ವಿಧಾನಸಭೆ ಚುನಾವಣೆಗೆ ಕೆಲ ದಿನಗಳು ಬಾಕಿ; ಲೋಕ್‌ ಪೋಲ್‌ ಮೆಗಾ ಸಮೀಕ್ಷೆ ಪ್ರಕಟ, ಕಾಂಗ್ರೆಸ್‌ಗೆ ಗೆಲುವಿನ ಮುನ್ಸೂಚನೆ..

ಕರ್ನಾಟಕ ವಿಧಾನಸಭೆ ಚುನಾವಣೆಗೆ ಇನ್ನೇನು ಕೆಲ ದಿನಗಳಷ್ಟೇ ಬಾಕಿ ಉಳಿದಿದ್ದು, ರಾಜಕೀಯ ಪಕ್ಷಗಳು ಬಿರುಸಿನ ಪ್ರಚಾರದಲ್ಲಿ ತೊಡಗಿವೆ. ಈಬಾರಿ ಯಾವ ಪಕ್ಷ ಅಧಿಕಾರದ ಗದ್ದುಗೆಗೆ ಏರಬಹುದು ಎಂಬ ಕುತೂಹಲ ಮತದಾರರಲ್ಲಿದೆ. ಹೀಗಿರುವಾಗ, ಮತ್ತೊಂದು ಚುನಾವಣಾ ಪೂರ್ವ ಸಮೀಕ್ಷೆಯ ವರದಿ ಪ್ರಕಟವಾಗಿದ್ದು, ಕಾಂಗ್ರೆಸ್ ಪಾಲಿಗೆ ಸುವರ್ಣಾವಕಾಶ ಎನ್ನುವಂತಾಗಿದೆ.
ಬಿಜೆಪಿ-ಕಾಂಗ್ರೆಸ್
ಬಿಜೆಪಿ-ಕಾಂಗ್ರೆಸ್
Updated on

ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆಗೆ ಇನ್ನೇನು ಕೆಲ ದಿನಗಳಷ್ಟೇ ಬಾಕಿ ಉಳಿದಿದ್ದು, ರಾಜಕೀಯ ಪಕ್ಷಗಳು ಬಿರುಸಿನ ಪ್ರಚಾರದಲ್ಲಿ ತೊಡಗಿವೆ. ಈಬಾರಿ ಯಾವ ಪಕ್ಷ ಅಧಿಕಾರದ ಗದ್ದುಗೆಗೆ ಏರಬಹುದು ಎಂಬ ಕುತೂಹಲ ಮತದಾರರಲ್ಲಿಯೇ ಮನೆಮಾಡಿದೆ. ಹೀಗಿರುವಾಗ, ಮತ್ತೊಂದು ಚುನಾವಣಾ ಪೂರ್ವ ಸಮೀಕ್ಷೆಯ ವರದಿ ಪ್ರಕಟವಾಗಿದ್ದು, ಕಾಂಗ್ರೆಸ್ ಪಾಲಿಗೆ ಸುವರ್ಣಾವಕಾಶ ಎನ್ನುವಂತಾಗಿದೆ.

ರಾಷ್ಟ್ರೀಯ ಸಮೀಕ್ಷಾ ಸಂಸ್ಥೆಯಾದ ಲೋಕ್‌ ಪೋಲ್‌ ಎಂಬ ಸಂಸ್ಥೆ ನಡೆಸಿದ ಸಮೀಕ್ಷೆ ಪ್ರಕಾರ, ಈ ಭಾರಿ ರಾಜ್ಯದಲ್ಲಿ ಕಾಂಗ್ರೆಸ್‌ ಭರ್ಜರಿ ಮುನ್ನಡೆ ಸಾಧಿಸಿ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ ಎನ್ನಲಾಗಿದೆ. ಆದರೆ, ಬಿಜೆಪಿ ನಿರೀಕ್ಷೆಗೂ ಮೀರಿ ನೆಲಕಚ್ಚಲಿದೆ ಎಂದು ಸಮೀಕ್ಷೆ ತಿಳಿಸಿದೆ.

ರಾಜ್ಯದಲ್ಲಿ ಮೇ 10 ರಂದು ಒಂದೇ ಹಂತದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಮೇ 13ಕ್ಕೆ ಫಲಿತಾಂಶ ಪ್ರಕಟವಾಗಲಿದೆ. ಕಾಂಗ್ರೆಸ್‌ ಬಹುಮತದೊಂದಿಗೆ ಮೊದಲ ಸ್ಥಾನನದಲ್ಲಿದ್ದು, ಬಿಜೆಪಿ ಎರಡನೇ ಸ್ಥಾನ ಪಡೆದುಕೊಳ್ಳಲಿದೆ. ಮೂರನೇ ಸ್ಥಾನದಲ್ಲಿ ಜೆಡಿಎಸ್‌ ಇರಲಿದೆ. ಇತರರು ಎರಡು ಸ್ಥಾನಗಳಲ್ಲಿ ಗೆಲುವು ಸಾಧಿಸಲಿದ್ದಾರೆ ಎಂದಿದೆ.

ಕಾಂಗ್ರೆಸ್, ಬಿಜೆಪಿ ಪಾಲೆಷ್ಟು?

ಕಾಂಗ್ರೆಸ್‌ 129 -134 ಸ್ಥಾನಗಳಲ್ಲಿ ಗೆಲುವು ಸಾಧಿಸುವ ಮೂಲಕ ಸ್ಪಷ್ಟ ಬಹುಮತ ಪಡೆಯಲಿದೆ. ಇನ್ನು ಬಿಜೆಪಿ 59-65 ಸ್ಥಾನಗಳು ಹಾಗೂ ಜೆಡಿಎಸ್‌ 23-28 ಸ್ಥಾನಗಳಲ್ಲಿ ಗೆಲುವು ಸಾಧಿಸಬಹುದು ಎಂದು ಸಮೀಕ್ಷೆ ತಿಳಿಸಿದೆ. ಪಕ್ಷೇತರ/ಸ್ವತಂತ್ರ ಅಭ್ಯರ್ಥಿಗಳು ಕೇವಲ 0-2 ಸ್ಥಾನಗಳಲ್ಲಿ ಜಯ ಸಾಧಿಸಬಹುದು ಎಂದು ಲೋಕ್‌ ಪೋಲ್‌ ತನ್ನ ಸಮೀಕ್ಷೆ ವರದಿಯಲ್ಲಿ ತಿಳಿಸಿದೆ. ಯಾವುದೇ ಪಕ್ಷ ಅಧಿಕಾರಕ್ಕೇರಲು 113 ಸ್ಥಾನಗಳಲ್ಲಿ ಗೆಲುವು ಸಾಧಿಸುವ ಅಗತ್ಯವಿದ್ದು, ಕಾಂಗ್ರೆಸ್‌ ಸ್ಪಷ್ಟ ಬಹುಮತ ಪಡೆಯುವುದಲ್ಲದೆ, ಸುಮಾರು 20 ಸ್ಥಾನಗಳನ್ನು ಹೆಚ್ಚು ಪಡೆಯಬಹುದು ಎನ್ನಲಾಗಿದೆ.

ಯಾವ ಪಕ್ಷಕ್ಕೆ ಎಷ್ಟು ಮತ ಹಂಚಿಕೆ?

ಮತ ಹಂಚಿಕೆ ಪ್ರಮಾಣದಲ್ಲಿಯೂ ಕಾಂಗ್ರೆಸ್‌ ಮುಂದಿದೆ. ಒಟ್ಟಾರೆ ಚಲಾವಣೆಯಾಗುವ ಮತಗಳಲ್ಲಿ ಶೇ 42 ರಿಂದ 25ರಷ್ಟು ಮತಗಳನ್ನು ಕಾಂಗ್ರೆಸ್‌ ಪಡೆದುಕೊಳ್ಳಲಿದೆ. ಬಿಜೆಪಿ ಶೇ 31 ರಿಂದ 32 ರಷ್ಟು ಹಾಗೂ ಜೆಡಿಎಸ್‌ ಶೇ 14 ರಿಂದ 18 ರಷ್ಟು ಮತಗಳನ್ನು ಪಡೆದುಕೊಳ್ಳಲಿದೆ. ಉಳಿದಂತೆ ಶೇ 5 ರಿಂದ 9 ರಷ್ಟು ಮತಗಳನ್ನು ಇತರೆ ಪಕ್ಷಗಳ/ ಸ್ವತಂತ್ರ ಅಭ್ಯರ್ಥಿಗಳ ಪಾಲಾಗಲಿವೆ ಎಂದು ಲೋಕ್‌ ಪೋಲ್‌ ತಿಳಿಸಿದೆ.

ಲೋಕ್‌ ಪೋಲ್‌ ಸಂಸ್ಥೆಯು ಸುಮಾರು 150 ವಿಧಾನಸಭಾ ಕ್ಷೇತ್ರಗಳಲ್ಲಿ ಜನಾಭಿಪ್ರಾಯ ಸಂಗ್ರಹ ಮಾಡಿದೆ. ಇದಕ್ಕಾಗಿ 15,000 ಕರೆಗಳನ್ನು ಮಾಡಿ ಆ ಮೂಲಕ ಮಾಹಿತಿ ಪಡೆಯಲಾಗಿದೆ. ಕಳೆದ ಎರಡು ತಿಂಗಳಿನಿಂದ ರಾಜ್ಯದ ಹಲವು ಕ್ಷೇತ್ರಗಳಲ್ಲಿ ತಳಮಟ್ಟದಿಂದ 65 ಸಾವಿರ ಮಾದರಿ ಸಂಗ್ರಹಿಸಿ ಮಾಹಿತಿಯನ್ನು ಕ್ರೋಡೀಕರಿಸಲಾಗಿದೆ ಎಂದು ಸಮೀಕ್ಷಾ ಸಂಸ್ಥೆಯೇ ತಿಳಿಸಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com