ಶ್ರೀಸಾಮಾನ್ಯನಿಗೆ ಉತ್ತಮ ಆಡಳಿತ ನೀಡಲು ಅಧಿಕಾರಿಗಳಿಗೆ ಮೂರು ತಿಂಗಳ ಗಡುವು: ಎಚ್.ಸಿ ಮಹಾದೇವಪ್ಪ

ಜನಸಾಮಾನ್ಯರ ಸಂಕಷ್ಟಗಳನ್ನು ಪರಿಹರಿಸಲು ಅಧಿಕಾರಿಗಳು ಮುಂದಾಗಬೇಕು ಎಂದು ಜಿಲ್ಲಾ ಸಚಿವ ಹೆಚ್ ಸಿ ಮಹದೇವಪ್ಪ ಅಧಿಕಾರಿಗಳಿಗೆ ಸೂಚಿಸಿದರು
ಎಚ್.ಸಿ ಮಹಾದೇವಪ್ಪ
ಎಚ್.ಸಿ ಮಹಾದೇವಪ್ಪ

ಮೈಸೂರು: ಜನಸಾಮಾನ್ಯರ ಸಂಕಷ್ಟಗಳನ್ನು ಪರಿಹರಿಸಲು ಅಧಿಕಾರಿಗಳು ಮುಂದಾಗಬೇಕು ಎಂದು ಜಿಲ್ಲಾ ಸಚಿವ ಹೆಚ್ ಸಿ ಮಹದೇವಪ್ಪ ಅಧಿಕಾರಿಗಳಿಗೆ ಸೂಚಿಸಿದರು. ರಾಜ್ಯದಲ್ಲಿ ಉತ್ತಮ ಆಡಳಿತವನ್ನು ಜನರು ಅನುಭವಿಸುವಂತೆ ಮಾಡಲು ಮೂರು ತಿಂಗಳ ಕಾಲಾವಕಾಶ ನೀಡಿದರು. ರಾಜಕಾರಣಿಗಳ ಹಸ್ತಕ್ಷೇಪವಿಲ್ಲದೇ ಜನ ಸಾಮಾನ್ಯರು ತಮ್ಮ ಕೆಲಸಗಳನ್ನು ಮಾಡಿಕೊಳ್ಳಬೇಕು ಎಂದರು.

ಜಿಲ್ಲಾ ಸಚಿವರಾಗಿ ಅಧಿಕಾರ ಸ್ವೀಕರಿಸಿದ ನಂತರ ನಡೆದ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಮಹದೇವಪ್ಪ, ಅಧಿಕಾರಿಗಳು ಕಚೇರಿಯಲ್ಲಿ ಕುಳಿತುಕೊಳ್ಳುವ ಬದಲು ತಾಲೂಕು, ಹೋಬಳಿಗಳಿಗೆ ಭೇಟಿ ನೀಡಿ ಆಡಳಿತದಲ್ಲಿ ಸುಧಾರಣೆ ತರಬೇಕು ಎಂದರು. ಸರ್ಕಾರ ಘೋಷಿಸಿರುವ ಐದು ಭರವಸೆಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಹೆಚ್ಚಿನ ಪ್ರಯತ್ನವನ್ನು ಮಾಡುವಂತೆ ಅವರು ಕೇಳಿಕೊಂಡರು.

ನಿತ್ಯದ ಆಡಳಿತದಲ್ಲಿ ಮುಖ್ಯಮಂತ್ರಿಯಾಗಲಿ, ನಾವಾಗಲೀ ಹಸ್ತಕ್ಷೇಪ ಮಾಡುವುದಿಲ್ಲ. ತಪ್ಪು ಕೆಲಸಗಳಿಂದಾಗಿ ನಾವು ಮಧ್ಯಪ್ರವೇಶಿಸುವಂತೆ ಮಾಡಬೇಡಿ. ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಆದ್ಯತೆ ಕೊಡಬೇಕು. ಪ್ರತಿ ವ್ಯಕ್ತಿಯ ಘನತೆಯನ್ನೂ ಕಾಪಾಡಬೇಕು. ಸಂವಿಧಾನಬದ್ಧವಾಗಿ ಕಾರ್ಯನಿರ್ವಹಿಸಬೇಕು. ಸರ್ಕಾರದ ಎಲ್ಲ ಕಾರ್ಯಕ್ರಮಗಳ ಅನುಷ್ಠಾನದಲ್ಲಿ ಹಾಗೂ ಪ್ರಗತಿಯಲ್ಲಿ ಜಿಲ್ಲೆಯು ನಂಬರ್‌ ಒನ್‌ ಆಗುವಂತೆ ಮಾಡಬೇಕು. ಜನರ ಪರವಾಗಿ ನಿಲ್ಲಬೇಕು. ಸರ್ಕಾರದ ಯೋಜನೆಗಳ ಸೌಲಭ್ಯಗಳನ್ನು ಜನರಿಗೆ ಸಮರ್ಪಕವಾಗಿ ತಲುಪಿಸಬೇಕು ಎಂದು ತಿಳಿಸಿದರು.

ಅನ್ನಭಾಗ್ಯ ಯೋಜನೆಯಲ್ಲಿ 10 ಕೆ.ಜಿ. ಅಕ್ಕಿ ವಿತರಿಸುವ ಕಾರ್ಯಕ್ರಮಕ್ಕೆ ಜುಲೈ 1ರಂದು ಮೈಸೂರಿನಲ್ಲೇ ಚಾಲನೆ ನೀಡಲಾಗುವುದು. ಆ ಸಮಾರಂಭವನ್ನು ವಿಶಿಷ್ಟವಾಗಿ ಆಯೋಜಿಸಬೇಕು’ ಎಂದು ನಿರ್ದೇಶನ ನೀಡಿದರು.

ನಗರದಲ್ಲಿ ವಾಹನಗಳ ದಟ್ಟಣೆ ಹೆಚ್ಚುತ್ತಿದೆ. ಇದನ್ನು ತಪ್ಪಿಸಲು ಫ್ಲೈಓವರ್ ಅಥವಾ ಏನು ಅಗತ್ಯವಿದೆ ಎಂಬ ಮಾಸ್ಟರ್‌ಪ್ಲಾನ್ ತಯಾರಿಸಬೇಕು ಎಂದು ಸೂಚಿಸಿದರು. ಜಿಲ್ಲಾ ಮಟ್ಟದವರು ಸೇರಿದಂತೆ ಎಲ್ಲ ಹಂತದ ಅಧಿಕಾರಿಗಳೂ ಕಚೇರಿ‌ ಬಿಟ್ಟು ‌ಹಳ್ಳಿಗಳಿಗೆ ಹೋಗಬೇಕು. ಜನರಲ್ಲಿ ವಿಶ್ವಾಸ- ನಂಬಿಕೆ ಮೂಡಿಸುವಂತಹ ನಡವಳಿಕೆ ನಿಮ್ಮದಾಗಬೇಕು. ವಿಎ, ಪಿಡಿಒಗಳು ಕೇಂದ್ರ ಸ್ಥಾನದಲ್ಲಿ ಉಳಿದುಕೊಳ್ಳಬೇಕು’ ಎಂದು ತಾಕೀತು ಮಾಡಿದರು.

‘ಜಿಲ್ಲೆಯಾದ್ಯಂತ ಪ್ರಾಥಮಿಕ ಆರೋಗ್ಯ ಸೇವೆಗೆ ಆದ್ಯತೆ ನೀಡಬೇಕು. ರೋಗಗಳು ಬಾರದಂತೆ ‌ನೋಡಿಕೊಳ್ಳುವುದು ಮುಖ್ಯ. ಈ ನಿಟ್ಟಿನಲ್ಲಿ ‌ಜಾಗೃತಿ ಮೂಡಿಸಬೇಕು. ಗ್ರಾಮಾಂತರ ಪ್ರದೇಶದಲ್ಲಿ ಉತ್ತಮ ಸೇವೆ ದೊರೆತರೆ ಜನರು ಕೆ.ಆರ್.ಆಸ್ಪತ್ರೆಗೆ ಬರುವುದು ತಪ್ಪುತ್ತದೆ. ಆಗ, ಈ ಆಸ್ಪತ್ರೆಯ ಒತ್ತಡವೂ ಕಡಿಮೆಯಾಗುತ್ತದೆ’ ಎಂದು ತಿಳಿಸಿದರು.

ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ (ಕೆಡಿಪಿ) ಪ್ರಗತಿ ಪರಿಶೀಲನಾ ಸಭೆಯನ್ನು ನಿಯಮಿತವಾಗಿ ನಡೆಸದಿರುವುದಕ್ಕೆ ಜಿಲ್ಲಾ ಪಂಚಾಯಿತಿ ಸಿಇಒ ಕೆ.ಎಂ.ಗಾಯತ್ರಿ ಅವರನ್ನು ತರಾಟೆಗೆ ತೆಗೆದುಕೊಂಡರು. ‘ಮೂರು ತಿಂಗಳಲ್ಲಿ ಒಮ್ಮೆ ಸಭೆ ನಡೆಸಬೇಕಿತ್ತು. ವರ್ಷದಲ್ಲಿ ಒಮ್ಮೆಯಷ್ಟೇ ನಡೆದಿದೆ. ಇದು ಸರಿಯಲ್ಲ. ಮುಂದೆ ಹೀಗಾಗಬಾರದು. ಮಾರ್ಗಸೂಚಿಗಳ ಪ್ರಕಾರ ನಿಯಮಿತವಾಗಿ ನಡೆಸಬೇಕು’ ಎಂದು ಸೂಚಿಸಿದರು.

ರೈತರು ತಮ್ಮ ಜಮೀನುಗಳ ಸರ್ವೇಗಾಗಿ ತಹಶೀಲ್ದಾರ್ ಅಧಿಕಾರಿ ಅಥವಾ ಕಂದಾಯ ಕಚೇರಿಗಳ ಸುತ್ತಲೂ ಅಲೆದಾಡುವಂತೆ ಮಾಡಬೇಡಿ ಎಂದು ಸಮಾಜ ಕಲ್ಯಾಣ ಸಚಿವರು ಅಧಿಕಾರಿಗಳಿಗೆ ತಿಳಿಸಿದರು. ಕಳೆದ ನಾಲ್ಕು ತಿಂಗಳಿನಿಂದ ಜಿಲ್ಲೆಯಲ್ಲಿ ಚಿರತೆಗಳ ಕಾಟ ಇಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com