ರಾಜ್ಯದಲ್ಲಿನ ಅಕ್ರಮ ಮರಳುಗಾರಿಕೆಯನ್ನು ನಿಯಂತ್ರಿಸಲು ಸಾಧ್ಯವಿಲ್ಲ: ಸಚಿವ ಕೃಷ್ಣ ಬೈರೇಗೌಡ

ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಶುಕ್ರವಾರ ಅಕ್ರಮ ಮರಳು ಗಣಿಗಾರಿಕೆ ಮತ್ತು ರಾಜ್ಯದಲ್ಲಿ ಅದರ ಪೂರೈಕೆಯನ್ನು ನಿಯಂತ್ರಿಸುವಲ್ಲಿ ಸರ್ಕಾರದ ಅಸಹಾಯಕತೆಯನ್ನು ವ್ಯಕ್ತಪಡಿಸಿದರು. 
ಸಚಿವ ಕೃಷ್ಣ ಬೈರೇಗೌಡ
ಸಚಿವ ಕೃಷ್ಣ ಬೈರೇಗೌಡ

ಬೆಂಗಳೂರು: ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಶುಕ್ರವಾರ ಅಕ್ರಮ ಮರಳು ಗಣಿಗಾರಿಕೆ ಮತ್ತು ರಾಜ್ಯದಲ್ಲಿ ಅದರ ಪೂರೈಕೆಯನ್ನು ನಿಯಂತ್ರಿಸುವಲ್ಲಿ ಸರ್ಕಾರದ ಅಸಹಾಯಕತೆಯನ್ನು ವ್ಯಕ್ತಪಡಿಸಿದರು. 

ವಿಧಾನಸಭೆಯಲ್ಲಿ ಈ ಕುರಿತು ನಡೆದ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಅಕ್ರಮ ಮರಳು ದಂಧೆಗೆ ಕಡಿವಾಣ ಹಾಕಲು ಹಾಗೂ ದಂಧೆಯನ್ನು ನಿಯಂತ್ರಿಸಲು ಸದಸ್ಯರು ಸಲಹೆ ನೀಡುವಂತೆ ಒತ್ತಾಯಿಸಿದರು.

ಯಾವುದೇ ಸರ್ಕಾರಗಳಿಂದ ಈ ಸಮಸ್ಯೆಯನ್ನು ಬಗೆಹರಿಸಲು ಸಾಧ್ಯವಾಗಿಲ್ಲ. 'ಅಕ್ರಮ ಮರಳು ಗಣಿಗಾರಿಕೆ ತಡೆದರೆ ಮರಳಿನ ಬೆಲೆ ಹೆಚ್ಚಾಗಲಿದೆ. ಇದನ್ನು ಸರ್ಕಾರ ಸಕ್ರಮಗೊಳಿಸಿದರೆ, ಹೆಚ್ಚು ಮರಳು ದಂಧೆ ನಡೆಯುತ್ತದೆ. ಈ ಸಮಸ್ಯೆಯನ್ನು ಪರಿಹರಿಸಲು ಸಾಧ್ಯವಾಗದ ಐದು ಸರ್ಕಾರಗಳನ್ನು ನಾನು ನೋಡಿದ್ದೇನೆ' ಎಂದು ಅವರು ಹೇಳಿದರು.

ಅಕ್ರಮ ಮರಳುಗಾರಿಕೆ ಕುರಿತು ಗುಲ್ಬರ್ಗ ದಕ್ಷಿಣ ಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಮತ್ತು ಅಫಜಲಪುರ ಕ್ಷೇತ್ರದ ಎಂ.ವೈ. ಪಾಟೀಲ ಅವರು ಅಕ್ರಮ ಮರಳುಗಾರಿಕೆ ತಡೆಯುವಂತೆ ಒತ್ತಾಯಿಸಿದರು. ಹೆಚ್ಚುತ್ತಿರುವ ಮರಳಿನ ಬೆಲೆಯಿಂದಾಗಿ ಜನರು ಮನೆ ಕಟ್ಟಿಕೊಳ್ಳಲು ಪರದಾಡುವಂತಾಗಿದೆ ಎಂದರು. ಮರಳು ಮಾಫಿಯಾದಿಂದ ಒಬ್ಬ ಅಧಿಕಾರಿಯ ಹತ್ಯೆಯ ಬಗ್ಗೆಯೂ ಅವರು ಉಲ್ಲೇಖಿಸಿದರು.

ಬೆಂಗಳೂರು ಬಳಿ ಅಕ್ರಮ ಕಲ್ಲು ಗಣಿಗಾರಿಕೆ ವಿಚಾರ ಪ್ರಸ್ತಾಪಿಸಿದ ಮಾಜಿ ಸಚಿವ ಮತ್ತು ಯಶವಂತಪುರ ಶಾಸಕ ಎಸ್.ಟಿ. ಸೋಮಶೇಖರ್, ಒಂದು ಪ್ರಕರಣದಲ್ಲಿ 46 ಎಕರೆ ಜಾಗದಲ್ಲಿ ಕಲ್ಲುಗಣಿಗಾರಿಕೆಗೆ ಪರವಾನಗಿ ನೀಡಲಾಗಿದೆ. ಆದರೆ, 100 ಎಕರೆಗೂ ಹೆಚ್ಚು ಜಾಗದಲ್ಲಿ ಕಲ್ಲುಗಣಿಗಾರಿಕೆ ನಡೆಯುತ್ತಿದೆ ಎಂದು ದೂರಿದರು.

ಮಧ್ಯರಾತ್ರಿಯೂ ಕ್ವಾರಿಗಳಲ್ಲಿ ಬ್ಲಾಸ್ಟಿಂಗ್ ಮಾಡುವುದರಿಂದ ಜನರಿಗೆ ತೊಂದರೆಯಾಗುತ್ತಿದೆ. ಸುತ್ತಮುತ್ತಲಿನ ಹಲವು ಮನೆಗಳ ಗೋಡೆಗಳು ಬಿರುಕು ಬಿಟ್ಟಿವೆ ಎಂದರು.

ನೆಲಮಂಗಲ ಕ್ಷೇತ್ರದ ಕಾಂಗ್ರೆಸ್‌ ಶಾಸಕ ಎನ್‌. ಶ್ರೀನಿವಾಸ್‌ ಮಾತನಾಡಿ, ನಾನು ವಿಷಯ ಪ್ರಸ್ತಾಪಿಸಿದಾಗ ನನಗೆ ಬೆದರಿಕೆ ಹಾಕಿದರು ಎಂದು ದೂರಿದರು.

ಅವರಿಗೆ ಪ್ರತಿಕ್ರಿಯಿಸಿದ ಬೈರೇಗೌಡ, ಇದು ರಾಜ್ಯಾದ್ಯಂತ ನಡೆಯುತ್ತಿದೆ. 'ನಾವು ಪ್ರತಿಪಕ್ಷದಲ್ಲಿದ್ದಾಗ, ಅಕ್ರಮ ಗಣಿಗಾರಿಕೆಗೆ ಒಂದೇ ಬಾರಿ ದಂಡ ವಿಧಿಸಲು ನಾನು ಬಿಜೆಪಿ ಸರ್ಕಾರಕ್ಕೆ ಸಲಹೆ ನೀಡಿದ್ದೆ ಎಂದರು.

ಅಕ್ರಮ ಕಲ್ಲುಗಣಿಗಾರಿಕೆ ಮತ್ತು ಮರಳು ಗಣಿಗಾರಿಕೆ ಪ್ರದೇಶಗಳ ಸಮೀಕ್ಷೆಗೆ ಡ್ರೋನ್‌ಗಳನ್ನು ಬಳಸಬಹುದು ಎಂದು ಅವರು ಹೇಳಿದರು. ಇಂತಹ ಅಕ್ರಮ ಗಣಿಗಾರಿಕೆ ಪ್ರದೇಶಗಳಿಗೆ ಅಧಿಕಾರಿಗಳನ್ನು ಕಳುಹಿಸುವಂತೆ ಸಂಬಂಧಪಟ್ಟ ಸಚಿವರನ್ನು ಕೋರುತ್ತೇನೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com