ಬೆಂಗಳೂರು: ವಿಧಾನಸಭೆಯಲ್ಲಿಂದು ವರ್ಗಾವಣೆ ವಿಚಾರ ಮತ್ತೆ ಪ್ರತಿಧ್ವನಿಸಿ ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ಭಾರೀ ವಾಗ್ವಾದವೇ ನಡೆದು ಕೆಲಕಾಲ ಸದನದಲ್ಲಿ ಕಾವೇರಿದ ವಾತಾವರಣ ಉಂಟಾಯಿತು.
ವಿಜಯಪುರ ಮಹಾನಗರ ಪಾಲಿಕೆ ಆಯುಕ್ತರ ವರ್ಗಾವಣೆ ವಿಚಾರ ವಿಧಾನಸಭೆಯಲ್ಲಿ ಪ್ರತಿಧ್ವನಿಸಿದ್ದು, ಬಿಜೆಪಿ ಸದಸ್ಯರು ಧರಣಿ ನಡೆಸಿ ಸದನದ ಕಲಾಪವನ್ನು ಮುಂದೂಡಿದ ಪ್ರಸಂಗ ನಡೆಯಿತು.
ಶೂನ್ಯವೇಳೆಯಲ್ಲಿ ಬಿಜೆಪಿಯ ಹಿರಿಯ ಸದಸ್ಯ ಬಸನಗೌಡ ಪಾಟೀಲ್ ಯತ್ನಾಳ್ ವಿಷಯ ಪ್ರಸ್ತಾಪಿಸುತ್ತಾ ಮಾಡಿದ ಆರೋಪ ಆಡಳಿತ ಮತ್ತು ಬಿಜೆಪಿ ಸದಸ್ಯರ ನಡುವೆ ಏರಿದ ದನಿಯಲ್ಲಿ ವಾಗ್ವಾದ ನಡೆಯಿತು. ಬಸನಗೌಡ ಪಾಟೀಲ್ ಯತ್ನಾಳ್ ಮಾತನಾಡಿ, ಹೊಸ ಸರ್ಕಾರ ಬಂದಾಗ ವರ್ಗಾವಣೆಗಳಾಗುವುದು ಸಹಜ.
ಐಎಎಸ್, ಕೆಎಎಸ್ ಕೇಡರ್ ಹುದ್ದೆಗೆ ಅದೇ ಕೇಡರ್‍ನ ಅಧಿಕಾರಿ ನೇಮಕ ಮಾಡಬೇಕು. ಆದರೆ, ವಿಜಯಪುರ ಮಹಾನಗರ ಪಾಲಿಕೆ ಆಯುಕ್ತರಾಗಿ ಅರ್ಹತೆ ಇಲ್ಲದವರನ್ನು ವರ್ಗಾವಣೆ ಮಾಡಲಾಗಿದೆ. ವಲಯ ಆಯುಕ್ತರ ಕೇಡರ್ ಗಿಂತ ಕಡಿಮೆ ಇರುವವರನ್ನು ವರ್ಗಾಯಿಸಲಾಗಿದೆ ಎಂದು ಆರೋಪಿಸಿದರು.
ಇದಕ್ಕೆ ಉತ್ತರಿಸಿದ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಅವರು, ವಿಜಯಪುರ ಮಹಾನಗರ ಪಾಲಿಕೆ ಆಯುಕ್ತರ ಹುದ್ದೆಗೆ ಕೆಎಎಂಎಸ್ ಕೇಡರ್ ಅಧಿಕಾರಿಯನ್ನು ನಿಯೋಜಿಸಲಾಗಿದೆ. ಅಧಿಕಾರಿಯ ಜಾತಿ ಯಾವುದು ಎಂದು ನೋಡಿಲ್ಲ. ಸರ್ಕಾರಿ ಅಧಿಕಾರಿ ಎಂಬದನ್ನಷ್ಟೆ ನೋಡಲಾಗಿದೆ ಎಂದರು.
ಯತ್ನಾಳ್ ಮತ್ತೆ ಮಾತನಾಡಿ, ನನ್ನನ್ನು ತುಳಿಯಲು ಹಾಕಿದ್ದ ಅಧಿಕಾರಿಯೊಂದಿಗೆ ಹೊಂದಾಣಿಕೆ ಮಾಡಿಕೊಂಡು ಬಂದಿದ್ದೆ. ಈಗ ಅರ್ಹತೆ ಇರುವ ಅಧಿಕಾರಿಯನ್ನು ಹಾಕಿ ವರ್ಗಾವಣೆ ವಿಚಾರದಲ್ಲಿ ವ್ಯಾಪಾರ ಮಾಡಿಕೊಳ್ಳುತ್ತಿಲ್ಲ ಎಂದು ಹೇಳಿದರು.
ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ವ್ಯಾಪಾರವೆಂದು ಏಕೆ ಹೇಳುತ್ತೀರಿ? ನಾವು ವ್ಯಾಪಾರ ಮಾಡಿಕೊಂಡಿಲ್ಲ ಎಂದು ಹೇಳಲು ನೀವು ಮಾತ್ರ ಹರಿಶ್ಚಂದ್ರರೇ? ವಿನಾಕಾರಣ ಏನೇನೋ ಹೇಳಬೇಡಿ ಎಂದು ಛೇಡಿಸಿದರು.
ಇದರಿಂದ ಕೆರಳಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಸೇರಿದಂತೆ ಕಾಂಗ್ರೆಸ್ ಸದಸ್ಯರು ಯತ್ನಾಳ್ ವಿರುದ್ಧ ವಾಗ್ದಾಳಿ ನಡೆಸಿದರು. ಶೂನ್ಯ ವೇಳೆಯಲ್ಲಿ ಯತ್ನಾಳ್ ಏಕೆ ಚರ್ಚೆ ನಡೆಸುತ್ತಿದ್ದಾರೆ ಎಂದು ಸಿಎಂ ತಿಳಿದುಕೊಳ್ಳಬೇಕೆಂದರು. ಯತ್ನಾಳ್ ಅವರಂತಹ ಹಿರಿಯ ಸದಸ್ಯರು ಈ ರೀತಿ ಮಾತನಾಡುತ್ತಿರುವುದು ವಿಷಾದನೀಯ ಎಂದು ಬೈರತಿ ಸುರೇಶ್ ಹೇಳಿದರು. ವಿಜಯಪುರದವರಾದ ನೀವು (ಯತ್ನಾಳ್) ಅವರೊಂದಿಗೆ ಸ್ವಲ್ಪ ವ್ಯಾಪಾರ ಮಾಡಲು ಬಯಸುತ್ತಿರುವಂತೆ ತೋರುತ್ತಿದೆ ಎಂದು ಅವರು ಹೇಳಿದರು.
ಬಿಜೆಪಿ ಸರ್ಕಾರದ ಅವಧಿಯಲ್ಲಿ ನಿಗದಿಪಡಿಸಿದ ದರ ಗೊತ್ತಿದೆ ಎಂದು ಶಿವಕುಮಾರ್ ಹೇಳಿದರು. ಬಿಜೆಪಿ ಸರ್ಕಾರದಲ್ಲಿ ಸಿಎಂ ಹುದ್ದೆಯ ಬೆಲೆ 2,400 ಕೋಟಿ ಮತ್ತು ಮಂತ್ರಿಯಾಗಲು ಕೆಲವು ನೂರು ಕೋಟಿ ಎಂದು ನಮಗೆ ತಿಳಿದಿದೆ ಎಂದು ಅವರು ಹೇಳಿದರು.
ಯತ್ನಾಳ್ ಅವರನ್ನು ಏಕವಚನದಲ್ಲಿ ಸಂಬೋಧಿಸಿದ ಅವರು, ಸದನದಲ್ಲಿ ಹೆಚ್ಚು ಗೊಂದಲ ಸೃಷ್ಟಿಸಿದ ಅವರ ಇತಿಹಾಸ ನನಗೆ ತಿಳಿದಿದೆ ಎಂದು ಹೇಳಿದರು. ಕ್ಷಮೆಯಾಚಿಸುವಂತೆ ಒತ್ತಾಯಿಸಿ ಬಿಜೆಪಿ ಶಾಸಕರು ಸದನದ ಬಾವಿಗೆ ನುಗ್ಗಿದರು. ಒಬ್ಬ ವ್ಯಕ್ತಿಯ ವರ್ಗಾವಣೆಗೆ ಬಿಜೆಪಿಯ ಇಷ್ಟೊಂದು ಶಾಸಕರು ಏಕೆ ಗಲಿಬಿಲಿಗೊಂಡಿದ್ದಾರೆ ಎಂಬುದನ್ನು ಸಿದ್ದರಾಮಯ್ಯ ಅವರು ತಿಳಿದುಕೊಳ್ಳಬೇಕೆಂದರು. ನಂತರ ಸದನವನ್ನು ಕೆಲಕಾಲ ಮುಂದೂಡಿ, ಕಲಾಪ ಆರಂಭವಾದ ಬಳಿಕ ಸಚಿವ ಸುರೇಶ್ ಪರಿಶೀಲಿಸುವುದಾಗಿ ತಿಳಿಸಿದರು.
ಅಷ್ಟೇ ಅಲ್ಲ ಯತ್ನಾಳ್ ಮಾತಿಗೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆಶಿ ಸಹ ಕಿಡಿಕಾರಿದ್ರು. ಯತ್ನಾಳ್ ನೀವು ಹಿರಿಯರು, ವರ್ಗಾವಣೆ ಬಗ್ಗೆ ಮಾತ್ರ ಮಾತಾಡಿ, ಅದು ಬಿಟ್ಟು ವ್ಯಾಪಾರ ಅಂತೆಲ್ಲ ಏನ್ರಿ ಮಾತಾಡೋದು ಅಂತ ಸಿದ್ದರಾಮಯ್ಯ ಗರಂ ಆಗಿ ಗದರಿದರು. ಇನ್ನು ಡಿಕೆಶಿ ಸಹ, ಯತ್ನಾಳ್ ನೀವು ಮುಖ್ಯಮಂತ್ರಿ ಹುದ್ದೆಗೆ 2,500 ಕೋಟಿ ರೂ., ಮಂತ್ರಿ ಹುದ್ದೆಗೆ 1,000 ಕೋಟಿ ರೂ. ಅಂತೆಲ್ಲಾ ಆರೋಪ ಮಾಡಿದ್ರಿ. ಮಾತಿನ ಮೇಲೆ ಹಿಡಿತವಿರಲಿ, ನಮ್ಮ ಪಕ್ಷದಲ್ಲಿ ಇದ್ದಿದ್ದರೆ, ನಿಮ್ಮನ್ನ 24 ಗಂಟೆಯಲ್ಲಿ ವಜಾ ಮಾಡ್ತಿದ್ದೆ ಅಂತ ಕಿಡಿಕಾರಿದ್ರು.
ಈ ವೇಳೆ ಯತ್ನಾಳ್ ಪರ ಮಾಜಿ ಸಿಎಂ ಬೊಮ್ಮಾಯಿ ಸಮರ್ಥಿಸಿಕೊಂಡ್ರು. ಉಭಯ ಪಕ್ಷಗಳ ಸದಸ್ಯರ ನಡುವೆ ಭಾರೀ ಜಟಾಪಟಿ ನಡೀತು. ಬೈರತಿ ಸುರೇಶ್ ಕ್ಷಮೆಗೆ ಆಗ್ರಹಿಸಿ ಬಿಜೆಪಿ ಸದಸ್ಯರು ಸದನದ ಬಾವಿಗೆ ಇಳಿದು ಧರಣಿ ನಡೆಸಿದ್ರು. ಸ್ಪೀಕರ್ ಅನಿವಾರ್ಯವಾಗಿ ಸದನವನ್ನ ಹತ್ತು ನಿಮಿಷ ಕಾಲ ಮುಂದೂಡಿದರು. ಬಳಿಕ ಸ್ಪೀಕರ್ ನೇತೃತ್ವದಲ್ಲಿ ಸಂಧಾನ ಸಭೆ ನಡೆಸಲಾಯಿತು.
Advertisement