ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಶಕ್ತಿ ಯೋಜನೆ ಎಫೆಕ್ಟ್: 1 ಕೋಟಿ ದಾಟಿದ ಸರ್ಕಾರಿ ಬಸ್ ಗಳಲ್ಲಿನ ಪ್ರಯಾಣಿಕರ ಸಂಖ್ಯೆ!

ರಾಜ್ಯ ಸರ್ಕಾರ ಜಾರಿಗೆ ತಂದಿರುವ ಶಕ್ತಿ ಯೋಜನೆಯ ಪರಿಣಾಮ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನಾಲ್ಕು ನಿಗಮಗಳ ಪ್ರಯಾಣಿಕರ ಸಂಖ್ಯೆ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದೆ, ಈ ಹಿಂದೆ ಪ್ರತಿದಿನ  84.15 ಲಕ್ಷವಿದ್ದ ಪ್ರಯಾಣಿಕರ ಸಂಖ್ಯೆ ಈಗ 1 ಕೋಟಿ ದಾಟಿದೆ ಎಂದು ತಿಳಿದುಬಂದಿದೆ.

ಬೆಂಗಳೂರು: ರಾಜ್ಯ ಸರ್ಕಾರ ಜಾರಿಗೆ ತಂದಿರುವ ಶಕ್ತಿ ಯೋಜನೆಯ ಪರಿಣಾಮ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನಾಲ್ಕು ನಿಗಮಗಳ ಪ್ರಯಾಣಿಕರ ಸಂಖ್ಯೆ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದೆ, ಈ ಹಿಂದೆ ಪ್ರತಿದಿನ  84.15 ಲಕ್ಷವಿದ್ದ ಪ್ರಯಾಣಿಕರ ಸಂಖ್ಯೆ ಈಗ 1 ಕೋಟಿ ದಾಟಿದೆ ಎಂದು ತಿಳಿದುಬಂದಿದೆ.

ಈ ಕುರಿತು ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನಾಲ್ಕು ನಿಗಮಗಳ ಆರ್ಥಿಕ ಸಬಲೀಕರಣ ಕುರಿತಂತೆ ವರದಿ ನೀಡಲು ನೇಮಿಸಲಾಗಿದ್ದ ನಿವೃತ್ತ ಐಎಎಸ್‌ ಅಧಿಕಾರಿ ಎಂ.ಆರ್‌. ಶ್ರೀನಿವಾಸಮೂರ್ತಿ ಅವರು ಶನಿವಾರ ಕೆಎಸ್ಸಾರ್ಟಿಸಿ ಕೇಂದ್ರ ಕಚೇರಿಯಲ್ಲಿ ಸಚಿವ ರಾಮಲಿಂಗಾರೆಡ್ಡಿ ಅವರಿಗೆ ವರದಿ ಸಲ್ಲಿಸಿದರು.

ಈ ವೇಳೆ ಮಾತನಾಡಿದ ರಾಮಲಿಂಗಾರೆಡ್ಡಿ ಅವರು, ರಾಜ್ಯ ಸರ್ಕಾರ ಜಾರಿಗೆ ತಂದಿರುವ ಶಕ್ತಿ ಯೋಜನೆ ಯಶಸ್ವಿಯಾಗಿದೆ. ಪ್ರಯಾಣಿಕರ ಸಂಖ್ಯೆ ಹೆಚ್ಚಳವಾಗಿದ್ದು, ಅದರಿಂದ ಸಾರ್ವಜನಿಕ ಸಾರಿಗೆ ಅಭಿವೃದ್ಧಿ ಹೊಂದಲು ನೆರವಾಗಲಿದೆ. ನಿವೃತ್ತ ಐಎಎಸ್‌ ಅಧಿಕಾರಿ ಎಂ.ಆರ್‌. ಶ್ರೀನಿವಾಸಮೂರ್ತಿ ಅವರು ನೀಡಿರುವ ವರದಿಯಲ್ಲಿ ಸಾರಿಗೆ ನಿಗಮಗಳ ಸಬಲೀಕರಣಕ್ಕಾಗಿ ಹೊಸ ಬಸ್‌ಗಳ ಸೇರ್ಪಡೆ, ಪರಿಣಾಮಕಾರಿಯಾಗಿ ಮಾಹಿತಿ ತಂತ್ರಜ್ಞಾನ ಬಳಕೆ, ಕಾರ್ಮಿಕ ಸ್ನೇಹಿ ಕ್ರಮಗಳು, ಸಿಬ್ಬಂದಿ ನೇಮಕ ಸೇರಿದಂತೆ ಇತರ ವಿಷಯಗಳ ಕುರಿತಂತೆ ವರದಿ ನೀಡಲಾಗಿದೆ. ಅವುಗಳನ್ನು ಅಧ್ಯಯನ ಮಾಡಿ ಆದ್ಯತೆ ಮೇರೆಗೆ ಅನುಷ್ಠಾನಕ್ಕೆ ತರಲಾಗುವುದು ಎಂದು ಹೇಳಿದರು.

ಸಂಪನ್ಮೂಲ ನಗದೀಕರಣಕ್ಕಾಗಿ ಶೀಘ್ರದಲ್ಲಿ ಕ್ರಿಯಾ ಯೋಜನೆ ರೂಪಿಸಲಾಗುವುದು. ನಾಲ್ಕೂ ನಿಗಮಗಳ ವ್ಯಾಪ್ತಿಯಲ್ಲಿನ ಖಾಲಿ ಜಾಗಗಳನ್ನು ವಾಣಿಜ್ಯ ಉದ್ದೇಶಕ್ಕಾಗಿ ಬಳಸಿಕೊಂಡು ಆದಾಯ ಹೆಚ್ಚಿಸುವ ನಿಟ್ಟಿನಲ್ಲಿ ಯೋಜನೆ ರೂಪಿಸಲಾಗುವುದು. ಅವುಗಳನ್ನು ಕಾಲಮಿತಿಯೊಳಗೆ ಅನುಷ್ಠಾನಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಕೆಎಸ್ಸಾರ್ಟಿಸಿ ವ್ಯಾಪ್ತಿಯ ವಿಭಾಗ ಹಾಗೂ ಕಾರ್ಯಾಗಾರಗಳಲ್ಲಿ 460ಕ್ಕೂ ಹೆಚ್ಚಿನ ಹಳೇ ಬಸ್‌ಗಳನ್ನು ಪುನಶ್ಚೇತನಗೊಳಿಸಿರುವುದು ಶ್ಲಾಘನೀಯ. ಈ ಕಾರ್ಯವನ್ನು ಉಳಿದ ಮೂರು ನಿಗಮಗಳಲ್ಲೂ ಮಾಡಬೇಕು. ಬಸ್‌ ನಿಲ್ದಾಣಗಳಲ್ಲಿ ಸ್ವಚ್ಛತೆ ಕಾಪಾಡಿ, ಮೂಲಸೌಕರ್ಯ ಒದಗಿಸಲು ಕ್ರಮ ಕೈಗೊಳ್ಳಬೇಕು. ಅಧಿಕಾರಿಗಳು ಕಾಲಕಾಲಕ್ಕೆ ಬಸ್‌ ನಿಲ್ದಾಣಗಳಿಗೆ ತೆರಳಿ ಮೂಲಸೌಕರ್ಯ ವ್ಯವಸ್ಥಿತವಾಗಿದೆಯೇ ಎಂಬುದನ್ನು ಪರಿಶೀಲಿಸಬೇಕು ಎಂದು ಸೂಚಿಸಿದರು.

Related Stories

No stories found.

Advertisement

X
Kannada Prabha
www.kannadaprabha.com