
ಬೆಂಗಳೂರು: ಕರ್ನಾಟಕ ಕಾಂಗ್ರೆಸ್ ಸರ್ಕಾರದ ಮಹಿಳೆಯರ ಉಚಿತ ಪ್ರಯಾಣದ ಶಕ್ತಿ ಯೋಜನೆಗೆ ಬಿಪಿಎಲ್, ಎಪಿಎಲ್ ಎಂಬ ನಿಯಮವಿಲ್ಲ... ಪ್ರಯಾಣಿಕರು ಸ್ಮಾರ್ಟ್ ಕಾರ್ಡ್ ತೋರಿಸಿದರೆ ಸಾಕು ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಸ್ಪಷ್ಟನೆ ನೀಡಿದ್ದಾರೆ.
ಇಂದು ವಿಧಾನಸೌಧದ ಮುಂಭಾಗದಲ್ಲಿ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾದ ಶಕ್ತಿ ಯೋಜನೆಗೆ ಚಾಲನೆ ನೀಡಿದ ಬಳಿಕ ಮಾತನಾಡಿದ ಅವರು, 'ಇಂದಿನಿಂದ ರಾಜ್ಯದ ಎಲ್ಲಾ ಮಹಿಳೆಯರಿಗೆ ಉಚಿತ ಪ್ರಯಾಣವಿರುತ್ತದೆ. ಉಚಿತ ಪ್ರಯಾಣಕ್ಕೆ ಬಿಪಿಎಲ್, ಎಪಿಎಲ್ ಎಂಬ ನಿಯಮವಿಲ್ಲ. ಯಾವುದಾದರೂ ಐಡಿ ತೋರಿಸಿದರೆ ಪ್ರಯಾಣ ಮಾಡಬಹುದು. ಸ್ಮಾರ್ಟ್ ಕಾರ್ಡ್ ಮಾಡಿಸಲು ಯಾರೂ ದುಡ್ಡು ಕೊಡಬೇಕಿಲ್ಲ. ಸ್ಮಾರ್ಟ್ ಕಾರ್ಡ್ ಮಾಡಿಸಿಕೊಳ್ಳಲು 3 ತಿಂಗಳ ಕಾಲಾವಕಾಶವಿದೆ ಎಂದು ಹೇಳಿದರು.
ಅಂತೆಯೇ ಇಂದು ಮಧ್ಯಾಹ್ನದ ನಂತರ ಉಚಿತ ಪ್ರಯಾಣ ಮಾಡಲು ಅವಕಾಶವಿದೆ. ಶೇ.90 ಕ್ಕಿಂತ ಹೆಚ್ಚು ಬಸ್ಗಳಲ್ಲಿ ರಾಜ್ಯದ ಯಾವುದೇ ಮೂಲೆಗೆ ಮಹಿಳೆಯರು ಉಚಿತವಾಗಿ ಪ್ರಯಾಣ ಮಾಡಬಹುದು ಎಂದು ಸಮಾರಂಭದಲ್ಲಿ ಸಾರಿಗೆ ಇಲಾಖೆ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ.
ಬಿಜೆಪಿ ವಿರುದ್ಧ ಕಿಡಿ
ನಮ್ಮ ಸರ್ಕಾರ ಬಂದು 20 ದಿನ ಆಗಿದೆ. ದೇಶದಲ್ಲಿ ನುಡಿದಂತೆ ನಡೆದ ಸರ್ಕಾರ ನಮ್ಮ ಸರ್ಕಾರ. ಬಿಜೆಪಿ 600 ಆಶ್ವಾಸನೆಯಲ್ಲಿ ಜಾರಿಗೆ ತಂದಿದ್ದು ಕೇವಲ 60 ಮಾತ್ರ. ಇದರಲ್ಲೇ ಗೊತ್ತಾಗುತ್ತೆ, ನುಡಿದಂತೆ ನಡೆವ ಸರ್ಕಾರ ಯಾವುದು ಅಂತ ತಿಳಿಯುತ್ತದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
10 ವರ್ಷವೂ ಉಚಿತ ಕೊಡ್ತೀವಿ
ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಯೋಜನೆ (Free Bus Travel) ಒಂದೇ ವರ್ಷ ಇರೋದು ಅಂತ ಬಿಜೆಪಿಯವರು ಹೇಳ್ತಾರೆ. ಆದರೆ ಈ ಯೋಜನೆ 5 ವರ್ಷ ಪೂರ್ತಿ ಇರುತ್ತೆ. ಮತ್ತೆ ಚುನಾವಣೆ ಆಗಿ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತೆ. ಆಮೇಲೂ ಉಚಿತ ಕೊಡ್ತೀವಿ. 10 ವರ್ಷವೂ ಉಚಿತ ಕೊಡ್ತೀವಿ ಎಂದು ಭರವಸೆ ನೀಡಿದರು.
ಬಸ್ ಸ್ಟಾಪ್ ಇರೋ ಕಡೆ ಬಸ್ ಕಡ್ಡಾಯವಾಗಿ ನಿಲ್ಲಿಸಬೇಕು. ನಮ್ಮ ಇಲಾಖೆಗೆ ಒಳ್ಳೆ ಹೆಸರು ತರಬೇಕು. ನನ್ನ ಅವಧಿಯಲ್ಲಿ 203 ಪ್ರಶಸ್ತಿ ಇಲಾಖೆಗೆ ಬಂದಿತ್ತು. ಬಿಜೆಪಿ ಅವಧಿಯಲ್ಲಿ 50 ಪ್ರಶಸ್ತಿ ಮಾತ್ರ ಬಂದಿದೆ. ಕಾರ್ಪೋರೇಷನ್ ನಷ್ಟದಲ್ಲಿ ಇದೆ, ಹೇಗೆ ನಡೆಸುತ್ತಾರೆ ಅಂತ ಹೇಳ್ತಾರೆ. ಪ್ರತಿ ತಿಂಗಳು ಲೆಕ್ಕ ಕೊಡ್ತೀವಿ. ಎಷ್ಟು ಜನ ಓಡಾಡುತ್ತಾರೆ ಅಂತ ಲೆಕ್ಕ ಕೊಡ್ತೀವಿ. ಮಹಿಳೆಯರ ಸಬಲೀಕರಣಕ್ಕೆ ಈ ಯೋಜನೆ ಜಾರಿ ಮಾಡಿದ್ದೇವೆ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದು 20 ದಿನ ಆಗಿದೆ. ನುಡಿದಂತೆ ನಡೆಯುವ ಸರ್ಕಾರ ಇದ್ದರೆ ದೇಶದಲ್ಲಿ ಅದು ಕಾಂಗ್ರೆಸ್ ಸರ್ಕಾರ. ನುಡಿದಂತೆ ನಡೆಯೋದು ನಮಗೆ ಹೊಸದಲ್ಲ. 2013 ರಲ್ಲಿ 165 ಭರವಸೆಗಳಲ್ಲಿ ಪೈಕಿ 158 ಭರವಸೆ ಈಡೇರಿಸಿದ್ದೇವೆ. 2018 ರಲ್ಲಿ ಸೋತೆವು. ಬಿಜೆಪಿ 600 ಆಶ್ವಾಸನೆ ಕೊಟ್ಟಿದ್ರು. ಆದರೆ 60 ಮಾತ್ರ ಈಡೇರಿಕೆ ಮಾಡಿದ್ರು. ಬಿಜೆಪಿಗೂ ನಮಗೂ ಅಜಗಜಾಂತರ ವ್ಯತ್ಯಾಸ ಇದೆ. ನಾವು ನುಡಿದಂತೆ ನಡೆಯುತ್ತೇವೆ ಎಂದು ಬಿಜೆಪಿ ವಿರುದ್ಧ ಗುಡುಗಿದರು.
ಮಹಿಳೆಯರಿಗೆ ಪಿಂಕ್ ಟಿಕೆಟ್ ಇಲ್ಲ, ಬಿಳಿಬಣ್ಣದ ಟಿಕೆಟ್
ಮಹಿಳೆಯರಿಗೆ ಪಿಂಕ್ ಟಿಕೆಟ್ ನೀಡೋದಿಲ್ಲ, ಬಿಳಿಬಣ್ಣದ ಟಿಕೆಟ್ ನೀಡುತ್ತೇವೆ. ಅದರಲ್ಲಿ ಮಹಿಳಾ ಟಿಕೆಟ್ ಎಂದು ನಮೂದು ಮಾಡಲಾಗಿರುತ್ತದೆ. ಎಲ್ಲಿಂದ ಎಲ್ಲಿಗೆ ಎಂದು ಮಾಹಿತಿ ಇರುತ್ತದೆ ಎಂದು ಕೆಎಸ್ಆರ್ಟಿಸಿ ಎಂಡಿ ಅನ್ಬು ಕುಮಾರ್ ಮಾಹಿತಿ ನೀಡಿದ್ದಾರೆ.
Advertisement