'ಮಾತು ವಾಪಸ್ ತೆಗೊಳ್ಳಿ': ಚುನಾವಣೆ ಪ್ರಚಾರ ಕುರಿತು ಸಂಬರ್ಗಿ ವ್ಯಂಗ್ಯ; ಸಿನಿಮಾ ಸ್ಟೈಲ್ ನಲ್ಲೇ ತಿರುಗೇಟು ಕೊಟ್ಟ ಶಿವಣ್ಣ

ತಮ್ಮ ಚುನಾವಣಾ ಪ್ರಚಾರದ ಬಗ್ಗೆ ಆಕ್ಷೇಪಾರ್ಹ ಟ್ವೀಟ್ ಮಾಡಿರುವ ಮಾಜಿ ಬಿಗ್​ಬಾಸ್ ಸ್ಪರ್ಧಿ ಪ್ರಶಾಂತ್ ಸಂಬರ್ಗಿಗೆ ನಟ ಶಿವರಾಜ್ ಕುಮಾರ್ ಸಿನಿಮಾ ಸ್ಟೈಲ್ ನಲ್ಲೇ ತಿರುಗೇಟು ನೀಡಿದ್ದಾರೆ.
ಪ್ರಶಾಂತ್ ಸಂಬರಗಿ ಮತ್ತು ಶಿವರಾಜ್ ಕುಮಾರ್
ಪ್ರಶಾಂತ್ ಸಂಬರಗಿ ಮತ್ತು ಶಿವರಾಜ್ ಕುಮಾರ್

ಬೆಂಗಳೂರು: ತಮ್ಮ ಚುನಾವಣಾ ಪ್ರಚಾರದ ಬಗ್ಗೆ ಆಕ್ಷೇಪಾರ್ಹ ಟ್ವೀಟ್ ಮಾಡಿರುವ ಮಾಜಿ ಬಿಗ್​ಬಾಸ್ ಸ್ಪರ್ಧಿ ಪ್ರಶಾಂತ್ ಸಂಬರ್ಗಿಗೆ ನಟ ಶಿವರಾಜ್ ಕುಮಾರ್ ಸಿನಿಮಾ ಸ್ಟೈಲ್ ನಲ್ಲೇ ತಿರುಗೇಟು ನೀಡಿದ್ದಾರೆ.

ಇಂದು (ಮೇ 06) ಹುಬ್ಬಳ್ಳಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಜಗದೀಶ್ ಶೆಟ್ಟರ್ ಪರವಾಗಿ ಚುನಾವಣಾ ಪ್ರಚಾರ ನಡೆಸಿದ ನಟ ಶಿವರಾಜ್ ಕುಮಾರ್ ತಮ್ಮ ವಿರುದ್ಧ ಪೋಸ್ಚ್ ಗೆ ತಿರುಗೇಟು ನೀಡಿದರು. ಶಿವರಾಜ್ ಕುಮಾರ್ ಅವರಿಗೆ ಮಾಧ್ಯಮ ಪ್ರತಿನಿಧಿಗಳು ಪ್ರಶಾಂತ್ ಸಂಬರ್ಗಿಯ ಪೋಸ್ಟ್​​ ಬಗ್ಗೆ ತಿಳಿಸಿದಾಗ ಇದಕ್ಕೆ ತಮಾಷೆಯಾಗಿ ಪ್ರತಿಕ್ರಿಯಿಸಿದ ಶಿವಣ್ಣ, ”ನಮಗೆ ಹಣ ಮುಖ್ಯಾನಾ? ಹೌದಾ, ನಮ್ಮ ಹತ್ರ ದುಡ್ಡಿಲ್ವ? ಎಂದು ತಮಾಷೆಯಾಗಿ ಪ್ರಶ್ನಿಸಿದರು.

ಅಲ್ಲದೆ ”ಆ ಮಾತು ವಾಪಸ್ ತಗೊಳ್ಳಿ, ಸಿನಿಮಾ ಜಾಸ್ತಿ ಇದೆ ಎಂಬ ಕಾರಣಕ್ಕೆ ಬೇರೆ ಥರ ಮಾತನಾಡುವುದಲ್ಲ. ನಾನು ಹಣ ಪಡೆದು ಯಾರಿಗಾಗಿಯೂ ಇಲ್ಲಿ ಬಂದಿಲ್ಲ. ನನ್ನ ಹೃದಯದಿಂದ ಬಂದಿದ್ದೀನಿ, ಒಬ್ಬ ಮನುಷ್ಯನಾಗಿ ಬಂದಿದ್ದೀನಿ. ವ್ಯಾಪಾರಕ್ಕಾಗಿ ಬಂದಿಲ್ಲ. ಪ್ರೀತಿ-ವಿಶ್ವಾಸಕ್ಕಾಗಿ ಬಂದಿದ್ದೀನಿ. ಬೇರೆ ಯಾರನ್ನೂ ಟೀಕೆ ಮಾಡಲು ನಾನು ಬಂದಿಲ್ಲ. ನಾನು ಇಂದು ಜಗದೀಶ್ ಶೆಟ್ಟರ್ ಅವರ ಬಗ್ಗೆ ಮಾತನಾಡೋಕೆ ಬಂದಿದ್ದೀನಿ. ಅವರ ಬಗ್ಗೆ ಮಾತ್ರ ಮಾತನಾಡುತ್ತೀನಿ. ಬೇರೆಯವರ ಬಗ್ಗೆ ನಾನು ಟೀಕೆ ಮಾಡುವುದಿಲ್ಲ, ಎಂದಾದರೂ ಬೇರೆಯವರ ಬಗ್ಗೆ ಟೀಕೆ ಮಾಡಿದ್ದೀನಾ? ತಿಳಿಸಿ” ಎಂದು ಪ್ರಶ್ನೆ ಮಾಡಿದರು.

ಸಂಬರ್ಗಿ ಹೇಳಿದ್ದೇನು?
ಇತ್ತೀಚೆಗಷ್ಟೆ ಸುದೀಪ್ ಅವರು ತಾವು ಬಿಜೆಪಿ ಪರ ಪ್ರಚಾರ ಮಾಡುತ್ತಿರುವುದಾಗಿ ಘೋಷಿಸಿದಾಗ ಹೊಗಳಿದ್ದ ಸಂಬರ್ಗಿ, ಇದೀಗ ಶಿವರಾಜ್ ಕುಮಾರ್ (Shiva Rajkumar) ಕಾಂಗ್ರೆಸ್ ಪರ ಪ್ರಚಾರ ಮಾಡುತ್ತಿರುವುದನ್ನು ಟೀಕಿಸಿದ್ದರು. 'ಶಿವಣ್ಣ ಹಣ ಪಡೆದು ಪ್ರಚಾರ ಮಾಡುತ್ತಿದ್ದಾರೆ ಎಂದಿದ್ದಾರೆ, ಮಾತ್ರವಲ್ಲದೆ ಅವಾಚ್ಯ ಅರ್ಥ ಹೊಮ್ಮಿಸುವ ಪದದ ಬಳಕೆಯನ್ನೂ ಮಾಡಿದ್ದಾರೆ.

”ಶಿವಣ್ಣ ಯಾವತ್ತೂ ಸ್ಕ್ರಿಪ್ಟ್ ಕೇಳೋದೆ ಇಲ್ಲ ಪೇಮೆಂಟ್ ಅಷ್ಟೆ ಮುಖ್ಯ. ಒಪ್ಪಿಕೊಂಡ ಪಾತ್ರ ಮಾಡ್ತಾರೆ. ತುಂಬಾ ಎಮೋಷನಲ್ ಜೀವಿ ನಮ್ಮ ಶಿವಣ್ಣ. ಸಿನಿಮಾ ಫ್ಲಾಪ್ ಆದರೂ ಅವರು ಕೇಳೊಲ್ಲ. ಮತ್ತೆ ಪೇಮೆಂಟ್ ತಗೋಂಡು ಇನ್ನೊಂದು ಸಿನಿಮಾ ಸೈನ್ ಮಾಡ್ತಾರೆ. ರಾಜಕೀಯದಲ್ಲೂ ಅದೇ ಸೂತ್ರ ಬಳಸುತ್ತಿದ್ದಾರೆ. ಕ್ಯಾಂಡಿಡೇಟ್ ಗೆದ್ರೆ ಏನು ಸೋತ್ರೆ ಏನು, ಎಲ್ಲಾ ಒಂದೇ, ಪ್ಯಾಕೆಟ್ ಬಂತಾ? ಸರಿ ಆಲ್​ರೈಟ್ ಮುಂದಕ್ಕೆ ಹೋಗೋಣ” ಎಂಬ ಕೀಳು ಅಭಿರುಚಿಯ ಪೋಸ್ಟ್ ಅನ್ನು ಪ್ರಶಾಂತ್ ಸಂಬರ್ಗಿ ಹಂಚಿಕೊಂಡಿದ್ದರು. 

ವೈರಲ್ ಆಗುತ್ತಲೇ ಪೋಸ್ಟ್ ಡಿಲೀಟ್
ಇನ್ನು ಈ ಪೋಸ್ಟ್​ನಲ್ಲಿ ಅವಾಚ್ಯ ಅರ್ಥ ಹೊಮ್ಮುವ ಪದದ ಬಳಕೆಯನ್ನೂ ಮಾಡಿದ್ದ ಸಂಬರ್ಗಿ ತಮ್ಮ ಪೋಸ್ಟ್ ಗೆ ವ್ಯಾಪಕ ವಿರೋಧ-ಆಕ್ರೋಶ ವ್ಯಕ್ತವಾಗುತ್ತಲೇ ಪೋಸ್ಟ್ ಡಿಲೀಟ್ ಮಾಡಿದ್ದಾರೆ. ಸಂಬರ್ಗಿ ಹೀಗೆ ಇತರರ ಬಗ್ಗೆ ವ್ಯಂಗ್ಯವಾಗಿ, ಅಗೌರವದಿಂದ ಟ್ವೀಟ್ ಮಾಡಿ ಆ ನಂತರ ಡಿಲೀಟ್ ಮಾಡಿರುವುದು ಇದು ಮೊದಲೇನೂ ಅಲ್ಲ. ಈ ಹಿಂದೆ ಮಾಜಿ ಪ್ರಧಾನಿ ದೇವೇಗೌಡ ಅವರ ಬಗ್ಗೆ ಅಗೌರವದ, ಕಳಪೆ ಅಭಿರುಚಿಯ ಟ್ವೀಟ್ ಮಾಡಿದ್ದರು ಅವರ ವಿರುದ್ಧ ದೂರು ದಾಖಲಾದ ಬಳಿಕ ಡಿಲೀಟ್ ಮಾಡಿ ಕ್ಷಮೆ ಸಹ ಕೇಳಿದರು. ಜಮೀರ್ ಅಹ್ಮದ್ ವಿರುದ್ಧವೂ ಹಿಂದೊಮ್ಮೆ ಟ್ವೀಟ್ ಮಾಡಿ, ಮಾನನಷ್ಟ ಮೊಕದ್ದಮೆ ಎದುರಿಸುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com