ಡ್ರೋಣ್ ಖರೀದಿಯಲ್ಲಿ ಯಾವುದೇ ಅಕ್ರಮ ನಡೆದಿಲ್ಲ: ಕೇಂದ್ರ ಸಚಿವ ರಾಮದಾಸ್ ಅಠವಳೆ

ಡ್ರೋಣ್ ಗಳಿಗೆ ಇತರ ದೇಶಗಳು ನೀಡುತ್ತಿರುವ ಹಣಕ್ಕಿಂತ ನಾಲ್ಕು ಪಟ್ಟು ಹೆಚ್ಚು ಪಾವತಿಸಿ ಕೇಂದ್ರ ಸರ್ಕಾರ ಅಮೆರಿಕದಿಂದ 31 ಪ್ರಿಡೇಟರ್ ಡ್ರೋಣ್ ಗಳನ್ನು ಖರೀದಿಸುತ್ತಿದೆ ಎಂಬ ಕಾಂಗ್ರೆಸ್ ಆರೋಪವನ್ನು ಕೇಂದ್ರ...
ಕೇಂದ್ರ ಸಚಿವ ರಾಮದಾಸ್ ಅಠವಳೆ
ಕೇಂದ್ರ ಸಚಿವ ರಾಮದಾಸ್ ಅಠವಳೆ

ಬೆಂಗಳೂರು: ಡ್ರೋಣ್ ಗಳಿಗೆ ಇತರ ದೇಶಗಳು ನೀಡುತ್ತಿರುವ ಹಣಕ್ಕಿಂತ ನಾಲ್ಕು ಪಟ್ಟು ಹೆಚ್ಚು ಪಾವತಿಸಿ ಕೇಂದ್ರ ಸರ್ಕಾರ ಅಮೆರಿಕದಿಂದ 31 ಪ್ರಿಡೇಟರ್ ಡ್ರೋಣ್ ಗಳನ್ನು ಖರೀದಿಸುತ್ತಿದೆ ಎಂಬ ಕಾಂಗ್ರೆಸ್ ಆರೋಪವನ್ನು ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ರಾಜ್ಯ ಸಚಿವ ರಾಮದಾಸ್ ಅಠವಳೆ ಅವರು ಬುಧವಾರ ನಿರಾಕರಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ರಫೇಲ್ ಜೆಟ್ ಖರೀದಿಯಲ್ಲೂ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಇದೇ ರೀತಿಯ ಆರೋಪ ಮಾಡಿದ್ದರು. ನಂತರ ಹೇಳಿಕೆ ಸಂಬಂಧ ಸುಪ್ರೀಂ ಕೋರ್ಟ್‌ನಲ್ಲಿ ಕ್ಷಮೆಯಾಚಿಸಬೇಕಾಯಿತು ಎಂದು ಹೇಳಿದರು.

ಬಳಿಕ ಮಣಿಪುರ ಹಿಂಸಾಚಾರ ಕುರಿತು ಮಾತನಾಡಿದ ಅವರು, ಮಣಿಪುರದಲ್ಲಿ ಪರಿಸ್ಥಿತಿಯನ್ನು ತಿಳಿಗೊಳಿಸಲು ಕೇಂದ್ರ ಸರ್ಕಾರ ತೆಗೆದುಕೊಂಡಿರುವ ಕ್ರಮಗಳನ್ನು ಸಮರ್ಥಿಸಿಕೊಂಡರು.

ಕೇಂದ್ರ ಸಚಿವ ಅಮಿತ್ ಶಾ ಅವರು ಸರ್ವಪಕ್ಷ ಸಭೆ ನಡೆಸಿದ್ದಾರೆ. ನಾನು ಕೂಡ ರಾಜ್ಯಕ್ಕೆ ಭೇಟಿ ನೀಡಿ ಶಾಂತಿ ಮರುಸ್ಥಾಪಿಸಲು ಪ್ರಯತ್ನಿಸುತ್ತೇನೆ ಎಂದು ಹೇಳಿದರು.

2024ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ 320-325 ಸ್ಥಾನಗಳನ್ನು ಗೆಲ್ಲಲಿದೆ ಮತ್ತು ಎನ್‌ಡಿಎ 350ರ ಗಡಿ ದಾಟಲಿದೆ ಎಂದು ಇದೇ ವೇಳೆ ವಿಶ್ವಾಸ ವ್ಯಕ್ತಪಡಿಸಿದರು.

ಮೋದಿಯನ್ನು ಪದಚ್ಯುತಗೊಳಿಸಲು ಪ್ರತಿಪಕ್ಷಗಳು ಸಾಕಷ್ಟು ಪ್ರಯತ್ನ ನಡೆಸುತ್ತಿವೆ. ಆದರೆ, ನರೇಂದ್ರ ಮೋದಿ ಮತ್ತೊಮ್ಮೆ ದೇಶದ ಪ್ರಧಾನಿಯಾಗುತ್ತಾರೆಂದು ತಿಳಿಸಿದರು.

ಅನ್ನ ಭಾಗ್ಯ ಯೋಜನೆ ಅನುಷ್ಠಾನಗೊಳಿಸಲು ಕೇಂದ್ರವು ಕರ್ನಾಟಕಕ್ಕೆ ಅಕ್ಕಿ ನೀಡುತ್ತಿಲ್ಲ ಎಂಬ ಕಾಂಗ್ರೆಸ್ ಆರೋಪ ಕುರಿತು ಮಾತನಾಡಿ, ಈ ಬಗ್ಗೆ ನನಗೆ ಮಾಹಿತಿ ಇಲ್ಲ. ಭಾರತೀಯ ಆಹಾರ ನಿಗಮದೊಂದಿಗೆ ಮಾತುಕತೆ ನಡೆಸಲಾಗುವುದು ಎಂದರು.

“ದೇಶದಾದ್ಯಂತ ಭೂರಹಿತ ಬಡವರನ್ನು ಉನ್ನತೀಕರಣಕ್ಕೆ ಐದು ಎಕರೆ ಭೂಮಿಯನ್ನು ನೀಡಬೇಕು. ಸುಮಾರು 1 ಕೋಟಿ ಹೆಕ್ಟೇರ್ ಭೂಮಿಯನ್ನು ಸುಮಾರು 20 ಕೋಟಿ ಜನರಿಗೆ ಹಂಚಬಹುದು. ಈ ನಿಟ್ಟಿನಲ್ಲಿ ತಜ್ಞರ ಸಮಿತಿ ರಚಿಸುವಂತೆ ಸಿದ್ದರಾಮಯ್ಯ ಅವರಿಗೆ ಮನವಿ ಮಾಡುತ್ತೇನೆ ಎಂದು ಇದೇ ವೇಳೆ ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com