ಅಜ್ಜಿ ಕೊಂದು ಶವದೊಂದಿಗೆ ಕಾರಿನಲ್ಲಿ ನಗರ ಪ್ರದಕ್ಷಿಣೆ, ಕೊರಿಯನ್ ವೆಬ್ ಸರಣಿ ನೋಡಿ ಮೃತದೇಹ ವಿಲೇವಾರಿ!

ಪೊಲೀಸರು 75 ವರ್ಷದ ಮಹಿಳೆಯ ಕೊಲೆ ಪ್ರಕರಣವನ್ನು ಭೇದಿಸಿದ್ದಾರೆ ಮತ್ತು ಕೊಲೆ ಮಾಡಿದ ಆರೋಪದ ಮೇಲೆ ಆಕೆಯ ಮೊಮ್ಮಗನನ್ನು ಬಂಧಿಸಿದ್ದಾರೆ. ಆರೋಪಿಯು ಶವವನ್ನು ವಿಲೇವಾರಿ ಮಾಡುವ ಮೊದಲು ಕೊಲೆ ಮಾಡಿದ ದಿನವಿಡೀ ತನ್ನ ಕಾರಿನಲ್ಲಿ ಇಟ್ಟುಕೊಂಡಿದ್ದ ಎಂದು ತನಿಖೆಯಿಂದ ತಿಳಿದುಬಂದಿದೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಮೈಸೂರು: ಪೊಲೀಸರು 75 ವರ್ಷದ ಮಹಿಳೆಯ ಕೊಲೆ ಪ್ರಕರಣವನ್ನು ಭೇದಿಸಿದ್ದಾರೆ ಮತ್ತು ಕೊಲೆ ಮಾಡಿದ ಆರೋಪದ ಮೇಲೆ ಆಕೆಯ ಮೊಮ್ಮಗನನ್ನು ಬಂಧಿಸಿದ್ದಾರೆ. ಆರೋಪಿಯು ಶವವನ್ನು ವಿಲೇವಾರಿ ಮಾಡುವ ಮೊದಲು ಕೊಲೆ ಮಾಡಿದ ದಿನವಿಡೀ ತನ್ನ ಕಾರಿನಲ್ಲಿ ಇಟ್ಟುಕೊಂಡಿದ್ದ ಎಂದು ತನಿಖೆಯಿಂದ ತಿಳಿದುಬಂದಿದೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.

ಬಂಧಿತ ಮೊಮ್ಮಗನನ್ನು ಮೈಸೂರಿನ ಗಾಯತ್ರಿಪುರಂ ಲೇಔಟ್ ನಿವಾಸಿ 23 ವರ್ಷದ ಸುಪ್ರೀತ್ ಎಂದು ಗುರುತಿಸಲಾಗಿದೆ. ಸುಲೋಚನಾ (75) ಕೊಲೆಯಾದ ವೃದ್ಧೆ.

ಮೈಸೂರು ತಾಲೂಕಿನ ಸಾಗರಕಟ್ಟೆ ಗ್ರಾಮದ ಬಳಿ ಮೇ 30 ರಂದು ವೃದ್ಧೆಯ ಶವವನ್ನು ಪೊಲೀಸರು ಪತ್ತೆ ಮಾಡಿದ್ದರು. ಮೃತದೇಹ ಸುಟ್ಟು ಕರಕಲಾಗಿದ್ದು, ಗುರುತು ಪತ್ತೆಯಾಗಿರಲಿಲ್ಲ. ಪೊಲೀಸರು ಅಪರಾಧ ನಡೆದ ಸ್ಥಳದಿಂದ ಕೂದಲಿನ ಮಾದರಿಗಳು ಮತ್ತು ಕನ್ನಡಕಗಳನ್ನು ಸಂಗ್ರಹಿಸಿ ತನಿಖೆ ಆರಂಭಿಸಿದ್ದರು.

ಮೈಸೂರು ನಗರದ ನಜರ್‌ಬಾದ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ನಾಪತ್ತೆ ಪ್ರಕರಣದ ವಿವರಗಳಿಗೂ ಮತ್ತು ಮೃತದೇಹಕ್ಕೂ ಸಾಮ್ಯತೆ ಇರುವುದು ತನಿಖಾಧಿಕಾರಿಗಳಿಗೆ ಕಂಡುಬಂದಿತ್ತು. ಘಟನೆಯಲ್ಲಿ ಮೊಮ್ಮಗನೇ ದೂರುದಾರನಾಗಿದ್ದ. 

ವಿಚಾರಣೆ ವೇಳೆ ಮೊಮ್ಮಗನ ಬಗ್ಗೆ ಪೊಲೀಸರಿಗೆ ಅನುಮಾನ ಬಂದಿತ್ತು. ಕೂಲಂಕಷವಾಗಿ ತನಿಖೆ ನಡೆಸಿದ ಬಳಿಕ ಆತ ತಪ್ಪೊಪ್ಪಿಕೊಂಡಿದ್ದಾನೆ.

ಆಗಾಗ್ಗೆ ಅಜ್ಜಿ ಗದರಿಸುತ್ತಿದ್ದರು. ಮೇ 28ರಂದು ಇಬ್ಬರ ನಡುವೆ ವಾಗ್ವಾದ ನಡೆದಿದೆ. ಆರೋಪಿ ತನ್ನ ಅಜ್ಜಿಯ ಮೇಲೆ ಹಲ್ಲೆ ನಡೆಸಿ, ದಿಂಬಿನಿಂದ ಮುಖವನ್ನು ಮುಚ್ಚಿ ಕೊಲೆ ಮಾಡಿದ್ದಾಗಿ ಆರೋಪಿ ಪೊಲೀಸರಿಗೆ ತಿಳಿಸಿದ್ದಾನೆ.

ಬಳಿಕ ಮೃತದೇಹವನ್ನು ಪ್ಲಾಸ್ಟಿಕ್ ಕವರ್‌ನಲ್ಲಿ ಸುತ್ತಿ ರಟ್ಟಿನ ಪೆಟ್ಟಿಗೆಯಲ್ಲಿ ಹಾಕಿದ್ದನು. ಮೃತ ದೇಹವನ್ನು ಹೇಗೆ ವಿಲೇವಾರಿ ಮಾಡಬೇಕು ಎಂದು ತಿಳಿಯಲು ಸುಪ್ರೀತ್ ಕೊರಿಯನ್ ವೆಬ್ ಸರಣಿಯನ್ನು ವೀಕ್ಷಿಸಿದ್ದನು. ಆರೋಪಿ ಕಾರನ್ನು ಕೆಆರ್‌ಎಸ್ ಅಣೆಕಟ್ಟೆ ಹಿನ್ನೀರಿನ ಕಡೆಗೆ ಓಡಿಸಿಕೊಂಡು ಹೋಗಿದ್ದಾನೆ. ಅಲ್ಲಿ ಹಳ್ಳಕ್ಕೆ ಎಸೆದು, ಮೃತದೇಹಕ್ಕೆ ಬೆಂಕಿ ಹಚ್ಚಿದ್ದಾನೆ.

ದಿನವಿಡೀ ಅಜ್ಜಿಯ ಶವ ಇದ್ದ ಕಾರನ್ನು ಓಡಿಸಿಕೊಂಡು ಬಂದಿದ್ದು, ವಾಹನದಲ್ಲಿ ಶವವಿದ್ದಾಗಲೇ ಅದೇ ವಾಹನದಲ್ಲಿ ಠಾಣೆಗೆ ತೆರಳಿ ದೂರು ನೀಡಲು ಹೋಗಿದ್ದೆ ಎಂದು ಆರೋಪಿ ಪೊಲೀಸರಿಗೆ ತಿಳಿಸಿದ್ದಾನೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com