ಶಿವಾಜಿನಗರಕ್ಕೆ ಹೊಸ ರೂಪ; ಚಾಂದಿನಿ ಚೌಕ್‌ಗೆ ಸ್ಮಾರ್ಟ್ ಲುಕ್, ರಸೆಲ್ ಮಾರುಕಟ್ಟೆ ಚಿತ್ರಣವೇ ಬದಲು

ಸ್ಮಾರ್ಟ್ ಸಿಟಿ ಯೋಜನೆಯಡಿಯಲ್ಲಿ ಶಿವಾಜಿನಗರಕ್ಕೆ ಹೊಸ ರೂಪ ನೀಡಲಾಗಿದ್ದು, ಸಾಕಷ್ಟು ಬದಲಾವಣೆಗಳನ್ನು ತರಲಾಗಿದೆ. ಕಸ ಸುರಿಯುವ ತಾಣವಾಗಿದ್ದ ಚಾಂದಿನಿ ಚೌಕ್‌ ಇದೀಗ ಜನ ಸಮುದಾಯ ಸೇರುವ ತಾಣವಾಗಿ ಮಾರ್ಪಟ್ಟಿದೆ.
ನವೀಕೃತ ಶಿವಾಜಿನಗರ.
ನವೀಕೃತ ಶಿವಾಜಿನಗರ.
Updated on

ಬೆಂಗಳೂರು: ಸ್ಮಾರ್ಟ್ ಸಿಟಿ ಯೋಜನೆಯಡಿಯಲ್ಲಿ ಶಿವಾಜಿನಗರಕ್ಕೆ ಹೊಸ ರೂಪ ನೀಡಲಾಗಿದ್ದು, ಸಾಕಷ್ಟು ಬದಲಾವಣೆಗಳನ್ನು ತರಲಾಗಿದೆ. ಕಸ ಸುರಿಯುವ ತಾಣವಾಗಿದ್ದ ಚಾಂದಿನಿ ಚೌಕ್‌ ಇದೀಗ ಜನ ಸಮುದಾಯ ಸೇರುವ ತಾಣವಾಗಿ ಮಾರ್ಪಟ್ಟಿದೆ.

ಸುಮಾರು 200 ವರ್ಷ ಇತಿಹಾಸ ಹೊಂದಿರುವ ಚಾಂದಿನಿ ಚೌಕ್ ಶಿಥಿಲಾವಸ್ಥೆ ತಲುಪಿತ್ತು. 100 ವರ್ಷ ಹಳೆಯ ರಸೆಲ್ ಮಾರುಕಟ್ಟೆ, 200 ವರ್ಷದ ಸೇಂಟ್ ಮೇರಿಸ್ ಬೆಸಿಲಿಕಾ ಮತ್ತು 250 ವರ್ಷಗಳ ಹಿಂದಿನ ಬಾವಿ ಹೀಗೆ ಈ ಪ್ರದೇಶಗಳು ಕಸದಿಂದ ತುಂಬಿ ಹೋಗಿ, ಮೂಲ ಸೌಕರ್ಯ ಕೊರತೆ ಎದುರಿಸುತ್ತಿದ್ದವು.

ವ್ಯಾಪಾರ, ವಹಿವಾಟು, ಜನದಟ್ಟಣೆಯಿಂದ ಕೂಡಿದ ಈ ಪ್ರದೇಶದಲ್ಲಿ ಜನರು ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ಇತ್ತು. ಇದೀಗ ಬಿಬಿಎಂಪಿ, ಸ್ಮಾರ್ಟ್ ಸಿಟಿ, ಶಾಸಕರ ಅನುದಾನ ಬಳಕೆ ಮಾಡಿಕೊಂಡು ಸಂಪೂರ್ಣವಾಗಿ ಪುನಶ್ಚೇತನಗೊಳಿಸಲಾಗಿದೆ.

ಈ ಪ್ರದೇಶಗಳು ಇದೀಗ ಗುರುತು ಸಿಗದಷ್ಟು ಬದಲಾಗಿವೆ. 120 ಮೀಟರ್‌ ಉದ್ದ ಮತ್ತು 13 ಮೀಟರ್ ಅಗಲದ ಜಾಗದಲ್ಲಿ 8 ಪ್ಲಾಜಾಗಳನ್ನು ನಿರ್ಮಿಸಲಾಗಿದೆ. ಸೇಂಟ್ ಮೇರಿ ಬೆಸಿಲಿಕಾ ಚರ್ಚ್ ಎದುರಿನ ಮೊದಲ ಪ್ಲಾಜಾದಲ್ಲಿ ಎರಡು ಕಾರಂಜಿಗಳನ್ನು ನಿರ್ಮಿಸಲಾಗಿದೆ. ಅಲ್ಲಲ್ಲಿ ಕಾರಂಜಿಗಳು, ಆಸನ ವ್ಯವಸ್ಥೆಗಳು, ಶೌಚಾಲಯಗಳು, ವಾಹನ ನಿಲುಗಡೆ ತಾಣ, ಪೊಲೀಸ್ ಚೌಕಿ ನಿರ್ಮಾಣವಾಗಿವೆ. ಆಲಂಕಾರಿಕ ವಿದ್ಯುತ್ ದೀಪಗಳೊಂದಿಗೆ ಚಾಂದಿನಿ ಚೌಕ್‌ ಕಂಗೊಳಿಸುತ್ತಿದೆ. 35 ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದ್ದು, ಸುರಕ್ಷತೆಗೂ ಒತ್ತು ನೀಡಲಾಗಿದೆ. ಮತ್ತೊಂದು ಬದಿಯಲ್ಲಿ 50 ಅಡಿ ಎತ್ತರದ ಗಡಿಯಾರ ಗೋಪುರ ತಲೆ ಎತ್ತಿ ನಿಂತಿದೆ.

ರಸೆಲ್ ಮಾರ್ಕೆಟ್ ಟ್ರೇಡರ್ಸ್ ಅಸೋಸಿಯೇಷನ್‌ನ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಇದ್ರೀಸ್ ಚೌಧರಿ ಅವರು ಮಾತನಾಡಿ, ಈ ಮೊದಲು ಈ ಮಾರ್ಗವು ನರಕವೆಂಬಂತೆ ಭಾಸವಾಗುತ್ತಿತ್ತು. ಆದರೆ, ನವೀಕರಣದ ನಂತರ, ಮಾರ್ಗದಲ್ಲಿ ಸಾಕಷ್ಟು ಸುಧಾರಣೆಗಳು ಕಂಡು ಬಂದಿವೆ. ಮಳೆಗಾಲದಲ್ಲಿ ರಸ್ತೆಗಳು ಜಲಾವೃತವಾಗುತ್ತಿದ್ದವು, ಈಗ ಹಾಗಾಗುವುದಿಲ್ಲ. ಆದರೆ, ಇದೀಗ ಮುಂದೆ ಎದುರಾಗುವ ದೊಡ್ಡ ಸವಾಲೆಂದರೆ ನಿರ್ವಹಣೆಯಾಗಿದೆ ಎಂದು ಹೇಳಿದ್ದಾರೆ.

ರಸೆಲ್ ಮಾರುಕಟ್ಟೆಯ ಹೊರಗೆ ಬಣ್ಣ ಬಳಿಯಲಾಗಿದೆ ಮತ್ತು ನವೀಕರಿಸಲಾಗಿದೆ. ಆದರೆ, ಒಳಾಂಗಣದಲ್ಲಿ ಸಾಕಷ್ಟು ಬದಲಾವಣೆಯ ಅಗತ್ಯವಿದೆ. ಇದರಿಂದ ಬಿಬಿಎಂಪಿಗೆ ಆದಾಯವನ್ನು ಗಳಿಸಲು ಸಾಧ್ಯವಾಗುತ್ತದೆ ಎಂದು ತಿಳಿಸಿದ್ದಾರೆ.

ಶಿವಾಜಿನಗರಕ್ಕೆ ಹೋಗಬೇಕೆಂದರೆ ಈ ಹಿಂದೆ ಸಾಕಷ್ಟು ಸಮಸ್ಯೆಯಾಗುತ್ತಿತ್ತು. ಇನ್ನು ಕೆಲವೇ ದಿನಗಳಲ್ಲಿ ಶಿವಾಜಿನಗರ ರಸ್ತೆಗಳು ಸಂಚಾರಕ್ಕೆ ಸಿದ್ಧಗೊಳ್ಳಲಿದೆ. ಬಸ್ ನಿಲ್ದಾಣಗಳ ರಸ್ತೆಗಳು ಸಿದ್ಧಗೊಳ್ಳುತ್ತಿವೆ. ಒಮ್ಮೆ ಯೋಜನೆ ಪೂರ್ಣಗೊಂಡಿದ್ದೇ ಆದರೆ, ಈ ಸ್ಥಳವು ಪಾದಚಾರಿ ಸ್ನೇಹಿಯಾಗಲಿದೆ ಎಂದು ಶಾಸಕ ರಿಜ್ವಾನ್ ಅರ್ಷದ್ ಹೇಳಿದ್ದಾರೆ.

ಇಂದು ಶಿವಾಜಿನಗರ ಹಬ್ಬ
ಅರ್ಬನ್ ಪ್ಲಾಜಾದಲ್ಲಿ ಶನಿವಾರ ಶಿವಾಜಿನಗರ ಹಬ್ಬ ಆಯೋಜನೆ ಮಾಡಲಾಗಿದೆ. ಶನಿವಾರ ಸಂಜೆ 4ಕ್ಕೆ ಕಾರ್ಯಕ್ರಮ ಆರಂಭಗೊಳ್ಳಲಿದೆ. ಶಿವಾಜಿನಗರ ಹಬ್ಬವು ನಗರದ ವೈವಿಧ್ಯತೆಯನ್ನು ಸಂಭ್ರಮಿಸುವ ಮತ್ತು ವಿವಿಧ ಸಮುದಾಯಗಳ ಜನರನ್ನು ಒಟ್ಟುಗೂಡಿಸುವ ಸಾಂಸ್ಕೃತಿಕ ಹಬ್ಬವಾಗಿದೆ. ಈ ಕಾರ್ಯಕ್ರಮವು ಪ್ರಸಿದ್ಧ ಕಲಾವಿದರಿದ ಕಲಾ ಪ್ರದರ್ಶನ, ಆಹಾರ ಮಳಿಗೆಗಳು ಮತ್ತು ಇತರೆ ಸಾಂಸ್ಕೃತಿಕ ಚಟುವಟಿಕೆಗಳನ್ನು ಒಳಗೊಂಡಿರಲಿದೆ ಎಂದು ಹರ್ಷದ್ ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com