ಮುಂಗಾರು ವಿಳಂಬ: ಮಳೆಗಾಗಿ ಮುಸ್ಲಿಂ ಬಾಂಧವರಿಂದ ಸಾಮೂಹಿಕ ಪ್ರಾರ್ಥನೆ
ಬೆಳಗಾವಿ: ಭಾಗಶಃ ಕೈಕೊಟ್ಟ ಮುಂಗಾರು ಮಳೆಯಿಂದ ಬೆಳಗಾವಿ ಸೇರಿದಂತೆ ಉತ್ತರ ಕರ್ನಾಟಕ ಭಾಗದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಹಲವಡೆ ಮಳೆಗಾಗಿ ದೇವರ ಮೊರೆ ಹೋಗುತ್ತಿದ್ದಾರೆ. ಇದರಂತೆ ಬೆಳಗಾವಿ ಜಿಲ್ಲೆಯ ಈದ್ಗಾ ಮೈದಾನದಲ್ಲಿ ಶನಿವಾರ ಮುಸ್ಲಿಂ ಬಾಂಧವರು ಮಳೆಗಾಗಿ ಸಾಮೂಹಿಕ ಪ್ರಾರ್ಥನೆ ನಡೆಸಿದರು.
ಮುಸ್ಲಿಂ ಧರ್ಮಗುರು ಮುಫ್ತಿ ಅಬ್ದುಲ್ ಅಜೀಜ್ ಖಾಜಿ ನೇತೃತ್ವದಲ್ಲಿ ಸಾಮೂಹಿಕ ಪ್ರಾರ್ಥನೆ ಏರ್ಪಡಿಸಲಾಗಿತ್ತು. ಪ್ರಾರ್ಥನೆ ವೇಳೆ ಹಲವರು ಕಣ್ಣೀರು ಹಾಕಿದ್ದು ಕಂಡು ಬಂದಿತು.
ಪ್ರಾರ್ಥನೆಯಲ್ಲಿ ಪಾಲ್ಗೊಂಡಿದ್ದ ಶಾಸಕ ಆಸೀಫ್ ಸೇಠ್ ಅವರು ಮಾತನಾಡಿ, ‘ಸಾಮಾನ್ಯವಾಗಿ ಮೇ ತಿಂಗಳಲ್ಲಿ ಮುಂಗಾರು ಆರಂಭವಾಗುತ್ತದೆ, ಆದರೆ, ಈ ಬಾರಿ ಜೂನ್ ಕೊನೆಯ ವಾರಕ್ಕೆ ಕಾಲಿಟ್ಟರೂ ಮಳೆಯಾಗುತ್ತಿಲ್ಲ. ನಗರಕ್ಕೆ ಕುಡಿಯುವ ನೀರು ಪೂರೈಸುವ ರಾಕಸಕೊಪ್ಪ ಮತ್ತು ಹಿಡಕಲ್ ಜಲಾಶಯಗಳು ಬಹುತೇಕ ಖಾಲಿಯಾಗಿವೆ. ಹೀಗಾಗಿ ಮಳೆಗಾಗಿ ದೇವರಲ್ಲಿ ಸಾಮೂಹಿಕ ಪ್ರಾರ್ಥನೆ ನಡೆಸುತ್ತಿದ್ದೇವೆ. ಇಂದು ಮಳೆಯಾಗದಿದ್ದರೆ, ಮುಂದಿನ ಮೂರು ದಿನಗಳವರೆಗೆ ಪ್ರಾರ್ಥನೆ ಮುಂದುವರಿಯುತ್ತದೆ ಎಂದು ಹೇಳಿದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ