ಬಲವಂತದ ಮತಾಂತರ, ಗೋಹತ್ಯೆ ತಡೆಗೆ ಸರ್ಕಾರ ಚಿಂತನೆ ಮಾಡಲಿ: ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಅಶೋಕ್ ಹಾರನಹಳ್ಳಿ 

ಬಲವಂತದ ಮತಾಂತರ ತಡೆಯುವುದಕ್ಕೆ ಹಾಗೂ ಗೋಹತ್ಯೆ ನಿಷೇಧ ಸೇರಿದಂತೆ ಧರ್ಮ ರಕ್ಷಣೆ ಮಾಡುವ ನಿಟ್ಟಿನಲ್ಲಿ ಈಗಿನ ಸರ್ಕಾರ ಚಿಂತನೆ  ಮಾಡಬೇಕು ಎಂದು ಅಶೋಕ್ ಹಾರನಹಳ್ಳಿ ಹೇಳಿದ್ದಾರೆ. 
ವಿಪ್ರಸಮುದಾಯದ ಶಾಸಕರಿಗೆ ಸನ್ಮಾನ ಕಾರ್ಯಕ್ರಮ
ವಿಪ್ರಸಮುದಾಯದ ಶಾಸಕರಿಗೆ ಸನ್ಮಾನ ಕಾರ್ಯಕ್ರಮ

ಬೆಂಗಳೂರು: ಬಲವಂತದ ಮತಾಂತರ ತಡೆಯುವುದಕ್ಕೆ ಹಾಗೂ ಗೋಹತ್ಯೆ ನಿಷೇಧ ಸೇರಿದಂತೆ ಧರ್ಮ ರಕ್ಷಣೆ ಮಾಡುವ ನಿಟ್ಟಿನಲ್ಲಿ ಈಗಿನ ಸರ್ಕಾರ ಚಿಂತನೆ  ಮಾಡಬೇಕು ಎಂದು ಅಶೋಕ್ ಹಾರನಹಳ್ಳಿ ಹೇಳಿದ್ದಾರೆ. 

ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಆಯ್ಕೆಯಾದ ಸಮುದಾಯದ ಶಾಸಕರಿಗೆ ಆಚಾರ್ಯ ಪಾಠಶಾಲೆಯ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಅಶೋಕ್ ಹಾರನಹಳ್ಳಿ ಮಾತನಾಡಿದರು.

ಬ್ರಾಹ್ಮಣರು ಯಾರದೇ ಮುಲಾಜಿಗೆ ಒಳಗಾಗಿಲ್ಲ. ನಮ್ಮ‌ ಸಮಾಜದವರು ಗೆದ್ದಿದ್ದಾರೆ. ಮುಂದೆ ಕೂಡ ಅವರು ಒಳ್ಳೆಯ ಹೆಸರು ಮಾಡಲಿ ಎನ್ನುವುದು ನಮ್ಮ‌ ಆಶಯವಾಗಿದೆ ಎಂದು ಅವರು ಹೇಳಿದರು. 

ಇದೇ ವೇಳೆ ಸಮುದಾಯದ ಅಭಿವೃದ್ಧಿ ಹಾಗೂ ಸರ್ಕಾರದ ಅನುದಾನದ ಬಗ್ಗೆಯೂ ಮಾತನಾಡಿದ ಅವರು, ಬ್ರಾಹ್ಮಣ ಸಮುದಾಯದ ಅಭಿವೃದ್ಧಿಗಾಗಿ ಘೋಷಿಸಲಾಗಿದ್ದ 5 ಕೋಟಿ ರೂಪಾಯಿ ಅನುದಾನವನ್ನು ಶೀಘ್ರವೇ ಬಿಡುಗಡೆ ಮಾಡುವ ನಿಟ್ಟಿನಲ್ಲಿ ಸರ್ಕಾರದ ಮೇಲೆ ಒತ್ತಡ ಹಾಕಿಬೇಕೆಂದು ಸಚಿವ ದಿನೇಶ್ ಗುಂಡೂರಾವ್ ಅವರನ್ನು ಬ್ರಾಹ್ಮಣ ಮಹಾಸಭಾದ ಅಧ್ಯಕ್ಷರಾದ ಅಶೋಕ್ ಹಾರನಹಳ್ಳಿ ಒತ್ತಾಯಿಸಿದ್ದಾರೆ.  

ಈ ಹಿಂದೆ ಕುಂದಾಪುರದಲ್ಲಿ ನಡೆದ ಬ್ರಾಹ್ಮಣ ಸಮುದಾಯದ ಸಮಾವೇಶದಲ್ಲಿ ಬಿಜೆಪಿ ಸರ್ಕಾರ 5 ಕೋಟಿ ರೂಪಾಯಿ ಅನುದಾನವನ್ನು ನೀಡುವುದಾಗಿ ಭರವಸೆ ನೀಡಿತ್ತು. ಆ ಬಳಿಕ ಕಾಂಗ್ರೆಸ್- ಜೆಡಿಎಸ್ ನೇತೃತ್ವದ ಸಮ್ಮಿಶ್ರ ಸರ್ಕಾರ, ಬಿಜೆಪಿ ಸರ್ಕಾರಗಳೂ ಭರವಸೆ ನೀಡಿದ್ದವು. ಆದರೆ ಈ ವರೆಗೂ ಸಮುದಾಯಕ್ಕೆ ಆ ಅನುದಾನ ಲಭ್ಯವಾಗಿಲ್ಲ. ಈಗ ರಾಜ್ಯದಲ್ಲಿ ಕಾಂಗ್ರೆಸ್ ಸ್ಪಷ್ಟ ಬಹುಮತ ಪಡೆದಿದ್ದು, ಸರ್ಕಾರದಿಂದ ಅನುದಾನ ಬಿಡುಗಡೆ ಮಾಡುವ ನಿಟ್ಟಿನಲ್ಲಿ ಸಚಿವ ದಿನೇಶ್ ಗುಂಡೂರಾವ್ ಕಾರ್ಯಪ್ರವೃತ್ತರಾಗಬೇಕು ಎಂದು ಅಶೋಕ್ ಹಾರನಹಳ್ಳಿ ಹೇಳಿದ್ದಾರೆ.

ಸಚಿವ ದಿನೇಶ್ ಗುಂಡೂರಾವ್ ಮಾತನಾಡಿ, ಶಾಸಕರ ಸಂಖ್ಯೆ ಕಡಿಮೆ ಇದ್ದಾಗಲೂ ಸಮಾಜದವರು ಒಗ್ಗಟ್ಟಾಗಿರಬೇಕು, ಸಂಘಟನೆ ವಿಚಾರದಲ್ಲಿ ಮಹಾಸಭಾದ ಅಧ್ಯಕ್ಷರಾದ ಅಶೋಕ್ ಹಾರನಹಳ್ಳಿ ಅತ್ಯುತ್ತಮ ಕೆಲಸ ಮಾಡುತ್ತಿದ್ದಾರೆ ನಮ್ಮ ಸರ್ಕಾರ ನಮ್ಮ ಸಮಾಜದ ಬೆಂಬಲಕ್ಕೆ ಇದೆ. ಹಿಂದಿನ ಸರ್ಕಾರ ಆಶ್ವಾಸನೆ ನೀಡಿದ್ದ ಅನುದಾನ ಈಗ ಬಿಡುಗಡೆಯಾಗುವಂತಾಗಲು ನಾನು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಒಳ್ಳೆಯ ಸಂಘಟನೆ ಮಾಡೋಣ ಎಂದು ತಿಳಿಸಿದರು.

ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದ ಯದುಗಿರಿ ಯತಿರಾಜ ಮಠದ   ನಾರಾಯಣ ಜಿಯರ್ ಶ್ರೀಗಳು, ಮಾತನಾಡಿ,  ತಿಮತಸ್ಥ ಆಚಾರ್ಯರು ಸರ್ವ ಜನಾಂಗವನ್ನು ಧರ್ಮದ ದಾರಿಯಲ್ಲಿ ನಡೆಸುವ ಪ್ರಚಾರ ಮಾಡಿದರು. ಶ್ರೀ ಶಂಕರ ಭಗವತ್ಪಾದರು ಹಾಕಿಕೊಟ್ಟ ಪರಂಪರೆಯನ್ನೇ ಮುಂದಿನ ಆಚಾರ್ಯರು ಸಮಾಜಕ್ಕೆ  ಸ್ಪಷ್ಟವಾದ ಸಂದೇಶದ ಮೂಲಕ ತಲುಪಿಸಿದರು, ಆಚಾರ್ಯ ತ್ರಯರ ಸಂದೇಶಗಳು ಒಗ್ಗಟ್ಟನ್ನು ಪ್ರತಿಪಾದಿಸಿವೆ ಎಂದು ಹೇಳಿದ್ದು, ಸಮುದಾಯದಿಂದ ಆಯ್ಕೆಯಾಗಿರುವ ಶಾಸಕರು ಒಳ್ಳೆಯ ಕೆಲಸಗಳನ್ನು ಮಾಡಲಿ ಎಂದು ಕರೆ ನೀಡಿದ್ದಾರೆ. 

ಶಾಸಕರಾದ ಆರ್ ವಿ ದೇಶಪಾಂಡೆ, ಸಿಕೆ ರಾಮಮೂರ್ತಿ, ಶ್ರೀವತ್ಸಾ, ದಿನೇಶ್ ಗುಂಡೂರಾವ್, ಉದಯ್ ಗರುಡಾಚಾರ್ ಸೇರಿದಂತೆ ಸಮುದಾಯದ ಶಾಸಕರಿಗೆ ಸನ್ಮಾನ ಮಾಡಲಾಯಿತು. ಬ್ರಾಹ್ಮಣರ ಪರಿಸ್ಥಿತಿಯ ಬಗ್ಗೆ ಐಎಎಸ್ ಅಧಿಕಾರಿ ನಿಯಾಜಖಾನ್ ಬರೆದ ಪುಸ್ತಕವನ್ನು ‌ವಿಪ್ರ ಶಾಸಕರಿಗೆ ನೀಡಲಾಯಿತು.   

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com