಕ್ತಪಡಿಸಿದರು.
Advertisement