ವಿದ್ಯುತ್‌ ದರ ಹೆಚ್ಚಳ ತಾತ್ಕಾಲಿಕ, ಒಂದು ದಿನದಲ್ಲಿ ಕೈಗಾರಿಕೆಗಳು ಮಹಾರಾಷ್ಟ್ರಕ್ಕೆ ಹೋಗಲು ಅವೇನು ಡಬ್ಬಾ ಚಹಾ ಅಂಗಡಿಯಾ?

ವಿದ್ಯುತ್​ ದರ ಹೆಚ್ಚಳ ತಾತ್ಕಾಲಿಕ, ಅದಕ್ಕಾಗಿ ಕೈಗಾರಿಕೋದ್ಯಮಿಗಳು ಮಹಾರಾಷ್ಟ್ರಕ್ಕೆ ವಲಸೆ ಹೋಗುವ ಅಗತ್ಯ ಇಲ್ಲ ಎಂದು ಲೋಕೋಪಯೋಗಿ ಸಚಿವ ಸತೀಶ್​ ಜಾರಕಿಹೊಳಿ ಹೇಳಿದ್ದಾರೆ.
ಸತೀಶ್ ಜಾರಕಿಹೊಳಿ
ಸತೀಶ್ ಜಾರಕಿಹೊಳಿ

ಬೆಳಗಾವಿ: ವಿದ್ಯುತ್​ ದರ ಹೆಚ್ಚಳ ತಾತ್ಕಾಲಿಕ, ಅದಕ್ಕಾಗಿ ಕೈಗಾರಿಕೋದ್ಯಮಿಗಳು ಮಹಾರಾಷ್ಟ್ರಕ್ಕೆ ವಲಸೆ ಹೋಗುವ ಅಗತ್ಯ ಇಲ್ಲ ಎಂದು ಲೋಕೋಪಯೋಗಿ ಸಚಿವ ಸತೀಶ್​ ಜಾರಕಿಹೊಳಿ ಹೇಳಿದ್ದಾರೆ.

ವಿದ್ಯುತ್ ದರ ತಗ್ಗಿಸದಿದ್ದರೆ ಮಹಾರಾಷ್ಟ್ರಕ್ಕೆ ವಲಸೆ ಹೋಗಲು ಬೆಳಗಾವಿ ಕೈಗಾರಿಕೋದ್ಯಮಿಗಳ ಚಿಂತನೆ ವಿಚಾರವಾಗಿ ಮಾತನಾಡಿದ ಸತೀಶ್​ ಒಂದು ದಿವಸದಲ್ಲಿ ಕೈಗಾರಿಕೆಗಳು ಮಹಾರಾಷ್ಟ್ರಕ್ಕೆ ಹೋಗಲು ಆಗಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.

ಒಂದು ಕೈಗಾರಿಕೆ ಸ್ಥಾಪಿಸಲು ಹತ್ತು ವರ್ಷ ಬೇಕು ಅದಕ್ಕೆ ಎಷ್ಟು ಶ್ರಮ, ದುಡ್ಡು ಕರ್ಚು ಆಗುತ್ತೆ. ಒಂದು ದಿವಸದಲ್ಲಿ ಕೈಗಾರಿಕೆಗಳು ಮಹಾರಾಷ್ಟ್ರಕ್ಕೆ ಹೋಗಲು ಆಗಲ್ಲ ತಕ್ಷಣ ಹೋಗೋಕೇ ಅದೇನು ಡಬ್ಬಾ ಅಂಗಡಿಯಾ ಚಹಾ ಅಂಗಡಿಯಾ ಎಂದು ಪ್ರಶ್ನಿಸಿದ್ಧಾರೆ. ಈ ಸಂಬಂಧ ಸರ್ಕಾರ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸುತ್ತಿದೆ ಎಂದು ಹೇಳಿದರು.

ಇದು ಸರ್ಕಾರಕ್ಕೆ ತಾತ್ಕಾಲಿಕ ಸವಾಲಾಗಿದೆ, ನಾವು ಒಟ್ಟಾಗಿ ಕೆಲಸ ಮಾಡಿದರೆ, ನಾವು ಅನೇಕ ಸವಾಲುಗಳನ್ನು ಜಯಿಸಬಹುದು ಎಂದು ಅವರು ಹೇಳಿದರು. ಈ ಹಿಂದೆ ವಿದ್ಯುತ್ ದರ ಏರಿಕೆ ವಿರೋಧಿಸಿ ಬೆಳಗಾವಿಯ ವಾಣಿಜ್ಯೋದ್ಯಮ ಸಂಸ್ಥೆ (ಬಿಸಿಸಿಐ) ಸದಸ್ಯರು, ಹೆಸ್ಕಾಂ ಹೆಚ್ಚಿನ ಶುಲ್ಕ ವಿಧಿಸುವುದನ್ನು ಮುಂದುವರಿಸಿದರೆ ಬೆಳಗಾವಿಯಲ್ಲಿ ಕಾರ್ಯನಿರ್ವಹಿಸುವುದು ಕಷ್ಟ ಎಂದು ಹೇಳಿದ್ದರು.

ವಿದ್ಯುತ್ ದರ ಏರಿಕೆ ಬಗ್ಗೆ ನಮಗೂ ಗೊಂದಲ ಇದೆ. ಮೂರು ಪಟ್ಟು ವಿದ್ಯುತ್ ಬಿಲ್ ಹೆಚ್ಚಾಗಿದೆ. ಏಕೆ ಹೆಚ್ಚಾಗಿದೆ ಎಂದು ಸಂಜೆಯೊಳಗೆ ತಿಳಿದುಕೊಂಡು ಹೇಳುತ್ತೇವೆ. ಕೆಇಆರ್‌ಸಿಯವರು 10 ಪರ್ಸೆಂಟ್ ಮಾತ್ರ ಹೆಚ್ಚು ಮಾಡಿದ್ದಾರೆ ಎಂದರು.

ಹಿಂದಿನ ಸರ್ಕಾರ ಮುಂದಿನ ಸರ್ಕಾರ ಅನ್ನೋ ಪ್ರಶ್ನೆ ಇಲ್ಲ, ಸರ್ಕಾರ ಸರ್ಕಾರವೇ. ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗವೇ ಬೇರೆ ಇದೆ, ಅದಕ್ಕೂ ಪಕ್ಷಕ್ಕೂ ಏನೂ ಸಂಬಂಧ ಇಲ್ಲ. ಏಪ್ರಿಲ್ 1ರಂದು ಆದೇಶ ಆಗಿರಬಹುದು. ಚುನಾವಣೆ ಹಿನ್ನೆಲೆ ಜಾರಿಯಾಗಿಲ್ಲ ಅನಿಸುತ್ತೆ. ಈಗ ಎರಡ್ಮೂರು ತಿಂಗಳು ಸೇರಿಸಿ ವಿದ್ಯುತ್​ ಬಿಲ್​ ಕೊಟ್ಟಿರಬೇಕು ಅಂತಾ ನನ್ನ ಅಂದಾಜು. ಏಪ್ರಿಲ್, ಮೇ ತಿಂಗಳದ್ದು ಸೇರಿಸಿ ಬಿಲ್ ಕೊಟ್ಟಿರಬೇಕು ಎಂಬುದು ನನ್ನ ಭಾವನೆ. ನಾನು ಅಧಿಕಾರಿಗಳಿಂದ ಮಾಹಿತಿ ಪಡೆಯುತ್ತೇನೆ ಎಂದು ಸಚಿವರು ಹೇಳಿದರು.

ಗುತ್ತಿಗೆದಾರರ ಹಣ ಬಿಡುಗಡೆ ಆದೇಶ ತಡೆ ಹಿಡಿದ ಸರ್ಕಾರ ಕೆಇಆರ್‌ಸಿ ಆದೇಶ ಏಕೆ ತಡೆ ಹಿಡಿಯುತ್ತಿಲ್ಲ ಎಂಬ ಬಿಜೆಪಿ ನಾಯಕರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವ, ‘ಗುತ್ತಿಗೆದಾರರ ಹಣ ಬಿಡುಗಡೆ ಆದೇಶ ತಡೆಯುವ ಅಧಿಕಾರ ನಮಗಿದೆ. ಆದರೆ, ವಿದ್ಯುತ್ ಚ್ಛಕ್ತಿ ನಿಯಂತ್ರಣ ಆಯೋಗ ಸ್ವತಂತ್ರವಾಗಿ ಕಾರ್ಯನಿರ್ವಹಿಸುತ್ತದೆ. ಅದು ನಮ್ಮ ವ್ಯಾಪ್ತಿಗೆ ಬರುವುದಿಲ್ಲ’ ಎಂದರು.

ಕೈಗಾರಿಕೆಗಳು ಮಹಾರಾಷ್ಟ್ರಕ್ಕೆ ವಲಸೆ ವಿಚಾರ ವಿದ್ಯುತ್ ದರ ಏರಿಕೆಯಿಂದ ಹಾಗೆಲ್ಲ ಆಗಲ್ಲ, ಇದು ತಾತ್ಕಾಲಿಕ ಸಮಸ್ಯೆ ಅಷ್ಟೇ. ವಿದ್ಯುತ್ ದರ ಏರಿಕೆ ಕೇವಲ ಕರ್ನಾಟಕದ ಸಮಸ್ಯೆ ಅಲ್ಲ, ವಿದ್ಯುತ್ ದರ ಏರಿಕೆ ಇಡೀ ದೇಶದ ಆಯಾ ರಾಜ್ಯಗಳಲ್ಲಿ ಕಾಲಕ್ಕೆ ತಕ್ಕಂತೆ ಏರಿಸುತ್ತಾರೆ. ಇದು ಹೊಸದೇನಲ್ಲ, ಪ್ರತಿ ವರ್ಷ ಪರಿಷ್ಕರಣೆ ಮಾಡುತ್ತಾರೆ ಎಂದು ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com