ಬಿಬಿಎಂಪಿ
ಬಿಬಿಎಂಪಿ

ಮೆಜೆಸ್ಟಿಕ್, ಕೆ ಆರ್ ಮಾರ್ಕೆಟ್ ಸುತ್ತಮುತ್ತ ಪ್ರವಾಹಕ್ಕೆ ಬಿಬಿಎಂಪಿಯಿಂದ ಪರಿಹಾರ: 5 ಎಂಎಲ್‌ಡಿ ಸಾಮರ್ಥ್ಯದ ಎಸ್ ಟಿಪಿ ಸ್ಥಾಪನೆ

ಹಗುರ ಮತ್ತು ಸಾಧಾರಣ ಮಳೆ ಸುರಿದಾಗಲೂ ಪ್ರವಾಹ ತರೆದೋರುತ್ತಿರುವ ಮೆಜೆಸ್ಟಿಕ್ ಮತ್ತು ಕೆ ಆರ್ ಮಾರುಕಟ್ಟೆಗಳಲ್ಲಿ ಅದಕ್ಕೆ ಪರಿಹಾರ ಕಂಡುಕೊಳ್ಳಲು ಬಿಬಿಎಂಪಿ ತನ್ನದೇ ಯೋಜನೆಗೆ ಮುಂದಾಗಿದೆ. 
Published on

ಬೆಂಗಳೂರು: ಹಗುರ ಮತ್ತು ಸಾಧಾರಣ ಮಳೆ ಸುರಿದಾಗಲೂ ಪ್ರವಾಹ ತರೆದೋರುತ್ತಿರುವ ಮೆಜೆಸ್ಟಿಕ್ ಮತ್ತು ಕೆ ಆರ್ ಮಾರುಕಟ್ಟೆಗಳಲ್ಲಿ ಅದಕ್ಕೆ ಪರಿಹಾರ ಕಂಡುಕೊಳ್ಳಲು ಬಿಬಿಎಂಪಿ ತನ್ನದೇ ಯೋಜನೆಗೆ ಮುಂದಾಗಿದೆ. 

ಪಾಲಿಕೆ ಎಂಜಿನಿಯರ್‌ಗಳು ಎರಡು ವರ್ಷಗಳ ಹಿಂದೆ ನಗರದ ಜೆ.ಸಿ.ರಸ್ತೆಯಲ್ಲಿ ಬಳಕೆಯಾಗದ 1.6 ಎಕರೆ ಜಮೀನನ್ನು ಪತ್ತೆ ಹಚ್ಚಿ 20 ಕೋಟಿ ರೂಪಾಯಿ ವೆಚ್ಚದಲ್ಲಿ 5 ಎಂಎಲ್‌ಡಿ ಕೊಳಚೆ ನೀರು ಸಂಸ್ಕರಣಾ ಘಟಕ (STP) ಸ್ಥಾಪಿಸುವ ಪ್ರಕ್ರಿಯೆಗೆ ಚಾಲನೆ ನೀಡಿದರು. ವಿದ್ಯುದ್ದೀಕರಣ ಕಾಮಗಾರಿ ಬಾಕಿಯಿದ್ದು, ಇದರ ಕಾರ್ಯಾಚರಣೆ ಆರಂಭವಾದರೆ ಸಿಟಿ ಮಾರ್ಕೆಟ್ ಅಥವಾ ಮೆಜೆಸ್ಟಿಕ್‌ನಲ್ಲಿ ಯಾವುದೇ ಪ್ರವಾಹ ಉಂಟಾಗುವುದಿಲ್ಲ.

ಅವೆನ್ಯೂ ರಸ್ತೆ, ಬಿವಿಕೆ ಅಯ್ಯಂಗಾರ್ ರಸ್ತೆ, ಕಾಟನ್‌ಪೇಟೆ, ಉಪ್ಪಾರಪೇಟೆ ಮತ್ತು ಮೆಜೆಸ್ಟಿಕ್‌ ಮತ್ತು ಕೆಆರ್‌ ಮಾರ್ಕೆಟ್‌ನ ಸುತ್ತಮುತ್ತಲಿನ ಪ್ರದೇಶಗಳಾದ ಅವೆನ್ಯೂ ರಸ್ತೆಯಿಂದ ಕೊಳಚೆ ನೀರನ್ನು ಸಾಗಿಸುವ 1,000-ಎಂಎಂ ವ್ಯಾಸದ ಪೈಪ್‌ಗಳನ್ನು 600-ಎಂಎಂ ವ್ಯಾಸವನ್ನು ಇರಿಸುವ ಮೂಲಕ ಎಳೆಯಲಾಗುತ್ತದೆ ಎಂದು ಬಿಬಿಎಂಪಿ ಇಂಜಿನಿಯರ್-ಇನ್-ಚೀಫ್ ಬಿಎಸ್ ಪ್ರಹ್ಲಾದ್ ತಿಳಿಸಿದ್ದಾರೆ. 

ಜೆಸಿ ರಸ್ತೆಯ ಪಕ್ಕದಲ್ಲಿರುವ ಉಸ್ಮಾನ್ ಖಾನ್ ರಸ್ತೆಯಲ್ಲಿ ಪೈಪ್‌ಲೈನ್‌ಗಳು ಮತ್ತು ಎಸ್‌ಟಿಪಿಗೆ ಸಂಪರ್ಕ ಕಲ್ಪಿಸಲಾಗಿದೆ. ಎಸ್‌ಟಿಪಿಯಿಂದ ಶುದ್ಧೀಕರಿಸಿದ ನೀರನ್ನು ಉಪ್ಪಾರಪೇಟೆಯಿಂದ ಬೆಳ್ಳಂದೂರು ಕೆರೆಗೆ 9.5 ಕಿಮೀ ಕೆ-100 ಚರಂಡಿಗೆ ಸಂಪರ್ಕಿಸಲಾಗುತ್ತದೆ. ಇದರ ಶೇಕಡಾ 80ರಷ್ಟು ಕಾಮಗಾರಿ ಪೂರ್ಣಗೊಂಡಿದ್ದು, ಜುಲೈ ಅಂತ್ಯದ ವೇಳೆಗೆ ಯೋಜನೆ ಪೂರ್ಣಗೊಂಡು ಆಗಸ್ಟ್ 15 ರೊಳಗೆ ಕಾರ್ಯಾಚರಣೆಗೆ ಸಿದ್ಧವಾಗಲಿದೆ ಎಂದು ಪ್ರಹ್ಲಾದ್ ಹೇಳಿದರು.

ಕೆ-100 ಯೋಜನೆಗೆ 365 ದಿನಗಳು ನೀರು ಹರಿಸುವುದನ್ನು ಖಚಿತಪಡಿಸಿಕೊಳ್ಳಲು STPನ್ನು ಸ್ಥಾಪಿಸುವ ಆಲೋಚನೆಯಿದೆ. ಇತರ ಉದ್ದೇಶಗಳಿಗಾಗಿ ಚರಂಡಿಯಿಂದ ನೀರನ್ನು ತೆಗೆಯಬಹುದು. ಪಾಲಿಕೆಯು ಇತರ ಪ್ರದೇಶಗಳಲ್ಲಿಯೂ ಈ ಪರಿಕಲ್ಪನೆಯನ್ನು ವಿಸ್ತರಿಸಬಹುದು ಎಂದರು. 

ಎಸ್‌ಟಿಪಿ ಚಿಕ್ಕದಾಗಿರುವುದರಿಂದ ನಿರ್ವಹಣೆ ಸುಲಭವಾಗುತ್ತದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 1.6 ಎಕರೆ ಪಾಲಿಕೆ ಜಮೀನು ಬಳಕೆಯಾಗದೆ ಹಳೆ ವಾಹನಗಳ ಡಂಪ್‌ಯಾರ್ಡ್‌ ಆಗಿ ಬಳಕೆಯಾಗುತ್ತಿದ್ದು, ಭೂಮಿ ಒತ್ತುವರಿಯಾಗುವ ಭೀತಿ ಎದುರಾಗಿದೆ. ಕೆ-100 ಯೋಜನೆಗೆ 365 ದಿನ ನೀರು ಬೇಕಾಗಿರುವುದರಿಂದ ಮಳೆಗಾಲದಲ್ಲಿ ಸಮಸ್ಯೆಯಾಗುತ್ತಿದೆ. ಈ ಜಮೀನಿನಲ್ಲಿ ನಮ್ಮದೇ ಎಸ್‌ಟಿಪಿ ಸ್ಥಾಪಿಸಲು ನಿರ್ಧರಿಸಿದ್ದೇವೆ.

ವಿದ್ಯುದ್ದೀಕರಣ ಸೇರಿದಂತೆ ಸಂಪೂರ್ಣ ಎಸ್‌ಟಿಪಿ ಯೋಜನೆಗೆ 20 ಕೋಟಿ ರೂಪಾಯಿ ವೆಚ್ಚವಾಗಿದೆ.ಈ ಯೋಜನೆಯಿಂದಾಗಿ ಕೆಆರ್ ಮಾರುಕಟ್ಟೆ ಮತ್ತು ಮೆಜೆಸ್ಟಿಕ್ ಮಾತ್ರವಲ್ಲದೆ ಕೋರಮಂಗಲ, ಅಗರ, ಈಜಿಪುರ ಮುಂತಾದ ಕೆಳಭಾಗದ ಪ್ರದೇಶಗಳು ಜಲಾವೃತಗೊಳ್ಳುವುದನ್ನು ತಪ್ಪಿಸಬಹುದು. ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ 1000-ಎಂಎಂ ವ್ಯಾಸದ ಪೈಪ್‌ಲೈನ್‌ನಿಂದ ಪ್ರವಾಹದ ಮೂಲದಲ್ಲಿಯೇ ಬಿಬಿಎಂಪಿ ಎಸ್‌ಟಿಪಿಗೆ ತಿರುಗಿಸುವ ಯೋಜನೆಯಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com