ಎಣ್ಣೆ ಪ್ರಿಯರಿಗೆ ಶಾಕ್​; ಗ್ಯಾರಂಟಿಗಳ ಜಾರಿಗೆ ಸಿದ್ದರಾಮಯ್ಯ ಸರ್ಕಾರ ಮದ್ಯದ ಬೆಲೆ ಹೆಚ್ಚಿಸುವ ಸಾಧ್ಯತೆ

ರಾಜ್ಯದಲ್ಲಿ ತನ್ನ ಐದು ಚುನಾವಣಾ ಭರವಸೆಗಳನ್ನು ಪೂರೈಸಲು ಹೆಚ್ಚುವರಿ ಸಂಪನ್ಮೂಲಗಳನ್ನು ಸಂಗ್ರಹಿಸಲು ಕಾಂಗ್ರೆಸ್ ಸರ್ಕಾರವು ಮದ್ಯದ ಬೆಲೆಗಳನ್ನು ಹೆಚ್ಚಿಸುವ ಸಾಧ್ಯತೆಯಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ರಾಜ್ಯದಲ್ಲಿ ತನ್ನ ಐದು ಚುನಾವಣಾ ಭರವಸೆಗಳನ್ನು ಪೂರೈಸಲು ಹೆಚ್ಚುವರಿ ಸಂಪನ್ಮೂಲಗಳನ್ನು ಸಂಗ್ರಹಿಸಲು ಕಾಂಗ್ರೆಸ್ ಸರ್ಕಾರವು ಮದ್ಯದ ಬೆಲೆಗಳನ್ನು ಹೆಚ್ಚಿಸುವ ಸಾಧ್ಯತೆಯಿದೆ.

ಮೂಲಗಳ ಪ್ರಕಾರ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜುಲೈ 7 ರಂದು ಮಂಡಿಸಲಿರುವ ಬಜೆಟ್‌ನಲ್ಲಿ ಮದ್ಯದ ಮೇಲಿನ ಹೆಚ್ಚುವರಿ ಅಬಕಾರಿ ಸುಂಕವನ್ನು (ಎಇಡಿ) ಪರಿಷ್ಕರಿಸುವ ವಿಧಾನಗಳನ್ನು ಹಣಕಾಸು ಇಲಾಖೆ ರೂಪಿಸುತ್ತಿದೆ ಎನ್ನಲಾಗಿದೆ.

ಆದಾಗ್ಯೂ, ತೆರಿಗೆ ಹೊರೆಯನ್ನು ಭಾರತೀಯ ನಿರ್ಮಿತ ಮದ್ಯದ (ಐಎಂಎಲ್) ಎಲ್ಲಾ 18 ಸ್ಲ್ಯಾಬ್‌ಗಳಿಗೂ ಮಾಡಲಾಗುತ್ತದೆಯೇ ಎಂಬುದು ಅಸ್ಪಷ್ಟವಾಗಿದೆ. ಪ್ರತಿ 180ml ಗೆ ಸದ್ಯ ಸುಮಾರು 56 ರಿಂದ 1,200 ರೂ. ಇದೆ. ಕೋವಿಡ್-19 ಲಾಕ್‌ಡೌನ್ ನಂತರ ಚಿಲ್ಲರೆ ಮದ್ಯದ ಅಂಗಡಿಗಳನ್ನು ಭಾಗಶಃ ತೆರೆಯಲು ಅನುಮತಿಸಿದ ಕೂಡಲೇ ಬಿಜೆಪಿ ಸರ್ಕಾರವು 2020ರ ಮೇ ತಿಂಗಳಿನಲ್ಲಿ ಎಲ್ಲಾ 18 ಸ್ಲ್ಯಾಬ್‌ಗಳಲ್ಲಿ ಎಇಡಿ ಪರಿಷ್ಕರಣೆ ಮಾಡಿತ್ತು.

ಗ್ಯಾರಂಟಿಗಳಿಗಾಗಿ ಸರ್ಕಾರಕ್ಕೆ 40,000 ಕೋಟಿ ರೂ. ಅಗತ್ಯ

ಸರ್ಕಾರಕ್ಕೆ ತನ್ನ ಗ್ಯಾರಂಟಿಗಳನ್ನು ಜಾರಿಗೆ ತರಲು ಸುಮಾರು 40,000 ಕೋಟಿ ರೂ.ಗಳ ಹೆಚ್ಚುವರಿ ಸಂಪನ್ಮೂಲಗಳ ಅಗತ್ಯವಿದೆ. 'ಮದ್ಯವನ್ನು ಹೊರತುಪಡಿಸಿ, ಸ್ಟ್ಯಾಂಪ್‌ಗಳು ಮತ್ತು ನೋಂದಣಿ ಮತ್ತು ಹೆಚ್ಚುವರಿ ಸಾಲದ ಮೂಲಕ ಸಂಪನ್ಮೂಲಗಳನ್ನು ಕ್ರೋಢೀಕರಿಸುವ ಸಾಧ್ಯತೆಯಿದೆ' ಎಂದು ಮೂಲಗಳು ತಿಳಿಸಿವೆ. 2020 ರಲ್ಲಿ, ಎಇಡಿಯನ್ನು ಎರಡು ಬಾರಿ ಪರಿಷ್ಕರಿಸಲಾಯಿತು.

ಒಮ್ಮೆ ಬಜೆಟ್ ಸಮಯದಲ್ಲಿ, ಎಲ್ಲಾ 18 ಸ್ಲ್ಯಾಬ್‌ಗಳಿಗೆ ಶೇ 6 ರಷ್ಟು ಏಕರೂಪದ ಏರಿಕೆ ಮಾಡಲಾಗಿತ್ತು. ಮೇ ತಿಂಗಳಲ್ಲಿ ಎಇಡಿಯನ್ನು ಶೇ 17 ರಿಂದ 25 ಕ್ಕೆ ಏರಿಸಲಾಗಿತ್ತು. ಮೊದಲ ನಾಲ್ಕು ಸ್ಲ್ಯಾಬ್‌ಗಳು ಅಬಕಾರಿ ಆದಾಯಕ್ಕೆ ಶೇ 70 ರಿಂದ 72 ರಷ್ಟು ಕೊಡುಗೆ ನೀಡುತ್ತವೆ. ರಾಜ್ಯ ಸರ್ಕಾರದ ಪ್ರಮುಖ ಆದಾಯದ ಮೂಲವೆಂದೇ ಪರಿಗಣಿಸಲಾದ ಅಬಕಾರಿ ಇಲಾಖೆಯು ರಾಜ್ಯದ ಬೊಕ್ಕಸಕ್ಕೆ ಸುಮಾರು ಶೇ 21 ರಷ್ಟು ಕೊಡುಗೆ ನೀಡುತ್ತದೆ.

ಸಮಾಜದ ಆರ್ಥಿಕವಾಗಿ ದುರ್ಬಲ ವರ್ಗಗಳು ಕರ್ನಾಟಕದಲ್ಲಿ ಮದ್ಯದ ಒಟ್ಟು ಸೇವನೆಯ ಸುಮಾರು ಶೇ 85 ರಷ್ಟು ಕೊಡುಗೆ ನೀಡುತ್ತವೆ. ಎಇಡಿಯ ಪರಿಷ್ಕರಣೆಗೆ ಟೀಕೆಗಳು ವ್ಯಕ್ತವಾಗಿದ್ದು, ಕಳ್ಳಭಟ್ಟಿ ಮತ್ತು ಇತರೆ ತೆರಿಗೆ ಪಾವತಿಸದ ಮದ್ಯ ಉತ್ಪಾದನೆಗೆ ಕಾರಣವಾಗಬಹುದು ಎಂದು ಹೇಳಿದ್ದಾರೆ.

ಲಾಕ್‌ಡೌನ್ ತೆರವಿನ ನಂತರ ಆಲ್ಕೊಹಾಲ್ ಸೇವನೆಯು ಕನಿಷ್ಠ ಶೇ 20 ರಿಂದ 30 ರಷ್ಟು ಹೆಚ್ಚಾಗಿದೆ. ಎಂಆರ್‌ಪಿಯಲ್ಲಿನ ಯಾವುದೇ ಹೆಚ್ಚಳವು ಕಾನೂನುಬಾಹಿರ ಚಟುವಟಿಕೆಗಳಿಗೆ ಕಾರಣವಾಗಬಹುದು. ನಿಯಂತ್ರಣ ಮತ್ತು ಕಾನೂನು ಜಾರಿ ಸವಾಲಾಗಿ ಪರಿಣಮಿಸಬಹುದು ಎಂದು ಮೂಲಗಳು ತಿಳಿಸಿವೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com