ಕಲಬುರಗಿ: ಸರ್ವೀಸ್ ಗನ್ ಹೊತ್ತೊಯ್ದು ಪೊಲೀಸರನ್ನೇ ತಬ್ಬಿಬ್ಬು ಮಾಡಿದ್ದ ಕಳ್ಳ ಕೊನೆಗೂ ಸೆರೆ!

ಕಳ್ಳನನ್ನು ಹಿಡಿಯಲು ಹೋದ ಪೊಲೀಸರ ಸರ್ವಿಸ್ ಗನ್ ಕಳ್ಳನ ಕಾರಿನೊಳಗೆ ಬಿದ್ದು ಆತ ಪೊಲೀಸರನ್ನೇ ಆಟಾಡಿಸಿ ಕೊನೆಗೂ ಬಂಧನಕ್ಕೆ ಒಳಗಾದ ರೋಚಕ ಘಟನೆ ಕಲಬುರಗಿಯಲ್ಲಿ ವರದಿಯಾಗಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಕಲಬುರಗಿ: ಕಳ್ಳನನ್ನು ಹಿಡಿಯಲು ಹೋದ ಪೊಲೀಸರ ಸರ್ವಿಸ್ ಗನ್ ಕಳ್ಳನ ಕಾರಿನೊಳಗೆ ಬಿದ್ದು ಆತ ಪೊಲೀಸರನ್ನೇ ಆಟಾಡಿಸಿ ಕೊನೆಗೂ ಬಂಧನಕ್ಕೆ ಒಳಗಾದ ರೋಚಕ ಘಟನೆ ಕಲಬುರಗಿಯಲ್ಲಿ ವರದಿಯಾಗಿದೆ.

ಸಿನಿಮಾ ಕಥೆಯ ಮಾದರಿಯಲ್ಲಿ ಈ ಘಟನೆ ನಡೆದಿದ್ದು, ಅಂತಾರಾಜ್ಯ  ಪೊಲೀಸ್ ಅಧಿಕಾರಿಗಳಿಗೂ ಈತ ಚಳ್ಳೆಹಣ್ಣು ತಿನ್ನಿಸಲು ಯತ್ನಿಸಿದ್ದ. ಆದರೆ ಪೊಲೀಸರಿಗೆ ಕೊನೆಗೂ ಸಿಕ್ಕಿಬಿದ್ದಿದ್ದಾನೆ.

ಆಗಿದ್ದೇನು ಅಂದರೆ, ಅಂತಾರಾಜ್ಯ ಕಳ್ಳನೊಬ್ಬನನ್ನು ಹಿಡಿಯಲು ಪೊಲೀಸರು ತೆರಳಿದ್ದರು. ಆತನ ಹೆಸರು ಖಜಪ್ಪ, ತೆಲಂಗಾಣ, ಮಹಾರಾಷ್ಟ್ರ, ಕರ್ನಾಟಕದ ಪೊಲೀಸರಿಗೆ ಬೇರೆ ಬೇರೆ ಪ್ರಕರಣಗಳಲ್ಲಿ ಬೇಕಿದ್ದ ಈತನನ್ನು ಕಳ್ಳತನದ ಪ್ರಕರಣವೊಂದರಲ್ಲಿ ಬೆಂಗಳೂರು ಪೊಲೀಸರು ಹುಡುಕುತ್ತಿದ್ದರು. ಅಫ್ಜಲ್ ಪುರ ತಾಲೂಕಿನ ಬಲ್ಲುರ್ಗಿ ನಿವಾಸಿಯಾಗಿದ್ದ ಈತನನ್ನು ಹುಡುಕುತ್ತಿದ್ದ ಬೆಂಗಳೂರು ಪೊಲೀಸರು ಈತನ ಚಲನವಲನಗಳ ಬಗ್ಗೆ ಕಲಬುರಗಿ ಜಿಲ್ಲಾ ಪೊಲೀಸರಿಗೆ ಮಾಹಿತಿ ನೀಡಿದ್ದರು. ಮಹಾರಾಷ್ಟ್ರದ ಅಕ್ಕಲ್ಕೋಟ್ ಪೊಲೀಸರು ಬೆಂಗಳೂರು ಪೊಲೀಸರಿಗೆ ಮಾಹಿತಿ ನೀಡಿದ್ದರು.

ಈತ ತನ್ನ ಊರಾದ ಬಲ್ಲುರ್ಗಿಗೆ ಹೋಗಬಹುದೆಂಬ, ಅಕ್ಕಲ್ಕೋಟ್ ಪೊಲೀಸರ ಮಾಹಿತಿಯನ್ನು ಕಲಬುರಗಿ ಪೊಲೀಸರು ಬೆಂಗಳೂರು ಪೊಲೀಸರಿಗೆ ತಲುಪಿಸಿದ್ದರು. ಈ ಮಾಹಿತಿಯನ್ನಾಧರಿಸಿ ಬೆಂಗಳೂರು ಪೊಲೀಸರು ಕಲಬುರಗಿಗೆ ತಂಡವನ್ನು ಕಳಿಸಿದ್ದರು. ಆರೋಪಿಗಾಗಿ ಸೊನ್ನಾ ಕ್ರಾಸ್ ಬಳಿ ಬೆಂಗಳೂರು ಪೊಲೀಸರ ತಂಡ ಅಫ್ಜಲ್ ಪುರ ಪಿಎಸ್ಐ ಭೀಮರಾಯ ಬಂಕಳಗಿ ನೇತೃತ್ವದಲ್ಲಿ ಕಾಯತೊಡಗಿತ್ತು.

ಸೋಮವಾರ ಮಧ್ಯರಾತ್ರಿ 3 ಗಂಟೆ ವೇಳೆಗೆ ಖಜಪ್ಪ, ತನ್ನ ಸಹಚರರಾದ ರವಿ ಹಾಗೂ ಸಂಜು ಜೊತೆಗೆ ಸೊನ್ನಾ ಕ್ರಾಸ್ ಬಂದ ಆದರೆ ಪೊಲೀಸರನ್ನು ನೋಡಿದ ತಕ್ಷಣವೇ, ಯು-ಟರ್ನ್ ಮಾಡಿ ಪರಾರಿಯಾಗಲು ಯತ್ನಿಸಿದ್ದ. ಆದರೆ ಕಾರನ್ನು ಸುತ್ತುವರೆದ ಪೊಲೀಸರು ಆತನ ಪ್ರಯತ್ನವನ್ನು ವಿಫಲಗೊಳಿಸಿದರು. ಪಿಎಸ್ಐ ಭೀಮರಾಯ ಸರ್ವಿಸ್ ರಿವಾಲ್ವರ್ ನ ಸಹಾಯದ ಮೂಲಕ ಕಾರಿನ ಕಿಟಕಿ ಗಾಜು ಒಡೆಯಲು ಯತ್ನಿಸಿದರು. ಕೊನೆಗೆ ಗಾಜು ಒಡೆದು, ರಿವಾಲ್ವರ್ ಕಾರಿನ ಒಳಗೆ ಬಿತ್ತು. ರಿವಾಲ್ವರ್ ಸಹಿತ ಕಾರಿನೊಂದಿಗೆ ಖಜಪ್ಪ ಹಾಗೂ ಆತನ ಸಹಚರರು ಪರಾರಿಯಾದರು

ಈ ನಡುವೆ ಖಜಪ್ಪ ಬಲ್ಲುರ್ಗಿ ಬಳಿ ಬೆಳಿಗ್ಗೆ 8 ಗಂಟೆ ವೇಳೆಗೆ ಮರದ ಮೇಲೆ ಕಾಣಿಸಿಕೊಂಡ ಮಾಹಿತಿ ಪೊಲೀಸರಿಗೆ ಲಭ್ಯವಾಗಿದೆ. ತಕ್ಷಣವೇ ಕಲಬುರಗಿ ಎಸ್ ಪಿ ಇಶಾ ಪಂತ್ 50 ಪೊಲೀಸ್ ಸಿಬ್ಬಂದಿ ಹಾಗೂ ಅಗ್ನಿಶಾಮಕ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ಆಗಮಿಸಿದರು. ಆದರೆ ಖಜಪ್ಪ ತನ್ನ ಬಳಿ ಯಾರಾದರೂ ಬಂದರೆ ಟ್ರಿಗರ್ ಒತ್ತಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಸಿದ್ದ. ಕೊನೆಗೆ ಖಜಪ್ಪ ಅವರ ಕುಟುಂಬ ಸದಸ್ಯರನ್ನು ಸಂಬಂಧಿಕರನ್ನು ಕರೆಸಿ, ಆತನನ್ನು ಮಧ್ಯಾಹ್ನ 1.00 ಗಂಟೆ ವೇಳೆಗೆ ಮರದಿಂದ ಇಳಿಸಿ ವಶಕ್ಕೆ ಪಡೆಯುವಲ್ಲಿ ಪೊಲೀಸರು ಯಶಸ್ವಿಯಾದರು. ಆತನ ಸಹಚರರಾದ ರವಿ ಹಾಗೂ ಸಂಜು ಮೊದಲೇ ಶರಣಾಗಿದ್ದರು.
 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com