ಬಿಜೆಪಿಗೆ ಲಿಂಗಾಯತರ ಅಗತ್ಯವಿಲ್ಲ; ಬಿಎಲ್ ಸಂತೋಷ್ ಹೇಳಿಕೆ ರೀತಿಯಲ್ಲಿದ್ದ ಸುಳ್ಳು ಸುದ್ದಿ ಹಂಚಿಕೆ; ಐವರ ವಿರುದ್ಧ ಎಫ್ಐಆರ್

ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿಎಲ್ ಸಂತೋಷ್ ಹೇಳಿದ್ದಾರೆ ಎನ್ನಲಾದ ಲಿಂಗಾಯತ ಸಮುದಾಯದ ಕುರಿತಾದ ಸುಳ್ಳು ಸುದ್ದಿಯನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದ ಆರೋಪದಡಿ ಐವರ ವಿರುದ್ಧ ಉತ್ತರ ವಿಭಾಗದ ಸೈಬರ್ ಕ್ರೈಂ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ

ಬೆಂಗಳೂರು: ರಾಜ್ಯದಲ್ಲಿ ವಿಧಾನಸಭೆ ಚುನಾವಣೆಗೆ ಕೆಲವೇ ದಿನಗಳು ಬಾಕಿ ಉಳಿದಿದ್ದು, ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿಎಲ್ ಸಂತೋಷ್ ಹೇಳಿದ್ದಾರೆ ಎನ್ನಲಾದ ಲಿಂಗಾಯತ ಸಮುದಾಯದ ಕುರಿತಾದ ಸುಳ್ಳು ಸುದ್ದಿಯನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದ ಆರೋಪದಡಿ ಐವರ ವಿರುದ್ಧ ಉತ್ತರ ವಿಭಾಗದ ಸೈಬರ್ ಕ್ರೈಂ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.

ಬಿಜೆಪಿ ಕಾನೂನು ಘಟಕದ ಎಂ. ಯಶವಂತ್ ಅವರು ಈ ಸಂಬಂಧ ದೂರು ನೀಡಿದ್ದಾರೆ. ಬಿಎಲ್ ಸಂತೋಷ್ ಹೇಳಿದ್ದಾರೆ ಎನ್ನಲಾದ ಸುಳ್ಳು ಸುದ್ದಿಯನ್ನು ತಮ್ಮ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದ ಆರೋಪದ ಮೇಲೆ ಭೈರಪ್ಪ ಹರೀಶ್ ಕುಮಾರ್, ದಿನೇಶ್ ಅಮಿನ್‌ಮಟ್ಟು, ಹೇಮಂತ್‌ಕುಮಾರ್, ದಿಲೀಪ್ ಗೌಡ ಹಾಗೂ ಬಿಂದು ಗೌಡ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಅವರಿಗೆ ನೋಟಿಸ್ ನೀಡಿ, ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

‘ನಾವು ಹಿಂದುತ್ವದಲ್ಲಿ ಮುಂದುವರೆಯುತ್ತೇವೆ, ಲಿಂಗಾಯತರ ಅಗತ್ಯವಿಲ್ಲ: ಬಿ.ಎಲ್. ಸಂತೋಷ್’ ಎಂಬ ಶೀರ್ಷಿಕೆಯುಳ್ಳ ಪತ್ರಿಕೆಯಲ್ಲಿ ಬಂದ ರೀತಿಯಲ್ಲಿ ಸುಳ್ಳು ವರದಿಯನ್ನು ಸೃಷ್ಟಿಸಿ, ಸಾಮಾಜಿಕ ಮಾಧ್ಯಮಗಳಲ್ಲಿ ಹರಿಬಿಡಲಾಗಿದೆ. ಇದೇ ಸುಳ್ಳು ಸುದ್ದಿಯನ್ನು ವಿರೋಧ ಪಕ್ಷಗಳ ಬೆಂಬಲಿಗರು ಹಂಚಿಕೊಂಡಿದ್ದಾರೆ’ ಎಂದು ದೂರುದಾರರು ಆರೋಪಿಸಿದ್ದಾರೆ. 

‘ಲಿಂಗಾಯತ ಸಮುದಾಯದವರನ್ನು ಬಿಜೆಪಿ ವಿರುದ್ಧ ಎತ್ತಿ ಕಟ್ಟಲು ಬಿ.ಎಲ್. ಸಂತೋಷ್ ಅವರ ಹೆಸರಿನಲ್ಲಿ ಸುಳ್ಳು ಸುದ್ದಿಯನ್ನು ಸೃಷ್ಟಿಸಲಾಗಿದೆ. ಅದನ್ನೇ ಆರೋಪಿಗಳು ತಮ್ಮ ಟ್ವಿಟರ್ ಹಾಗೂ ಫೇಸ್‌ಬುಕ್ ಖಾತೆಗಳಲ್ಲಿ ಹಂಚಿಕೊಂ ಡಿದ್ದಾರೆ. ಇವರೆಲ್ಲರ ವಿರುದ್ಧ ಕ್ರಮ ಕೈಗೊಳ್ಳಿ’ ಎಂದು ಕೋ ರಿದ್ದಾರೆ’ ಎಂದು ಮೂಲಗಳು ತಿಳಿಸಿವೆ.

ತಿರುಚಲಾದ ವರದಿ: ಬಿಎಲ್ ಸಂತೋಷ್‌

ವೈರಲ್ ಪೋಸ್ಟ್ ಬಗ್ಗೆ ಶನಿವಾರ ಸ್ಪಷ್ಟನೆ ನೀಡಿದ ಬಿಎಲ್ ಸಂತೋಷ್, 'ಇದೊಂದು ಫೋಟೋಶಾಪ್ ಮಾಡಿರುವ ವರದಿ. ಕಾಂಗ್ರೆಸ್‌ಗೆ ಚರ್ಚಿಸಲು ಯಾವುದೇ ವಿಚಾರಗಳಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರ ಸುನಾಮಿಯಿಂದ ಕಂಗೆಟ್ಟಿರುವ ಕಾಂಗ್ರೆಸ್ ನಾಯಕರಲ್ಲಿ ವಿಚಾರಗಳಿಗೂ ಕೊರತೆಯಿದೆ. ಕಾಂಗ್ರೆಸ್‌ ನಾಯಕರು ಮತ್ತು ಉಸ್ತುವಾರಿಗಳು ಫೋಟೋಶಾಪ್ ಕೂಲಿಗಳಾಗಿ ಹೋಗಿದ್ದಾರೆ. ಅವರ ಟ್ರೋಲ್ ಸೈನ್ಯ ಸಹ ಅಂತಹದ್ದೇ ನಕಾರಾತ್ಮಕ ಮನಸ್ಥಿತಿಯನ್ನು ಹೊಂದಿದೆ. ಇದೊಂದು ನಕಲಿ ವರದಿ' ಎಂದಿದ್ದರು.

ವೈರಲ್ ಪೋಸ್ಟ್‌ನಲ್ಲಿ ಏನಿತ್ತು?

ಬೆಂಗಳೂರಿನ ಖಾಸಗಿ ಹೋಟೆಲೊಂದರಲ್ಲಿ ನಡೆದ ರಾಜ್ಯ, ಹೋಬಳಿ ಮಟ್ಟದ ಕಾರ್ಯಕರ್ತರ ಸಭೆಯಲ್ಲಿ ಬಿಎಲ್ ಸಂತೋಷ್ ಮಾತನಾಡಿದ್ದಾರೆ ಎನ್ನಲಾದ ಪತ್ರಿಕಾ ವರದಿ ರೀತಿಯಲ್ಲಿದ್ದ ಪೋಸ್ಟ್ ವೈರಲ್ ಆಗಿತ್ತು. ಆ ವರದಿಯಲ್ಲಿ 'ಬಿಜೆಪಿ ನಂಬಿಕೆ ಇಟ್ಟಿರುವುದು ಹಿಂದುತ್ವದಲ್ಲಿ ಹೊರತು, ಯಾವುದೊ ನಾಯಕನ ಜಾತಿಯ ಮೇಲಲ್ಲ. ಕಾರ್ಯಕರ್ತರು ಹಿಂದುತ್ವದ ಮೇಲೆ ನಂಬಿಕೆ ಇಡಬೇಕೇ ಹೊರತು, ಯಾವುದೋ ವ್ಯಕ್ತಿಯ ಮೇಲಲ್ಲ' ಎಂದು ಸಂತೋಷ್‌ ಹೇಳಿದ್ದಾಗಿ ತಿಳಿಸಲಾಗಿತ್ತು. ರಾಜ್ಯದಲ್ಲಿ ಲಿಂಗಾಯತರ ಮತಗಳು ಕೈತಪ್ಪಿ ಹೋದರೆ ಪಕ್ಷಕ್ಕೆ ಭಾರಿ ಹೊಡೆತ ಬೀಳುತ್ತದೆ ಎಂದು ಸಭೆಯಲ್ಲಿ ದನಿ ಎತ್ತಿದ ಕಾರ್ಯಕರ್ತರ ಮಾತಿಗೆ ಸಿಡಿಮಿಡಿಗೊಂಡಿದ್ದ ಸಂತೋಷ್, ಬಿಜೆಪಿಗೆ ಲಿಂಗಾಯತರ ಅಗತ್ಯವಿಲ್ಲ ಎಂದು ಹೇಳಿದ್ದಾಗಿ ಆ ವರದಿಯಲ್ಲಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com