ಮಾನಸಿಕ ಅಸ್ವಸ್ಥ ಅತ್ಯಾಚಾರ ಸಂತ್ರಸ್ತೆಗೆ 10 ಪಟ್ಟು ಪರಿಹಾರ ಹೆಚ್ಚಿಸಿ ಹೈಕೋರ್ಟ್ ತೀರ್ಪು!

ಮಾನಸಿಕ ಅಸ್ವಸ್ಥೆ ಮತ್ತು ಮಾತು ಬಾರದ ಅಪ್ರಾಪ್ತ ಅತ್ಯಾಚಾರ ಸಂತ್ರಸ್ತೆಗೆ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಸಂತ್ರಸ್ತ ಪರಿಹಾರ ಯೋಜನೆಯಡಿ ಕರ್ನಾಟಕ ಉಚ್ಚ ನ್ಯಾಯಾಲಯವು 10.50 ಲಕ್ಷ ರು. ಪರಿಹಾರ ಹೆಚ್ಚಿಸಿ ತೀರ್ಪು ನೀಡಿದೆ.
ಹೈಕೋರ್ಟ್
ಹೈಕೋರ್ಟ್
Updated on

ಬೆಂಗಳೂರು: ಮಾನಸಿಕ ಅಸ್ವಸ್ಥೆ ಮತ್ತು ಮಾತು ಬಾರದ ಅಪ್ರಾಪ್ತ ಅತ್ಯಾಚಾರ ಸಂತ್ರಸ್ತೆಗೆ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಸಂತ್ರಸ್ತ ಪರಿಹಾರ ಯೋಜನೆಯಡಿ ಕರ್ನಾಟಕ ಉಚ್ಚ ನ್ಯಾಯಾಲಯವು 10.50 ಲಕ್ಷ ರು. ಪರಿಹಾರ ಹೆಚ್ಚಿಸಿ ತೀರ್ಪು ನೀಡಿದೆ.

ಪೋಕ್ಸೊ ಕಾಯಿದೆಯ ಅಡಿಯಲ್ಲಿ ಬಾಲಕಿಗೆ ಪರಿಹಾರ ನೀಡಬೇಕು ಎಂದಿರುವ ಹೈಕೋರ್ಟ್,ವಿಶೇಷ ನ್ಯಾಯಾಲಯದ ಆಶಯಗಳು ಮತ್ತು ಕಲ್ಪನೆಗಳನ್ನು ಆಧರಿಸಿರಬಾರದು. 2020 ರ ನಿಯಮ 9 ರ ಆಧಾರದ ಮೇಲೆ ನಿರ್ಧರಿಸಬೇಕು ಮತ್ತು ರಾಷ್ಟ್ರೀಯ ಕಾನೂನ ಸೇವೆಗಳ ಪ್ರಾಧಿಕಾರದ ನಿಯಮವನ್ನು ಅನುಸರಿಸಬೇಕು ಎಂದು ನ್ಯಾಯಮೂರ್ತಿ ಅನಿಲ್ ಬಿ ಕಟ್ಟಿ ಹೇಳಿದ್ದಾರೆ.

ಕಾರವಾರದ ವಿಶೇಷ ನ್ಯಾಯಾಲಯವು 2022ರ ಜನವರಿ 18ರಂದು ಆರೋಪಿಗಳಿಗೆ ಶಿಕ್ಷೆ ವಿಧಿಸುವ ಸಂದರ್ಭದಲ್ಲಿ 1 ಲಕ್ಷ ರೂ.ಗಳ ಪರಿಹಾರವನ್ನು ನೀಡಿತ್ತು. ಈ ಆದೇಶವನ್ನು ತಿರಸ್ಕರಿಸಿರುವ ಹೈಕೋರ್ಟ್ ಪರಿಹಾರವನ್ನು 10.50 ಲಕ್ಷಕ್ಕೆ ಹೆಚ್ಚಿಸಿದೆ.

ಅಪ್ರಾಪ್ತೆಯ ಪುನರ್ವಸತಿಗಾಗಿ ಮಧ್ಯಂತರ ಮತ್ತು ಅಂತಿಮ ಪರಿಹಾರವನ್ನು ನೀಡುವಾಗ ವಿಶೇಷ ನ್ಯಾಯಾಲಯಗಳ ಪಾತ್ರವು ಹೆಚ್ಚಿರುತ್ತದೆ. ಸಂತ್ರಸ್ತೆಯ ಕಲ್ಯಾಣಕ್ಕಾಗಿ ಅವರು ಪ್ರಾಯೋಗಿಕ ವಿಧಾನವನ್ನು ಅಳವಡಿಸಿಕೊಳ್ಳಬೇಕು ಎಂದು ನ್ಯಾಯಾಲಯ ಸೂಚಿಸಿದೆ. ವಿಶೇಷ ನ್ಯಾಯಾಲಯಗಳು ಸಾಕ್ಷಿ, ಸಂತ್ರಸ್ತರು ಅನುಭವಿಸಿದ ಗಾಯದ ಸ್ವರೂಪ, ಮತ್ತಿತರ ಸಂದರ್ಭಗಳನ್ನು ವಿಶ್ಲೇಷಿಸಿ ಪರಿಹಾರವನ್ನು ನಿರ್ಧರಿಸುವಾಗ ಪುನರ್ವಸತಿ, ವೈದ್ಯಕೀಯ ಚಿಕಿತ್ಸೆ ಮತ್ತು ಶಿಕ್ಷಣದ ಅಗತ್ಯವನ್ನು ಪರಿಗಣಿಸಬೇಕು ಎಂದು ನ್ಯಾಯಾಲಯ ಹೇಳಿದೆ.

2010 ರಲ್ಲಿ,ಅಪ್ರಾಪ್ತೆಯ ಪೋಷಕರು ಮತ್ತು ಇಬ್ಬರು ಸಹೋದರರು ಕೂಲಿ ಕೆಲಸ ಮಾಡುತ್ತಿದ್ದರು. ಆಕೆ ಅಂಗವೈಕಲ್ಯ ಮತ್ತು ಮಾನಸಿಕ ಅಸ್ವಸ್ಥಳಾದ ಕಾರಣ ಶಾಲೆಗೆ ಹೋಗುತ್ತಿರಲಿಲ್ಲ, ಹೀಗಾಗಿ ಅಪ್ರಾಪ್ತೆಯನ್ನು ಅವರು ತಮ್ಮ ಜೊತೆ ಕರೆದೊಯ್ಯುತ್ತಿದ್ದರು. ಆಕೆಯ ತಾಯಿಯೊಂದಿಗೆ ಕೆಲಸ ಮಾಡುತ್ತಿದ್ದ ಆರೋಪಿ,  ಆಕೆಯ ಮನೆಯವರೊಂದಿಗಿನ ಪರಿಚಯದ ಲಾಭವನ್ನು ಪಡೆದುಕೊಂಡು ಅಡಿಕೆ ತೋಪಿಗೆ ಹೊತ್ತೊಯ್ದು ಲೈಂಗಿಕ ದೌರ್ಜನ್ಯ ಎಸಗಿದ್ದ.

ಬಾಲಕಿಯ ತಾಯಿ ನೀಡಿದ ದೂರಿನ ಆಧಾರದ ಮೇಲೆ ಆತನ ವಿರುದ್ಧ ಐಪಿಸಿ ಸೆಕ್ಷನ್ 376 ಮತ್ತು ಪೋಕ್ಸೋ ಕಾಯ್ದೆಯ ಸೆಕ್ಷನ್ 4 ಮತ್ತು 6 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಆರೋಪಿಗೆ ಶಿಕ್ಷೆ ವಿಧಿಸುವಾಗ ವಿಚಾರಣಾ ನ್ಯಾಯಾಲಯವು ಕಾರವಾರದ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ (ಡಿಎಲ್‌ಎಸ್‌ಎ) ಯುವತಿಯ ಹೆಸರಿನಲ್ಲಿ ರಾಷ್ಟ್ರೀಕೃತ ಬ್ಯಾಂಕ್‌ನಲ್ಲಿ 1 ಲಕ್ಷ ರೂ. ಡೆಪಾಸಿಟ್ ಮಾಡುವಂತೆ ಸೂಚಿಸಿತ್ತು.

ಜೂನ್ 2022 ರಲ್ಲಿ, DLSA ನ ಸದಸ್ಯ ಕಾರ್ಯದರ್ಶಿ  ಸಂತ್ರಸ್ತೆಗೆ ಪರಿಹಾರ ಬಿಡುಗಡೆ ಮಾಡಲು ವಿನಂತಿಸಿದರು. NALSA ರೂಪಿಸಿದ ಮಾದರಿ ಸಂತ್ರಸ್ತ ಪರಿಹಾರ ಯೋಜನೆ ಮಾರ್ಗಸೂಚಿಗಳ ಪ್ರಕಾರ ಪರಿಹಾರದ ಹೆಚ್ಚಳ ಮಾಡುವಂತೆ  ಮೇಲ್ಮನವಿ ಸಲ್ಲಿಸಲು DLSA ಗೆ KSLSA ನಿರ್ದೇಶನ ನೀಡಿತು. ಹೈಕೋರ್ಟ್ ಕಾನೂನು ಸೇವೆಗಳ ಸಮಿತಿಯು ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com