ಸುಳ್ಳು ಹೇಳುತ್ತಿಲ್ಲವೆಂದಾದರೆ ಎಫ್‌ಸಿಐನ ಕಮಿಟ್ಮೆಂಟ್ ಲೆಟರ್ ತೋರಿಸಲಿ: ಸಿಎಂ ಸಿದ್ದರಾಮಯ್ಯಗೆ ಸಿಟಿ ರವಿ ಸವಾಲು

ಸಾಕಷ್ಟು ದಾಸ್ತಾನಿದ್ದರೂ ಕೇಂದ್ರವು ರಾಜ್ಯಕ್ಕೆ ಅಕ್ಕಿ ನೀಡುತ್ತಿಲ್ಲ ಎಂದು ಆರೋಪಿಸಿರುವ ಕರ್ನಾಟಕದ ಕಾಂಗ್ರೆಸ್ ಸರ್ಕಾರವನ್ನು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಶುಕ್ರವಾರ ತರಾಟೆಗೆ ತೆಗೆದುಕೊಂಡರು ಮತ್ತು ಈ ಬಗ್ಗೆ ಭಾರತೀಯ ಆಹಾರ ನಿಗಮದ (ಎಫ್‌ಸಿಐ) ಕಮಿಟ್ಮೆಂಟ್ ಪತ್ರವನ್ನು ತೋರಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕೇಳಿದ್ದಾರೆ.
ಸಿ.ಟಿ ರವಿ
ಸಿ.ಟಿ ರವಿ
Updated on

ಚಿಕ್ಕಮಗಳೂರು: ಸಾಕಷ್ಟು ದಾಸ್ತಾನಿದ್ದರೂ ಕೇಂದ್ರವು ರಾಜ್ಯಕ್ಕೆ ಅಕ್ಕಿ ನೀಡುತ್ತಿಲ್ಲ ಎಂದು ಆರೋಪಿಸಿರುವ ಕರ್ನಾಟಕದ ಕಾಂಗ್ರೆಸ್ ಸರ್ಕಾರವನ್ನು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಶುಕ್ರವಾರ ತರಾಟೆಗೆ ತೆಗೆದುಕೊಂಡರು ಮತ್ತು ಈ ಬಗ್ಗೆ ಭಾರತೀಯ ಆಹಾರ ನಿಗಮದ (ಎಫ್‌ಸಿಐ) ಕಮಿಟ್ಮೆಂಟ್ ಪತ್ರವನ್ನು ತೋರಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅವರು (ಸಿದ್ದರಾಮಯ್ಯ) ಸುಳ್ಳು ಹೇಳುತ್ತಿಲ್ಲ ಎಂದಾದರೆ ಕರ್ನಾಟಕ ರಾಜ್ಯಕ್ಕೆ ಅಕ್ಕಿ ನೀಡುವ ಭರವಸೆ ನೀಡಿದ್ದರೆ ಎಫ್‌ಸಿಐನ ಕಮಿಟ್ಮೆಂಟ್ ಪತ್ರವನ್ನು ತೋರಿಸಲಿ. ಸುಳ್ಳು ಆರೋಪ ಮಾಡುವುದನ್ನು ಬಿಟ್ಟು ಜನರಿಗೆ ಅಕ್ಕಿ ಖರೀದಿಸಲು ಹಣ ನೀಡಲಿ. ಕರ್ನಾಟಕಕ್ಕೆ ಅಕ್ಕಿಯನ್ನು ಕಳುಹಿಸುತ್ತೇವೆ ಎಂದು ಕೇಂದ್ರ ಸರ್ಕಾರವು ಪತ್ರ ನೀಡಿಲ್ಲ. ಆದ್ದರಿಂದ ಕಾಂಗ್ರೆಸ್ ಸರ್ಕಾರವು ಅನ್ನಭಾಗ್ಯ ಯೋಜನೆಯನ್ನು ತನ್ನ ಯೋಜನೆ ಎಂದು ಪರಿಗಣಿಸಿ, ಜನರಿಗೆ ಅಕ್ಕಿಯನ್ನು ವಿತರಿಸಲಿ ಎಂದರು. 

'ಕೊಟ್ಟರೆ ನಾನು ಕೊಟ್ಟೆ ಎನ್ನುವುದು, ಕೊಡದಿದ್ದರೆ ಕೇಂದ್ರ ಸರ್ಕಾರದತ್ತ ಬೊಟ್ಟು ಮಾಡಿ ತೋರಿಸುತ್ತೀರಿ. ನಾಲ್ಕೈದು ತಿಂಗಳ ನಂತರ ಸಿದ್ದರಾಮಯ್ಯ ಈ ಆರೋಪ ಮಾಡಲು ಶುರು ಮಾಡುತ್ತಾರೆ ಎಂದು ನಿರೀಕ್ಷಿಸಿದ್ದೆ. ಆದರೆ, ಅವರು ಈಗಲೇ ಪ್ರಾರಂಭಿಸಿದ್ದಾರೆ. ಜುಲೈ 1ರಿಂದ ಉಚಿತ ಅಕ್ಕಿ ಯೋಜನೆ ಜಾರಿಯಾಗಲಿದೆ ಎಂದು ಘೋಷಿಸಿ ಈಗ ಕೇಂದ್ರ ಸರ್ಕಾರವನ್ನು ದೂರುತ್ತಿದ್ದೀರಿ. ಬಿಪಿಎಲ್ ಹೊಂದಿರುವವರ ಖಾತೆಗೆ ಹಣ ಜಮೆ ಮಾಡಿ, ಅವರು ಅಕ್ಕಿ ಖರೀದಿಸುತ್ತಾರೆ' ಎಂದು ಪುನರುಚ್ಚರಿಸಿದರು.

ವಿದ್ಯುತ್ ದರ ಹೆಚ್ಚಳದ ಕುರಿತು ಪ್ರತಿಕ್ರಿಯಿಸಿದ ಅವರು, ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗದ (ಕೆಇಆರ್‌ಸಿ) ಬೆಲೆ ಏರಿಕೆ ಪ್ರಸ್ತಾವನೆಗೆ ಬಿಜೆಪಿ ಒಪ್ಪಿಗೆ ನೀಡಿಲ್ಲ ಎಂದು ಸ್ಪಷ್ಟಪಡಿಸಿದರು.

'ದರ ಏರಿಕೆ ಪ್ರಸ್ತಾವನೆಗೆ ಕಾಂಗ್ರೆಸ್ ಸರ್ಕಾರ ಒಪ್ಪಿಗೆ ನೀಡಿದೆ. ಅಬಕಾರಿ ಸುಂಕವನ್ನೂ ಸದ್ದಿಲ್ಲದೆ ಹೆಚ್ಚಿಸಲಾಗಿದೆ. ಇದಕ್ಕೆಲ್ಲಾ ಕೇಂದ್ರ ಸರ್ಕಾರ ಹೊಣೆಯೇ?. ನೋಂದಣಿ ಮತ್ತು ಮೋಟಾರು ವಾಹನಗಳ ತೆರಿಗೆಯನ್ನು ಹೆಚ್ಚಿಸಲು ಅವರು ಸಿದ್ಧರಾಗಿದ್ದಾರೆ. ಒಂದೆಡೆ ಕಾಂಗ್ರೆಸ್ ಸರ್ಕಾರ ಸಾರ್ವಜನಿಕರ ಹಣವನ್ನು ಕಸಿದುಕೊಳ್ಳುತ್ತಿದ್ದರೆ, ಮತ್ತೊಂದೆಡೆ ನೀಡುತ್ತಿರುವಂತೆ ಬಿಂಬಿಸುತ್ತಿದೆ' ಎಂದು ಸಿಟಿ ರವಿ ದೂರಿದರು.

ಸಿಎಂ ಸಿದ್ದರಾಮಯ್ಯ ಪ್ರಕಾರ, ಏಳು ಲಕ್ಷ ಟನ್ ಅಕ್ಕಿ ದಾಸ್ತಾನು ಇದೆ ಎಂದು ಎಫ್‌ಸಿಐ ಉಪ ವ್ಯವಸ್ಥಾಪಕರು ಮಾಹಿತಿ ನೀಡಿದ್ದಾರೆ. ದಾಸ್ತಾನು ಇದ್ದರೂ ಕೇಂದ್ರ ಏಕೆ ಅಕ್ಕಿ ನೀಡುತ್ತಿಲ್ಲ?. ಬಿಜೆಪಿ ನಾಯಕರು ಬಡವರ ವಿರೋಧಿಗಳು. ಕಾಂಗ್ರೆಸ್ ಸರ್ಕಾರಕ್ಕೆ ಕೆಟ್ಟ ಹೆಸರು ತರಲು ಈ ಎಲ್ಲಾ ತಂತ್ರಗಳನ್ನು ಹೂಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

'ನಾವು ಎಫ್‌ಸಿಐನ ಉಪ ವ್ಯವಸ್ಥಾಪಕರೊಂದಿಗೆ ಚರ್ಚಿಸಿದ್ದೇವೆ. ಅಕ್ಕಿಯನ್ನು ಪೂರೈಸುವುದಾಗಿ ಅವರು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ.ಎಚ್. ಮುನಿಯಪ್ಪ ಮತ್ತು ನಮಗೆ ಭರಸವೆ ನೀಡಿದ್ದರು. ಜೂನ್ 12ರಂದು ಅವರು ಕೇಂದ್ರಕ್ಕೆ ಪತ್ರವನ್ನೂ ಬರೆದಿದ್ದರು ಮತ್ತು ಅಕ್ಕಿ ನೀಡುವುದಾಗಿ ಕೇಂದ್ರದಿಂದ ಭರವಸೆ ಸಿಕ್ಕಿತ್ತು. ಈ ಬೆಳವಣಿಗೆ ಬಳಿಕ ಕೇಂದ್ರ ಸರ್ಕಾರ ರಾಜಕೀಯ ನಿರ್ಧಾರ ಕೈಗೊಂಡಿದೆ' ಎಂದು ಸಿಎಂ ಸಿದ್ದರಾಮಯ್ಯ ಆರೋಪಿಸಿದ್ದಾರೆ.

ಕರ್ನಾಟಕಕ್ಕೆ 2,08,425 ಮೆಟ್ರಿಕ್ ಟನ್ ಅಕ್ಕಿ ನೀಡಲು ಒಪ್ಪಿಗೆ ನೀಡಲಾಗಿದೆ. ಆದರೆ, ಮುಕ್ತ ಮಾರುಕಟ್ಟೆ ಮಾರಾಟ ಯೋಜನೆ (ಒಎಂಎಸ್‌ಎಸ್) ಅಡಿಯಲ್ಲಿ ರಾಜ್ಯಗಳಿಗೆ ಗೋಧಿ ಮತ್ತು ಅಕ್ಕಿ ನೀಡಲು ಸಾಧ್ಯವಿಲ್ಲ ಎಂದು ಅವರು ಜೂನ್ 13ರಂದು ಪತ್ರ ಬರೆದಿದ್ದಾರೆ. ಕಾಂಗ್ರೆಸ್ ಸರ್ಕಾರಕ್ಕೆ ಕೆಟ್ಟ ಹೆಸರು ತರಲು ಕೇಂದ್ರ ಸರ್ಕಾರ ಅಕ್ಕಿ ನೀಡುವುದಿಲ್ಲ ಎಂದು ರಾಜಕೀಯ ನಿರ್ಧಾರ ಕೈಗೊಂಡಿದೆ ಎಂದು ಆರೋಪಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com