ಅಧಿಕಾರಿಗಳ ಮನೆಗಳೂ ಹೀಗೇ ಇದೆಯಾ?: ಶಾಲೆಗಳಲ್ಲಿನ ಶೌಚಾಲಯ ಪರಿಸ್ಥಿತಿ ಶೋಚನೀಯ, ಮೂಲಸೌಕರ್ಯಗಳ ಬಗ್ಗೆ ಹೈಕೋರ್ಟ್ ಗರಂ  

ರಾಜ್ಯ ಸರ್ಕಾರಿ ಶಾಲೆಗಳ ಮೂಲಸೌಕರ್ಯ ವರದಿಯ ಬಗ್ಗೆ ಹೈಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
ಹೈಕೋರ್ಟ್
ಹೈಕೋರ್ಟ್
Updated on

ಬೆಂಗಳೂರು:  ರಾಜ್ಯ ಸರ್ಕಾರಿ ಶಾಲೆಗಳ ಮೂಲಸೌಕರ್ಯ ವರದಿಯ ಬಗ್ಗೆ ಹೈಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಆರ್ ಟಿಇ ನಿಯಮಗಳ ಅನುಸಾರವಾಗಿ ಸರ್ಕಾರಿ ಶಾಲೆಗಳಲ್ಲಿ ಶೌಚಾಲಯವೇ ಮೊದಲಾದ ಮೂಲಸೌಕರ್ಯ ಒದಗಿಸುವ ನಿಟ್ಟಿನಲ್ಲಿ ಸರ್ಕಾರದ ನಿಷ್ಕ್ರಿಯತೆ ಬಗ್ಗೆ ಹೈಕೋರ್ಟ್ ಅಸಮಾಧಾನಗೊಂಡಿದೆ.

ಇಂತಹ ಪರಿಸ್ಥಿತಿಯಲ್ಲಿರುವ ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ಕಳಿಸುವುದಕ್ಕೆ ಪೋಷಕರು ಹಿಂಜರಿಯುತ್ತಾರೆ ಎಂದು ಸಿಜೆ ಪ್ರಸನ್ನ ಬಿ ವರಾಳೆ ಹಾಗೂ ನ್ಯಾ.ಎಂಜೆಎಸ್ ಕಮಲ್ ಅವರಿದ್ದ ಪೀಠ ಹೇಳಿದೆ. ಶಾಲೆಗಳನ್ನು ಅರ್ಧಕ್ಕೆ ಬಿಡುತ್ತಿರುವವರ ಕುರಿತು ಮಾಧ್ಯಮಗಳ ವರದಿಯನ್ನಾಧರಿಸಿ ತನ್ನದೇ ಆದ ಪಿಐಎಲ್ ನ ವಿಚಾರಣೆಯನ್ನು ನ್ಯಾಯಪೀಠ ನಡೆಸಿದ್ದು, ಶಾಲೆಗಳ ದುಸ್ಥಿತಿ ಮನಸಾಕ್ಷಿಯನ್ನು ಚುಚ್ಚಿದೆ ಎಂದು ಹೇಳಿದೆ.

ಸರಕಾರ ಸಲ್ಲಿಸಿದ ವರದಿ ಹಾಗೂ ಛಾಯಾಚಿತ್ರಗಳನ್ನು ಪರಿಶೀಲಿಸಿದ ಪೀಠಕ್ಕೆ ಶೌಚಾಲಯದ ಸುತ್ತಮುತ್ತ ಗಿಡ-ಗಂಟಿಗಳು ಬೆಳೆದಿದ್ದ ಶಾಲೆಗಳ ಸ್ಥಿತಿ ಅತ್ಯಂತ ದಯನೀಯವಾಗಿರುವುದನ್ನು ಕಂಡಿದೆ. ಈ ರೀತಿ ವರದಿ ಸಲ್ಲಿಸಿರುವ ಅಧಿಕಾರಿಗಳ ಮನೆಗಳಲ್ಲಿಯೂ ಇದೇ ಆಗಿದೆಯೇ ಎಂದು ತೀಕ್ಷ್ಣವಾಗಿ ನ್ಯಾಯಪೀಠ ಪ್ರಶ್ನಿಸಿದೆ.

ಶಾಲೆಗಳಲ್ಲಿ ಮೂಲಭೂತ ಅವಶ್ಯಕತೆಗಳು ಲಭ್ಯವಿಲ್ಲದಿದ್ದರೆ ಯಾವ ರೀತಿಯ ಸಮಾಜ ಅಭಿವೃದ್ಧಿಯಾಗುತ್ತದೆ? ಎಂದು ಹೈಕೋರ್ಟ್ ಕೇಳಿದೆ. ವರದಿ ಸಲ್ಲಿಸಿದ ಅಧಿಕಾರಿಗಳು ತಮ್ಮ ಮಕ್ಕಳನ್ನು ಅಂತಹ ಶಾಲೆಗಳಿಗೆ ಕಳುಹಿಸುತ್ತಾರೆಯೇ ಎಂದು ನ್ಯಾಯಮೂರ್ತಿ ಎಂಜಿಎಸ್ ಕಮಲ್ ಕೇಳಿದ್ದಾರೆ. ಅಧಿಕಾರಿಗಳು ‘ಚಲ್ತಾ ಹೈ’ ಧೋರಣೆ ತೋರುತ್ತಿದ್ದಾರೆ ಎಂದು ನ್ಯಾಯಪೀಠ ಅಸಮಾಧಾನಗೊಂಡಿದೆ. 

2013 ರಿಂದಲೂ ಪಿಐಎಲ್ ವಿಚಾರಣೆ ನಡೆಯುತ್ತಿದ್ದು, ಪರಿಸ್ಥಿತಿಯಲ್ಲಿ ಯಾವುದೇ ಬದಲಾವಣೆಗಳೂ ಇಲ್ಲ. ಸರ್ಕಾರಿ ಶಾಲೆಗಳಲ್ಲಿನ ಪರಿಸ್ಥಿತಿಯಿಂದಾಗಿ ದೇಶದ ಭವಿಷ್ಯ ಅಪಾಯದಲ್ಲಿದೆ ಎಂದು ನ್ಯಾಯಪೀಠ ಆಕಂತ ವ್ಯಕ್ತಪಡಿಸಿದೆ. ಮುಂದಿನ ಮೂರು ತಿಂಗಳಲ್ಲಿ ಸರಕಾರಿ ಶಾಲೆಗಳ ಹೊಸ ಸಮೀಕ್ಷೆ ನಡೆಯಬೇಕು ಮತ್ತು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರಗಳ ಸದಸ್ಯ ಕಾರ್ಯದರ್ಶಿಗಳು ಇದರಲ್ಲಿ ಭಾಗಿಯಾಗಬೇಕು ಎಂದು ಹೈಕೋರ್ಟ್ ನಿರ್ದೇಶನ ನೀಡಿದೆ.

ಪಿಐಎಲ್‌ನ ಮುಂದಿನ ವಿಚಾರಣೆಯಲ್ಲಿ ಸರ್ಕಾರ ಸಲ್ಲಿಸಿದ ವರದಿಗೆ ಕಾನೂನು ಸೇವಾ ಪ್ರಾಧಿಕಾರದ ಅಧಿಕಾರಿಗಳು ಕಡ್ಡಾಯವಾಗಿ ಕೌಂಟರ್‌ಸೈನ್ ಮಾಡಬೇಕು ಎಂದು ನಿರ್ದೇಶಿಸಿದೆ. ಈ ನಿರ್ದೇಶನಗಳನ್ನು ರಾಜ್ಯದ ಮುಖ್ಯ ಕಾರ್ಯದರ್ಶಿ ಹಾಗೂ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಗಮನಕ್ಕೆ ತರಬೇಕು ಎಂದು ನ್ಯಾಯಾಲಯ ಸೂಚಿಸಿ ವಿಚಾರಣೆಯನ್ನು ಮುಂದೂಡಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com