ಡಿಜೆ ಹಳ್ಳಿ-ಕೆಜಿ ಹಳ್ಳಿ ಸೇರಿ ಹಿಂಸಾಚಾರ ಪ್ರಕರಣಗಳ ಮರು ಪರಿಶೀಲಿಸಿ ಹಿಂಪಡೆಯಲು ಪರಮೇಶ್ವರ್ ಸೂಚನೆ; ಬಿಜೆಪಿ ಕಿಡಿ

ಪ್ರತಿಭಟನೆ ಮತ್ತು ಗಲಭೆಗಳಿಗೆ ಸಂಬಂಧಿಸಿದಂತೆ ಪ್ರಕರಣಗಳಡಿ ಬಂಧಿಸಲಾಗಿರುವ ಅಮಾಯಕ ಯುವಕರು ಮತ್ತು ವಿದ್ಯಾರ್ಥಿಗಳ ಮೇಲಿನ ಸುಳ್ಳು ಪ್ರಕರಣಗಳನ್ನು ಹಿಂಪಡೆಯುವಂತೆ ಕಾಂಗ್ರೆಸ್ ಶಾಸಕ ತನ್ವೀರ್ ಸೇಠ್ ಮನವಿಯನ್ನು ಪರಿಶೀಲಿಸುವಂತೆ ಗೃಹ ಸಚಿವ ಡಾ. ಜಿ.ಪರಮೇಶ್ವರ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಗೃಹ ಸಚಿವ ಡಾ.ಜಿ.ಪರಮೇಶ್ವರ್
ಗೃಹ ಸಚಿವ ಡಾ.ಜಿ.ಪರಮೇಶ್ವರ್

ಬೆಂಗಳೂರು: ನಗರದ ಡಿಜೆ ಹಳ್ಳಿ, ಕೆಜಿ ಹಳ್ಳಿ, ಶಿವಮೊಗ್ಗ ಮತ್ತು ಹಬ್ಬಳ್ಳಿ ಸೇರಿದಂತೆ ಇತರೆಡೆ ನಡೆದ ಪ್ರತಿಭಟನೆ ಮತ್ತು ಗಲಭೆಗಳಿಗೆ ಸಂಬಂಧಿಸಿದಂತೆ ಪ್ರಕರಣಗಳಡಿ ಬಂಧಿಸಲಾಗಿರುವ ಅಮಾಯಕ ಯುವಕರು ಮತ್ತು ವಿದ್ಯಾರ್ಥಿಗಳ ಮೇಲಿನ ಸುಳ್ಳು ಪ್ರಕರಣಗಳನ್ನು ಹಿಂಪಡೆಯುವಂತೆ ಕಾಂಗ್ರೆಸ್ ಶಾಸಕ ತನ್ವೀರ್ ಸೇಠ್ ಮನವಿಯನ್ನು ಪರಿಶೀಲಿಸುವಂತೆ ಗೃಹ ಸಚಿವ ಡಾ. ಜಿ.ಪರಮೇಶ್ವರ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಈ ಕುರಿತು ಪ್ರತಿಪಕ್ಷ ಬಿಜೆಪಿ ಕಟುವಾಗಿ ಪ್ರತಿಕ್ರಿಯಿಸಿದ್ದು, ರಾಜ್ಯದ ಕಾಂಗ್ರೆಸ್ ಸರ್ಕಾರವು 'ಒಂದು ಸಮುದಾಯದ ಕೋಮು ಅಪರಾಧಿಗಳಿಗೆ ಕ್ಲೀನ್ ಚಿಟ್ ನೀಡುವ ಮೂಲಕ, ಜಿಹಾದಿಗಳು ಮತ್ತು ಪಿಎಫ್‌ಐ ಭಯೋತ್ಪಾದಕರ ತಾಳಕ್ಕೆ ತಕ್ಕಂತೆ ಕುಣಿಯುತ್ತಿದೆ' ಎಂದು ಆರೋಪಿಸಿದೆ.

ಸಚಿವ ಪರಮೇಶ್ವರ ಅವರು ಜುಲೈ 19ರಂದು ಪ್ರಧಾನ ಕಾರ್ಯದರ್ಶಿ ಕಾರಾಗೃಹಗಳು, ನಾಗರಿಕ ರಕ್ಷಣೆ ಮತ್ತು ಸಹಾಯಕ ಸೇವೆಗಳು (ಪಿಸಿಎಎಸ್), ಗೃಹ ಇಲಾಖೆಗೆ ಬರೆದ ಪತ್ರದಲ್ಲಿ ಶಾಸಕ ಮತ್ತು ಮಾಜಿ ಸಚಿವ ತನ್ವೀರ್ ಸೇಠ್ ಅವರ ಮನವಿ ಪತ್ರವನ್ನು ಉಲ್ಲೇಖಿಸಿದ್ದಾರೆ.

'ಬೆಂಗಳೂರಿನ ಡಿ.ಜೆ. ಹಳ್ಳಿ ಹಾಗೂ ಕೆ.ಜಿ. ಹಳ್ಳಿ, ಶಿವಮೊಗ್ಗ, ಹುಬ್ಬಳ್ಳಿ ಮತ್ತಿತರ ಕಡೆ ನಡೆದ ಪ್ರತಿಭಟನೆ, ಗಲಭೆಗಳಿಗೆ ಸಂಬಂಧಿಸಿದಂತೆ ಅಮಾಯಕ ಯುವಕರು ಹಾಗೂ ವಿದ್ಯಾರ್ಥಿಗಳನ್ನು ಸುಳ್ಳು ಪ್ರಕರಣಗಳಡಿ ಬಂಧಿಸಲಾಗಿದ್ದು, ಪರಿಶೀಲನೆ ನಡೆಸಿ ನಿಯಮಾನುಸಾರ ಪ್ರಕರಣಗಳನ್ನು ಹಿಂಪಡೆಯುವಂತೆ ಮನವಿ ಮಾಡಲಾಗಿದೆ. ಈ ಸಂಬಂಧ ಪರಿಶೀಲಿಸಿದ ನಂತರ ಅಗತ್ಯ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ' ಎಂದು ಗೃಹ ಸಚಿವರ ಪತ್ರದಲ್ಲಿ ತಿಳಿಸಲಾಗಿದೆ.

ಕಾಂಗ್ರೆಸ್ ಶಾಸಕ ತನ್ವೀರ್ ಸೇಠ್ ಪತ್ರ

ಬೆಂಗಳೂರಿನ ಡಿಜೆ ಹಳ್ಳಿ ಮತ್ತು ಕೆಜಿ ಹಳ್ಳಿ ಹಾಗೂ ಇತರೆ ಗಲಭೆಗಳಲ್ಲಿ ಅಮಾಯಕ ಯುವಕರು ಹಾಗೂ ವಿದ್ಯಾರ್ಥಿಗಳನ್ನು ಸುಳ್ಳು ಪ್ರಕರಣಗಳಲ್ಲಿ ಬಂಧಿಸಲಾಗಿದ್ದು, ಇಂತಹ ಪ್ರಕರಣಗಳನ್ನು ಪರಿಶೀಲನೆ ನಡೆಸಿ, ನಿಯಮಾನುಸಾರ ಅಗತ್ಯ ಕ್ರಮ ಕೈಗೊಳ್ಳುವಂತೆ ಮನವಿ ಮಾಡಲಾಗಿದೆ ಎಂದು ನರಸಿಂಹರಾಜ ಕ್ಷೇತ್ರದ ಶಾಸಕ ತನ್ವೀರ್ ಸೇಠ್ ಗೃಹ ಸಚಿವ ಪರಮೇಶ್ವರ್ ಅವರಿಗೆ ಪತ್ರ ಬರೆದಿದ್ದಾರೆ.

‘ಒಂದು ಕೋಮಿನ ಕಮ್ಯುನಲ್ ಅಪರಾಧಿಗಳಿಗೆ ನಮ್ಮಲ್ಲಿ ಕ್ಲೀನ್ ಚಿಟ್ ನೀಡಲಾಗುವುದು ಎಂದು ಬೋರ್ಡ್ ಹಾಕಿಕೊಂಡು ಪರಮೇಶ್ವರ ಅವರು ಕಾರ್ಯನಿರ್ವಹಿಸುತ್ತಿರುವಂತಿದೆ. ಇದಕ್ಕಿಂತ ನಾಚಿಕೆಗೇಡಿನ ಸಂಗತಿ ಬೇರೊಂದಿದೆಯೇ?. ಈ ಸರ್ಕಾರ ಜಿಹಾದಿಗಳ, ಪಿಎಫ್ಐ ಭಯೋತ್ಪಾದಕರ ತಾಳಕ್ಕೆ ಕುಣಿಯುತ್ತಿರುವುದನ್ನು ಈ ಪತ್ರ ಋುಜುವಾತು ಮಾಡಿದೆ. ಜಿಹಾದಿ ಸರ್ಕಾರದ ಎಲ್ಲಾ ಬಗೆಯ ಹಿಂದೂ ವಿರೋಧಿ ನೀತಿ-ನಿಲುವುಗಳ ವಿರುದ್ಧ ಬಿಜೆಪಿ ಹೋರಾಟ ಮುಂದುವರೆಸಲಿದೆ' ಎಂದು ರಾಜ್ಯ ಬಿಜೆಪಿ ಟ್ವೀಟ್ ಮಾಡಿದೆ.

'ಡಿಜೆ ಹಳ್ಳಿ ಮತ್ತು ಕೆಜಿ ಹಳ್ಳಿ ಗಲಭೆಯಲ್ಲಿನ ಗಲಭೆಕೋರರು ಪೊಲೀಸ್ ಠಾಣೆಗೆ ಬೆಂಕಿ ಹಚ್ಚಿದ್ದು ಅತ್ಯಂತ ಕೆಟ್ಟ ಘಟನೆಗಳಲ್ಲಿ ಒಂದಾಗಿದ್ದು, 'ರಾಜ್ಯದಲ್ಲಿ ಗಲಭೆ ಮತ್ತು ಹಿಂದೂ ಕಾರ್ಯಕರ್ತರ ಹತ್ಯೆಗಳಿಗೆ ಕಾರಣರಾದ ಪಿಎಫ್‌ಐ ಗೂಂಡಾಗಳ ವಿರುದ್ಧದ ಪ್ರಕರಣಗಳನ್ನು ಸಿದ್ದರಾಮಯ್ಯ 1.0 ಸರ್ಕಾರ ಹಿಂಪಡೆದಿದೆ. ಇದೀಗ ಗಲಭೆಕೋರರ ಮೇಲಿನ ಪ್ರಕರಣಗಳನ್ನು ಹಿಂಪಡೆಯಲು ಕ್ರಮಕೈಗೊಳ್ಳುವಂತೆ ಗೃಹ ಸಚಿವ ಪರಮೇಶ್ವರ ಅವರು ಗೃಹ ಕಾರ್ಯದರ್ಶಿಗೆ ಸೂಚಿಸಿದ್ದಾರೆ' ಎಂದು ಬಿಜೆಪಿ ಹಿರಿಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಟ್ವೀಟ್ ಮಾಡಿದ್ದಾರೆ.

2020ರ ಆಗಸ್ಟ್ ತಿಂಗಳಲ್ಲಿ ಆಗಿನ ಪುಲಕೇಶಿನಗರ ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿ ಅವರ ಸಂಬಂಧಿಯೊಬ್ಬರು ಸಾಮಾಜಿಕ ಮಾಧ್ಯಮದಲ್ಲಿ ಅವಹೇಳನಕಾರಿ ಪೋಸ್ಟ್ ಮಾಡಿದ ಕಾರಣ ಡಿಜೆ ಹಳ್ಳಿ ಮತ್ತು ಕೆಜಿ ಹಳ್ಳಿಯಲ್ಲಿ ಭುಗಿಲೆದ್ದ ಹಿಂಸಾಚಾರದಲ್ಲಿ ಮೂವರು ಸಾವಿಗೀಡಾಗಿದ್ದರು ಮತ್ತು 50ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು.

ಗಲಭೆಯಲ್ಲಿ ಶಾಸಕರ ಮನೆ ಹಾಗೂ ಕೆ.ಜಿ. ಹಳ್ಳಿ ಪೊಲೀಸ್ ಠಾಣೆ ಸುಟ್ಟು ಕರಕಲಾಗಿತ್ತು. ಹಿಂದಿನ ಬಿಜೆಪಿ ನೇತೃತ್ವದ ಆಡಳಿತದಲ್ಲಿ ನಡೆದ ಕೆಲವು ಕೋಮು ಘಟನೆಗಳು ಶಿವಮೊಗ್ಗ, ಹುಬ್ಬಳ್ಳಿ ಮತ್ತು ರಾಜ್ಯದ ಇತರ ಕೆಲವು ಸ್ಥಳಗಳಲ್ಲಿ ಹಿಂಸಾತ್ಮಕ ಪ್ರತಿಭಟನೆಗಳಿಗೆ ಕಾರಣವಾಗಿದ್ದವು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com