ಎಸ್‌ಡಿಪಿಐ ಮತ್ತು ಪಿಎಫ್‌ಐ ವಿರುದ್ಧ ಬಿಜೆಪಿ ಮಾತನಾಡಿದರೆ ಕಾಂಗ್ರೆಸ್ ನಾಯಕರಿಗೆ ತಳಮಳ ಶುರುವಾಗುತ್ತದೆ: ಸಿಎಂ ಬೊಮ್ಮಾಯಿ

ಎಸ್‌ಡಿಪಿಐ ಮತ್ತು ಪಿಎಫ್‌ಐ ವಿರುದ್ಧ ಬಿಜೆಪಿ ಮಾತನಾಡಿದರೆ ಕಾಂಗ್ರೆಸ್ ನಾಯಕರಿಗೆ ತಳಮಳ ಶುರುವಾಗುತ್ತದೆ. ಕಾಂಗ್ರೆಸ್ ತುಷ್ಟೀಕರಣ ರಾಜಕಾರಣ ಮಾಡುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಗುರುವಾರ ಹೇಳಿದ್ದಾರೆ.
ಸಿಎಂ ಬೊಮ್ಮಾಯಿ
ಸಿಎಂ ಬೊಮ್ಮಾಯಿ

ಬೆಂಗಳೂರು: ಎಸ್‌ಡಿಪಿಐ ಮತ್ತು ಪಿಎಫ್‌ಐ ವಿರುದ್ಧ ಬಿಜೆಪಿ ಮಾತನಾಡಿದರೆ ಕಾಂಗ್ರೆಸ್ ನಾಯಕರಿಗೆ ತಳಮಳ ಶುರುವಾಗುತ್ತದೆ. ಕಾಂಗ್ರೆಸ್ ತುಷ್ಟೀಕರಣ ರಾಜಕಾರಣ ಮಾಡುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಗುರುವಾರ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು,  ಮತ್ತೊಬ್ಬರ ಭಾವನೆಗಳಿಗೆ ಧಕ್ಕೆ ಬರುವ ರೀತಿಯಲ್ಲಿ ಕಾಂಗ್ರೆಸ್ ಪಕ್ಷ ವರ್ತಿಸುತ್ತಿದೆ. ಕಾಂಗ್ರೆಸ್‌ನವರು 'ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (SDPI)' ಮತ್ತು 'ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ' (PFI) ಅವರ ಒತ್ತಡಕ್ಕೆ ಮಣಿಯುತ್ತಿದ್ದಾರೆ ಎಂದು ಹೇಳಿದರು.

ಎಸ್‌ಡಿಪಿಐ ಮತ್ತು ಪಿಎಫ್‌ಐ ವಿರುದ್ಧ ಬಿಜೆಪಿ ಮಾತನಾಡಿದರೆ ಕಾಂಗ್ರೆಸ್ ನಾಯಕರಿಗೆ ತಳಮಳ ಶುರುವಾಗುತ್ತದೆ. ಕಾಂಗ್ರೆಸ್ ತುಷ್ಟೀಕರಣ ರಾಜಕಾರಣ ಮಾಡುತ್ತಿದೆ. ಕೇಂದ್ರ ಸರ್ಕಾರ ದಾಖಲೆ ಸಹಿತ ದೇಶ ವಿರೋಧಿ ಕೃತ್ಯದಲ್ಲಿ ತೊಡಗಿದ್ದ 'ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ' ಅನ್ನು ನಿಷೇಧಿಸಿತು. ಹೀಗಿದ್ದರೂ ಕಾಂಗ್ರೆಸ್ ತಮ್ಮ ಪರ ಮಾತನಾಡುತ್ತಿಲ್ಲ ಎಂಬ ಅಸಮಾಧಾನ 'ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (SDPI)' ಗೆ ಇದೆ. ಈ ಎಲ್ಲ ಬೆಳವಣಿ ಆದ ಮೇಲೆ ನಮಗೆ ರಕ್ಷಣೆ ಕೊಡದ ಕಾಂಗ್ರೆಸ್‌ಗೆ ನಾವು ಯಾಕೆ ರಕ್ಷಣೆ ಕೊಡಬೇಕು ಎಂದು ಕಾಂಗ್ರೆಸ್ ನಾಯಕರನ್ನು ಪಿಎಫ್ಐ ನಾಯಕರು ಪ್ರಶ್ನಿಸುತ್ತಿದ್ದಾರೆ

ದೇಶದಲ್ಲಿ ಪಿಎಫ್ಐನ ಮತ್ತೊಂದು ರೂಪವೇ ಎಸ್‌ಡಿಪಿಐ. ಕಾಂಗ್ರೆಸ್ ಎಸ್‌ಡಿಪಿಐ ಬೆಂಬಲವನ್ನು ಈ ಹಿಂದೆ ಬಹಿರಂಗವಾಗಿಯೇ ಕೇಳಿತ್ತು. ಆದರೆ, ಅವರು ಕಾಂಗ್ರೆಸ್ ಅನ್ನು ಬೆಂಬಲಿಸುವುದಿಲ್ಲ. ಕಾಂಗ್ರೆಸ್ ನ ಕಾಲದಲ್ಲಿಯೇ ಇವೆರಡು 'ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಮತ್ತು 'ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಪ್ರಬಲವಾಗಿ ಬೆಳೆದಿವೆ ಎಂದರು.

ಬಾಲವೇ ದೇಹವನ್ನು ಅಲುಗಾಡಿಸುವ ಸ್ಥಿತಿ ಇದೆ ಎಂದು ಎಸ್‌ಡಿಪಿಐ, ಪಿಎಫ್ ಕಾಂಗ್ರೆಸ್ ಬಾಲವಿದ್ದಂತೆ ಎಂದು ಪರೋಕ್ಷವಾಗಿ ಹೇಳಿದರು. ಅಲ್ಲದೇ, ಎಸ್‌ಡಿಪಿಐ ಬಿಜೆಪಿಯ ಬಿ-ಟೀಂ ಅಲ್ಲ. ಅದು ಬಿಜೆಪಿ ಪಕ್ಷ ಬಿ-ಟೀಂ ಆಗಿದ್ದರೆ ನಾವು ಪಿಎಫ್ಐ ಸಂಘಟನೆಯನ್ನು ನಿಷೇಧಿಸುತ್ತಿದ್ದೇವಾ? ಎಂದು ಪ್ರಶ್ನಿಸಿದರು. ಕಾಂಗ್ರೆಸ್‌ನವರು ತಾವು ಮಾಡಿದ ತಪ್ಪನ್ನು ಮುಚ್ಚಲು ಈ ರೀತಿಯ ಆರೋಪ‌ ಮಾಡುತ್ತಿದ್ದಾರೆ ಎಂದು ತಿರುಗೇಟು ನೀಡಿದರು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಭಜರಂಗ ದಳಕ್ಕೆ ಆಂಜನೇಯನಿಗೆ ಏನು ಸಂಬಂಧ ಎಂದು ಪ್ರಶ್ನಿಸಿದ್ದಾರೆ. ರಾಮನಿಗೂ ಹನುಮನಿಗೂ ಏನು ಸಂಬಂಧ ಇದೆಯೋ ಅದೇ ಸಂಬಂಧ ಭಜರಂಗದಳಕ್ಕೆ ಆಂಜನೇಯನಿಗೂ ಇದೆ. ಇದನ್ನು ಕಾಂಗ್ರೆಸ್ ನವರು ಅರ್ಥ ಮಾಡಿಕೊಳ್ಳಬೇಕು. ಜನರ ಭಾವನೆಗಳ ಧಕ್ಕೆ ತರುವ ರೀತಿಯಲ್ಲಿ ಮಾತನಾಡುವುದು ಸರಿಯಲ್ಲ ಎಂದು ಎಚ್ಚರಿಸಿದರು.

ಬಿಜೆಪಿ ನಮ್ಮ ಕಾರ್ಯಕ್ರಮ, ಅಭಿವೃದ್ಧಿ ಆಧಾರದಲ್ಲಿ ಚುನಾವಣೆ ಎದುರಿಸುತ್ತಿದ್ದೇವೆ. ಕಾಂಗ್ರೆಸ್ ಅವರು ಭರವಸೆಗಳ ಮೇಲೆ ಚುನಾವಣೆ ಎದುರಿಸುತ್ತಿದ್ದಾರೆ. ಅನಾವಶ್ಯಕವಾಗಿ ಕೆದಕಿ ಕೆದಕಿ ಚುನಾವಣೆಯ ವಾತಾವರಣವನ್ನು ಜಾತಿ, ಧರ್ಮ, ಕೋಮು ಭಾವನೆಗಳ ಮೂಲಕ ಕೆರಳಿಸುತ್ತಿರುವುದು ಸರಿಯಲ್ಲ. ಈ ಬೆಳವಣಿಗೆ ಕಾಂಗ್ರೆಸ್ ನ ತುಷ್ಟೀಕರಣ ರಾಜಕಾರಣ ತೋರ್ಪಡಿಸುತ್ತದೆ ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com