

ಬೆಳಗಾವಿ: ರಾಜ್ಯ ಬಿಜೆಪಿಯಲ್ಲಿ ಒಗ್ಗಟ್ಟಿಲ್ಲ ಅವರು ಮಾಡಿರುವ ಸ್ವಯಂಕೃತ ಅಪರಾಧಗಳೇ ಅವರು ರಾಜ್ಯದಲ್ಲಿ ಹೀನಾಯವಾಗಿ ಸೋಲಲು ಕಾರಣ, ಪ್ರಮುಖ ರಾಷ್ಟ್ರೀಯ ಪಕ್ಷವಾಗಿರುವ ಬಿಜೆಪಿಯ ಸ್ಥಿತಿ ಮನೆಯೊಂದು ಆರು ಬಾಗಿಲುಗಳಾಗಿದೆ ಎಂದು ಮಾಜಿ ಡಿಸಿಎಂ ಹಾಗೂ ಶಾಸಕ ಲಕ್ಷ್ಮಣ ಸವದಿ ಅವರು ಶನಿವಾರ ಹೇಳಿದರು.
ಹಲ್ಯಾಳದಲ್ಲಿ ಏತ ನೀರಾವರಿ ಯೋಜನೆಯ ಕಾಲುವೆಗಳಿಗೆ ಕೃಷ್ಣಾ ನದಿಯಿಂದ ನೀರು ಹರಿಸುವ ಹಂಗಾಮಿಗೆ ಚಾಲನೆ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ರಚನೆಗೊಂಡು ಒಂದುವರೆ ತಿಂಗಳು ಕಳೆದರೂ ಕೂಡ ಇಲ್ಲಿಯವರೆಗೆ ರಾಜ್ಯದ ವಿರೋಧ ಪಕ್ಷದ ನಾಯಕನ ಆಯ್ಕೆ ಮಾಡಲು ಬಿಜೆಪಿಗೆ ಸಾಧ್ಯವಾಗುತ್ತಿಲ್ಲ. ರಾಜ್ಯದ ಇತಿಹಾಸದಲ್ಲಿಯೇ ಇದೇ ಮೊದಲ ಬಾರಿಗೆ ಬಜೆಟ್ ಅಧಿವೇಶನದಂತಹ ಮಹತ್ವದ ಸಮಯದಲ್ಲಿಯೂ ಸಹ ವಿರೋಧ ಪಕ್ಷದ ನಾಯಕನ ಸ್ಥಾನ ತುಂಬಲು ಸಾಧ್ಯವಾಗಿಲ್ಲ ಎಂದು ಹೇಳಿದರು.
ಮುಖ್ಯಮಂತ್ರಿ ಆಯ್ಕೆ ಕೆಲ ದಿನಗಳವರೆಗೆ ವಿಳಂಬವಾದಾಗ ಬಿಜೆಪಿಯವರು ಮಾಧ್ಯಮಗಳೆದುರು ಅನಾವಶ್ಯಕ ಟೀಕೆ ಟಿಪ್ಪಣಿಗಳನ್ನು ಮಾಡಿದ್ದರು, ಆದರೀಗ ಅವರಿಗೆ ವಿರೋಧ ಪಕ್ಷದ ನಾಯಕನನ್ನು ಆಯ್ಕೆ ಮಾಡದಿರುವುದು ದುರಾದೃಷ್ಟ ವಿಚಾರ. ರಾಜ್ಯ ಬಿಜೆಪಿಯಲ್ಲಿ ಗಟ್ಟಿ ನಾಯಕತ್ವ ಇಲ್ಲ. ಹೀಗಾಗಿ ಯಾರ ಮೇಲೂ ಯಾರದೂ ಹಿಡಿತ ಇಲ್ಲದಂತಾಗಿದೆ ಎಂದು ತಿಳಿಸಿದರು.
ಇತ್ತೀಚಿನ ಬಜೆಟ್‌ನಲ್ಲಿ ಸಿಎಂ ಎಲ್ಲ ಕ್ಷೇತ್ರಗಳಿಗೂ ಸಮಾನ ಪಾಲು ನೀಡಿದ್ದು, ಮುಖ್ಯವಾಗಿ ನೀರಾವರಿ ಯೋಜನೆಗಳಿಗೆ ಬೇಕಾದ ಹಣ ಮೀಸಲಿಟ್ಟಿದ್ದಾರೆ. ಅಥಣಿ ಹಾಗೂ ಕಾಗವಾಡ ತಾಲೂಕಿನ ನೀರಾವರಿ ಯೋಜನೆಗಳಿಗೆ ಹೆಚ್ಚಿನ ಒತ್ತು ನೀಡುವುದಾಗಿ ಸಿಎಂ ಭರವಸೆ ನೀಡಿದ್ದಾರೆ. ಈ ಬಾರಿಯ ಬಜೆಟ್ ನಲ್ಲಿ ನೀರಾವರಿ ಯೋಜನೆಗಳಿಗಾಗಿ ಸುಮಾರು 19400 ಕೋಟಿ ಅನುದಾನ ಮೀಸಲಿಡಲಾಗಿದ್ದು, ಈ ಅನುದಾನ ಅಥಣಿ ಮತಕ್ಷೇತ್ರದ ನೀರಾವರಿ ಯೋಜನೆಗೂ ಅನುಕೂಲವಾಗಲಿದೆ, ಶೂನ್ಯ ಬಡ್ಡಿ ದರದ ಸಾಲವನ್ನು 3 ಲಕ್ಷದಿಂದ 5 ಲಕ್ಷಕ್ಕೆ ಹೆಚ್ಚಿಸಲಾಗಿದ್ದು, ಇದರಿಂದ ಸಣ್ಣ ಮಧ್ಯಮ ಮತ್ತು ದೊಡ್ಡ ರೈತರಿಗೆ ಉಪಯೋಗವಾಗಲಿದೆ ಒಟ್ಟಿನಲ್ಲಿ ಈ ಬಜೆಟ್ ಸರ್ವರಿಗೂ ಸಮ ಪಾಲು, ಸಮ ಬಾಳು ಸಂದೇಶ ನೀಡುತ್ತದೆ ಎಂದರು.
Advertisement