ಶಕ್ತಿ ಯೋಜನೆ: ಉಚಿತ ಬಸ್ ಪ್ರಯಾಣದಿಂದ ಮಹಿಳಾ ಭಕ್ತರ ಹೆಚ್ಚಳ; ಪ್ರಮುಖ ದೇಗುಲಗಳ ಹುಂಡಿ ಸಂಗ್ರಹದಲ್ಲೂ ಏರಿಕೆ

ರಾಜ್ಯ ಸರ್ಕಾರದ ಶಕ್ತಿ ಯೋಜನೆಯಿಂದ ಮಹಿಳೆಯರಿಗೆ ಸರ್ಕಾರಿ ಬಸ್‌ಗಳಲ್ಲಿ ಉಚಿತವಾಗಿ ಪ್ರಯಾಣಿಸಲು ಅವಕಾಶ ನೀಡಿರುವುದರಿಂದ ಮತ್ತು ಆಷಾಢ ಮಾಸದಲ್ಲಿ ಭಕ್ತರು ದೇವಸ್ಥಾನಗಳಿಗೆ ಭೇಟಿ ನೀಡುತ್ತಿರುವುದರಿಂದ ಕರ್ನಾಟಕದಾದ್ಯಂತ ಪ್ರಮುಖ ದೇವಾಲಯಗಳ ಹುಂಡಿ ಸಂಗ್ರಹದಲ್ಲಿ ತೀವ್ರ ಏರಿಕೆಯಾಗಿದೆ.
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ

ಮೈಸೂರು: ರಾಜ್ಯ ಸರ್ಕಾರದ ಶಕ್ತಿ ಯೋಜನೆಯಿಂದ ಮಹಿಳೆಯರಿಗೆ ಸರ್ಕಾರಿ ಬಸ್‌ಗಳಲ್ಲಿ ಉಚಿತವಾಗಿ ಪ್ರಯಾಣಿಸಲು ಅವಕಾಶ ನೀಡಿರುವುದರಿಂದ ಮತ್ತು ಆಷಾಢ ಮಾಸದಲ್ಲಿ ಭಕ್ತರು ದೇವಸ್ಥಾನಗಳಿಗೆ ಭೇಟಿ ನೀಡುತ್ತಿರುವುದರಿಂದ ಕರ್ನಾಟಕದಾದ್ಯಂತ ಪ್ರಮುಖ ದೇವಾಲಯಗಳ ಹುಂಡಿ ಸಂಗ್ರಹದಲ್ಲಿ ತೀವ್ರ ಏರಿಕೆಯಾಗಿದೆ.

ಪ್ರಸಿದ್ಧ ನಂಜನಗೂಡು ಶ್ರೀಕಂಠೇಶ್ವರ ದೇವಸ್ಥಾನದಲ್ಲಿ ಬುಧವಾರ ಹುಂಡಿ ಎಣಿಕೆ ನಡೆಯಿತು. ವಿವಿಧ ಸ್ವ-ಸಹಾಯ ಗುಂಪುಗಳ 100ಕ್ಕೂ ಹೆಚ್ಚು ಮಹಿಳೆಯರು ಎಣಿಕೆ ಪ್ರಕ್ರಿಯೆಯಲ್ಲಿ ಸಹಾಯ ಮಾಡಿದರು. ದೇವಸ್ಥಾನದ ಹುಂಡಿ ಸಂಗ್ರಹವು ಈ ಋತುವಿನಲ್ಲಿ 1.77 ಕೋಟಿಗೆ ತಲುಪಿದೆ. ಇದಕ್ಕೆ ಶಕ್ತಿ ಯೋಜನೆ ಕಾರಣ ಎಂದು ದೇವಸ್ಥಾನದ ಸಿಬ್ಬಂದಿ ಹೇಳಿದ್ದಾರೆ.

ಅದೇ ರೀತಿ ಬೆಳಗಾವಿ ಜಿಲ್ಲೆಯ ಸವದತ್ತಿಯಲ್ಲಿರುವ ಪ್ರಸಿದ್ಧ ಯಲ್ಲಮ್ಮ ದೇವಸ್ಥಾನದ ಹುಂಡಿ ಸಂಗ್ರಹವೂ ಜೋರಾಗಿದೆ. ಮೇ 17 ಮತ್ತು ಜೂನ್ 30 ರ ನಡುವೆ ದೇವಸ್ಥಾನದ ಹುಂಡಿಯಲ್ಲಿ 1.37 ಕೋಟಿ ರೂ. ಸಂಗ್ರಹವಾಗಿದೆ.

ಯಲ್ಲಮ್ಮ ದೇವಸ್ಥಾನದ ಸಿಇಒ ಎಸ್‌ಪಿ.ಬಿ. ಮಹೇಶ್ ಮಾತನಾಡಿ, ಹುಂಡಿಯಲ್ಲಿ ಒಟ್ಟು 1.30 ಕೋಟಿ ರೂ. ಸಂಗ್ರಹವಾಗಿದೆ. ಹುಂಡಿಗಳಲ್ಲಿ ನಗದು ಮಾತ್ರವಲ್ಲದೆ 4.44 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣಗಳು, 2.29 ಲಕ್ಷ ರೂಪಾಯಿ ಮೌಲ್ಯದ ಬೆಳ್ಳಿ ವಸ್ತುಗಳು ಸಂಗ್ರಹವಾಗಿವೆ. ಶಕ್ತಿ ಯೋಜನೆ ಆರಂಭಿಸಿರುವುದರಿಂದ ದೇವಸ್ಥಾನಕ್ಕೆ ಮಹಿಳಾ ಭಕ್ತರು ಆಗಮಿಸುತ್ತಿದ್ದಾರೆ ಎಂದರು. 

ದೇವಸ್ಥಾನದ ಹುಂಡಿಗಳಿಂದ ಬರುವ ದೇಣಿಗೆಯನ್ನು ರಿಂಗ್ ರಸ್ತೆ, ಬಸ್ ತಂಗುದಾಣ ನಿರ್ಮಾಣ ಸೇರಿದಂತೆ ದೇವಸ್ಥಾನದ ಮೂಲಸೌಕರ್ಯ ಅಭಿವೃದ್ಧಿಗೆ ಬಳಸಿಕೊಳ್ಳಲಾಗುವುದು ಎಂದರು.

ಶಕ್ತಿ ಯೋಜನೆ ಜಾರಿಯಾದ ನಂತರ (ಜೂನ್ 11) ದತ್ತಿ ಇಲಾಖೆ ಅಧೀನದಲ್ಲಿರುವ ದೇವಾಲಯಗಳಲ್ಲಿ ಹುಂಡಿ ಸಂಗ್ರಹಣೆಯಲ್ಲಿ ಏರಿಕೆ ಕಾಣುತ್ತಿದೆ.

ಕಡಬ ತಾಲೂಕಿನ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಜೂನ್‌ ನಲ್ಲಿ 3,03,48,146 ರೂ. ಹುಂಡಿಯಲ್ಲಿ ಸಂಗ್ರಹವಾಗಿದ್ದು, ಮೇ ತಿಂಗಳಿಗೆ ಹೋಲಿಸಿದರೆ 84,55,342 ರೂ.ಗಳ ಹೆಚ್ಚಳವಾಗಿದೆ ಎಂದು ದಕ್ಷಿಣ ಕನ್ನಡದ ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಜಿ. ಸಂತೋಷ್ ಕುಮಾರ್ ತಿಳಿಸಿದ್ದಾರೆ. 

ಮೇ ತಿಂಗಳಲ್ಲಿ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ 2,14,92,804 ರೂ. ಸಂಗ್ರಹವಾಗಿದೆ. ದತ್ತಿ ಇಲಾಖೆ ಅಧೀನದಲ್ಲಿರುವ ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನವು ಮೇ ತಿಂಗಳಿಗೆ (11,22,432 ರೂ.) ಹೋಲಿಸಿದರೆ ಜೂನ್‌ನಲ್ಲಿ 3,80,406 ರೂ. ಹೆಚ್ಚಳದೊಂದಿಗೆ 15,02,838 ರೂ. ಸಂಗ್ರಹವಾಗಿದೆ.

ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿ ದೇವಸ್ಥಾನದ ಅಧಿಕಾರಿಗಳು ಕೂಡ ಹುಂಡಿ ಸಂಗ್ರಹದಲ್ಲಿ ಸ್ವಲ್ಪ ಹೆಚ್ಚಳವಾಗಿದೆ ಎಂದು ತಿಳಿಸಿದ್ದಾರೆ. ಕೋಲಾರ ಜಿಲ್ಲೆಯು ಪ್ರಸಿದ್ಧ ದೇವಸ್ಥಾನಗಳಾದ ಕೋಲಾರಮ್ಮ ದೇವಸ್ಥಾನ, ಮುಳಬಾಗಲು ಕುರುಡುಮಲೆ ಶ್ರೀ ವಿನಾಯಕ ದೇವಸ್ಥಾನ, ಮುಳಬಾಗಲು ಆಂಜನೇಯ ಸ್ವಾಮಿ ದೇವಸ್ಥಾನ, ಚಿಕ್ಕ ತಿರುಪತಿ ಸೇರಿದಂತೆ ಇತರ ದೇವಸ್ಥಾನಗಳಲ್ಲಿ ಮಹಿಳಾ ಭಕ್ತರ ದಂಡೇ ಹರಿದು ಬರುತ್ತಿದೆ ಎಂದು ಮುಜರಾಯಿ ತಹಶೀಲ್ದಾರ್ ನಾಗವೇಣಿ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com