ಮತದಾರರ ಸೆಳೆಯಲು ಉಡುಗೊರೆಗಳ ಹಂಚಿದರೆ ಕಠಿಣ ಕ್ರಮ: ರಾಜಕೀಯ ಪಕ್ಷಗಳಿಗೆ ಜಿಲ್ಲಾಧಿಕಾರಿ ನಿತೇಶ್ ಎಚ್ಚರಿಕೆ

ರಾಜ್ಯ ವಿಧಾನಸಭಾ ಚುನಾವಣೆ ಹತ್ತಿರಬರುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ನಗದು, ಕುಕ್ಕರ್, ಗೃಹೋಪಯೋಗಿ ವಸ್ತುಗಳು, ಸೀರೆ, ಬಾಡೂಟ, ಉಚಿತ ಕೂಪನ್ ಸೇರಿದಂತೆ ಯಾವುದೇ ರೀತಿಯ ಉಡುಗೊರೆಗಳ ವಿತರಿಸುವುದನ್ನು ಚುನಾವಣಾ ಆಯೋಗ ನಿರ್ಬಂಧಿಸಿದೆ.
ಜಿಲ್ಲಾಧಿಕಾರಿ ನಿತೇಶ್ ನೇತೃತ್ವದಲ್ಲಿ ಸೋಮವಾರ ಬೆಳಗಾವಿಯಲ್ಲಿ ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಭೆ ನಡೆಯಿತು.
ಜಿಲ್ಲಾಧಿಕಾರಿ ನಿತೇಶ್ ನೇತೃತ್ವದಲ್ಲಿ ಸೋಮವಾರ ಬೆಳಗಾವಿಯಲ್ಲಿ ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಭೆ ನಡೆಯಿತು.
Updated on

ಬೆಳಗಾವಿ: ರಾಜ್ಯ ವಿಧಾನಸಭಾ ಚುನಾವಣೆ ಹತ್ತಿರಬರುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ನಗದು, ಕುಕ್ಕರ್, ಗೃಹೋಪಯೋಗಿ ವಸ್ತುಗಳು, ಸೀರೆ, ಬಾಡೂಟ, ಉಚಿತ ಕೂಪನ್ ಸೇರಿದಂತೆ ಯಾವುದೇ ರೀತಿಯ ಉಡುಗೊರೆಗಳ ವಿತರಿಸುವುದನ್ನು ಚುನಾವಣಾ ಆಯೋಗ ನಿರ್ಬಂಧಿಸಿದೆ. ಜಿಲ್ಲೆಯಲ್ಲಿ ಇಂತಹ ಚಟುವಟಿಕೆಗಳು ಕಂಡು ಬಂದಲ್ಲಿ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಎಚ್ಚರಿಸಿದ್ದಾರೆ.

ವಿಧಾನಸಭಾ ಚುನಾವಣೆ-2023 ರ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಸೋಮವಾರ ನಡೆದ ಮಾನ್ಯತೆ ಪಡೆದ ಹಾಗೂ ನೋಂದಾಯಿತ ಎಲ್ಲ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಹಾಗೂ ವಿಧಾನಸಭಾ ಮತಕ್ಷೇತ್ರಗಳ ಚುನಾವಣಾಧಿಕಾರಿಗಳ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ತಕ್ಷಣವೇ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಭಾರತ ಚುನಾವಣಾ ಆಯೋಗ ನೀಡಿರುವ ಕೆಲವೊಂದು ನಿರ್ದೇಶನಗಳನ್ನು ಎಲ್ಲ ರಾಜಕೀಯ ಪಕ್ಷಗಳು ಕಡ್ಡಾಯವಾಗಿ ಪಾಲಿಸತಕ್ಕದ್ದು, ಚುನಾವಣಾ ಸಂದರ್ಭದಲ್ಲಿ ಮತದಾರರಿಗೆ ಆಮಿಷಗಳನ್ನು ತಡೆಗಟ್ಟಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಚುನಾವಣಾ ಆಯುಕ್ತರು ಸೂಚಿಸಿದ್ದಾರೆ. ಆ ಪ್ರಕಾರ ಜಿಲ್ಲೆಯಾದ್ಯಂತ ನಿಗಾ ವಹಿಸಲಾಗಿದೆ ಎಂದು ಹೇಳಿದರು.

ಔತಣಕೂಟ, ಉಡುಗೊರೆ ನೀಡುವಂತಿಲ್ಲ...
ಶೀಘ್ರದಲ್ಲೇ ಚುನಾವಣೆ ಘೋಷಣೆಯಾಗುವ ನಿರೀಕ್ಷೆಯಿರುವುದರಿಂದ ನಗದು, ಕುಕ್ಕರ್, ಗೃಹೋಪಯೋಗಿ ವಸ್ತುಗಳು, ಸೀರೆ ಸೇರಿದಂತೆ ಯಾವುದೇ ರೀತಿಯ ಉಡುಗೊರೆ ವಿತರಿಸುವಂತಿಲ್ಲ. ಅಂತಹ ಚಟುವಟಿಕಗಳು ಕಂಡು ಬಂದಿದ್ದೇ ಆದರೆ, ಅವುಗಳನ್ನು ಮುಟ್ಟುಗೋಲು ಹಾಕುವುದರ ಜೊತೆಗೆ ಪ್ರಕರಣ ದಾಖಲಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಬಾಡೂಟ ನೀಡುವಂತಿಲ್ಲ, ನಾಟಕ ಪ್ರದರ್ಶನವನ್ನು ಏರ್ಪಡಿಸುವಂತಿಲ್ಲ, ಯಾವುದೇ ರೀತಿಯ ಕೂಪನ್, ಉಚಿತ ಟಿಕೆಟ್, ಉಚಿತ ಪೆಟ್ರೋಲ್ ಕೂಪನ್ ನೀಡುವುದು ಮತದಾರರಿಗೆ ಆಮಿಷ ಒಡ್ಡಿದಂತಾಗುತ್ತದೆ. ಆದ್ದರಿಂದ ಚುನಾವಣಾ ಆಯೋಗದ ನಿರ್ದೇಶನದ ಪ್ರಕಾರ ಇವುಗಳಿಗೂ ಅವಕಾಶ ನೀಡುವುದಿಲ್ಲ ಎಂದು ಜಿಲ್ಲಾಧಿಕಾರಿ ಸ್ಪಷ್ಟವಾಗಿ ತಿಳಿಸಿದರು.

ಗಡಿಭಾಗದಲ್ಲಿ ವಸ್ತುಗಳ ಸಾಗಾಣಿಕೆ ಮೇಲೆ ನಿಗಾ ವಹಿಸಲು ಚೆಕ್ ಪೋಸ್ಟ್ ಸ್ಥಾಪಿಸಲಾಗುವುದು. ಜಿಲ್ಲೆಯ ಯಾವುದೇ ಉಗ್ರಾಣಗಳಲ್ಲಿ ಕುಕ್ಕರ್, ಸೀರೆ, ಗೃಹಬಳಕೆಯ ವಸ್ತುಗಳ ಅಕ್ರಮ ದಾಸ್ತಾನು ಕಂಡುಬಂದರೆ ಅಂತಹ ವಸ್ತುಗಳನ್ನು ವಶಪಡಿಸಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ಜಿಲ್ಲೆಯಲ್ಲಿ ಮದ್ಯ ಸಾಗಾಣಿಕೆ ನಿಯಂತ್ರಣಕ್ಕೆ ಈಗಾಗಲೇ 21 ಚೆಕ್ ಪೋಸ್ಟ್ ಆರಂಭಿಸಲಾಗಿದೆ. ಮುಂಬರುವ ದಿನಗಳಲ್ಲಿ ಹೆಚ್ಚಿನ ಚೆಕ್‌ ಪೋಸ್ಟ್ ಆರಂಭಿಸಲಾಗುವುದು.

ಜಿಲ್ಲೆಯಲ್ಲಿ 33 ಜನರ ಗಡಿಪಾರು...
ಇದೂವರೆಗೆ ಜಿಲ್ಲೆಯಲ್ಲಿ 33 ಜನರನ್ನು ಗಡಿಪಾರು ಮಾಡಲಾಗಿದೆ. ಆದ್ದರಿಂದ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವ ಯಾವುದೇ ವ್ಯಕ್ತಿಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಪ್ರಚಾರ ಬ್ಯಾನರ್-ಅನುಮತಿ ಕಡ್ಡಾಯ...
ಬ್ಯಾನರ್ ಸೇರಿದಂತೆ ಯಾವುದೇ ರೀತಿಯ ಪ್ರಚಾರ ಸಾಮಗ್ರಿಗಳನ್ನು ಅಳವಡಿಸಲು ಮಹಾನಗರ ಪಾಲಿಕೆ, ನಗರ ಸ್ಥಳೀಯ ಸಂಸ್ಥೆಗಳು ಹಾಗೂ ಸಂಬಂಧಿಸಿದ ಗ್ರಾಮ ಪಂಚಾಯತಿಗಳಿಂದ ಕಡ್ಡಾಯವಾಗಿ ಅನುಮತಿಯನ್ನು ಪಡೆದುಕೊಳ್ಳಬೇಕು. ಅನುಮತಿ ಇಲ್ಲದೇ ಯಾವುದೇ ರೀತಿಯ ಬ್ಯಾನರ್ ಅಥವಾ ಪ್ರಚಾರ ಸಾಮಗ್ರಿಗಳನ್ನು ಅಂಟಿಸುವಂತಿಲ್ಲ. ಒಂದು ವೇಳೆ ನಿಯಮ ಉಲ್ಲಂಘಿಸಿದರೆ ಕ್ರಮ ಕೈಗೊಳ್ಳಲಾಗುವುದು. ಎಂದು ತಿಳಿಸಿದರು.

ಯಾವುದೇ ಸರಕಾರಿ ನೌಕರರು ಚುನಾವಣಾ ಪ್ರಚಾರ ಅಥವಾ ಒಂದು ಪಕ್ಷದ ಪರವಾಗಿ ಪ್ರಚಾರ ಮಾಡುವುದು ಕಂಡುಬಂದರೆ ಅಂತಹವರ ವಿರುದ್ಧ ಶಿಸ್ತುಕ್ರಮ ತೆಗೆದುಕೊಳ್ಳಲಾಗುತ್ತದೆ. ಜಿಲ್ಲೆಯಲ್ಲಿ 80 ವರ್ಷ ಪೂರ್ಣಗೊಳಿಸಿರುವ ಮತದಾರರನ್ನು ಗುರುತಿಸಿ ಅವರಿಗೆ ಪೋಸ್ಟಲ್ ಬ್ಯಾಲೆಟ್ ನೀಡಲಾಗುವುದು. ಸಾಮಾಜಿಕ ಜಾಲತಾಣಗಳ ಮೇಲೂ ನಿಗಾ ವಹಿಸಲು ಪ್ರತ್ಯೇಕವಾದ ತಂಡಗಳನ್ನು ರಚಿಸಲಾಗುವುದು. ಆದ್ದರಿಂದ ದ್ವೇಷಪೂರಿತ ವಿಷಯಗಳನ್ನು ಹಂಚಿಕೊಳ್ಳಬಾರದು. ಮಾದರಿ ನೀತಿಸಂಹಿತೆ ಶೀಘ್ರದಲ್ಲೇ ಜಾರಿಯಾಗಲಿದ್ದು, ಚುನಾವಣೆಗೆ ಸಂಬಂಧಿಸಿದಂತೆ ಅಧಿಕಾರಿಗಳ ನೇಮಕ, ತರಬೇತಿ ಸೇರಿದಂತೆ ಪ್ರತಿಯೊಂದು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು.

ಚುನಾವಣೆಗೆ ಸಂಬಂಧಿಸಿದಂತೆ ಯಾರಾದರೂ ಯಾವುದೇ ರೀತಿಯ ಲಂಚ ಅಥವಾ ಉಡುಗೊರೆಗಳನ್ನು ನೀಡುತ್ತಿದ್ದರೆ, ನೇರವಾಗಿ ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಠಾಧಿಕಾರಿ ಮತ್ತು ಪೊಲೀಸ್ ಆಯುಕ್ತರಿಗೆ ಮಾಹಿತಿ ನೀಡಬಹುದು. ಮುಕ್ತ, ನ್ಯಾಯಸಮ್ಮತ ಮತ್ತು ನಿರ್ಭೀತ ಚುನಾವಣೆ ನಡೆಸುವುದು ನಮ್ಮ ಪ್ರಮುಖ ಆದ್ಯತೆಯಾಗಿದೆ ಎಂದು ಪಾಟೀಲ್ ಹೇಳಿದರು.

ಸಭೆಯಲ್ಲಿ ಪೊಲೀಸ್ ಆಯುಕ್ತ ಎಂ ಬಿ ಬೋರಲಿಂಗಯ್ಯ, ಪೊಲೀಸ್ ವರಿಷ್ಠಾಧಿಕಾರಿ ಸಂಜೀವ್ ಪಾಟೀಲ್, ಜಿಪಂ ಸಿಇಒ ಹರ್ಷಲ್ ಭೋಯಾರ್ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

X
Open in App

Advertisement

X
Kannada Prabha
www.kannadaprabha.com