ಟ್ರಾನ್ಸ್ ಫರ್ ದಂಧೆ ಆರೋಪಕ್ಕೆ ಪುಷ್ಟಿ: 25 ಪೊಲೀಸ್ ಸಿಬ್ಬಂದಿ ವರ್ಗಾವಣೆಗೆ ಶಾಸಕರ ಪತ್ರ ವೈರಲ್!

ಬಳ್ಳಾರಿ ವಲಯದ ಪೊಲೀಸ್ ಮಹಾ ನಿರೀಕ್ಷಕ ಲೋಕೇ‌ಶ್‌ ಕುಮಾರ್‌ ಅವರಿಗೆ ಪತ್ರ ಬರೆದಿರುವ ಯಲಬುರ್ಗಾ ಶಾಸಕ ಬಸವರಾಜ ರಾಯರೆಡ್ಡಿ ನಡೆ ಮೇಲೆ ಪ್ರತಿಪಕ್ಷದ ನಾಯಕರು ಕಿಡಿಕಾರಿದ್ದಾರೆ.
ಟ್ರಾನ್ಸ್ ಫರ್ ದಂಧೆ ಆರೋಪಕ್ಕೆ ಪುಷ್ಟಿ: 25 ಪೊಲೀಸ್ ಸಿಬ್ಬಂದಿ ವರ್ಗಾವಣೆಗೆ ಶಾಸಕರ ಪತ್ರ ವೈರಲ್!

ಬೆಂಗಳೂರು: ವರ್ಗಾವಣೆ ದಂಧೆಯಲ್ಲಿ ಸಾಕಷ್ಟು ಭ್ರಷ್ಟಾಚಾರ ನಡೆಯುತ್ತಿದೆ ಎಂದು ಮಾಜಿ ಸಿಎಂ ಎಚ್‌ ಡಿ ಕುಮಾರಸ್ವಾಮಿ ಪದೇ ಪದೇ ಆರೋಪಿಸುತ್ತಲೇ ಇದ್ದಾರೆ. ಎಚ್‌ಡಿಕೆ ಆರೋಪಕ್ಕೆ ಬಿಜೆಪಿ ಕೂಡ ಧ್ವನಿಗೂಡಿಸಿದೆ.

ಈ ನಡುವೆಯೇ ಮಾಜಿ ಸಚಿವ ಬಸವರಾಜ ರಾಯರೆಡ್ಡಿ ಅವರು ಕೊಪ್ಪಳ ಜಿಲ್ಲೆಯ 25ಕ್ಕೂ ಹೆಚ್ಚು ಪೊಲೀಸರನ್ನು ವರ್ಗಾವಣೆ ಮಾಡುವಂತೆ ಕೋರಿ ಐಜಿಪಿಗೆ ಪತ್ರ ಬರೆದಿದ್ದಾರೆ.

ವರ್ಗಾವಣೆಯಾಗಬೇಕಾದ ಪೊಲೀಸ್‌ ಅಧಿಕಾರಿಗಳ ಹೆಸರಿನ ಮುಂದೆ ವರ್ಗಾಯಿಸಬೇಕಾದ ಸ್ಥಳವನ್ನು ಕೂಡ ನಮೂದಿಸಿರುವುದು ವರ್ಗಾವಣೆ ದಂಧೆಯ ಅನುಮಾನಕ್ಕೆ ಕಾರಣವಾಗಿದೆ.

ಬಳ್ಳಾರಿ ವಲಯದ ಪೊಲೀಸ್ ಮಹಾ ನಿರೀಕ್ಷಕ ಲೋಕೇ‌ಶ್‌ ಕುಮಾರ್‌ ಅವರಿಗೆ ಪತ್ರ ಬರೆದಿರುವ ಯಲಬುರ್ಗಾ ಶಾಸಕ ಬಸವರಾಜ ರಾಯರೆಡ್ಡಿ ನಡೆ ಮೇಲೆ ಪ್ರತಿಪಕ್ಷದ ನಾಯಕರು ಕಿಡಿಕಾರಿದ್ದಾರೆ. ರಾಯರೆಡ್ಡಿ ಬರೆದ ಪತ್ರ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಸಾಮೂಹಿಕ ವರ್ಗಾವಣೆ ಮಾಡಿಸುವುದಕ್ಕೆ ಇವರ‍್ಯಾರು ಎಂಬ ಪ್ರಶ್ನೆಗಳು ಕೇಳಿಬರುತ್ತಿವೆ.

ಬಸವರಾಜ ರಾಯರೆಡ್ಡಿ ಅವರ ಹೆಸರಿನ ಲೆಟರ್‌ ಹೆಡ್‌ನಲ್ಲಿಯೇ ಪತ್ರ ಬರೆಯಲಾಗಿದ್ದು, ಕೊಪ್ಪಳ ಜಿಲ್ಲೆಯ 25 ಪೊಲೀಸ್‌ ಅಧಿಕಾರಿಗಳನ್ನು ವರ್ಗಾವಣೆ ಮಾಡಲು ಮನವಿ ಮಾಡಿದ್ದಾರೆ. ಅದರಲ್ಲೂ ತಮ್ಮ ಕ್ಷೇತ್ರ ಯಲಬುರ್ಗಾ ವ್ಯಾಪ್ತಿಯ ಕುಕನೂರು ಮತ್ತು ಯಲಬುರ್ಗಾ ಪೊಲೀಸ್‌ ಠಾಣೆಗಳಿಗೆ ಸೇರಿದ ಹೆಚ್ಚಿನ ಪೊಲೀಸರನ್ನು ವರ್ಗಾವಣೆ ಮಾಡಲು ಮನವಿ ಮಾಡಿದ್ದಾರೆ. ಜೊತೆಗೆ ಕೊಪ್ಪಳ, ಗಂಗಾವತಿ ಹಾಗೂ ಕುಷ್ಟಗಿ ತಾಲೂಕುಗಳ ಪೊಲೀಸರನ್ನು ಕೂಡ ವರ್ಗಾವಣೆ ಮಾಡಬೇಕೆಂದು ಪತ್ರದಲ್ಲಿ ಹೇಳಿದ್ದಾರೆ.

ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಅವರು ಕಾಂಗ್ರೆಸ್‌ ಸರ್ಕಾರದ ವಿರುದ್ಧ ವರ್ಗಾವಣೆ ದಂಧೆ ಹಾಗೂ ಕಾಸಿಗಾಗಿ ಪೋಸ್ಟ್‌ ಎಂಬ ಆರೋಪವನ್ನು ಮಾಡುತ್ತಾ ಬಂದಿದ್ದಾರೆ. ಪದೇ ಪದೇ ವೈಎಸ್‌ಟಿ ಟ್ಯಾಕ್ಸ್‌ ಬಗ್ಗೆಯೂ ಪುನರುಚ್ಛರಿಸುತ್ತಿದ್ದಾರೆ. ಈ ವೇಳೆ ಬಸವರಾಜ ರಾಯರೆಡ್ಡಿ ಅವರ ಪತ್ರ ವಿಪಕ್ಷ ನಾಯಕರಿಗೆ ಪ್ರಮುಖ ಅಸ್ತ್ರ ಸಿಕ್ಕಂತಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com