ಮಹಾತ್ಮ ಗಾಂಧಿ ವಸ್ತ್ರೋದ್ಯಮ ಸ್ಥಾಪಿಸಿ, ಕೆಎಚ್‌ಡಿಸಿ ಪುನರುಜ್ಜೀವನಗೊಳಿಸಿ: ಸಿಎಂ ಸಿದ್ದರಾಮಯ್ಯಗೆ ನೇಕಾರರ ಆಗ್ರಹ

ಜುಲೈ 7ರ ರಾಜ್ಯ ಬಜೆಟ್‌ನಲ್ಲಿ ಹಣ ಮೀಸಲಿಡುವ ಮೂಲಕ ಕೈಮಗ್ಗ ನೇಕಾರರ ಪರಿಸ್ಥಿತಿ ಸುಧಾರಿಸಲು ಕ್ರಮಕೈಗೊಳ್ಳಬೇಕು ಎಂದು ನೇಕಾರರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿಕೊಂಡಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಜುಲೈ 7ರ ರಾಜ್ಯ ಬಜೆಟ್‌ನಲ್ಲಿ ಹಣ ಮೀಸಲಿಡುವ ಮೂಲಕ ಕೈಮಗ್ಗ ನೇಕಾರರ ಪರಿಸ್ಥಿತಿ ಸುಧಾರಿಸಲು ಕ್ರಮಕೈಗೊಳ್ಳಬೇಕು ಎಂದು ನೇಕಾರರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿಕೊಂಡಿದ್ದಾರೆ.

ಈ ಸಂಬಂಧ ಅಖಿಲ ಭಾರತ ಕೈಮಗ್ಗ ಸಂಸ್ಥೆಗಳ ಒಕ್ಕೂಟವು ಮುಖ್ಯಮಂತ್ರಿಗಳಿಗೆ ಪತ್ರವೊಂದನ್ನು ಬರೆದಿದ್ದು, ಪತ್ರದಲ್ಲಿ ಕೈಯಿಂದ ನೇಯ್ದ ಮತ್ತು ಖಾದಿ ಬಟ್ಟೆಯ ಉತ್ಪಾದಕರ ನಡುವೆ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುವ ಮಾರುಕಟ್ಟೆ ಮತ್ತು ಪರಿಸರ ಸ್ನೇಹಿ ಉದ್ಯಮವಾದ 'ಮಹಾತ್ಮ ಗಾಂಧಿ ವಸ್ತ್ರೋದ್ಯಮ'ವನ್ನು ಸ್ಥಾಪಿಸುವಂತೆ ಒತ್ತಾಯಿಸಿದ್ದಾರೆ. ಅಲ್ಲದೆ, ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮವನ್ನು (ಕೆಎಚ್‌ಡಿಸಿ) ಪುನಶ್ಚೇತನಗೊಳಿಸಿ ಕೈಮಗ್ಗ ಮತ್ತು ಜವಳಿ ಇಲಾಖೆಯ ನಿಯಮಗಳು ಮತ್ತು ನಿಬಂಧನೆಗಳ ಸಮಗ್ರ ಅಧ್ಯಯನ ಮತ್ತು ಪರಿಶೀಲನೆ ನಡೆಸುವಂತೆ ಆಗ್ರಹಿಸಿದ್ದಾರೆ.

ಕೈಮಗ್ಗ ನೇಕಾರರಿಗೆ ಜಾರಿಯಲ್ಲಿರು ಯೋಜನೆಗಳನ್ನು ಪರಿಶೀಲಿಸಿ, ಅನುಕೂಲಕರವಾಗಿದ್ದರೆ, ಅವುಗಳನ್ನು ಮುಂದುವರೆಸಿ. ಇಲ್ಲವೇ, ಮೂಲಭೂತ ಅಗತ್ಯವಾಗಿರುವ ಶೂನ್ಯ ಅಥವಾ ಕಡಿಮೆ ಬಡ್ಡಿಗೆ ಗೃಹ ಸಾಲ, ಶೂನ್ಯ ಬಡ್ಡಿಗೆ ಹೊಸ ಕೈಮಗ್ಗಗಳ ಖರೀದಿಗೆ ಸಾಲ, ನೇಕಾರಿಗೆ, ನೇಕಾರರ ಕುಟುಂಬಗಳಿಗೆ ಆರೋಗ್ಯ ವಿಮೆ, ನಿವೃತ್ತಿ ಪ್ರಯೋಜನೆಗಳು, ನೇಕಾರರ ಮಕ್ಕಳಿಗೆ ಉಚಿತ ಶಿಕ್ಷಣ ಇರುವಂತಹ ಹೊಸ ಯೋಜನೆಗಳನ್ನು ಜಾರಿಗೆ ತನ್ನಿ ಎಂದು ಪತ್ರದಲ್ಲಿ ತಿಳಿಸಿದ್ದಾರೆ.

ಇದಲ್ಲದೆ ನೇಕಾರರ ದುಃಸ್ಥಿತಿಗಳನ್ನೂ ಒಕ್ಕೂಟ ಪತ್ರದಲ್ಲಿ ಹೇಳಿಕೊಂಡಿದೆ. ನೇಕಾರರು ಪ್ರತೀನಿತ್ಯ ಸುಮಾರು 6-8 ಗಂಟೆಗಳ ಕಾಲ ಕೆಲಸ ಮಾಡುತ್ತಿದ್ದಾರೆ. ಆದರೂ, ದಿನಕ್ಕೆ ಕೇವಲ 200 ರೂ ಗಳಿಸುತ್ತಿದ್ದಾರೆ, ಇದು ಮೂಲ ಕನಿಷ್ಠ ಕೂಲಿಗಿಂತ ತುಂಬಾ ಕಡಿಮೆಯಿದೆ. ನಿರ್ಗತಿಕ ಸ್ಥಿತಿಗೆ ತಲುಪಿದ್ದಾರೆ. ಇದರಿಂದ ದುರ್ಬಲ ಮತ್ತು ಹತಾಶ ಸ್ಥಿತಿಗೆ ತಲುಪುತ್ತಿದ್ದಾರೆ. ಕೈಮಗ್ಗ ನೇಯ್ಗೆ ಸಂಪೂರ್ಣವಾಗಿ ಪರಿಸರ ಸ್ನೇಹಿ, ಮಾಲಿನ್ಯರಹಿತ ಮತ್ತು ಹವಾಮಾನ ಸ್ಥಿತಿಸ್ಥಾಪಕವಾಗಿದ್ದು, ಯುವಕರು ಮತ್ತು ವೃದ್ಧರಿಗೆ, ವಿಶೇಷವಾಗಿ ಮನೆಯಿಂದಲೇ ಕೆಲಸ ಮಾಡುವ ಮಹಿಳೆಯರಿಗೆ ಉದ್ಯೋಗಗಳ ಸೃಷ್ಟಿಸುವ ಸಾಮರ್ಥ್ಯ ಹೊಂದಿದೆ ಎಂದು ಹೇಳಿರುವುದಾಗಿ ತಿಳಿದುಬಂದಿದೆ.

ಮುಖ್ಯಮಂತ್ರಿಗಳಿಗೆ ಅಖಿಲ ಭಾರತ ಕೈಮಗ್ಗ ಸಂಸ್ಥೆಗಳ ಒಕ್ಕೂಟ ಬರೆದಿರುವ ಪತ್ರಕ್ಕೆ ರಂಗಭೂಮಿ ನಿರ್ದೇಶಕ ಮತ್ತು ಕಾರ್ಯಕರ್ತ ಪ್ರಸನ್ನ, ನಟ ಪ್ರಕಾಶ್ ರಾಜ್, ಸಮಾಜ ಸೇವಕ ಮತ್ತು ಬಂಜಾರ ಕಸುತಿ ಸಂಸ್ಥಾಪಕ ಆಶಾ ಪಾಟೀಲ್, ಫ್ಯಾಷನ್ ಡಿಸೈನರ್ ಪ್ರಸಾದ್ ಬಿಡಪ, ಸಾಮಾಜಿಕ ಡಾ.ಎ.ಆರ್.ವಾಸವಿ, ಪರಿಸರ ಹೋರಾಟಗಾರ ಲಿಯೋ ಸಲ್ಡಾನ್ಹಾ ಮತ್ತು ರಾಜ್ಯಾದ್ಯಂತ ನೂರಾರು ಕೈಮಗ್ಗ ಬೆಂಬಲಿಗರು ಬೆಂಬಲ ಸೂಚಿಸಿದ್ದಾರೆಂದು ಕರ್ನಾಟಕ ಅಖಿಲ ಭಾರತ ಕೈಮಗ್ಗ ಸಂಘಟನೆಗಳ ಒಕ್ಕೂಟದ ಸಂಚಾಲಕ ಶಾರದ ಗಣೇಶ್ ಅವರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com