ಮೈಸೂರು, ಗೌರಿಬಿದನೂರು, ಕೋಲಾರಕ್ಕೆ ಉಪನಗರ ರೈಲು ಯೋಜನೆ ವಿಸ್ತರಣೆ: ಎಂ.ಬಿ.ಪಾಟೀಲ್

ಕೇವಲ ಬೆಂಗಳೂರು ನೆರೆಹೊರೆಯ ಪ್ರದೇಶಗಳನ್ನು ಮಾತ್ರ ಗಮನದಲ್ಲಿಟ್ಟುಕೊಂಡು ರೂಪಿಸಿರುವ ಉಪನಗರ ರೈಲು ಯೋಜನೆಯನ್ನು ಸುತ್ತಲಿನ ದೂರದ ನಗರಗಳಿಗೂ ವಿಸ್ತರಿಸಬೇಕು. ಈ ನಿಟ್ಟಿನಲ್ಲಿ ಯೋಜನೆಯನ್ನು ಪರಿಷ್ಕರಿಸಿ, ಹೊಸದಾಗಿ...
ಎಂ.ಬಿ.ಪಾಟೀಲ್
ಎಂ.ಬಿ.ಪಾಟೀಲ್
Updated on

ಬೆಂಗಳೂರು: ಕೇವಲ ಬೆಂಗಳೂರು ನೆರೆಹೊರೆಯ ಪ್ರದೇಶಗಳನ್ನು ಮಾತ್ರ ಗಮನದಲ್ಲಿಟ್ಟುಕೊಂಡು ರೂಪಿಸಿರುವ ಉಪನಗರ ರೈಲು ಯೋಜನೆಯನ್ನು ಸುತ್ತಲಿನ ದೂರದ ನಗರಗಳಿಗೂ ವಿಸ್ತರಿಸಬೇಕು. ಈ ನಿಟ್ಟಿನಲ್ಲಿ ಯೋಜನೆಯನ್ನು ಪರಿಷ್ಕರಿಸಿ, ಹೊಸದಾಗಿ ಪ್ರಸ್ತಾವನೆ ಸಲ್ಲಿಸಬೇಕು. ಹೀಗಾದರೆ ಮಾತ್ರ ಬೆಂಗಳೂರಿನ ಸಂಚಾರ ದಟ್ಟಣೆಯ ಸಮಸ್ಯೆಗೆ ಪರಿಹಾರ ಸಿಗುತ್ತದೆ ಎಂದು ಬೃಹತ್ ಕೈಗಾರಿಕಾ ಮತ್ತು ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ. ಪಾಟೀಲ್ ಅವರು ಮಂಗಳವಾರ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಮೂಲಸೌಕರ್ಯ ಇಲಾಖೆಯ ಅಧಿಕಾರಿಗಳ ಜತೆ ಖನಿಜ ಭವನದಲ್ಲಿ ಇಂದು ಸುದೀರ್ಘ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಅವರು, ಈ ಮಹತ್ತ್ವದ ನಿರ್ದೇಶನ ನೀಡಿದ್ದಾರೆ.

ಈಗ 148 ಕಿ.ಮೀ. ಉದ್ದದ ಉಪನಗರ ರೈಲು ಯೋಜನೆಯ ಮೊದಲನೇ ಹಂತದ ಕಾಮಗಾರಿ ನಡೆಯುತ್ತಿದ್ದು, ಉದ್ದೇಶಿತ ಒಟ್ಟಾರೆ ಯೋಜನೆಗೆ 15,767 ಕೋಟಿ ರೂಪಾಯಿ ವೆಚ್ಚವಾಗುತ್ತಿದೆ.  ಆದರೆ ಇದರ ಸದ್ಯದ ಸ್ವರೂಪದಿಂದ ಹೆಚ್ಚಿನ ಪ್ರಯೋಜನವಿಲ್ಲ. ಇದನ್ನು  ರಾಮನಗರದಿಂದ ಮೈಸೂರು, ದೊಡ್ಡಬಳ್ಳಾಪುರದಿಂದ ಗೌರಿಬಿದನೂರು-ಹಿಂದೂಪುರ, ಚಿಕ್ಕಬಳ್ಳಾಪುರದಿಂದ ಕೋಲಾರಕ್ಕೆ ವಿಸ್ತರಿಸಬೇಕು. ಈ ಸಂಬಂಧ ಯೋಜನೆಯನ್ನು ಪರಿಷ್ಕರಿಸಿ, ಮಂಡಳಿ ಮುಂದೆ ಹೊಸದಾಗಿ ಪ್ರಸ್ತಾವನೆ ಸಲ್ಲಿಸಬೇಕು ಎಂದು ಅವರು ವಿವರಿಸಿದರು.

ಸದ್ಯಕ್ಕೆ ಸಬರ್ಬನ್ ರೈಲು ಯೋಜನೆಯನ್ನು ರಾಮನಗರ, ಚಿಕ್ಕಬಾಣಾವರ, ದೊಡ್ಡಬಳ್ಳಾಪುರ, ವೈಟ್ ಫೀಲ್ಡ್  ವರೆಗೆ ತಲುಪಿಸುವ ಗುರಿ ಇದೆ. ಆದರೆ ಇವೆಲ್ಲವೂ ಈಗಾಗಲೇ ಬೆಂಗಳೂರಿನ ಭಾಗವಾಗಿವೆ. ಆದ್ದರಿಂದ ರಾಜಧಾನಿಯ ಸುತ್ತಲಿನ  ನೂರು ಕಿ.ಮೀ. ಸುತ್ತಳತೆಯಲ್ಲಿ ಇರುವ ನಗರಗಳಿಗೆ ಸಬರ್ಬನ್ ರೈಲು ಸೌಕರ್ಯ ಒದಗಿಸಬೇಕು. ಬೆಂಗಳೂರಿನ ಉದ್ದಿಮೆಗಳಿಗೆ ಬೇಕಾದ ಜನರು ಈ ಊರುಗಳಿಂದ ಸುಗಮವಾಗಿ ದಿನವೂ ಓಡಾಡುವಂತೆ ಆಗಬೇಕು. ಇದು ಸಂಚಾರ ದಟ್ಟಣೆಯ ಜತೆಗೆ ವಲಸೆಯ ಸಮಸ್ಯೆಗೂ ಕಡಿವಾಣ ಹಾಕುತ್ತದೆ ಎಂದು ಸಚಿವರು ವಿವರಿಸಿದ್ದಾರೆ.

ಹಂತ-1ರ ಅಡಿಯಲ್ಲಿ ಈಗಾಗಲೇ ಚಿಕ್ಕಬಾಣಾವರ ಮತ್ತು ಬೆನ್ನಿಗಾನಹಳ್ಳಿ ನಡುವೆ ಕಾಮಗಾರಿ ನಡೆಯುತ್ತಿದೆ. ಇದನ್ನು ತುಮಕೂರಿನ ಕಡೆಯಲ್ಲಿ ಡಾಬಸಪೇಟೆಯ ತನಕ ವಿಸ್ತರಿಸಬೇಕು. ಅಲ್ಲಿ ಕೈಗಾರಿಕಾ ಪ್ರದೇಶ ಇರುವ ಹಿನ್ನೆಲೆಯಲ್ಲಿ ಇದು ಅತ್ಯಗತ್ಯವಾಗಿದೆ. ಈ ಕೆಲಸವನ್ನು ಮೊದಲ ಹಂತದಲ್ಲೇ ಮಾಡಬೇಕು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಪ್ರತೀ ಹತ್ತು ನಿಮಿಷಕ್ಕೆ ಒಂದರಂತೆ ಸಬರ್ಬನ್ ರೈಲು ಸೇವೆ ಒದಗಿಸುವುದು ನಮ್ಮ ಗುರಿಯಾಗಿದೆ. ಸುಗಮ ಸಂಚಾರ ವ್ಯವಸ್ಥೆಯ ಜಾಲವನ್ನು ಬೆಳೆಸುವುದು ಮೂಲಸೌಲಭ್ಯ ಅಭಿವೃದ್ಧಿಯ ಹೆಗ್ಗುರಿಗಳಲ್ಲಿ ಒಂದಾಗಿದೆ ಎಂದು ಪಾಟೀಲ್ ಹೇಳಿದ್ದಾರೆ.

ಸಭೆಯಲ್ಲಿ ಕೆ-ರೈಡ್ ವ್ಯವಸ್ಥಾಪಕ ನಿರ್ದೇಶಕ ಮತ್ತು ಮೂಲಸೌಲಭ್ಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತ, ರೈಲ್ವೆ ಇಲಾಖೆಯ ಉನ್ನತ ಅಧಿಕಾರಿಗಳು ಹಾಜರಿದ್ದರು.

ಇದೇ ಸಂದರ್ಭದಲ್ಲಿ ಸಚಿವರು, ಕೈಗಾರಿಕಾ ಇಲಾಖೆಯ ನಾಲೆಡ್ಜ್ ಪಾರ್ಟನರ್ ಆಗಿರುವ ಬೋಸ್ಟನ್ ಕನ್ಸಲ್ಟೆನ್ಸಿ ಗ್ರೂಪ್ ಜತೆ ರಾಜ್ಯದಲ್ಲಿ ಮುಂದಿನ ಐದು ವರ್ಷಗಳ ಅವಧಿಯಲ್ಲಿ ಕೈಗೆತ್ತಿಕೊಳ್ಳಬಹುದಾದ ಕೈಗಾರಿಕಾ ಯೋಜನೆಗಳನ್ನು ಕುರಿತು ವಿಸ್ತೃತ ವಿಚಾರ ವಿನಿಮಯ ನಡೆಸಿದರು.
 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com