ಮಂಡ್ಯದಲ್ಲಿ ಪ್ರಧಾನಿ ಮೋದಿ ಭಾಷಣ
ಮಂಡ್ಯದಲ್ಲಿ ಪ್ರಧಾನಿ ಮೋದಿ ಭಾಷಣ

ರಾಷ್ಟ್ರದ ಬೆಳವಣಿಗೆ ನೋಡುವುದರಲ್ಲಿ ಯುವಕರು ಅಪಾರ ಹೆಮ್ಮೆ ಪಡುತ್ತಿದ್ದಾರೆ: ಮಂಡ್ಯದಲ್ಲಿ ಪ್ರಧಾನಿ ಮೋದಿ ಭಾಷಣ

ಕಳೆದ ಕೆಲವು ದಿನಗಳಿಂದ ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ವೇ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ನಮ್ಮ ರಾಷ್ಟ್ರದ ಬೆಳವಣಿಗೆಯನ್ನು ನೋಡುವುದರಲ್ಲಿ ಯುವಕರು ಅಪಾರ ಹೆಮ್ಮೆ ಪಡುತ್ತಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
Published on

ಮಂಡ್ಯ: ಕಳೆದ ಕೆಲವು ದಿನಗಳಿಂದ ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ವೇ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ನಮ್ಮ ರಾಷ್ಟ್ರದ ಬೆಳವಣಿಗೆಯನ್ನು ನೋಡುವುದರಲ್ಲಿ ಯುವಕರು ಅಪಾರ ಹೆಮ್ಮೆ ಪಡುತ್ತಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಗೆಜ್ಜಲಗೆರೆ ಕಾಲೋನಿಯಲ್ಲಿ ನಡೆಯುತ್ತಿರುವ ಸಮಾವೇಶದಲ್ಲಿ ಪಾಲ್ಗೊಂಡು ಜನರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಕಳೆದ ಕೆಲವು ದಿನಗಳಿಂದ ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ವೇ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ನಮ್ಮ ರಾಷ್ಟ್ರದ ಬೆಳವಣಿಗೆಯನ್ನು ನೋಡುವುದರಲ್ಲಿ ಯುವಕರು ಅಪಾರ ಹೆಮ್ಮೆ ಪಡುತ್ತಿದ್ದಾರೆ. ಈ ಎಲ್ಲಾ ಯೋಜನೆಗಳು ಸಮೃದ್ಧಿ ಮತ್ತು ಅಭಿವೃದ್ಧಿಯ ಹಾದಿಗಳನ್ನು ತೆರೆಯುತ್ತದೆ ಎಂದು ಹೇಳಿದರು.

ಭಾಷಣ ಆರಂಭದಲ್ಲಿ ಕನ್ನಡದಲ್ಲೇ ಭಾಷಣ ಆರಂಭಿಸಿದ ಅವರು, 'ತಾಯಿ ಭುವನೇಶ್ವರಿಗೆ ನಮಸ್ಕಾರಗಳು. ನಿಮ್ಮ ಪ್ರೀತಿಯ ಋಣ ಬಡ್ಡಿ ಸಮೇತ ನಮ್ಮ ಸರ್ಕಾರ ತೀರಿಸಲಿದೆ. ಕಳೆದ ಕೆಲವು ದಿನಗಳಿಂದ ಹೆದ್ದಾರಿ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿದೆ. ಸಾಮಾಜಿಕ ಜಾಲತಾಣದಲ್ಲೂ ದಶಪಥ ಹೆದ್ದಾರಿ ಬಗ್ಗೆ ಚರ್ಚೆ ಆಗುತ್ತಿದೆ. ಮೈಸೂರು-ಬೆಂಗಳೂರು ಹೆದ್ದಾರಿಯ ಫೋಟೋಗಳು ವೈರಲ್​ ಆಗಿವೆ. ಮೈಸೂರು-ಕುಶಾಲನಗರ 4 ಪಥದ ರಸ್ತೆಗೆ ಶಿಲಾನ್ಯಾಸ ನೆರವೇರಿಸಿದ್ದೇವೆ. ದಶಪಥ ಹೆದ್ದಾರಿಯಿಂದ ಈ ಭಾಗದಲ್ಲಿ ಸಾಕಷ್ಟು ಅನುಕೂಲವಾಗಲಿದೆ. ಈ ಪುಣ್ಯಭೂಮಿ ಕೃಷ್ಣರಾಜ ಒಡೆಯರ್, ವಿಶ್ವೇಶ್ವರಯ್ಯರನ್ನು ದೇಶಕ್ಕೆ ನೀಡಿದೆ. ಇಂದು ಭಾರತ ಸಾಕಷ್ಟು ಬದಲಾವಣೆ ಆಗುತ್ತಿದೆ. ಭಾರತ ಮಾಲಾ, ಸಾಗರ ಮಾಲಾ ಯೋಜನೆಯಿಂದ ದೇಶ ಅಭಿವೃದ್ಧಿ. ಮೂಲಭೂತ ಕ್ಷೇತ್ರದಲ್ಲಿ ಡಬಲ್​ ಇಂಜಿನ್​ ಸರ್ಕಾರದಿಂದ ಬದಲಾವಣೆ' ಎಂದರು.

ಒಂದು ವರ್ಷದಲ್ಲಿ  ಕರ್ನಾಟಕಕ್ಕೆ1 ಲಕ್ಷ ಕೋಟಿಗೂ ಅಧಿಕ ಹಣ ಬಿಡುಗಡೆ
ಕೆಲವು ಸಮಯಗಳಿಂದ ಕರ್ನಾಟಕದ ಬೇರೆ ಬೇರೆ ಪ್ರದೇಶದ ಜನತಾ ದರ್ಶನ ಮಾಡುವ ಅವಕಾಶ ಲಭಿಸಿದೆ. ಪ್ರತಿ ಸ್ಥಳದಲ್ಲೂ ಕರ್ನಾಟಕ ಜನತೆ ಅಭೂತಪೂರ್ವ ಬೆಂಬಲ ನೀಡಿದ್ದಾರೆ. ಅದರಲ್ಲೂ ಮಂಡ್ಯ ಜನರ ಆಶೀರ್ವಾದದ ಸವಿಯು ಮಾಧುರ್ಯದಿಂದ ಕೂಡಿದೆ.  ಮೂಲಸೌಕರ್ಯ ತನ್ನೊಂದಿಗೆ ಸೌಕರ್ಯವನ್ನಷ್ಟೇ ಅಲ್ಲ, ಉದ್ಯೋಗ, ವಸತಿ, ಗಳಿಕೆಯ ಹಾದಿಯನ್ನು ತರುತ್ತದೆ. ಕೇಂದ್ರವು ಒಂದು ವರ್ಷದಲ್ಲಿ  ಕರ್ನಾಟಕಕ್ಕೆ1 ಲಕ್ಷ ಕೋಟಿಗೂ ಅಧಿಕ ಹಣ ಬಿಡುಗಡೆ ಮಾಡಿದೆ. ಬೆಂಗಳೂರು  ತಂತ್ರಜ್ಞಾನಕ್ಕೆ ಪರಿಚಿತವಾದರೆ, ಮೈಸೂರು ತನ್ನ ಸಂಸ್ಕೃತಿಯ ಕಾರಣಕ್ಕೆ ಲೋಕ ಪರಿಚಿತ. ಕೃಷ್ಣರಾಜ ಒಡೆಯರ್‌ ಹಾಗೂ ಸರ್‌. ಎಂ ವಿಶ್ವೇಶ್ವರಯ್ಯ ಈ ಇಬ್ಬರು ಮಹಾಪುರುಷರನ್ನು ಈ ಪುಣ್ಯಭೂಮಿ ಭಾರತಕ್ಕೆ ನೀಡಿದೆ. ಇಂದು ಇವರ ಪರಿಶ್ರಮ ಹಾಗೂ ತಪಸ್ಸಿನ ಫಲದಿಂದ ಅಭೂತಪೂರ್ವ ಹೆದ್ದಾರಿ ನಿರ್ಮಾಣವಾಗಿದೆ. ಇಂತಹ ಮಹಾಪುರುಷರ ಪ್ರೇರಣೆಯಿಂದ ಇಂದು ದೇಶ ಅನೇಕ ಆಧುನಿಕ ಮೂಲ ಸೌಕರ್ಯಗಳನ್ನು ಕಾಣುತ್ತಿದೆ ಎಂದು ಹೇಳಿದರು.

ಡಿಸೆಂಬರ್​ನಲ್ಲಿ ಬೆಂಗಳೂರು-ಚೆನ್ನೈ ಎಕ್ಸ್ ಪ್ರೆಸ್ ವೇ ಉದ್ಘಾಟನೆ
ಸಾರ್ವಜನಿಕ ಸಮಾವೇಶದಲ್ಲಿ ಕೇಂದ್ರ ಭೂ ಸಾರಿಗೆ ಮತ್ತು ಹೆದ್ದಾರಿ ಇಲಾಖೆ ಸಚಿವ ನಿತಿನ್ ಗಡ್ಕರಿ ಮಾತನಾಡಿದ್ದು, ಕರ್ನಾಟಕ ಇತಿಹಾಸದಲ್ಲಿ ಇಂದು ಐತಿಹಾಸಿಕ ದಿನ. ಹೆದ್ದಾರಿ ನಿರ್ಮಾಣದ ವೇಳೆ ಹಳೆಯ ರಸ್ತೆಗಳನ್ನು ದುರಸ್ತಿಪಡಿಸಿದ್ದೇವೆ. 8 ಕಿ.ಮೀ. ಎಲಿವೇಟೆಡ್ ನಿರ್ಮಾಣ ಮಾಡಿದ್ದೇವೆ. ಮುಂದಿನ ದಿನಗಳಲ್ಲಿ ತಮಿಳುನಾಡಿಗೂ ಹೆದ್ದಾರಿ ಸಂಪರ್ಕ ಹೊಂದಲಿದೆ. ಕರ್ನಾಟಕದಲ್ಲಿ ಡಬಲ್​ ಇಂಜಿನ್​ ಸರ್ಕಾರದಿಂದ ಅಭಿವೃದ್ಧಿ ಪರ್ವ ಶುರುವಾಗಿದೆ. ಮೋದಿ ನೇತೃತ್ವದ ಸರ್ಕಾರ ಮೂಲ ಸೌಕರ್ಯಕ್ಕೆ ಹೆಚ್ಚು ಒತ್ತು ನೀಡಿದೆ. 20 ಸಾವಿರ ಕೋಟಿ ವೆಚ್ಚದಲ್ಲಿ ಬೆಂಗಳೂರು-ಚೆನ್ನೈ ಹೆದ್ದಾರಿ ನಿರ್ಮಾಣ ಮಾಡಲಾಗುತ್ತೆ. 2024ರ ಮಾರ್ಚ್​ ವೇಳೆಗೆ ಹೆದ್ದಾರಿ ನಿರ್ಮಾಣ ಕಾರ್ಯ ಪೂರ್ಣಗೊಳ್ಳಲಿದೆ ಎಂದರು.

ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ
ದಶಪಥ ಹೆದ್ದಾರಿಯಿಂದ ಪ್ರವಾಸೋದ್ಯಮ ಕ್ಷೇತ್ರ ಮತ್ತಷ್ಟು ಬೆಳೆಯಲಿದೆ. 2014ಕ್ಕಿಂತ ಮೊದಲು ದೇಶದ ಬಡವರ ಬಗ್ಗೆ ಕಾಳಜಿ ತೋರಿಸಲಿಲ್ಲ. ಬಡವರ ಹೆಸರಿನ ಯೋಜನೆಯಲ್ಲಿ ಕೋಟ್ಯಂತರ ಹಣ ಲೂಟಿ ಮಾಡಿದರು ಎಂದು ಕಾಂಗ್ರೆಸ್ ವಿರುದ್ಧ ಪ್ರಧಾನಮಂತ್ರಿ ನರೇಂದ್ರ ಮೋದಿ ತೀವ್ರ ವಾಗ್ದಾಳಿ ನಡೆಸಿದ್ದಾರೆ. 2014ರಲ್ಲಿ ದೇಶದ ಜನರು ನನಗೆ ಆಶೀರ್ವಾದ ನೀಡಿದರು. ದೇಶದ ಅಭಿವೃದ್ಧಿಗಾಗಿ 2014ರಲ್ಲಿ ಬಡವರ ಪರ ಸರ್ಕಾರ ಅಧಿಕಾರಕ್ಕೆ ಬಂತು. ಬಡವರ ಕಷ್ಟಗಳನ್ನು ಅರಿತುಕೊಂಡು ನಿವಾರಿಸಲು ಪ್ರಯತ್ನಿಸುತ್ತಿದ್ದೇವೆ. ಕಳೆದ 9 ವರ್ಷಗಳಲ್ಲಿ ಕೇಂದ್ರ ಯೋಜನೆಯಿಂದ ಬಡವರ ಬದುಕು ಹಸನಾಗಿದೆ ಎಂದರು.

ಇದಕ್ಕೂ ಮೊದಲು ಮೈಸೂರು-ಕುಶಾಲನಗರ ಹೆದ್ದಾರಿ ಕಾಮಗಾರಿಗೆ ಪ್ರಧಾನಿ ಮೋದಿ ಶಿಲಾನ್ಯಾಸ ನೆರವೇರಿಸಿದರು. 4128.92 ಕೋಟಿ ವೆಚ್ಚದ 92.33 ಕಿ.ಮೀ. ಉದ್ದದ ಹೆದ್ದಾರಿ ಕಾಮಗಾರಿಗೆ ಗೆಜ್ಜಲಗೆರೆ ಕಾಲೋನಿನ ಸಮಾವೇಶದಲ್ಲಿ ಶಿಲಾನ್ಯಾಸ ಮಾಡಿದ್ದಾರೆ. ಸಿಎಂ ಬೊಮ್ಮಾಯಿ, ಕೇಂದ್ರ ಸಚಿವರಾದ ನಿತಿನ್ ಗಡ್ಕರಿ, ಪ್ರಹ್ಲಾದ್ ಜೋಶಿ, ಸಂಸದರಾದ ಪ್ರತಾಪ್ ಸಿಂಹ, ಸುಮಲತಾ, ಸಚಿವರಾದ ಕೆ.ಗೋಪಾಲಯ್ಯ, ಕೆ.ಸಿ.ನಾರಾಯಣಗೌಡ, ಎಸ್.ಟಿ.ಸೋಮಶೇಖರ್ ಮತ್ತಿತರರು ಉಪಸ್ಥಿತರಿದ್ದರು.

ಎಕ್ಸ್​ಪ್ರೆಸ್​ ಹೈವೇ ಮಾಡೆಲ್​ ವೀಕ್ಷಿಸಿದ ಪ್ರಧಾನಿ ನರೇಂದ್ರ ಮೋದಿ
ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ಎಕ್ಸ್​ಪ್ರೆಸ್​ ಹೈವೇ ಕಾಮಗಾರಿ ಗ್ಯಾಲರಿ ವೀಕ್ಷಿಸಿದರು. ಈ ವೇಳೆ ಸಿಎಂ ಬೊಮ್ಮಾಯಿ, ಕೇಂದ್ರ ಸಚಿವರಾದ ಗಡ್ಕರಿ, ಜೋಶಿ ಉಪಸ್ಥಿತರಿದ್ದರು.

ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ ಹೈವೇ ಉದ್ಘಾಟಿಸಿದ ಪ್ರಧಾನಿ ಮೋದಿ
ಮಂಡ್ಯ ತಾಲೂಕಿನ ಹನಕೆರೆ ಗ್ರಾಮದ ಬಳಿ 118 ಕಿ.ಮೀ. ಉದ್ದದ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ ಹೈವೇಯನ್ನು ಪ್ರಧಾನಿ ಮೋದಿ ಅಧಿಕೃತವಾಗಿ ಲೋಕಾರ್ಪಣೆ ಮಾಡಿದ್ದಾರೆ. 8,479 ಕೋಟಿ ರೂ. ವೆಚ್ಚದಲ್ಲಿ ಎಕ್ಸ್‌ಪ್ರೆಸ್‌ ಹೈವೇ ನಿರ್ಮಾಣವಾಗಿದೆ. ಹೈವೇ ಉದ್ಘಾಟನೆ ವೇಳೆ ಪ್ರಧಾನಿ ಮೋದಿಗೆ ಕಲಾತಂಡಗಳಿಂದ ಸ್ವಾಗತ ಕೋರಲಾಯಿತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com