ಸಿಎಂ ಸ್ಥಾನ ಸಿಗಲಿಲ್ಲವೆಂದು ಆತಂಕ, ನಿರಾಸೆಪಡುವ ಅಗತ್ಯವಿಲ್ಲ: ಸೂಕ್ತ ಕಾಲದಲ್ಲಿ ಎಐಸಿಸಿ ಸೂಕ್ತ ನಿರ್ಧಾರ- ಡಿಕೆ ಶಿವಕುಮಾರ್ 

ನನಗೆ ಮುಖ್ಯಮಂತ್ರಿ ಸ್ಥಾನ ಸಿಗಲಿಲ್ಲವೆಂದು ಆತಂಕ, ನಿರಾಸೆಪಡುವ ಅಗತ್ಯವಿಲ್ಲ, ಸೂಕ್ತ ಕಾಲದಲ್ಲಿ ಎಐಸಿಸಿ ಸೂಕ್ತ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ತನ್ನ ಕ್ಷೇತ್ರದ ಮತದಾರರಿಗೆ ಹೇಳಿದ್ದಾರೆ.
ಡಿಸಿಎಂ ಡಿಕೆ ಶಿವಕುಮಾರ್
ಡಿಸಿಎಂ ಡಿಕೆ ಶಿವಕುಮಾರ್

ಹಾರೋಹಳ್ಳಿ: ನನಗೆ ಮುಖ್ಯಮಂತ್ರಿ ಸ್ಥಾನ ಸಿಗಲಿಲ್ಲವೆಂದು ಆತಂಕ, ನಿರಾಸೆಪಡುವ ಅಗತ್ಯವಿಲ್ಲ, ಸೂಕ್ತ ಕಾಲದಲ್ಲಿ ಎಐಸಿಸಿ ಸೂಕ್ತ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ತನ್ನ ಕ್ಷೇತ್ರದ ಮತದಾರರಿಗೆ
ಹೇಳಿದ್ದಾರೆ.

ಕನಕಪುರಕ್ಷೇತ್ರದ ಹಾರೋಹಳ್ಳಿಯಲ್ಲಿ ಕೃತಜ್ಞತಾ ಭಾಷಣ ಮಾಡಿದ ಉಪ ಮುಖ್ಯಮಂತ್ರಿ, ಚುನಾವಣೆಯಲ್ಲಿ ಈ ಕ್ಷೇತ್ರದ ಜನ ಕೇವಲ ಡಿ.ಕೆ. ಶಿವಕುಮಾರ್ ಗೆ ಗೆಲುವು ಕೊಟ್ಟಿಲ್ಲ. ರಾಜ್ಯ, ದೇಶ ಹಾಗೂ ಎಲ್ಲ ಪಕ್ಷಗಳಿಗೆ ಒಂದು ಸಂದೇಶ ಕೊಟ್ಟಿದ್ದಾರೆ. ಹೀಗಾಗಿ ಕ್ಷೇತ್ರದ ಜನತೆಗೆ ಅಭಿನಂದನೆ ಸಲ್ಲಿಸುತ್ತೇನೆ. ಮುಖ್ಯಮಂತ್ರಿ ಸ್ಥಾನ ವಿಚಾರದಲ್ಲಿ ಎಐಸಿಸಿ ಮಾತಿಗೆ ತಲೆಬಾಗಿದ್ದು, ಭವಿಷ್ಯದಲ್ಲಿ ಸೂಕ್ತ ನಿರ್ಧಾರ ತೆಗೆದುಕೊಳ್ಳುವ ವಿಶ್ವಾಸವಿದೆ. ನಾವು ಶಾಂತಿಯಿಂದ, ಶ್ರದ್ಧೆಯಿಂದ ಕೆಲಸ ಮಾಡಬೇಕಿದೆ ಎಂದರು.

ದೇಶ ಹಾಗೂ ರಾಜ್ಯದ ಇತಿಹಾಸದಲ್ಲಿ ಒಂದೇ ದಿನ ಐದು ಯೋಜನೆಗಳನ್ನು ಅನುಷ್ಠಾನಕ್ಕೆ ತರುವ ತೀರ್ಮಾನ ನಿನ್ನೆ ಕೈಗೊಳ್ಳಲಾಗಿದೆ. ಇದರಿಂದ ಬಿಜೆಪಿ ಹಾಗೂ ಜೆಡಿಎಸ್ ನವರ ದುಃಖ, ದುಗುಡ ಹೆಚ್ಚಾಗಿದ್ದು, ರಾಜ್ಯದ ಜನ ನೋಡುತ್ತಿದ್ದಾರೆ. ಕ್ಷೇತ್ರದ ಫಲಾನುಭವಿಗಳಿಗೆ ಈ ಯೋಜನೆ ಲಾಭ ಸಿಗುವಂತೆ ಮಾಡಬೇಕು. ಈ ಚುನಾವಣೆಯಲ್ಲಿ ನಾನು ಹೆಚ್ಚು ಪ್ರಚಾರ ಮಾಡದೇ ಇದ್ದರೂ ನಿಮಗೆ ನೀವೇ ಅಭ್ಯರ್ಥಿಯಾಗಿ ಮತ ನೀಡಿದ್ದೀರಿ. 1,23,000 ಮತಗಳ ಅಂತರದ ದಾಖಲೆಯ ಜಯ ತಂದುಕೊಟ್ಟಿದ್ದೀರಿ. ಆಮೂಲಕ ನನ್ನನ್ನು ಮಗ, ಸೋದರನಂತೆ ಹರಸಿ ಬೆಳೆಸಿದ್ದೀರಿ ಎಂದು ಕೃತಜ್ಞತೆ ಸಲ್ಲಿಸಿದರು. 

ಕನಕಪುರ ಕ್ಷೇತ್ರದ ಅಭಿವೃದ್ಧಿ ಹಾಗೂ ಮಾದರಿ ಕ್ಷೇತ್ರ ಮಾಡಲು ತೀರ್ಮಾನಿಸಿದ್ದೇನೆ. ಈ ಹಿಂದೆ ಈ  ಕ್ಷೇತ್ರಕ್ಕೆ ಮೆಡಿಕಲ್ ಕಾಲೇಜು ಮಂಜೂರಾಗಿತ್ತು ಆದರೆ ಯಡಿಯೂರಪ್ಪ ಹಾಗೂ ಬೊಮ್ಮಾಯಿ ಅದನ್ನು ರದ್ದು ಮಾಡಿ ಚಿಕ್ಕಬಳ್ಳಾಪುರಕ್ಕೆ ತೆಗೆದುಕೊಂಡು ಹೋದರು. ನನ್ನ ತಾಲೂಕಿನಲ್ಲಿ ಆಸ್ಪತ್ರೆ ನೀಡುವುದು ಈ ಕ್ಷೇತ್ರಕ್ಕೆ ನನ್ನ ಮೊದಲ ಕಾರ್ಯಕ್ರಮ. ಇಲ್ಲಿನ ಜನ ವಿದ್ಯೆ ಹಾಗೂ ಆರೋಗ್ಯ ಸೌಲಭ್ಯಕ್ಕಾಗಿ ಬೆಂಗಳೂರಿಗೆ ವಲಸೆ ಹೋಗುವುದನ್ನು ತಪ್ಪಿಸುವುದು ನನ್ನ ಗುರಿ ಎಂದರು. 

ಕನಕಪುರ ರಸ್ತೆ ಅಭಿವೃದ್ದಿಗೆ ಗುತ್ತಿಗೆದಾರರನ್ನು ಭೇಟಿ ಮಾಡಿ ಈ ಕಾಮಗಾರಿ ಮುಕ್ತಾಯಗೊಳಿಸಲು ಅಗತ್ಯ ಕ್ರಮ ಕೈಗೊಳ್ಳುತ್ತೇವೆ. ಈ ಕ್ಷೇತ್ರದ ಎಲ್ಲಾ ಜನರ ಜೇಬಿಗೆ ಹಣ ಹಾಕಲು ಸಾಧ್ಯವಿಲ್ಲ. ಆದರೆ ನಿಮ್ಮ ಆಸ್ತಿ ಮೌಲ್ಯ ಹೆಚ್ಚಾಗುವಂತೆ ಮಾಡುತ್ತೇನೆ. ಕೆರೆ ತುಂಬಿಸಲು ಆದ್ಯತೆ ನೀಡಲಾಗಿದೆ. ಕಳೆದ ಬಾರಿ ಕೆರೆ ತುಂಬಿಸಿ ಬತ್ತಿಹೋಗಿದ್ದ ಕೊಳವೆ ಬಾವಿಗೆ ಮರು ಜೀವ ನೀಡಲಾಗಿದೆ. ರೇಷ್ಮೇ, ಹೈನುಗಾರಿಕೆ, ತೋಟಗಾರಿಕೆಯಲ್ಲಿ ಆರ್ಥಿಕ ಶಕ್ತಿ ನೀಡಲು ಪ್ರಯತ್ನ ಮಾಡಿದ್ದೇವೆ ಎಂದು ತಿಳಿಸಿದರು. 

ಮುಂದಿನ ದಿನಗಳಲ್ಲಿ ಕನಕಪುರ ಹಾಗೂ ರಾಮನಗರ ಜಿಲ್ಲೆಗೆ ಪ್ರತಿ ವಾರ ಒಂದು ದಿನ ಮೀಸಲಿಡುತ್ತೇನೆ. ಇಲ್ಲಿಯೇ ಪ್ರತ್ಯೇಕ ಕಚೇರಿ ಆರಂಭಿಸುತ್ತೇನೆ. ನಿಮ್ಮ ತೀರ್ಪನ್ನು ಸ್ವೀಕಾರ ಮಾಡುವ ಸಹನೆ ವಿರೋಧ ಪಕ್ಷದವರಿಗೆ ಇಲ್ಲವಾಗಿದೆ. ಈಗ ಅವರ ವಿಚಾರವಾಗಿ ನಾನು ಹೆಚ್ಚು ಮಾತನಾಡುವುದಿಲ್ಲ. ಮತದಾರರ ತೀರ್ಪು ನಾವು ಒಪ್ಪುತ್ತೇವೆ. ಮತದಾರ ರಾಜ್ಯದ ಜನರ ಸೇವೆಗೆ ಮಾಡಿಕೊಟ್ಟಿರುವ ಅವಕಾಶ ನೀಡಿದ್ದು, ಈ ಸಂದರ್ಭದಲ್ಲಿ ಬೇರೆಯವರ ಬಗ್ಗೆ ಟೀಕೆ ಮಾಡಿ ದ್ವೇಷ ರಾಜಕಾರಣ ಮಾಡುವ ಚಟ ಇಲ್ಲ ಎಂದರು. 

ಮುಂದಿನ ದಿನಗಳಲ್ಲಿ ತಾಲೂಕು ಪಂಚಾಯ್ತಿ ಹಾಗೂ ಜಿಲ್ಲಾ ಪಂಚಾಯ್ತಿ ಚುನಾವಣೆ ನಡೆಯಲಿದ್ದು, ಅದಕ್ಕೆ ನೀವು ಸಿದ್ಧರಾಗಬೇಕು. ಉಳಿದಿರುವ ಬೇರೆ ಪಕ್ಷದ ನಾಯಕರು, ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ನಮ್ಮ ಪಕ್ಷಕ್ಕೆ ಸೇರಿಸಿಕೊಳ್ಳಬೇಕು. ನಮಗೆ ಕುಟುಂಬ, ಹಳ್ಳಿ ಹಾಗೂ ಪಂಚಾಯ್ತಿ ಮಟ್ಟದ ನಾಯಕರನ್ನು ಪಕ್ಷಕ್ಕೆ ಸೇರಿಸಿಕೊಳ್ಳಬೇಕು ಎಂದು ಡಿಕೆ ಶಿವಕುಮಾರ್ ಕರೆ ನೀಡಿದರು.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com