ಹುಬ್ಬಳ್ಳಿ: ಕಾಂಗ್ರೆಸ್ ಘೋಷಿಸಿರುವ ನಾಲ್ಕನೇ ಗ್ಯಾರಂಟಿ ಕಾರ್ಡ್ ಬೋಗಸ್ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಲೇವಡಿ ಮಾಡಿದ್ದು, ಸುಳ್ಳು ಹೇಳುವುದು ಕಾಂಗ್ರೆಸ್ ನ ಗುಣಧರ್ಮ ಎಂದು ವ್ಯಂಗ್ಯವಾಡಿದರು.
ಹುಬ್ಬಳ್ಳಿಯ ವಿಮಾನ ನಿಲ್ದಾಣದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜಸ್ಥಾನದಲ್ಲಿ ಪದವೀಧರರಿಗೆ ಪ್ರತಿ ತಿಂಗಳು ಮಾಶಾಸನ ಕೊಡುತ್ತೇವೆ ಎಂದಿದ್ದರು. ಇದುವರೆಗೂ ಕೊಟ್ಟಿಲ್ಲ. ಛತ್ತೀಸ್ ಗಢದಲ್ಲಿ 1,500 ರೂಪಾಯಿ ಕೊಡುತ್ತೇವೆಂದರು, ಅದನ್ನು ಕೊಡಲಿಲ್ಲ. ಹೀಗೆ ಅವರು ನಾಲ್ಕು ರಾಜ್ಯಗಳಲ್ಲಿ ಹೇಳಿದ ಹಾಗೇ ಎಲ್ಲಿಯೂ ನಡೆದುಕೊಂಡಿಲ್ಲ. ಕಾಂಗ್ರೆಸ್ ನ ಹುಸಿ ಭರವಸೆಗಳ ಪಟ್ಟಿಯನ್ನು ಶೀಘ್ರದಲ್ಲೇ ಬಿಡುಗಡೆ ಮಾಡುತ್ತೇವೆ ಎಂದು ಹೇಳಿದರು.
ಕಾಂಗ್ರೆಸ್ ನಾಯಕರು ಕರ್ನಾಟಕದ ಜನರನ್ನು ವಂಚಿಸಲು ದೊಡ್ಡ ಭರವಸೆಗಳನ್ನು ನೀಡುತ್ತಿದ್ದಾರೆ, ಆದರೆ, ಆ ಪಕ್ಷದ ತಂತ್ರಗಳನ್ನು ಜನರು ಅರ್ಥಮಾಡಿಕೊಂಡಿದ್ದಾರೆಂದು ತಿಳಿಸಿದರು.
ಕಾಂಗ್ರೆಸ್ ಸುಳ್ಳು ಭರವಸೆಗಳನ್ನು ನೀಡುತ್ತಿದೆ ಎಂಬುದಕ್ಕೆ ಸಾಕ್ಷ್ಯ ನೀಡುವುದಾದರೆ, ಹಿಂದೆ ಇವರೇ 2013ರಲ್ಲಿ ಹತ್ತು ಕೆಜಿ ಅಕ್ಕಿ ಕೊಡುತ್ತಿದ್ದರು. ಇವರು ಬಂದ ಮೇಲೆ 5 ಕೆಜಿ ಅಕ್ಕಿ ಕೊಡುವುದನ್ನು ನಿಲ್ಲಿಸಿದ್ದಾರೆ. ಚುನಾವಣೆ ಬಂದಾಗ ಏಳು ಕೆಜಿ ಅಕ್ಕಿಯನ್ನು ಸಿದ್ದರಾಮಯ್ಯ ಘೋಷಣೆ ಮಾಡಿದ್ದಾರೆ. ಕಾಂಗ್ರೆಸ್ ಚುನಾವಣೆ ಬಂದಾಗ ಬೋಗಸ್ ಪಾಲಿಸಿ ಮಾಡಿ, ಸುಳ್ಳು ಹೇಳುವಂತಹದ್ದು ಕಾಂಗ್ರೆಸ್ ನ ಗುಣಧರ್ಮ. ಕಾಂಗ್ರೆಸ್ ನಾಯಕರು ಜಾರಿ ಮಾಡಲಾಗದ ಭರವಸೆಗಳನ್ನು ನೀಡುತ್ತಿದ್ದಾರೆಂದು ಹೇಳಿದರು.
ಇದೇ ವೇಳೆ ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ವಿದೇಶಿ ನೆಲದಲ್ಲಿ ಭಾರತ ವಿರೋಧಿ ಹೇಳಿಕೆಗಳನ್ನು ನೀಡಿದ್ದರ ವಿರುದ್ಧ ಟೀಕೆ ಮಾಡಿದ ಬೊಮ್ಮಾಯಿ, ವಿದೇಶಿ ನೆಲದಲ್ಲಿ ರಾಷ್ಟ್ರದ ವಿರುದ್ಧ ಕೆಟ್ಟದಾಗಿ ಮಾತನಾಡುವ ವ್ಯಕ್ತಿಯಿಂದ ಕರ್ನಾಟಕದ ಬಗ್ಗೆ ಪ್ರೀತಿ ಮತ್ತು ಬದ್ಧತೆಯನ್ನು ಹೇಗೆ ನಿರೀಕ್ಷಿಸಬಹುದು? ಎಂದು ಪ್ರಶ್ನಿಸಿದರು.
Advertisement