ಬೆಳಗಾವಿ: ಚಿಕ್ಕೋಡಿಯಲ್ಲಿ ಜೈನ ಮುನಿ ಕಾಮಕುಮಾರ ನಂದಿ ಮಹಾರಾಜರ ಅಂತಿಮ ಸಂಸ್ಕಾರ, ಮೌನ ಪ್ರತಿಭಟನೆ

ಜುಲೈ 6 ರಂದು ಭೀಕರವಾಗಿ ಹತ್ಯೆಗೀಡಾದ ನಂದಿ ಪರ್ವತ ಆಶ್ರಮದ ಜೈನ ಮುನಿ ಆಚಾರ್ಯ ಶ್ರೀ ಕಾಮಕುಮಾರ ನಂದಿ ಮಹಾರಾಜರ ಅಂತಿಮ ಸಂಸ್ಕಾರವನ್ನು ಬೆಳಗಾವಿ ಜಿಲ್ಲೆಯ ಹಿರೇಕುಡಿಯ ನಂದಿಪರ್ವತದಲ್ಲಿ ಭಾನುವಾರ ನೆರವೇರಿಸಲಾಯಿತು.
ಜೈನ ಮುನಿಗಳ ಹತ್ಯೆ ಖಂಡಿಸಿ ಬೆಳಗಾವಿಯಲ್ಲಿ ಪ್ರತಿಭಟನೆ
ಜೈನ ಮುನಿಗಳ ಹತ್ಯೆ ಖಂಡಿಸಿ ಬೆಳಗಾವಿಯಲ್ಲಿ ಪ್ರತಿಭಟನೆ
Updated on

ಬೆಳಗಾವಿ: ಜುಲೈ 6 ರಂದು ಭೀಕರವಾಗಿ ಹತ್ಯೆಗೀಡಾದ ನಂದಿ ಪರ್ವತ ಆಶ್ರಮದ ಜೈನ ಮುನಿ ಆಚಾರ್ಯ ಶ್ರೀ ಕಾಮಕುಮಾರ ನಂದಿ ಮಹಾರಾಜರ ಅಂತಿಮ ಸಂಸ್ಕಾರವನ್ನು ಬೆಳಗಾವಿ ಜಿಲ್ಲೆಯ ಹಿರೇಕುಡಿಯ ನಂದಿಪರ್ವತದಲ್ಲಿ ಭಾನುವಾರ ನೆರವೇರಿಸಲಾಯಿತು.

ಚಿಕ್ಕೋಡಿ, ಬೆಳಗಾವಿ, ನಿಪ್ಪಾಣಿ ಹಾಗೂ ನೆರೆಯ ಮಹಾರಾಷ್ಟ್ರದ ಸಾವಿರಾರು ಜನರು ಉಪಸ್ಥಿತರಿದ್ದರು. ವರೂರು ಮಠದ ಧರ್ಮಸೇನ ಭಟ್ಟಾರಕ ಪಟ್ಟಾಚಾರ್ಯ ಹಾಗೂ ನಂದನಿ ಮಠದ ಜಿನಸೇನ್ ಭಟ್ಟಾರಕ ಪಟ್ಟಾಚಾರ್ಯರ ನೇತೃತ್ವದಲ್ಲಿ ಅಂತಿಮ ವಿಧಿವಿಧಾನ ನೆರವೇರಿತು. ನಂದಿ ಮಹಾರಾಜ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷರಾದ ಭೀಮಗೊಂಡ ಉಗಾರೆ ಅವರು ಚಿತಾಭಸ್ಮವನ್ನು ಬೆಳಗಿಸಿದರು.

ಜಿನಸೇನ್ ಭಟ್ಟಾರಕ ಪಟ್ಟಾಚಾರ್ಯರು ಮಾತನಾಡಿ, ನಾವು ಶ್ರೇಷ್ಠ ವ್ಯಕ್ತಿತ್ವವನ್ನು ಕಳೆದುಕೊಂಡಿದ್ದೇವೆ. ಈ ಅಮಾನುಷ ಕೃತ್ಯವನ್ನು ಖಂಡಿಸಿ ಸೋಮವಾರ ಬೆಳಗ್ಗೆ 10 ಗಂಟೆಗೆ ಚಿಕ್ಕೋಡಿಯಲ್ಲಿ ಬೃಹತ್ ಸಂಖ್ಯೆಯಲ್ಲಿ ಜನ ಸೇರಿ ಮೌನ ಸಭೆ ನಡೆಸಲಾಗುವುದು. ಇಂತಹ ಘಟನೆಗಳು ಯಾವ ಸಮುದಾಯದವರಿಗೂ ಆಗಬಾರದು. ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡುವಂತೆ ಸರ್ಕಾರವನ್ನು ಒತ್ತಾಯಿಸುತ್ತೇವೆ ಎಂದರು.

ನಂದಿ ಪರ್ವತದ ಆಶ್ರಮಕ್ಕೆ ಭೇಟಿ ನೀಡಿದ ಅಥಣಿ ಶಾಸಕ ಲಕ್ಷ್ಮಣ ಸವದಿ, ಇದೊಂದು ನಾಚಿಕೆಗೇಡಿನ ಕೃತ್ಯ ಎಂದಿದ್ದಾರೆ. 'ಈ ವಿಷಯವನ್ನು ನಡೆಯುತ್ತಿರುವ ಅಧಿವೇಶನದಲ್ಲಿ ಚರ್ಚಿಸಲಾಗುವುದು. ಪೊಲೀಸರು ಕೊಲೆಯ ತನಿಖೆ ನಡೆಸುತ್ತಿದ್ದಾರೆ. ನಾಪತ್ತೆ ದೂರು ದಾಖಲಾದ ಕೆಲವೇ ಗಂಟೆಗಳಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ. ಇದು ಸಮಾಜಕ್ಕೆ ದೊಡ್ಡ ನಷ್ಟ. ಬೆಳಗಾವಿ ಜಿಲ್ಲೆಯ ಎಲ್ಲ ಶಾಸಕರು ಹತ್ಯೆಯನ್ನು ಖಂಡಿಸಿದ್ದಾರೆ. ಕೊಲೆಯನ್ನು ರಾಜಕೀಯಗೊಳಿಸುವ ಅಗತ್ಯವಿಲ್ಲ' ಎಂದರು.

ಶಾಸಕರಾದ ಶಶಿಕಲಾ ಜೊಲ್ಲೆ, ಗಣೇಶ ಹುಕ್ಕೇರಿ ಅವರೂ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದರು. ಇದಕ್ಕೂ ಮುನ್ನ ಬೆಳಗಾವಿಯ ಬೆಳಗಾವಿ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಆಸ್ಪತ್ರೆಯಲ್ಲಿ ಶವಪರೀಕ್ಷೆ ನಡೆಸಿ ನಂದಿ ಪರ್ವತ ಆಶ್ರಮದ ಸದಸ್ಯರಿಗೆ ಶ್ರೀಗಳ ದೇಹವನ್ನು ಹಸ್ತಾಂತರಿಸಲಾಯಿತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com