ಬೆಳಗಾವಿ ವ್ಯಾಕ್ಸಿನ್ ಡಿಪೋದಲ್ಲಿ ಅಕ್ರಮ ಕಾಮಗಾರಿ ಆರೋಪ; ಸ್ಮಾರ್ಟ್ ಸಿಟಿ ಎಂಡಿ ವಿರುದ್ಧ ಎಫ್ಐಆರ್ ದಾಖಲು

ಡಿಎಚ್‌ಒ ಡಾ.ಮಹೇಶ್ ಕೋಣಿ ನೀಡಿದ ದೂರಿನ ಆಧಾರದ ಮೇಲೆ ಸ್ಮಾರ್ಟ್ ಸಿಟಿ ಎಂಡಿ ಹಾಗೂ ಇತರೆ ಅಧಿಕಾರಿಗಳ ವಿರುದ್ಧ ಟಿಳಕವಾಡಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಳಗಾವಿ: ಡಿಎಚ್‌ಒ ಡಾ.ಮಹೇಶ್ ಕೋಣಿ ನೀಡಿದ ದೂರಿನ ಆಧಾರದ ಮೇಲೆ ಸ್ಮಾರ್ಟ್ ಸಿಟಿ ಎಂಡಿ ಹಾಗೂ ಇತರೆ ಅಧಿಕಾರಿಗಳ ವಿರುದ್ಧ ಟಿಳಕವಾಡಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.

ಪರವಾನಿಗೆ ಇಲ್ಲದೇ ತಮ್ಮ ಕಚೇರಿ ಆವರಣದಲ್ಲಿನ ಜಾಗದಲ್ಲಿ ಅಕ್ರಮ ಕಾಮಗಾರಿ ನಡೆಸಲಾಗಿದ್ದು, ಮಣ್ಣು ಜೊತೆಗೆ ಮರಕಡಿದು ಅಕ್ರಮವಾಗಿ ಸಾಗಿಸಿದ್ದಾರೆಂದು ಮಹೇಶ್ ಕೋಣಿ ಅವರು ದೂರಿನಲ್ಲಿ ಹೇಳಿಕೊಂಡಿದ್ದಾರೆ.

ದೂರಿ ಹಿನ್ನೆಲೆಯಲ್ಲಿ ಸ್ಮಾರ್ಟ್ ಸಿಟಿ ಎಂಡಿ ಹಾಗೂ ಇತರೆ ಅಧಿಕಾರಿಗಳ ವಿರುದ್ಧ ಸೆಕ್ಷೆನ್ 420, 427, 447ಐಪಿಸಿ ಅಡಿ ಪ್ರಕರಣ ದಾಖಲು ಮಾಡಲಾಗಿದ್ದು, ಕಾಮಗಾರಿಯನ್ನ ಅರ್ಧಕ್ಕೆ ಸ್ಥಗಿತಗೊಳಿಸಲಾಗಿದೆ ಎಂದು ತಿಳಿದುಬಂದಿದೆ.

ಅಕ್ರಮ ಬೆಳಕಿಗೆ ಬರುತ್ತಿದ್ದಂತೆಯೇ ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ವ್ಯಾಕ್ಸಿನ್ ಡಿಪೋಗೆ ಭೇಟಿ ನೀಡಿ ಸ್ಮಾರ್ಟ್ ಸಿಟಿ ಯೋಜನೆಯ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಕಳೆದ ಎರಡು- ಮೂರು ವರ್ಷಗಳಿಂದ ಸ್ಮಾರ್ಟ್ ಸಿಟಿ ಕಾಮಗಾರಿ ಅಕ್ರಮವಾಗಿ ನಡೆಯುತ್ತಿದೆ. ಇದರಲ್ಲಿ ಎರಡು- ಮೂರು ಸ್ಮಾರ್ಟ್ ಸಿಟಿ ಎಂ.ಡಿ.ಗಳು ಬರುತ್ತಾರೆ. ಆರೋಗ್ಯ‌ ಇಲಾಖೆ ಅನುಮತಿ ಪಡೆಯದೆ ಗಿಡ ಕಡಿದು ಔಷಧೀಯ ಸಸ್ಯಗಳುಳ್ಳ ಪ್ರದೇಶವನ್ನು ಹಾಳು ಮಾಡಿ ಸ್ಮಾರ್ಟ್ ಸಿಟಿ ಕಾಮಗಾರಿ ಮಾಡಿದ್ದಾರೆ. ಹೀಗಾಗಿ ಅದರ ಬಗ್ಗೆ ಪೊಲೀಸರು ಕ್ರಮ ಕೈಗೊಳ್ಳುತ್ತಾರೆಂದು ಜಾರಕಿಹೊಳಿಯವರು ಹೇಳಿದರು.

ಮೂರು ವರ್ಷಗಳಿಂದ ಈ ವಿಷಯ ಸಂಬಂಧಿಸಿದವರ ಗಮನಕ್ಕೆ‌ ಬಂದಿದ್ದರೂ ರಾಜಕೀಯ ಒತ್ತಡದಿಂದ ಏನೂ ಮಾಡಲು ಆಗಿರಲಿಲ್ಲ. ಸದ್ಯ ವಾತಾವರಣ ಬೇರೆ ಇದೆ. ಹೀಗಾಗಿ ಪ್ರಕರಣ ದಾಖಲಿಸಿದ್ದಾರೆ. ಇದರ ತನಿಖೆಯನ್ನು ಮುಕ್ತವಾಗಿ ನಡೆಸಲಾಗುವುದು ಎಂದು ತಿಳಿಸಿದರು.

2005ರಲ್ಲಿ ವ್ಯಾಕ್ಸಿನ್ ಡಿಪೋವನ್ನು ಆರೋಗ್ಯ ಇಲಾಖೆಯಡಿ ತರಲಾಗಿದ್ದು, ಅಂದಿನಿಂದ ಇಲ್ಲಿಯವರೆಗೆ ಇಲಾಖೆ ಅಡಿಯಲ್ಲಿ ಹಲವಾರು ಚಟುವಟಿಕೆಗಳು ನಡೆದಿವೆ. ಆಘಾತಕಾರಿ ವಿಚಾರವೆಂದರೆ ಸ್ಮಾರ್ಟ್ ಸಿಟಿ ಯೋಜನೆಯಡಿ ವ್ಯಾಕ್ಸಿನ್ ಡಿಪೋದಲ್ಲಿ ಕೈಗೆತ್ತಿಕೊಂಡ ಯಾವುದೇ ಕಾಮಗಾರಿಗಳಿಗೆ ಅಧಿಕಾರಿಗಳು ಆರೋಗ್ಯ ಇಲಾಖೆಗೆ ಮಾಹಿತಿ ನೀಡಿಲ್ಲ, ಅನುಮತಿಯನ್ನೂ ಪಡೆದಿಲ್ಲ. ಅಕ್ರಮವಾಗಿ ನಡೆದಿರುವ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಪೊಲೀಸ್ ಪ್ರಕರಣ ದಾಖಲಾಗಿದೆ. `ನಾವು (ರಾಜ್ಯ ಸರ್ಕಾರ) ಈ ಸಮಸ್ಯೆಯನ್ನು ತಾರ್ಕಿಕ ಅಂತ್ಯಕ್ಕೆ ತರಬೇಕಾಗಿದೆ. ಪ್ರಕರಣದ ತನಿಖೆ ನಡೆಸಿ ಸತ್ಯಾಸತ್ಯತೆ ಬಯಲಿಗೆಳೆಯುವುದು ಪೊಲೀಸ್ ಇಲಾಖೆಯ ಮೇಲಿದೆ. ಸ್ಥಳವು ಹೇಗೆ ನಾಶವಾಯಿತು ಎಂಬುದನ್ನು ತೋರಿಸಲು ಹಲವಾರು ಪುರಾವೆಗಳಿವೆ. ಪೊಲೀಸರು ಮತ್ತು ನ್ಯಾಯಾಲಯ ಸಮಸ್ಯೆ ಬಗೆಹರಿಸಬೇಕು,'' ಎಂದರು.

ವ್ಯಾಕ್ಸಿನ್ ಡಿಪೋದಲ್ಲಿನ ಕಾಮಗಾರಿಗಾಗಿ ಸುಮಾರು 10 ಕೋಟಿ ರೂಪಾಯಿಗಳನ್ನು ಈಗಾಗಲೇ ಖರ್ಚು ಮಾಡಲಾಗಿದೆ. ಈ ಪ್ರಕ್ರಿಯೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮರಗಳನ್ನು ನೆಲಸಮ ಮಾಡಲಾಗಿದೆ. ವ್ಯಾಕ್ಸಿನ್ ಡಿಪೋದಲ್ಲಿ ನಡೆಯುತ್ತಿರುವ ಎಲ್ಲಾ ಕೆಲಸಗಳನ್ನು ಕೂಡಲೇ ನಿಲ್ಲಿಸಬೇಕೆಂದು ತಾಕೀತು ಮಾಡಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com