ಅಕ್ಕಿ ಹೊಂದಿಸಲು ಹರ ಸಾಹಸ: ನೆರವಿಗೆ ಬರದ ಕೇಂದ್ರ ಸರ್ಕಾರ; ಅನ್ನಭಾಗ್ಯ ಅಕ್ಕಿ ಪೂರೈಕೆ ಮತ್ತಷ್ಟು ವಿಳಂಬ!

ಬಡತನ ರೇಖೆಗಿಂತ ಕೆಳಗಿರುವ (ಬಿಪಿಎಲ್) ಕುಟುಂಬಗಳಿಗೆ ಮತ್ತು ಅಂತ್ಯೋದಯ ಅನ್ನ ಯೋಜನೆ (ಎಎವೈ) ಕಾರ್ಡ್ ಹೊಂದಿರುವವರಿಗೆ ತಲಾ 10 ಕೆಜಿ ಉಚಿತ ಅಕ್ಕಿ ನೀಡುವ ಕಾಂಗ್ರೆಸ್ ಸರ್ಕಾರದ ಅನ್ನ ಭಾಗ್ಯ ಯೋಜನೆ ಮತ್ತಷ್ಟು ವಿಳಂಬವಾಗುವ ಸಾಧ್ಯತೆಯಿದೆ.
ಸಿದ್ದರಾಮಯ್ಯ
ಸಿದ್ದರಾಮಯ್ಯ

ಬೆಂಗಳೂರು: ಬಡತನ ರೇಖೆಗಿಂತ ಕೆಳಗಿರುವ (ಬಿಪಿಎಲ್) ಕುಟುಂಬಗಳಿಗೆ ಮತ್ತು ಅಂತ್ಯೋದಯ ಅನ್ನ ಯೋಜನೆ (ಎಎವೈ) ಕಾರ್ಡ್ ಹೊಂದಿರುವವರಿಗೆ ತಲಾ 10 ಕೆಜಿ ಉಚಿತ ಅಕ್ಕಿ ನೀಡುವ ಕಾಂಗ್ರೆಸ್ ಸರ್ಕಾರದ ಅನ್ನ ಭಾಗ್ಯ ಯೋಜನೆ ಮತ್ತಷ್ಟು ವಿಳಂಬವಾಗುವ ಸಾಧ್ಯತೆಯಿದೆ.

‘ಅನ್ನ ಭಾಗ್ಯ’ ಯೋಜನೆಯಡಿ ಪ್ರತಿ ಫಲಾನುಭವಿಗೂ ತಿಂಗಳಿಗೆ ತಲಾ ಹತ್ತು ಕೆ.ಜಿ. ಅಕ್ಕಿ ವಿತರಿಸುವ ‘ಗ್ಯಾರಂಟಿ’ ಅನುಷ್ಠಾನಕ್ಕೆ ಅಕ್ಕಿ ಹೊಂದಿಸಲು ರಾಜ್ಯ ಸರ್ಕಾರಕ್ಕೆ ಸಾಧ್ಯವಾಗುತ್ತಿಲ್ಲ. ಇದರಿಂದಾಗಿ ಯೋಜನೆಯನ್ನು ಜುಲೈ ಬದಲಿಗೆ ಆಗಸ್ಟ್‌ನಿಂದ ಚಾಲನೆ ನೀಡುವ ಸಾಧ್ಯತೆ ದಟ್ಟವಾಗಿದೆ.

ಬೇರೆ ರಾಜ್ಯಗಳನ್ನು ಸಂಪರ್ಕಿಸಿ ಅಕ್ಕಿ ಖರೀದಿಸುವ ಮತ್ತು ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿ ಭಾರತ ಆಹಾರ ನಿಗಮದ ಮೂಲಕ ಅಕ್ಕಿ ಪಡೆಯುವ ರಾಜ್ಯ ಸರ್ಕಾರದ ಪ್ರಯತ್ನಗಳಿಗೆ ಯಶಸ್ಸು ಸಿಕ್ಕಿಲ್ಲ. ಕೇಂದ್ರ ಸರ್ಕಾರದ ಅಸಹಕಾರದಿಂದ ಇಕ್ಕಟ್ಟಿಗೆ ಸಿಲುಕಿರುವ ರಾಜ್ಯ ಸರ್ಕಾರ, ಯೋಜನೆ ಅನುಷ್ಠಾನವನ್ನು ತಿಂಗಳ ಮಟ್ಟಿಗೆ ಮುಂದೂಡುವ ತೀರ್ಮಾನಕ್ಕೆ ಬಂದಿದೆ.

ಪಂಜಾಬ್, ಛತ್ತೀಸ್‌ಗಢ, ಆಂಧ್ರಪ್ರದೇಶ, ತೆಲಂಗಾಣ ಮತ್ತು ಪಶ್ಚಿಮ ಬಂಗಾಳ (ಎಲ್ಲಾ ಬಿಜೆಪಿಯೇತರ ಆಡಳಿತವಿರುವ ರಾಜ್ಯಗಳು) ರಾಜ್ಯಗಳಿಂದ ಆಹಾರ ಧಾನ್ಯಗಳನ್ನು ಸಂಗ್ರಹಿಸುವ ಬಗ್ಗೆ ಸಿದ್ದರಾಮಯ್ಯ ಸರ್ಕಾರವು ಆಲೋಚನೆ ಹೊಂದಿದೆ. ಆದರೆ ಕರ್ನಾಟಕದ 2,28,000 ಮೆಟ್ರಿಕ್ ಟನ್‌ಗಳು ಅಗತ್ಯವನ್ನು ಪೂರೈಸಲು ಅವರಿಗೆ ಸಾಧ್ಯವಾಗುವುದಿಲ್ಲ ಜೊತೆಗೆ ಈ ಅಕ್ಕಿಗೆ ಹೆಚ್ಚಿನ  ಬೆಲೆ ತೆರಬೇಕಾಗುತ್ತದೆ.

ಬುಧವಾರ ನವದೆಹಲಿಯಲ್ಲಿ ಅಧ್ಯಕ್ಷ ದ್ರೌಪದಿ ಮುರ್ಮು ಅವರನ್ನು ಭೇಟಿ ಮಾಡಿದ ನಂತರ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಆಂಧ್ರದಲ್ಲಿಅಕ್ಕಿ ಲಭ್ಯವಿದೆ, ಆದರೆ ಕೆಜಿಗೆ 42 ರೂ. ಇದೆ.  ತೆಲಂಗಾಣದಲ್ಲಿ ಭತ್ತ ಮಾತ್ರ ಲಭ್ಯವಿದೆ ಎಂದು ತಿಳಿಸಿದ್ದಾರೆ. ಒಂದು ತಿಂಗಳಿಗೆ 1 ಲಕ್ಷ ಮೆಟ್ರಿಕ್ ಟನ್ ಅಕ್ಕಿಯನ್ನು ಮಾತ್ರ ಪೂರೈಸುವುದಾಗಿ  ಛತ್ತೀಸ್‌ಗಢ ಸಿಎಂ ನನಗೆ ತಿಳಿಸಿದ್ದಾರೆ ಮತ್ತು  ಅಧಿಕಾರಿಗಳೊಂದಿಗೆ ಚರ್ಚಿಸಿ  ಹೇಳುವುದಾಗಿ ಪಂಜಾಬ್ ಸಿಎಂ ಭರವಸೆ ನೀಡಿದ್ದಾರೆ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.

ಸರ್ಕಾರ ಮುಕ್ತ ಮಾರುಕಟ್ಟೆಗೆ ಹೋದರೆ ಅಕ್ಕಿ ಖರೀದಿಗೆ ಎರಡು ತಿಂಗಳು ಬೇಕು ಎಂದು ಸಿದ್ದರಾಮಯ್ಯ ಹೇಳಿದರು. ಬದಲಾಗಿ, ರಾಷ್ಟ್ರೀಯ ಸಹಕಾರಿ ಗ್ರಾಹಕರ ಒಕ್ಕೂಟ (ಎನ್‌ಸಿಸಿಎಫ್), ರಾಷ್ಟ್ರೀಯ ಕೃಷಿ ಸಹಕಾರಿ ಮಾರುಕಟ್ಟೆ ಒಕ್ಕೂಟ (ಎನ್‌ಎಎಫ್‌ಇಡಿ) ಮತ್ತು ಕೇಂದ್ರೀಯ ಭಂಡಾರ್‌ನಂತಹ ಕೇಂದ್ರೀಯ ಸಂಸ್ಥೆಗಳಿಂದ ಖರೀದಿಸಲು ಸರ್ಕಾರ ಯತ್ನಿಸುತ್ತಿದೆ ಎಂದಿದ್ದಾರೆ.

ಈ ಏಜೆನ್ಸಿಗಳು ಟೆಂಡರ್ ಕರೆದು, ಬೆಲೆ ನಿಗದಿ ಪಡಿಸಿ ಕರ್ನಾಟಕ ಸರ್ಕಾರಕ್ಕೆ ಶೀಘ್ರದಲ್ಲೇ ತಿಳಿಸುತ್ತವೆ. ಆದರೆ ಬೆಲೆಯು ಎಫ್‌ಸಿಐನ  ಬೆಲೆಗಿಂತ ಸ್ವಲ್ಪ ಹೆಚ್ಚು ಎಂದು ನಿರೀಕ್ಷಿಸಲಾಗಿದೆ. ಇದೆಲ್ಲವೂ ಕೇಂದ್ರ ಸರ್ಕಾರದ ರಾಜಕೀಯ ಎಂದು ಸಿದ್ದರಾಮಯ್ಯ ಪುನರುಚ್ಚರಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com