ಭಜರಂಗ ದಳ ನಿಷೇಧಿಸುವ ಕಾಂಗ್ರೆಸ್‌‌ನ ಭರವಸೆ ಮುಸ್ಲಿಮರ ಓಲೈಕೆಗಾಗಿ: ಬಿಜೆಪಿ ನಾಯಕ ವಿ ಸುನೀಲ್‌ಕುಮಾರ್‌

ತಾವು ಅಧಿಕಾರಕ್ಕೆ ಬಂದರೆ ಬಜರಂಗ ದಳವನ್ನು ನಿಷೇಧಿಸಲಾಗುವುದು ಎಂಬ ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆಯಲ್ಲಿನ ಭರವಸೆಯನ್ನು ಖಂಡಿಸಿದ ಇಂಧನ ಸಚಿವ ವಿ ಸುನೀಲ್ ಕುಮಾರ್, ಇದು ಮುಸ್ಲಿಮರನ್ನು ಓಲೈಸುವ ಕ್ರಮವಾಗಿದೆ ಎಂದು ಹೇಳಿದರು.
ವಿ.ಸುನೀಲ್ ಕುಮಾರ್
ವಿ.ಸುನೀಲ್ ಕುಮಾರ್
Updated on

ಮಂಗಳೂರು: ತಾವು ಅಧಿಕಾರಕ್ಕೆ ಬಂದರೆ ಬಜರಂಗ ದಳವನ್ನು ನಿಷೇಧಿಸಲಾಗುವುದು ಎಂಬ ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆಯಲ್ಲಿನ ಭರವಸೆಯನ್ನು ಖಂಡಿಸಿದ ಇಂಧನ ಸಚಿವ ವಿ ಸುನೀಲ್ ಕುಮಾರ್, ಇದು ಮುಸ್ಲಿಮರನ್ನು ಓಲೈಸುವ ಕ್ರಮವಾಗಿದೆ ಎಂದು ಹೇಳಿದರು.

ಸರಣಿ ಟ್ವೀಟ್‌ ಮಾಡಿರುವ ಅವರು, ನಿಮ್ಮ ಹಿಂದು ವಿರೋಧಿ ನಿಲುವಿಗೆ ಧಿಕ್ಕಾರ. ಭಜರಂಗದಳ ಎನ್ನುವುದು ಸಮಾಜ ವಿರೋಧಿ ಸಂಘಟನೆಯಲ್ಲ. ಹಿಂದು ಸಮಾಜದ ರಕ್ಷಣೆಗಾಗಿ, ಗೋಮಾತೆಯ ಹಿತಕ್ಕಾಗಿ, ಹಿಂದು ಸೋದರಿಯರ ಮಾನ ಸಮ್ಮಾನ ಸಂರಕ್ಷಣೆಗಾಗಿ ಎಂಥ ತ್ಯಾಗಕ್ಕೂ ಸಿದ್ದವಾಗಿರುವ ಕಾರ್ಯಕರ್ತರ ಪಡೆ ಎಂದು ಹೇಳಿದ್ದಾರೆ.

ಭಜರಂಗ ದಳ ಹಾಗೂ ಪಿಎಫ್‌ಐ ಅನ್ನು ಒಂದೇ ತಕ್ಕಡಿಯಲ್ಲಿ ಅಳತೆ ಮಾಡುವ ಕಾಂಗ್ರೆಸಿಗರ ಮನಸು ರೋಗಗ್ರಸ್ಥವಾಗಿದೆ. ಪಿಎಫ್ಐ ಒಂದು ಭಯೋತ್ಪಾದಕ ಸಂಘಟನೆ ಎಂಬ ಕಾರಣಕ್ಕೆ ನಿಷೇಧ ಮಾಡಿದ್ದೇವೆ. ಭಜರಂಗದಳ ಹಿಂದೂ ಸಮಾಜ ಮತ್ತು ದೇಶ ಹಿತವನ್ನು ಬಯಸುವ ಸಂಘಟನೆ. ದೇಶಪ್ರೇಮವನ್ನು ಕಾಂಗ್ರೆಸ್ ನಿಷೇಧಿಸುತ್ತದೆಯೇ? ಎಂದಿದ್ದಾರೆ. 

ಬಜರಂಗದಳದ ರಾಜ್ಯ ಸಂಚಾಲಕ ಕುಮಾರ್ ಮಾತನಾಡಿ, ಸಂಘಟನೆಯು ಹಿಂದೂ ಧರ್ಮಕ್ಕಾಗಿ ಯಾವುದೇ ತ್ಯಾಗಕ್ಕೂ ಸಿದ್ಧವಿರುವ ಕಾರ್ಯಕರ್ತರ ತಂಡವಾಗಿದೆ. ಕಳೆದ ವರ್ಷ ಬಿಜೆಪಿ ಪಿಎಫ್‌ಐ ಅನ್ನು ನಿಷೇಧಿಸಿದ ಮಾತ್ರಕ್ಕೆ ಕಾಂಗ್ರೆಸ್ ಬಜರಂಗದಳವನ್ನು ನಿಷೇಧಿಸಲು ಬಯಸುತ್ತದೆಯೇ ಪ್ರಶ್ನಿಸಿದರು.

ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಕಾಂಗ್ರೆಸ್‌ಗೆ ದೇಶಭಕ್ತ ಸಂಘಟನೆ ಮತ್ತು ಸಮಾಜ ವಿರೋಧಿ ಸಂಘಟನೆಯ ನಡುವಿನ ವ್ಯತ್ಯಾಸವೇ ಗೊತ್ತಿಲ್ಲ ಎಂದರು.

ದಕ್ಷಿಣ ಕನ್ನಡ ಜಿಲ್ಲೆಯ ಬಿಜೆಪಿ ಶಾಸಕರು ಮತ್ತು ಮುಖಂಡರು ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಮಾಡಿದ ವಾಗ್ದಾನವನ್ನು ಖಂಡಿಸಿದರು.

ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಭರತ್‌ ವೈ ಶೆಟ್ಟಿ ಮಾತನಾಡಿ, ಕಾಂಗ್ರೆಸ್‌ ಸಂಪೂರ್ಣ ಹಿಂದೂ ವಿರೋಧಿ ಎಂಬುದು ಈ ಆಶ್ವಾಸನೆಯಿಂದ ಸಾಬೀತಾಗಿದೆ ಎಂದು ಹೇಳಿದರು. 

ಕಾಂಗ್ರೆಸ್ ಎಂದಿನಂತೆ ತುಷ್ಟೀಕರಣ ರಾಜಕಾರಣ ಮಾಡುತ್ತಿದೆ ಎಂದು ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ್ ಕಾಮತ್ ಹೇಳಿದರೆ, ಬಿಜೆಪಿ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಸುದರ್ಶನ್ ಮೂಡುಬಿದಿರೆ, ಈ ಭರವಸೆ ಕಾಂಗ್ರೆಸ್‌ನ ಮನಸ್ಥಿತಿಯನ್ನು ಬಯಲು ಮಾಡಿದೆ ಎಂದು ಹೇಳಿದರು.

ಈಮಧ್ಯೆ, ಬಜರಂಗ ದಳ ಸಂಘಟನೆಯನ್ನು ನಿಷೇಧಿಸುವ ಭರವಸೆಯ ವಿರುದ್ಧ ಮಂಗಳವಾರ ಸಂಜೆ ಜಿಲ್ಲಾ ಕಾಂಗ್ರೆಸ್ ಕಚೇರಿ ಎದುರು ಬಜರಂಗ ದಳದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಕಾಂಗ್ರೆಸ್ ನಡೆ ವಿರುದ್ಧ ಘೋಷಣೆಗಳನ್ನು ಕೂಗಿ, ಕಾಂಗ್ರೆಸ್ ಪ್ರಣಾಳಿಕೆ ಪ್ರತಿಯನ್ನು ಸುಟ್ಟು ಹಾಕಿದರು.

ಕಾಂಗ್ರೆಸ್ ಮಂಗಳವಾರ ತನ್ನ ಕರ್ನಾಟಕ ಚುನಾವಣಾ ಪ್ರಣಾಳಿಕೆಯಲ್ಲಿ ಭಜರಂಗದಳವನ್ನು ನಿಷೇಧಿಸುವ ಭರವಸೆ ನೀಡಿದೆ. ಬಿಜೆಪಿ ಮತ್ತು ಪ್ರಧಾನಿ ನರೇಂದ್ರ ಮೋದಿಯವರು ಇದನ್ನು ಖಂಡಿಸಿದ್ದಾರೆ. ಈ ಹಿಂದೆ ಕಾಂಗ್ರೆಸ್, ಭಗವಾನ್ ರಾಮನನ್ನು ಬಂಧಿಸಿಟ್ಟಿತ್ತು. ಇದೀಗ ಭಗವಾನ್ ಹನುಮಂತನ ಭಕ್ತರನ್ನು ಗುರಿಯಾಗಿಸಲು ಬಯಸಿದೆ ಎಂದು ಆರೋಪಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com