ವೃದ್ಧ ತಾಯಿಯ ಜೀವನ ನಿರ್ವಹಣೆಗೆ ಮಾಸಿಕ ರೂ.10,000 ನೀಡಲು ಇಚ್ಚಿಸದ ಸಹೋದರರಿಗೆ ಹೈಕೋರ್ಟ್ ಪಾಠ, ಅರ್ಜಿ ತಿರಸ್ಕೃತ!

ವಯಸ್ಸಾದ ತಾಯಿಯ ಜೀವನ ನಿರ್ವಹಣೆಗೆ ಮಾಸಿಕ 10,000 ರೂಪಾಯಿ ನೀಡಲು ಇಚ್ಛಿಸದ ಇಬ್ಬರು ಸಹೋದರರ ವಾದವನ್ನು ಹೈಕೋರ್ಟ್ ತಿರಸ್ಕರಿಸಿದ್ದು, ಅವರು ಕಾನೂನು, ಧರ್ಮ ಮತ್ತು ಸಂಪ್ರದಾಯಕ್ಕೆ ಬದ್ಧರಾಗಿರುವಂತೆ ಹೇಳಿತು.
ಹೈಕೋರ್ಟ್
ಹೈಕೋರ್ಟ್

ಬೆಂಗಳೂರು: ವಯಸ್ಸಾದ ತಾಯಿಯ ಜೀವನ ನಿರ್ವಹಣೆಗೆ ಮಾಸಿಕ 10,000 ರೂಪಾಯಿ ನೀಡಲು ಇಚ್ಛಿಸದ ಇಬ್ಬರು ಸಹೋದರರ ವಾದವನ್ನು ಹೈಕೋರ್ಟ್ ತಿರಸ್ಕರಿಸಿದ್ದು, ಅವರು ಕಾನೂನು, ಧರ್ಮ ಮತ್ತು ಸಂಪ್ರದಾಯಕ್ಕೆ ಬದ್ಧರಾಗಿರುವಂತೆ ಹೇಳಿತು.

84 ವರ್ಷದ ತಾಯಿ ವೆಂಕಟಮ್ಮ ಅವರಿಗೆ ತಲಾ 5,000 ರೂ. ಭರಿಸುವಂತೆ ಇಬ್ಬರು ಸಹೋದರರಾದ ಗೋಪಾಲ್ ಮತ್ತು ಮಹೇಶ್ ಅವರಿಗೆ ಮೈಸೂರು ಸಹಾಯಕ ಆಯುಕ್ತರು ಮೇ 2019ರಲ್ಲಿ ಆದೇಶಿಸಿದ್ದರು. ಆ ನಿರ್ವಹಣೆ ವೆಚ್ಚವನ್ನು ಜಿಲ್ಲಾಧಿಕಾರಿ ರೂ.10,000ಕ್ಕೆ ಹೆಚ್ಚಿಸಿರುವುದನ್ನು ಪ್ರಶ್ನಿಸಿ  ಸಹೋದರರು ಹೈಕೋರ್ಟ್‌ ಮೆಟ್ಟಿಲೇರಿದ್ದರು. ಜಿಲ್ಲಾಧಿಕಾರಿ ಆದೇಶವನ್ನು ಎತ್ತಿಹಿಡಿದ ನ್ಯಾಯಮೂರ್ತಿ ಕೃಷ್ಣ ಎಸ್ ದೀಕ್ಷಿತ್, ಸಹೋದರರು ಎತ್ತಿರುವ ಪ್ರತಿವಾದವನ್ನು ತಳ್ಳಿಹಾಕಿದರು ಅಲ್ಲದೇ ಈ ಅರ್ಜಿಯನ್ನು ನ್ಯಾಯಾಲಯ ಮುಂದೆ ತಂದಿದ್ದಕ್ಕೆ ಅವರಿಗೆ ರೂ.5,000 ವಿಧಿಸಿದರು. 

ಸಮರ್ಥನಾದ ವ್ಯಕ್ತಿಯು ತನ್ನ ಅವಲಂಬಿತ ಹೆಂಡತಿಯನ್ನು ಕಾಪಾಡಿಕೊಳ್ಳಲು ಬದ್ಧನಾಗಿದ್ದರೆ, ಅವಲಂಬಿತ ತಾಯಿಯ ವಿಷಯಕ್ಕೆ ಬಂದಾಗ ಅಂತಹ ನಿಯಮ ಅನ್ವಯವಾಗದಿರಲು ಕಾರಣವೇನಿಲ್ಲ. ಇದಕ್ಕೆ ವ್ಯತಿರಿಕ್ತವಾದ ವಾದವನ್ನು ಕಾನೂನು ಮತ್ತು ಧರ್ಮ ಒಪ್ಪುವುದಿಲ್ಲ ಎಂದು ಹೇಳಿದ ನ್ಯಾಯಮೂರ್ತಿ ಅರ್ಜಿಯನ್ನು ವಜಾಗೊಳಿಸಿದರು. 

ವಯಸ್ಸಾದ ಮತ್ತು ಅನಾರೋಗ್ಯದ ತಾಯಿಯನ್ನು ನೋಡಿಕೊಳ್ಳಲು ತಾವು ಶಕ್ತರಲ್ಲ ಎಂಬ ಸಹೋದರರ ವಾದಕ್ಕೆ ಅರ್ಥವೇ ಇಲ್ಲ ಎಂದ ನ್ಯಾಯಾಲಯ, ಬ್ರಹ್ಮಾಂಡ ಪುರಾಣದ ಪ್ರಕಾರ ವೃದ್ದಾಪ್ಯದಲ್ಲಿ ತಂದೆ ತಾಯಿಯನ್ನು ಸಲಹದ ಮಕ್ಕಳ ತಪ್ಪಿಗೆ ಪ್ರಾಯಶ್ಚಿತ್ತವೇ ಇಲ್ಲ. ದೇವರನ್ನು ಆರಾಧಿಸುವ ಮೊದಲು ತಂದೆ ತಾಯಿ, ಗುರು, ಅತಿಥಿಗಳನ್ನು ಗೌರವಿಸಬೇಕು ಎಂದು ಪಾಠ ಹೇಳಿತು.

ರಕ್ಷತಿ ಸ್ಥವೀರೇ ಪುತ್ರ ಎಂದು ಸ್ಮೃತಿಕಾರರು ಹೇಳಿದ್ದಾರೆ. ನಮ್ಮ ದೇಶದ ಕಾನೂನು, ಸಂಸ್ಕೃತಿ, ಧರ್ಮ, ಪರಂಪರೆ ತಂದೆ ತಾಯಿಯನ್ನು ನೋಡಿಕೊಳ್ಳುವುದು ಪುತ್ರರ ಕರ್ತವ್ಯವೆಂದು ಹೇಳಿದೆ ಎಂದು ತಮ್ಮ ತೀರ್ಪಿನಲ್ಲಿ ಉಲ್ಲೇಖಿಸಿದ್ದು, ಶಿಕ್ಷಣ ಕಲಿಸಿದ ಗುರು, ಶಿಷ್ಯನನ್ನು ಬೀಳ್ಕೊಡುವಾಗ, ತಾಯಿ, ತಂದೆ, ಗುರು, ಅತಿಥಿಗಳನ್ನು ದೇವರೆಂದು ಭಾವಿಸಬೇಕು ಎಂದು ತೈತ್ತರೀಯ ಉಪನಿಷತ್ನಲ್ಲಿ ಹೇಳಲಾಗಿದೆ ಎಂದು ಕೃಷ್ಣ ಎಸ್‌ ದೀಕ್ಷಿತ್‌ ತಿಳಿಸಿದರು.

ಮೊದಲ ಮಗ ಮೂರು ಅಂಗಡಿ ಹೊಂದಿದ್ದು, 20,000 ರೂ.ಗಳನ್ನು ಬಾಡಿಗೆ ಆದಾಯ ಗಳಿಸುತ್ತಿದ್ದರೂ ಕೇವಲ 10,000 ರೂ.ವನ್ನು ತಾಯಿಗೆ ನೀಡದಿರುವುದನ್ನು ನ್ಯಾಯಾಲಯ ಗಮನಿಸಿತು. ತಾಯಿಯನ್ನು ನೋಡಿಕೊಳ್ಳಲು ಸಿದ್ಧರಿದ್ದೇವೆ. ಆದರೆ ಅವರು ತಮ್ಮೊಂದಿಗೆ ಬದುಕಬೇಕು ಮತ್ತು ಹೆಣ್ಣುಮಕ್ಕಳ ಜೊತೆ ಇರಬಾರದು ಎಂಬ ಸಹೋದರರ ವಾದವನ್ನು ತಳ್ಳಿ ಹಾಕಿದ ನ್ಯಾಯಾಲಯ, ಹೆಣ್ಣು ಮಕ್ಕಳು ಕುಟುಂಬದ ಆಸ್ತಿಯಲ್ಲಿ ಪಾಲು ಬೇಕು ಎಂದಲ್ಲ, ಪುತ್ರರಿಂದ ಕೈಬಿಟ್ಟ ತಾಯಿಯನ್ನು ನೋಡಿಕೊಳ್ಳುತ್ತಿದ್ದಾರೆ ಎಂದು ಹೇಳಿತು. 

ರೂ.10,000 ದುಬಾರಿ ಎಂಬಂತಹ ವಾದವನ್ನು ಒಪ್ಪಿಕೊಳ್ಳದ ನ್ಯಾಯಾಲಯ, ಬ್ರೇಡ್ ಕೂಡಾ ದುಬಾರಿಯಾಗಿರುವ ಕಾಲದಲ್ಲಿ ಬದುಕುತ್ತಿದ್ದೇವೆ. ಹಣ ತನ್ನ ಕೊಳ್ಳುವ ಶಕ್ತಿಯನ್ನು ಕಳೆದುಕೊಳ್ಳುತ್ತಿದ್ದು, ದಿನಗಳು ತುಂಬಾ ದುಬಾರಿಯಾಗಿವೆ; ಯಾವ ಕಡೆಯಿಂದಲೂ ರೂ 10,000  ಹೆಚ್ಚುವರಿ ಅನ್ನಿಸಲ್ಲ, ಅಷ್ಟು ಮೊತ್ತವನ್ನು ತಾಯಿಯ ಜೀವನಾಂಶವಾಗಿ ನೀಡುವಂತೆ ಕೋರ್ಟ್ ಅರ್ಜಿದಾರರಿಗೆ ತಾಕೀತು ಮಾಡಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com