ಕಾಂಗ್ರೆಸ್ ಆಂತರಿಕ ವಿಚಾರಗಳ ಬಗ್ಗೆ ಚಿಂತಿಸುವ ಅಗತ್ಯವಿಲ್ಲ: ಬಿಜೆಪಿಗೆ ಸತೀಶ್ ಜಾರಕಿಹೊಳಿ
ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿರುವ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ, ಕಾಂಗ್ರೆಸ್ ಪಕ್ಷದ ಆಂತರಿಕ ವಿಚಾರಗಳ ಬಗ್ಗೆ ಬಿಜೆಪಿ ಚಿಂತಿಸುವ ಅಗತ್ಯವಿಲ್ಲ ಎಂದು ಮಂಗಳವಾರ ಹೇಳಿದ್ದಾರೆ.
Published: 07th June 2023 10:30 AM | Last Updated: 07th June 2023 06:41 PM | A+A A-

ಸತೀಶ್ ಜಾರಕಿಹೊಳಿ.
ಬೆಳಗಾವಿ: ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿರುವ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ, ಕಾಂಗ್ರೆಸ್ ಪಕ್ಷದ ಆಂತರಿಕ ವಿಚಾರಗಳ ಬಗ್ಗೆ ಬಿಜೆಪಿ ಚಿಂತಿಸುವ ಅಗತ್ಯವಿಲ್ಲ ಎಂದು ಮಂಗಳವಾರ ಹೇಳಿದ್ದಾರೆ.
ಗೋಕಾಕದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿದ ಅವರು, ಪಕ್ಷದ ಮನೆಯಲ್ಲಿರುವ ಆಂತರಿಕ ಸಮಸ್ಯೆಗಳ ನಿಭಾಯಿಸಲು ನಾಯಕರು ಸಮರ್ಥರಾಗಿದ್ದಾರೆ. ನಮ್ಮ ಆಂತರಿಕ ವಿಚಾರಗಳ ಬಗ್ಗೆ ತಲೆಕೆಡಿಸಿಕೊಳ್ಳುವುದನ್ನು ಬಿಜೆಪಿ ನಿಲ್ಲಿಸಬೇಕೆಂದು ಹೇಳಿದ್ದಾರೆ.
ಬಳಿಕ ಚಕ್ರವರ್ತಿ ಸೂಲಿಬೆಲೆ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಚಕ್ರವರ್ತಿ ಸೂಲಿಬೆಲೆ ಒಬ್ಬ ಸಮಾಜದಲ್ಲಿ ಗೊಂದಲ ಸೃಷ್ಟಿಸುವ ವ್ಯಕ್ತಿ, ಪ್ರಧಾನಿ ಮೋದಿ ಹೇಳದಿರುವ ಭರವಸೆಗಳನ್ನು ಇವರೇ ಹೇಳುತ್ತಾರೆ. ಸೂಲಿಬೆಲೆ ಹೇಳಿಕೆಯಿಂದ ಸಮಾಜದಲ್ಲಿ ಗೊಂದಲ ಸೃಷ್ಟಿಯಾಗುತ್ತಿದೆ ಎಂದು ತಿಳಿಸಿದ್ದಾರೆ.
ಇತ್ತೀಚೆಗಷ್ಟೇ ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ್ ಹೇಳಿಕೆಗೆ ಪ್ರತಿಕ್ರಿಯಿಸಿ, ಸಚಿವ ಎಂ.ಬಿ.ಪಾಟೀಲ್ ರಾಜ್ಯದಲ್ಲಿ ಕೋಮು ಸೌಹಾರ್ದ ಕದಡುವ ಕೆಲಸ ಮುಂದುವರಿಸಿದರೆ ಸೂಲಿಬೆಲೆಗೆ ಜೈಲು ಕಂಬಿ ಎಣಿಸುವಂತೆ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ ಅಷ್ಟೇ ಎಂದರು.
ಇದನ್ನೂ ಓದಿ: ಬೆಳಗಾವಿ ಸ್ಮಾರ್ಟ್ ಸಿಟಿ ಯೋಜನೆ, ನಗರಾಭಿವೃದ್ಧಿ ಪ್ರಾಧಿಕಾರದ ವ್ಯವಹಾರಗಳ ಕುರಿತು ಪ್ರತ್ಯೇಕ ತನಿಖೆ: ಸತೀಶ್ ಜಾರಕಿಹೊಳಿ
ಗೋಹತ್ಯೆ ವಿಚಾರವಾಗಿ ಜಾರಕಿಹೊಳಿ ಮಾತನಾಡಿ, ಗೋಹತ್ಯೆ ನಿಷೇಧದ ಬಗ್ಗೆ ನಮ್ಮ ಸರ್ಕಾರ ಚರ್ಚೆಯ ನಂತರವೇ ನಿರ್ಧಾರ ಕೈಗೊಳ್ಳಲಿದೆ. ಆತುರದ ನಿರ್ಧಾರಗಳು ಸಮಸ್ಯೆಗಳಿಗೆ ಕಾರಣವಾಗಬಾರದು ಎಂದು ಹೇಳಿದರು.
ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ನಡೆದಿದೆ ಎನ್ನಲಾದ ಹಗರಣಗಳ ತನಿಖೆಯನ್ನು ಶೀಘ್ರವೇ ಆರಂಭಿಸಲಾಗುವುದು ಎಂದು ಇದೇ ವೇಳೆ ಹೇಳಿದರು.
ಅಕ್ರಮದಲ್ಲಿ ಸ್ಥಳೀಯ ಶಾಸಕರ ಹಸ್ತಕ್ಷೇಪ ಇದೆ ಎಂಬ ಗುಮಾನಿ ಇದೆ, ಸೂಕ್ತ ದಾಖಲೆ ನೀಡಿದರೆ ಖಂಡಿತವಾಗಿಯೂ ಕ್ರಮ ಕೈಗೊಳ್ಳಲಾಗುವುದು. ಸರಿಯಾಗಿ ಕಾರ್ಯ ನಿರ್ವಹಿಸದ ಅಧಿಕಾರಗಳಿಗೆ ನಮ್ಮ ಜಿಲ್ಲೆಯಿಂದ ಗೇಟ್ ಪಾಸ್ ನೀಡಲಾಗುವುದು’ ಎಂದರು.