ಕೆಆರ್ ಪುರಂ- ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮೆಟ್ರೋ ಮಾರ್ಗದಲ್ಲಿ ಬೆಟ್ಟಹಲಸೂರು ನಿಲ್ದಾಣ ಕುರಿತ ಗೊಂದಲಕ್ಕೆ ತೆರೆ

ಕೆಆರ್ ಪುರಂ- ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳ ನಡುವೆ ಬೆಟ್ಟಹಲಸೂರು ನಿಲ್ದಾಣ ನಿರ್ಮಾಣದ ಬಗ್ಗೆ ಇದ್ದ ಗೊಂದಲಗಳಿಗೆ ತೆರೆ ಬಿದ್ದಿದೆ.
ಮೆಟ್ರೋ ರೈಲು ಸಾಂದರ್ಭಿಕ ಚಿತ್ರ
ಮೆಟ್ರೋ ರೈಲು ಸಾಂದರ್ಭಿಕ ಚಿತ್ರ

ನವದೆಹಲಿ: ಕೆಆರ್ ಪುರಂ- ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳ ನಡುವೆ ಬೆಟ್ಟಹಲಸೂರು ನಿಲ್ದಾಣ ನಿರ್ಮಾಣದ ಬಗ್ಗೆ ಇದ್ದ ಗೊಂದಲಗಳಿಗೆ ತೆರೆ ಬಿದ್ದಿದೆ.

ಮೊದಲ ಹಂತದಲ್ಲಿ ಈ ನಿಲ್ದಾಣದ ನಿರ್ಮಾಣಕ್ಕೆ ಎಂಬಸಿ ಗ್ರೂಪ್ ಬೇಡಿಕೆ ಇಟ್ಟಿತ್ತು. ಈಗ ನಿಲ್ದಾಣಕ್ಕೆ ಅಗತ್ಯವಿರುವ ಆರ್ಥಿಕ ಹೊಣೆಗಾರಿಕೆಯ ಜವಾಬ್ದಾರಿಯನ್ನು ತೆಗೆದುಕೊಳ್ಳಲು ಮುಂದಾಗಿದ್ದು, ಬಿಎಂಆರ್ ಸಿಎಲ್ ಗೆ ಆರಂಭಿಕ ಮೊತ್ತವಾಗಿ 1 ಕೋಟಿ ರೂಪಾಯಿ ನೀಡಿದೆ. ಈ ಮೆಟ್ರೋ ನಿಲ್ದಾಣದ ನಿರ್ಮಾಣಕ್ಕೆ 140 ಕೋಟಿ ರೂಪಾಯಿ ವೆಚ್ಚವಾಗುವ ಸಾಧ್ಯತೆ ಇದೆ. 

ನಿಲ್ದಾಣ ನಿರ್ಮಾಣಕ್ಕೆ ಸಂಬಂಧಿಸಿದಂತೆ ಬಿಎಂಆರ್ ಸಿಎಲ್ ಶೀಘ್ರವೇ ಎಂಒಯು ಗೆ ಸಹಿ ಹಾಕುವ ಸಾಧ್ಯತೆ ಇದೆ. 

ಇದರೊಂದಿಗೆ ಗೊಂದಲದಲ್ಲಿದ್ದ, ಇದೇ ಮಾರ್ಗದ ಮತ್ತೊಂದು ಮೆಟ್ರೋ ನಿಲ್ದಾಣ ಜಕ್ಕೂರು ಪ್ಲಾಂಟೇಷನ್ ನಿಲ್ದಾಣದ ನಿರ್ಮಾಣವೂ ಖಾತ್ರಿಯಾಗಿದೆ. ಬಿಎಂಆರ್ ಸಿಎಲ್ ನ ಹಿರಿಯ ಅಧಿಕಾರಿಯೊಬ್ಬರು ಈ ಬಗ್ಗೆ ಮಾತನಾಡಿದ್ದು, ಬೆಟ್ಟಹಲಸೂರು ನಿಲ್ದಾಣ ಬಾಗ್ಲೂರು ಕ್ರಾಸ್ ಹಾಗೂ ದೊಡ್ಡ ಜಾಲ ನಿಲ್ದಾಣಗಳ ನಡುವೆ ನಿರ್ಮಾಣವಾಗಲಿದೆ ಎಂದು ತಿಳಿಸಿದ್ದಾರೆ.

ಬಿಎಂ ಆರ್ ಸಿಎಲ್ ನ ಮುಖ್ಯ ಇಂಜಿನಿಯರ್ ಡಿ. ಸಿ ನಟರಾಜ್ ಮಾತನಾಡಿ, "IAF ಕ್ಯಾಂಪಸ್‌ನಿಂದ 1 ಕಿಮೀ ದೂರದಲ್ಲಿರುವ ಈ ನಿಲ್ದಾಣವನ್ನು ಮೂಲತಃ ಯೋಜಿಸಿದಂತೆ PPP ಮಾದರಿಯಲ್ಲಿ ನಿರ್ಮಿಸಲಾಗುವುದು ಎಂಬಸಿ ಕಚೇರಿ ಧನಸಹಾಯ ಮಾಡಲಿದ್ದು BMRCL ನಿರ್ಮಾಣ ಕಾರ್ಯವನ್ನು ನಿರ್ವಹಿಸುತ್ತದೆ."

2020 ರ ಏಪ್ರಿಲ್ ನಲ್ಲಿ ಎಂಬಸಿ ಗ್ರೂಪ್ ಈ ಮೆಟ್ರೋ ನಿಲ್ದಾಣವನ್ನು ನಿರ್ಮಿಸುವ ಸಲಹೆ ನೀಡಿ ಆರ್ಥಿಕ ಹೊಣೆ ಹೊರುವುದಕ್ಕೆ ಮುಂದಾಗಿತ್ತು. ಈ ನಿಲ್ದಾಣದಿಂದ ವಿಸ್ತಾರವಾದ ಎಂಬಸಿ ಗ್ರೂಪ್ ನ ಬುಲೆವಾರ್ಡ್ ಸಂಕೀರ್ಣದಲ್ಲಿನ ನಿವಾಸಿಗಳಿಗೆ ಉಪಯುಕ್ತವಾಗಲಿದೆ ಎಂಬ ಉದ್ದೇಶದೊಂದಿಗೆ ಈ ಯೋಜನೆ ರೂಪುಗೊಂಡಿತ್ತು. ಆದರೆ ಆ ಬಳಿಕ ಎಂಬಸಿ ನಿಲ್ದಾಣ ನಿರ್ಮಾಣಕ್ಕೆ ಹಣ ನೀಡಲು ತನ್ನ ಆರ್ಥಿಕ ಸ್ಥಿತಿಗತಿಗಳ ಕಾರಣ ನೀಡಿ, ಹಿಂದೆ ಸರಿದಿತ್ತು ಅಂತೆಯೇ ಬಿಎಂ ಆರ್ ಸಿಎಲ್ ಸಹ ಡಿಸೆಂಬರ್ 2022 ರಲ್ಲಿ ಈ ನಿಲ್ದಾಣದ ಯೋಜನೆಯನ್ನು ಕೈಬಿಡುವುದಾಗಿ ಹೇಳಿತ್ತು.
 
ನಂತರ ಸ್ಥಳೀಯರ ಆಗ್ರಹದ ಪರಿಣಾಮ ಈ ಮಾರ್ಗದಲ್ಲಿ ಚಿಕ್ಕಜಾಲ ಸ್ಟೇಷನ್ ನ್ನು ಸೇರಿಸಲಾಗಿತ್ತು ಇದು ಈಗ ಬೆಟ್ಟಹಲಸೂರು ಹಾಗೂ ದೊಡ್ಡ ಜಾಲ ನಿಲ್ದಾಣಗಳ ನಡುವೆ ನಿರ್ಮಾಣವಾಗಲಿದೆ. ಇನ್ನು ಬಾಗ್ಮನೆ ಹಾಗೂ ಸೆಂಚುರಿ ಗ್ರೂಪ್ ಸಹಭಾಗಿತ್ವದಲ್ಲಿ 120 ಕೋಟಿ ರೂಪಾಯಿ ವೆಚ್ಚದಲ್ಲಿ ಜಕ್ಕೂರು ಪ್ಲಾಂಟೇಷನ್ ಮೆಟ್ರೋ ನಿಲ್ದಾಣವೂ ಏರ್ ಪೋರ್ಟ್ ಮಾರ್ಗದಲ್ಲಿ ನಿರ್ಮಾಣವಾಗಲಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com