ಖಾಲಿ ಇರುವ 58 ಸಾವಿರ ಶಿಕ್ಷಕರ ಹುದ್ದೆಗಳ ಭರ್ತಿ ಶೀಘ್ರದಲ್ಲೆ: ಶಿಕ್ಷಣ ಸಚಿವ ಮಧು ಬಂಗಾರಪ್ಪ
ಮೇ 29 ರಂದು ಕರ್ನಾಟಕದಲ್ಲಿ ಶಾಲೆಗಳು ಅಧಿಕೃತವಾಗಿ ಪುನರಾರಂಭಗೊಂಡಿದ್ದರೂ, ಹಲವಾರು ಸರ್ಕಾರಿ ಶಾಲೆಗಳು ಇನ್ನೂ ಶಿಕ್ಷಕರ ಕೊರತೆಯನ್ನು ಎದುರಿಸುತ್ತಿವೆ. ಪ್ರಸ್ತುತ ರಾಜ್ಯದ ಪ್ರಾಥಮಿಕ, ಪ್ರೌಢ ಮತ್ತು ಪಿಯು ಕಾಲೇಜುಗಳಲ್ಲಿ 58 ಸಾವಿರ ಶಿಕ್ಷಕರ ಹುದ್ದೆಗಳು ಖಾಲಿ ಇವೆ.
Published: 10th June 2023 08:52 AM | Last Updated: 10th June 2023 02:16 PM | A+A A-

ಸಾಂದರ್ಭಿಕ ಚಿತ್ರ
ಬೆಂಗಳೂರು: ಮೇ 29 ರಂದು ಕರ್ನಾಟಕದಲ್ಲಿ ಶಾಲೆಗಳು ಅಧಿಕೃತವಾಗಿ ಪುನರಾರಂಭಗೊಂಡಿದ್ದರೂ, ಹಲವಾರು ಸರ್ಕಾರಿ ಶಾಲೆಗಳು ಇನ್ನೂ ಶಿಕ್ಷಕರ ಕೊರತೆಯನ್ನು ಎದುರಿಸುತ್ತಿವೆ. ಪ್ರಸ್ತುತ ರಾಜ್ಯದ ಪ್ರಾಥಮಿಕ, ಪ್ರೌಢ ಮತ್ತು ಪಿಯು ಕಾಲೇಜುಗಳಲ್ಲಿ 58 ಸಾವಿರ ಶಿಕ್ಷಕರ ಹುದ್ದೆಗಳು ಖಾಲಿ ಇವೆ. ಶಾಲೆಗಳಲ್ಲಿನ ಕೊರತೆಯನ್ನು ಶೀಘ್ರವಾಗಿ ಸಮಯ ನಿಗದಿಪಡಿಸಿ ಅದನ್ನು ತುಂಬಲು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ.
ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪ್ರತಿನಿಧಿಯೊಂದಿಗೆ ಮಾತನಾಡಿದ ಅವರು, ನಾವು ನ್ಯಾಯಾಲಯದಿಂದ ಕಾನೂನು ಅನುಮತಿಗಾಗಿ ಕಾಯುತ್ತಿದ್ದೇವೆ. ಎಲ್ಲಾ ದಾಖಲೆಗಳನ್ನು ಇಲಾಖೆಯ ಕಡೆಯಿಂದ ಮಾಡಲಾಗಿದೆ. ಹೈಕೋರ್ಟ್‌ನಿಂದ ಒಪ್ಪಿಗೆ ಪಡೆದ ತಕ್ಷಣ ಶಿಕ್ಷಕರ ನಿಯೋಜನೆ ಪ್ರಕ್ರಿಯೆಯನ್ನು ಪೂರ್ಣಗೊಳಿಸುತ್ತೇವೆ ಎಂದು ಹೇಳಿದರು.
ಈ ಹಿಂದೆ ವಿವಾಹಿತ ಮಹಿಳೆಯರು ತಮ್ಮ ತಂದೆಯ ಆದಾಯ ಪ್ರಮಾಣಪತ್ರವನ್ನು ಸಲ್ಲಿಸಿದ್ದರು. ಪತಿಯ ಆದಾಯ ಪ್ರಮಾಣಪತ್ರಕ್ಕೆ ಮಾತ್ರ ಅವಕಾಶವಿದೆ ಎಂದು ನಿಯಮ ಹೇಳಿರುವುದರಿಂದ ಪಟ್ಟಿಯಲ್ಲಿ ಪರಿಗಣಿಸಲಾಗಿಲ್ಲ. ಹೈಕೋರ್ಟ್ ಮಧ್ಯಪ್ರವೇಶದ ನಂತರ, ಬಿಜೆಪಿ ಸರ್ಕಾರವು 15,000 ಖಾಲಿ ಹುದ್ದೆಗಳ ಪೈಕಿ 13,351 ನೇಮಕಾತಿಯನ್ನು ಪೂರ್ಣಗೊಳಿಸಿತ್ತು. ಆ ಬಳಿಕ ಮತ್ತೆ ಕೆಲವು ಅಭ್ಯರ್ಥಿಗಳು ನ್ಯಾಯಾಲಯದ ಮೊರೆ ಹೋಗಿದ್ದರು.
8,500 ಹಂಗಾಮಿ ಶಿಕ್ಷಕರ ನೇಮಕಾತಿಯನ್ನೂ ಇಲಾಖೆ ತೆರವುಗೊಳಿಸುತ್ತಿದೆ. ಆದಾಗ್ಯೂ, ಕ್ರಮೇಣ ಹೆಚ್ಚಿನ ಶಿಕ್ಷಕರನ್ನು ಕಾಯಂ ಆಗಿ ನೇಮಕ ಮಾಡಿಕೊಳ್ಳುವ ಅಗತ್ಯವಿದೆ. ಆದ್ಯತೆಯ ಮೇಲೆ ಸಮಸ್ಯೆಯನ್ನು ಪರಿಹರಿಸುವ ಗುರಿಯನ್ನು ಸರ್ಕಾರ ಹೊಂದಿದೆ ಎಂದು ಅವರು ತಿಳಿಸಿದರು.
ಸುಮಾರು 87 ಸಾವಿರ ಶಿಕ್ಷಕರು ವರ್ಗಾವಣೆಗೆ ಅರ್ಜಿ ಸಲ್ಲಿಸಿದ್ದು, ಕೇವಲ 20 ಸಾವಿರ ಮಂದಿ ಅರ್ಹರಿದ್ದಾರೆ. ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ಏಕೆ ತೆರವುಗೊಳಿಸಲಿಲ್ಲ. ಶಾಲೆಗಳು ಮೇ ಅಂತ್ಯದ ವೇಳೆಗೆ ಪ್ರಾರಂಭವಾಗಲು ಸಿದ್ಧವಾಗಿವೆ, ಅವರು ಅದನ್ನು ಮಾರ್ಚ್‌ನಲ್ಲಿ ಮಾಡಬಹುದಿತ್ತು. ಪ್ರಸ್ತುತ ಸರ್ಕಾರ ವರ್ಗಾವಣೆಗೆ ಅನುಮೋದನೆ ನೀಡಿದ್ದು, ಆದಷ್ಟು ಬೇಗ ಅನುಷ್ಠಾನಕ್ಕೆ ಒತ್ತಾಯಿಸಲಾಗುವುದು ಎಂದು ಸಚಿವರು ಹೇಳಿದರು.