'ರಾಜ್ಯಪಾಲರನ್ನು ಈ ರೀತಿ ನಡೆಸಿಕೊಂಡಿದ್ದನ್ನು ಎಂದಿಗೂ ನೋಡಿಲ್ಲ': ಏರ್ ಏಷ್ಯಾ ವಿರುದ್ಧ ಅಧಿಕಾರಿಗಳ ಅಸಮಾಧಾನ

ಗುರುವಾರ ಮಧ್ಯಾಹ್ನ ಕೆಐಎಯಲ್ಲಿ ಖಾಸಗಿ ವಿಮಾನದ ಸಿಬ್ಬಂದಿಗಳು ರಾಜ್ಯಪಾಲ ತಾವರ್‌ಚಂದ್ ಗೆಹ್ಲೋಟ್‌ಗೆ ಅವರೊಂದಿಗೆ ನಡೆದುಕೊಂಡ ರೀತಿಯ ಬಗ್ಗೆ ರಾಜಭವನದ ಉನ್ನತ ಅಧಿಕಾರಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ರಾಜ್ಯಪಾಲ ತಾವರ್‌ಚಂದ್ ಗೆಹ್ಲೋಟ್‌
ರಾಜ್ಯಪಾಲ ತಾವರ್‌ಚಂದ್ ಗೆಹ್ಲೋಟ್‌
Updated on

ಬೆಂಗಳೂರು: ಗುರುವಾರ ಮಧ್ಯಾಹ್ನ ಕೆಐಎಯಲ್ಲಿ ಖಾಸಗಿ ವಿಮಾನದ ಸಿಬ್ಬಂದಿಗಳು ರಾಜ್ಯಪಾಲ ತಾವರ್‌ಚಂದ್ ಗೆಹ್ಲೋಟ್‌ಗೆ ಅವರೊಂದಿಗೆ ನಡೆದುಕೊಂಡ ರೀತಿಯ ಬಗ್ಗೆ ರಾಜಭವನದ ಉನ್ನತ ಅಧಿಕಾರಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ರಾಜಭವನದಲ್ಲಿ 10 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದೇನೆ. ಮೂವರು ರಾಜ್ಯಪಾಲರಿಗೆ ಪ್ರೋಟೋಕಾಲ್ ಅಧಿಕಾರಿಗಳಾಗಿ ಸೇವೆ ಸಲ್ಲಿಸಿದ್ದೇನೆ. ರಾಜ್ಯಪಾಲರನ್ನು ಈ ರೀತಿ ನಡೆಸಿಕೊಂಡಿದ್ದನ್ನು ಎಂದಿಗೂ ನೋಡಿಲ್ಲ ಎಂದು ರಾಜಭವನದ ಪ್ರೋಟೋಕಾಲ್ ಅಧಿಕಾರಿ ಎಂ ವೇಣುಗೋಪಾಲ್ ಅವರು ಬೇಸರ ವ್ಯಕ್ತಪಡಿಸಿದ್ದಾರೆ.

ಏರ್ ಏಷ್ಯಾ ಇಂಡಿಯಾ ಅಧಿಕಾರಿಗಳು ಗವರ್ನರ್ ಕಚೇರಿಗೆ ಭೇಟಿ ನೀಡಿ, ಸಿಬ್ಬಂದಿಯ ಪರವಾಗಿ ಕ್ಷಮೆಯಾಚಿಸಿದ್ದಾರೆ. ಅವರು ಅನುಸರಿಸಬೇಕಾದ ನಿಯಮಗಳ ಉಲ್ಲಂಘನೆಯನ್ನು ಅವರು ಒಪ್ಪಿಕೊಂಡಿದ್ದಾರೆ ಎಂದು ವೇಣುಗೋಪಾಲ್ ಹೇಳಿದ್ದಾರೆ.

ರಾಜ್ಯಪಾಲರು ಬೆಳಿಗ್ಗೆ 9 ಗಂಟೆಗೆ ಟೇಕ್ ಆಫ್ ಆಗಬೇಕಿದ್ದ ಸ್ಟಾರ್ ಏರ್ ವಿಮಾನದಲ್ಲಿ ಪ್ರಯಾಣಿಸಲು ಟಿಕೆಟ್ ಕಾಯ್ದಿರಿಸಿದ್ದರು. ಆದರೆ, ಇಂದೋರ್ ನಿಂದ ತಡವಾಗಿ ಬಂದ ಹಿನ್ನೆಲೆಯಲ್ಲಿ ಟಿಕೆಟ್ ರದ್ದುಪಡಿಸಿ, ಮಧ್ಯಾಹ್ನದ ವಿಮಾನವನ್ನು ಬುಕ್ ಮಾಡಿದ್ದರು. ಏರ್‌ಏಷ್ಯಾ ಇಂಡಿಯಾದ ಮಧ್ಯಾಹ್ನ 2.05 ಗಂಟೆಯ ವಿಮಾನದ ಟಿಕೆಟ್'ನ್ನು ಕಾಯ್ದಿರಿಸಲಾಗಿತ್ತು. ಟಿಕೆಟ್ ಕಾಯ್ದಿರಿಸಿದ ಸಮಯದಿಂದಲೂ ನಮ್ಮ ತಂಡ ರಾಜ್ಯಪಾಲರ ಪ್ರಯಾಣಕ್ಕೆ ಸಂಬಂಧಿಸಿದಂತೆ ವಿಮಾನಯಾನ ಸಿಬ್ಬಂದಿಗಳೊಂದಿಗೆ ನಿರಂತರ ಸಂಪರ್ಕದಲ್ಲಿತ್ತು. ಮಧ್ಯಾಹ್ನ 1.35ಕ್ಕೆ ವಿಮಾನ ನಿಲ್ದಾಣವನ್ನು ರಾಜ್ಯಪಾಲರು ತಲುಪಿದ್ದರು. ಈ ವಿಚಾರವನ್ನು ವಿಮಾನಯಾನ ಸಂಸ್ಥೆಗೂ ತಿಳಿಸಲಾಗಿತ್ತು. ರಾಜ್ಯಪಾಲರು ಎಂದಿಗೂ ತಡವಾಗಿ ಹೋಗುವುದಿಲ್ಲ. ವಿಮಾನ ಟೇಕ್ ಆಫ್ ಆಗುವುದಕ್ಕೂ 40 ನಿಮಿಷಗಳ ಮೊದಲೇ ರಾಜ್ಯಪಾಲರು ವಿಮಾನ ನಿಲ್ದಾಣದಲ್ಲಿದ್ದರು.

ನಿಯಮಗಳ ಪ್ರಕಾರ ಕೊನೆಯ ಪ್ರಯಾಣಿಕ ಒಳಹೋದ ಬಳಿಕವೇ ವಿಐಪಿಗಳು ವಿಮಾನ ಹತ್ತುತ ಸಂಸ್ಥೆ ಅನುವು ಮಾಡಿಕೊಡುತ್ತದೆ. ರಾಜ್ಯಪಾಲರು ಬೆಂಗಾವಲು ವಾಹನಗಳೊಂದಿಗೆ ವಿಮಾನ ನಿಲ್ದಾಣ ತಲುಪಲು 8 ನಿಮಿಷಗಳು ತೆಗೆದುಕೊಂಡಿತು. ರಾಜ್ಯಪಾಲರು ಮಧ್ಯಾಹ್ನ 2.06ಕ್ಕೆ ವಿಮಾನ ನಿಲ್ದಾಣದಲ್ಲಿದ್ದರು. ಸಿಸಿಟಿವಿ ದೃಶ್ಯಾವಳಿಗಳೂ ಇದಕ್ಕೆ ಸಾಕ್ಷಿ ಇವೆ. ರಾಜ್ಯಪಾಲು ವಿಮಾನ ನಿಲ್ದಾಣ ತಲುಪಿದಾಗ ವಿಮಾನದ ಬಾಗಿಲು ಇನ್ನೂ ತೆರೆದೇ ಇತ್ತು. ಆದರೂ, ರಾಜ್ಯಪಾಲರನ್ನು ವಿಮಾನ ಏರಲು ಅನುವು ಮಾಡಿಕೊಡಲಿಲ್ಲ. ಬಳಿಕ ಅವರನ್ನು ಹಿಂದಕ್ಕೆ ಕರೆತರಲಾಯಿತು ಎಂದು ತಿಳಿಸಿದ್ದಾರೆ.

“ರಾಜ್ಯಪಾಲರು ರಾಜ್ಯದ ಪ್ರಥಮ ಪ್ರಜೆ ಮತ್ತು ಸಾಂವಿಧಾನಿಕ ಮುಖ್ಯಸ್ಥರು. ಅವರನ್ನು ಈ ರೀತಿ ನಡೆಸಿಕೊಳ್ಳುವುದನ್ನು ಸಹಿಸಲು ಸಾಧ್ಯವಿಲ್ಲ. ಕೂಡಲೇ ನಾವು ವಿಮಾನ ನಿಲ್ದಾಣದ ವ್ಯವಸ್ಥಾಪಕರನ್ನು ಸಂಪರ್ಕಿಸಬೇಕೆಂದು ಕೇಳಿದೆವು. ಆದರೆ, ಅದಕ್ಕೂ ನಿರಾಕರಿಸಿದರು.

ರಾಜ್ಯಪಾಲರ ಆಗಮನದ ಕುರಿತು ವಿಮಾನಯಾನ ಸಿಬ್ಬಂದಿಗೆ ಅರಿವಿದ್ದರೂ ಈ ರೀತಿ ನಡೆಸಿಕೊಂಡಿದ್ದು, ಬೇಸರ ತರಿಸಿದೆ. ಇದು ಶಿಷ್ಟಾಚಾರವನ್ನು ಉಲ್ಲಂಘನೆ ಮಾಡಿದಂತಾಗಿದೆ. 33 ವರ್ಗಗಳ ವಿಐಪಿಗಳು ಬಂದಾಗ ವಿಮಾನಗಳು ಕಾಯಲೇಬೇಕು. ಇದು ನಿಯಮ. ಈ ಪಟ್ಟಿಯಲ್ಲಿ ರಾಜ್ಯಪಾಲರು 4ನೇ ಸ್ಥಾನದಲ್ಲಿದ್ದಾರೆಂದು ವೇಣುಗೋಪಾಲ್ ಅವರು ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com