
ಬೆಂಗಳೂರು: ನಟ-ರಾಜಕಾರಣಿ ಪ್ರಕಾಶ್ ರಾಜ್ ಇತ್ತೀಚಿಗೆ 2ನೇ ಹಂತದ ಅಪ್ಪು ಎಕ್ಸ್ ಪ್ರೆಸ್ ಆಂಬ್ಯುಲೆನ್ಸ್' ಗೆ ಚಾಲನೆ ನೀಡಿದ್ದಾರೆ. ಅವರ ಈ ಸೇವಾ ಕಾರ್ಯಕ್ಕೆ ಈ ಬಾರಿ ರಾಕಿಂಗ್ ಸ್ಟಾರ್ ಯಶ್, ಮೆಗಾಸ್ಟಾರ್ ಚಿರಂಜೀವಿ ಮತ್ತು ಕಾಲಿವುಡ್ ನ ಸೂರ್ಯ ಅವರು ನೆರವಾಗಿದ್ದಾರೆ.
ಈ ವಿಚಾರವನ್ನು ಪ್ರಕಾಶ್ ರಾಜ್ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋವೊಂದರ ಮೂಲಕ ಹಂಚಿಕೊಂಡಿದ್ದಾರೆ. ಸರಳ ಸಜ್ಜನಿಕೆ, ಉದಾರ ಮನಸ್ಸಿನಿಂದ, ಎಂದೆಂದಿಗೂ ಮರೆಯಲಾಗದ ನೆನಪಾಗಿರುವವರು ನಮ್ಮೆಲ್ಲರ ಕಣ್ಮಣಿ ಡಾ. ಪುನೀತ್ ರಾಜ್‌ಕುಮಾರ್ ಅವರು ಯಾವಾಗಲೂ ನಮ್ಮೊಂದಿಗೆ ಇರಬೇಕೆಂದರೆ ಅವರು ಮಾಡುತ್ತಿದ್ದ ಕೆಲಸಗಳನ್ನು ಮುಂದುವರಿಸುವುದರಿಂದ ಮಾತ್ರ ಸಾಧ್ಯ. ಆ ಆಶಯದಿಂದ, ಆ ಕನಸಿನಿಂದ ಶುರುವಾಗಿದ್ದು ಅಪ್ಪು ಎಕ್ಸ್‌ಪ್ರೆಸ್ ಆಂಬುಲೆನ್ಸ್. ಕರ್ನಾಟಕದ ಎಲ್ಲ ಜಿಲ್ಲೆಗಳಲ್ಲೂ ಒಂದೊಂದು ಈ ಆಂಬುಲೆನ್ಸ್ ಇರಬೇಕು ಎಂಬುದು ನನ್ನ ಮತ್ತು ನನ್ನ ಪ್ರಕಾಶ್ ರಾಜ್ ಫೌಂಡೇಷನ್‌ನ ಕನಸು ಎಂದಿದ್ದಾರೆ.
ಮೊದಲನೇ ಹಂತದಲ್ಲಿ ಮೈಸೂರಿನಿಂದ ಆಂಬ್ಯುಲೆನ್ಸ್ ಸೇವೆ ಪ್ರಾರಂಭಿಸಿದ್ದೇವೆ. 2ನೇ ಹಂತದಲ್ಲಿ ಬೀದರ್, ಕಲ್ಬುರ್ಗಿ, ಉಡುಪಿ, ಕೊಳ್ಳೇಗಾಲ ಮತ್ತು ಕೊಪ್ಪಳ ಜಿಲ್ಲೆಗಳಿಗೆ ಐದು ಆಂಬ್ಯುಲೆನ್ಸ್ ಒದಗಿಸಲಾಗುತ್ತಿದೆ. ಈ ಬಾರಿ ಮೆಗಾಸ್ಟಾರ್ ಚಿರಂಜೀವಿ ನಟ ಸೂರ್ಯ ಮತ್ತು ಯಶ್ ಮತ್ತು ಅವರ ಸ್ನೇಹಿತ ವೆಂಕಟ್ ಜೊತೆಯಲ್ಲಿದ್ದು, ಅವರ ಅಪಾರ ಔದಾರ್ಯಕ್ಕೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಅವರು ಹೇಳಿದ್ದಾರೆ.
'ಇದರ ಹಿಂದೆ ರಾಜಕಾರಣ ಇದೆಯಾ ಅಂತ ಕೇಳೋರು, ಕುಹಕ ಮಾತಾಡೋರು ಇರ್ತಾರೆ, ಇರಲಿ. ಹೌದು, ಇದು ರಾಜಕಾರಣನೇ. ನನ್ನ ಮತ್ತು ಯಶ್‌ನ ರಾಜಕಾರಣ. ಪ್ರೀತಿಯನ್ನು ಹಂಚುವ ಮಾನವೀಯತೆಯನ್ನು ಮೆರೆಯುವ, ನಮ್ಮೆಲ್ಲರ ಪ್ರೀತಿಯ ಪುನೀತ್ ರಾಜ್‌ಕುಮಾರ್ ಅವರನ್ನು ಸಂಭ್ರಮಿಸುವ ರಾಜಕಾರಣ' ಎಂದು ಪ್ರಕಾಶ್ ರಾಜ್ ತಿಳಿಸಿದ್ದಾರೆ.
Advertisement