5 ಗ್ಯಾರಂಟಿ ಯೋಜನೆ ಶೀಘ್ರವಾಗಿ ಪೂರ್ಣಗೊಳಿಸಿ: ಸ್ವಪಕ್ಷ ನಾಯಕರಿಂದಲೇ ಸಿಎಂಗೆ ಹೆಚ್ಚಿದ ಒತ್ತಡ!

ಸರ್ಕಾರ ರಚನೆಯಾದ ಬೆನ್ನಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯ ಬಜೆಟ್ ಮಂಡನೆಗೆ ಸಿದ್ಧತೆಗಳ ನಡೆಸುತ್ತಿದ್ದು, ಈ ನಡುವಲ್ಲೇ 5 ಗ್ಯಾರಂಟಿ ಯೋಜನೆಗಳ ಶೀಘ್ರಗತಿಯಲ್ಲಿ ಜಾರಿಗೊಳಿಸುವಂತೆ ಸ್ವಪಕ್ಷ ನಾಯಕರೇ ಸಿದ್ದರಾಮಯ್ಯ ಅವರ ಮೇಲೆ ಒತ್ತಡ ಹೇರುತ್ತಿದ್ದಾರೆಂದು ಮೂಲಗಳಿಂದ ತಿಳಿದುಬಂದಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ಬೆಂಗಳೂರಿನ ತಮ್ಮ ನಿವಾಸದಲ್ಲಿ ಜನತಾದರ್ಶನದ ವೇಳೆ ಜನರೊಂದಿಗೆ ಸಂವಾದ ನಡೆಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ಬೆಂಗಳೂರಿನ ತಮ್ಮ ನಿವಾಸದಲ್ಲಿ ಜನತಾದರ್ಶನದ ವೇಳೆ ಜನರೊಂದಿಗೆ ಸಂವಾದ ನಡೆಸಿದರು.

ಮೈಸೂರು: ಸರ್ಕಾರ ರಚನೆಯಾದ ಬೆನ್ನಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯ ಬಜೆಟ್ ಮಂಡನೆಗೆ ಸಿದ್ಧತೆಗಳ ನಡೆಸುತ್ತಿದ್ದು, ಈ ನಡುವಲ್ಲೇ 5 ಗ್ಯಾರಂಟಿ ಯೋಜನೆಗಳ ಶೀಘ್ರಗತಿಯಲ್ಲಿ ಜಾರಿಗೊಳಿಸುವಂತೆ ಸ್ವಪಕ್ಷ ನಾಯಕರೇ ಸಿದ್ದರಾಮಯ್ಯ ಅವರ ಮೇಲೆ ಒತ್ತಡ ಹೇರುತ್ತಿದ್ದಾರೆಂದು ಮೂಲಗಳಿಂದ ತಿಳಿದುಬಂದಿದೆ.

ಪಂಚಾಯತ್, ಬಿಬಿಎಂಪಿ ಹಾಗೂ ಲೋಕಸಭಾ ಚುನಾವಣೆ ಹತ್ತಿರ ಬರುತ್ತಿದ್ದು, ಗೆಲುವು ದಾಖಲಿಸಲು ಬಯಸಿದ್ದೇ ಆದರೆ, ಶೀಘ್ರಗತಿಯಲ್ಲಿ 5 ಗ್ಯಾರಂಟಿಗಳ ಪೂರ್ಣಗೊಳಿಸುವಂತೆ ಒತ್ತಡ ಹೇರುತ್ತಿದ್ದಾರೆಂದು ಹೇಳಲಾಗುತ್ತಿದೆ.

ಚುನಾವಣಾ ಪ್ರಚಾರದ ವೇಳೆ ಅಧಿಕಾರಕ್ಕೆ ಬಂದ ಮೊದಲ ಸಚಿವ ಸಂಪುಟದಲ್ಲೇ 5 ಗ್ಯಾರಂಟಿಗಳ ಜಾರಿಗೆ ತರುವುದಾಗಿ ಕಾಂಗ್ರೆಸ್ ಹೇಳಿತ್ತು. ಆದರೆ, ಅಧಿಕಾರಕ್ಕೆ ಬಂದ ಬಳಿಕ ಯೋಜನೆಗಳ ಜಾರಿಗೊಳಿಸಲು ಸಂಕಷ್ಟ ಎದುರಾಗಿದ್ದು, ಹಲವು ನಿಯಮಗಳನ್ನು ಹೇರಲಾಗುತ್ತಿದೆ. ಅನ್ನಭಾಗ್ಯ ಯೋಜನೆಗೆ ಅಕ್ಕಿ ಪಡೆಯಲು ಸಾಧ್ಯವಾಗದ ಕಾರಣ 5 ಕೆಜಿ ಅಕ್ಕಿಯ ಬದಲಿಗೆ ಹಣ ನೀಡುವುದಾಗಿ ಈಗಾಗಲೇ ಸರ್ಕಾರ ಘೋಷಣೆ ಮಾಡಿದೆ.

ಗೃಹ ಜ್ಯೋತಿ ಯೋಜನೆ ವಿಚಾರದಲ್ಲಿ ಇದೇ ರೀತಿ ಮಾಡಲಾಗಿದೆ. ಎಲ್ಲರಿಗೂ 200 ಯುನಿಟ್ ಉಚಿತ ವಿದ್ಯುತ್ ನೀಡುವುದಾಗಿ ಭರವಸೆ ನೀಡಲಾಗಿತ್ತು. ಆದರೆ, ಸರ್ಕಾರವು ಈಗ 12 ತಿಂಗಳ ಸರಾಸರಿ ವಿದ್ಯುತ್ ಬಳಕೆಯನ್ನು ಲೆಕ್ಕ ಹಾಕಿ ನಂತರ ಫಲಾನುಭವಿಗಳಿಗೆ ಮಾತ್ರ ಯೋಜನೆ ಸಿಗಲಿದೆ ಎಂದು ಹೇಳಲಾಯಿತು.

ಇನ್ನು ಕುಟುಂಬ ಒಬ್ಬ ಮಹಿಳೆಗೆ ಮಾಸಿಕ ರೂ.2,000 ನೀಡುವುದಾಗಿ ಗೃಬಹ ಲಕ್ಷ್ಮೀ ಯೋಜನೆಯನ್ನು ಘೋಷಣೆ ಮಾಡಲಾಗಿತ್ತು. ಆದರೆ, ಆದಾಯ ತೆರಿಗೆ ಪಾವತಿದಾರರು ಮತ್ತು ಜಿಎಸ್ಟಿ ಸಂಖ್ಯೆ ಹೊಂದಿರುವವರು ಫಲಾನುಭವಿಗಳಾಗುವುದಿಲ್ಲ ಎಂದು ಹೇಳಲಾಯಿತು.

ಗ್ಯಾರಂಟಿ ಯೋಜನೆಗಳಿಗೆ ಷರತ್ತುಗಳ ಹೇರಳು ಸರ್ಕಾರ ಮುಂದಾದ ಹಿನ್ನೆಲೆಯಲ್ಲಿ ಯೋಜನೆ ಜಾರಿ ವಿಳಂಬವಾಗಲು ಕಾರಣವಾಗಿದೆ ಎಂದು ಹೇಳಲಾಗುತ್ತಿದೆ.

ಹಿರಿಯ ಶಾಸಕರೊಬ್ಬರು ಮಾತನಾಡಿ, ಜೆಡಿಎಸ್ ನಾಯಕ ಎಚ್‌ಡಿ ಕುಮಾರಸ್ವಾಮಿ ಮತ್ತು ಬಿಜೆಪಿ ನಾಯಕತ್ವವು ಕಾಂಗ್ರೆಸ್ ವಿರುದ್ಧ ಸುಳ್ಳು ಸುದ್ದಿಗಳನ್ನು ಹಬ್ಬಿಸುತ್ತಿದೆ. ಗ್ಯಾರಂಟಿ ಯೋಜನಗೆಳಿಗೆ ವಿಧಿಸಲಾಗುತ್ತಿರುವ ಷರತ್ತುಗಳು ಜನರನ್ನು ಗೊಂದಲಕ್ಕೊಳಗಾಗುವಂತೆ ಮಾಡುತ್ತಿದೆ. ಇದರಿಂದ ಪಂಚಾಯತ್, ಬಿಬಿಎಂಪಿ ಮತ್ತು ಲೋಕಸಭೆ ಚುನಾವಣೆಗಳಲ್ಲಿ ಗೆಲುವು ಸಾಧಿಸುವುದು ಕಷ್ಟಕರವಾಗುತ್ತದೆ ಎಂದು ಹೇಳಿದ್ದಾರೆ.

ಶೇ.80ರಷ್ಟು ಮತದಾರರು ಪಂಚಾಯಿತಿಗಳ ಅಡಿಯಲ್ಲಿ ಬರುತ್ತಾರೆ. ಗ್ಯಾರಂಟಿ ಯೋಜನೆಗಳನ್ನು ಶೀಘ್ರವಾಗಿ ಜಾರಿಗೊಳಿಸದಿದ್ದರೆ ಅವರು ಕಾಂಗ್ರೆಸ್ ವಿರುದ್ಧ ಮತ ಚಲಾಯಿಸುವ ಸಾಧ್ಯತೆಗಳು ಹೆಚ್ಚಾಗಿದೆ ಎಂದು ತಿಳಿಸಿದ್ದಾರೆ.

ಲೋಕಸಭೆ ಚುನಾವಣೆ ಹತ್ತಿರಬರುತ್ತಿದ್ದು, ಈ ಸಮಯದಲ್ಲಿ ಸರ್ಕಾರ ಕಾಲಹರಣ ಮಾಡಬಾರದು. ಗ್ಯಾರಂಟಿ ಯೋಜನೆಗಳ ಅನುಷ್ಠಾನವು ಲೋಕಸಭಾ ಚುನಾವಣಾ ಫಲಿತಾಂಶದ ಹಾಗೂ ರಾಷ್ಟ್ರೀಯ ಮಟ್ಟದಲ್ಲಿ ಪಕ್ಷದ ಪುನರುಜ್ಜೀವನವನ್ನು ನಿರ್ಧರಿಸುತ್ತದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಕನಿಷ್ಠ 20 ಸ್ಥಾನಗಳನ್ನು ಗೆಲ್ಲುವಂತೆ ಸೂಚಿಸಿರುವುದರಿಂದ ಒತ್ತಡ ಹೆಚ್ಚಿದೆ ಎಂದು ಹೇಳಿದ್ದಾರೆ.

ರಾಜ್ಯ ವಿಧಾನಸಭಾ ಚುನಾವಣೆಯ ಫಲಿತಾಂಶ ರಾಷ್ಟ್ರ ರಾಜಕಾರಣದ ಮೇಲೂ ಪರಣಾಮ ಬೀರುತ್ತಿದ್ದು, ಕರ್ನಾಟಕದಲ್ಲಿ ಅನುಸರಿಸುದ ಮಾರ್ಗವನ್ನೇ ತೆಲಂಗಾಣ, ಮಧ್ಯಪ್ರದೇಶ, ಛತ್ತೀಸ್‌ಗಢ ಮತ್ತು ರಾಜಸ್ಥಾನಗಳಲ್ಲಿನ ಪಕ್ಷದ ಘಟಕಗಳು ಅನುಸರಿಸಲು ಮುಂದಾಗಿದೆ. ಆ ರಾಜ್ಯಗಳಲ್ಲೂ ಇದೇ ರೀತಿಯ ತಂತ್ರಗಳನ್ನು ಹೂಡಲಾಗುತ್ತಿದೆ ಎಂದು ಹೇಳಲಾಗುತ್ತಿದೆ. ಆದರೆ, ಈ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರದೇ ಹೋದಲ್ಲಿ ಅದು ಋಣಾತ್ಮಕ ಪರಿಣಾಮ ಬೀರುವ ಸಾಧ್ಯತೆಗಳಿವೆ ಎಂದು ಹೆಸಲು ಹೇಳಲಿಚ್ಛಿಸದ ಮತ್ತೊಬ್ಬ ನಾಯಕರು ಹೇಳಿದ್ದಾರೆ.

ಶೀಘ್ರಗತಿಯಲ್ಲಿ ನಾವು ಗ್ಯಾರಂಟಿ ಯೋಜನೆಗಳು ಜನರಿಗೆ ತಲುವಂತೆ ಮಾಡುವುದು ಅತ್ಯಗತ್ಯವಾಗಿದೆ ಎಂದು ಹಿರಿಯ ಸಚಿವರೊಬ್ಬರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com