ಕದಂಬ ನೌಕಾನೆಲೆಯಲ್ಲಿ ಐಎನ್ಎಸ್ ವಿಕ್ರಾಂತ್ ನಿಲುಗಡೆ ಯಶಸ್ವಿ

ಭಾರತದ ಮೊದಲ ಸ್ವದೇಶಿ ನಿರ್ಮಿತ ವಿಮಾನವಾಹಕ ನೌಕೆ ಎಂದೇ ಹೆಗ್ಗುರುತಿಗೆ ಪಾತ್ರವಾಗಿರುವ ಐಎನ್ಎಸ್ ವಿಕ್ರಾಂತ್ ಮೊದಲ ಬಾರಿಗೆ ಕಾರವಾರದ ಕದಂಬ ನೌಕಾನೆಲೆ ತಲುಪಿದೆ.
ಐಎನ್ಎಸ್ ವಿಕ್ರಾಂತ್
ಐಎನ್ಎಸ್ ವಿಕ್ರಾಂತ್
Updated on

ಕಾರವಾರ: ಭಾರತದ ಮೊದಲ ಸ್ವದೇಶಿ ನಿರ್ಮಿತ ವಿಮಾನವಾಹಕ ನೌಕೆ ಎಂದೇ ಹೆಗ್ಗುರುತಿಗೆ ಪಾತ್ರವಾಗಿರುವ ಐಎನ್ಎಸ್ ವಿಕ್ರಾಂತ್ ಮೊದಲ ಬಾರಿಗೆ ಕಾರವಾರದ ಕದಂಬ ನೌಕಾನೆಲೆ ತಲುಪಿದೆ.

2022 ರ ಸೆಪ್ಟೆಂಬರ್‌ನಲ್ಲಿ ಲೋಕಾರ್ಪಣೆಗೊಂಡಿರುವ ಭಾರತೀಯ ತಂತ್ರಜ್ಞಾನ ಹಾಗೂ ನಿರ್ಮಾಣದ ಮೊದಲ ಯುದ್ಧ ವಿಮಾನ ವಾಹಕ ನೌಕೆ ವಿಕ್ರಾಂತ್‌ನ್ನು ಶನಿವಾರ ಕದಂಬ ಜಟ್ಟಿಯಲ್ಲಿ (ಹಡಗು ನಿಲ್ದಾಣ) ಯಶಸ್ವಿಯಾಗಿ ತಂದು ನಿಲ್ಲಿಸಲಾಯಿತು.

ವಿಶೇಷ ಎಂದರೆ ಕಾರವಾರದಲ್ಲಿ ಸೀಬರ್ಡ್ ನೌಕಾ ಯೋಜನೆಯ -2ಎ ಭಾಗವಾಗಿ ನಿರ್ಮಾಣವಾಗಿರುವ ಸುಮಾರು 4 ಕಿಮೀ ಉದ್ದದ ಹೊಸ ಜಟ್ಟಿಯಲ್ಲಿ ಮೊದಲ ಬಾರಿಗೆ ದೊಡ್ಡ ನೌಕೆಯೊಂದು ಬಂದು ನಿಂತಿದೆ.

ಈ ಕುರಿತು ಸಾಮಾಜಿಕ ಜಾಲತಾಣಟಲ್ಲಿ ಟ್ವೀಟ್ ಮಾಡಿರುವ ಭಾರತೀಯ ನೌಕಾಸೇನೆಯು, ಇದು ಆತ್ಮನಿರ್ಭರ ಭಾರತ ಯೋಜನೆಯಲ್ಲಿ ನೌಕಾ ಸೇನೆಯ ಬಲ ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ ಎಂದು ಹೇಳಿದೆ.

 ಕೊಚ್ಚಿಯ ಹಡಗು ಕಾರ್ಖಾನೆಯಲ್ಲಿ 2000 ತಂತ್ರಜ್ಞರು, 13 ವರ್ಷಗಳಿಂದ ಕೆಲಸ ಮಾಡಿ ನಿರ್ಮಾಣ ಮಾಡಿದ ಯುದ್ಧನೌಕೆ ಇದಾಗಿದ್ದು, ಕಳೆದ ವರ್ಷ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಲೋಕಾರ್ಪಣೆ ಮಾಡಿದ್ದರು.

40 ಸಾವಿರ ಟನ್‌ ತೂಕದ 23 ಸಾವಿರ ಕೋಟಿ ರೂ. ಹಣ ವ್ಯಯಿಸಿ ಯುದ್ಧವಿಮಾನ ವಾಹಕ ನೌಕೆಯನ್ನು ಸ್ವದೇಶಿ ತಂತ್ರಜ್ಞಾನವನ್ನು ಬಳಸಿ ನಿರ್ಮಿಸಿಸುವ ಮೂಲಕ ವಿಶ್ವದ 6 ಪ್ರಮುಖ ರಾಷ್ಟ್ರಗಳ ಸಾಲಿಗೆ ಭಾರತ ಸೇರಿದೆ. ಈ ಹಿಂದೆ ಅಮೆರಿಕ, ರಷ್ಯಾ, ಚೀನಾ, ಫ್ರಾನ್ಸ್‌, ಇಂಗ್ಲೆಂಡ್‌, ಇಟಲಿ ಮಾತ್ರವೇ ಈ ಸಾಧನೆಗೈದಿದ್ದವು.

ಉದ್ದ 262 ಮೀಟರ್‌, ಅಗಲ 62 ಮೀಟರ್‌, ಎತ್ತರ- 59 ಮೀಟರ್‌ ಹೊಂದಿರುವ ಯುದ್ಧ ನೌಕೆಯಲ್ಲಿ 18 ಮಹಡಿಗಳಿದ್ದು 2,400 ವಿಭಾಗಗಳು ಇವೆ. ಒಂದೇ ಬಾರಿಗೆ 1600 ನೌಕಾ ಸಿಬ್ಬಂದಿಯನ್ನು ಐಎನ್‌ಎಸ್‌ ವಿಕ್ರಾಂತ್‌ನಲ್ಲಿ ನಿಯೋಜಿಸಬಹುದಾಗಿದೆ.

ಮಿಗ್‌- 29 ಕೆ, ಕಮೋವ್‌- 31 ಹೆಲಿಕಾಪ್ಟರ್‌ಗಳು, ಅಮೆರಿಕ ನಿರ್ಮಿತ ಎಫ್‌-18ಎ ಸೂಪರ್‌ ಹಾರ್ನೆಟ್‌, ಫ್ರಾನ್ಸ್‌ ನಿರ್ಮಿತ ರಫೇಲ್‌ ಯುದ್ಧ ವಿಮಾನಗಳು, ಫೈಟರ್‌ ಜೆಟ್‌ ಎಂಎಚ್‌- 60 ರೋಮಿಯೊ ಮಲ್ಟಿರೋಲ್‌ ಹೆಲಿಕಾಪ್ಟರ್‌ಗಳು,  32 ಮಧ್ಯಮ ಶ್ರೇಣಿಯ ಮೇಲ್ಮೈಯಿಂದ ಚಿಮ್ಮುವ ವಾಯು ಕ್ಷಿಪಣಿಗಳು ಮತ್ತು ಎಕೆ- 630 ಫಿರಂಗಿ ಗನ್‌ಗಳೂ ವಿಕ್ರಾಂತ್‌ ಬತ್ತಳಿಕೆಯಲ್ಲಿದೆ.

ಇದರ ರನ್‌ ವೇ 262 ಮೀಟರ್‌ಗಳಷ್ಟು ಉದ್ದವಿದೆ. ಬರೋಬ್ಬರಿ 2 ಫುಟ್ಬಾಲ್‌ ಮೈದಾನದಷ್ಟು ದೊಡ್ಡದಾಗಿದೆ.  2 ಒಲಿಂಪಿಕ್ಸ್‌ ಈಜುಕೊಳಗಳನ್ನು ನಿರ್ಮಿಸಬಹುದಾದಷ್ಟು ಉದ್ದವಾದ ರನ್‌ವೇ ಹೊಂದಿದೆ.

2,500 ಕಿ.ಮೀ. ಉದ್ದದ ವಿದ್ಯುತ್‌ ಕೇಬಲ್‌ ವಿಕ್ರಾಂತ್‌ನ ಒಡಲೊಳಗಿದೆ. ಇದರ ಅಡುಗೆಮನೆಯಲ್ಲಿ ಒಂದೇ ದಿನದಲ್ಲಿ 4,800 ಜನರಿಗೆ ಅಡುಗೆ ಸಿದ್ಧಪಡಿಸಬಹುದು. 1 ಗಂಟೆಯಲ್ಲಿ 3 ಸಾವಿರ ಚಪಾತಿ ಮಾಡುವ, ಇಡ್ಲಿ ಬೇಯಿಸುವ ಅತ್ಯಾಧುನಿಕ ಯಂತ್ರಳಿವೆ.

ಈ ನೌಕೆ ಗಂಟೆಗೆ 33 ಕಿ.ಮೀ. ವೇಗದಲ್ಲಿ ಚಲಿಸಿ, ಒಂದೇ ಬಾರಿಗೆ 7,500 ನಾಟಿಕಲ್‌ ಮೈಲು ಕ್ರಮಿಸಬಲ್ಲದು. 250 ಟ್ಯಾಂಕರ್‌ಗಳಷ್ಟು ಇಂಧನ ಇದರಲ್ಲಿರುತ್ತದೆ. ಸಿಬ್ಬಂದಿ ಆರೋಗ್ಯ ಹದಗೆಡದಂತೆ ನೋಡಿಕೊಳ್ಳಲು 16 ಬೆಡ್‌ಗಳ ಆಸ್ಪತ್ರೆ ಕೂಡ ಇದೆ.

ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಅರಗಾದಲ್ಲಿ ಕದಂಬ ನೌಕಾನೆಲೆಯು ಏಷ್ಯಾದಲ್ಲೇ ಅತೀ ದೊಡ್ಡ ನೌಕಾನೆಲೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇಲ್ಲಿನ ಭೂ ಪ್ರದೇಶ ವೈರಿಗಳಿಗೆ ಚಿತ್ತ ಕಾಣದಂತೆ ಮಾಡಿ ಶತ್ರುಗಳ ಮೇಲೆ ಮುಗಿಬೀಳಲು ಸುವ್ಯವಸ್ಥಿತ ನೌಕಾ ತಾಣವಾಗಿ ಮಾರ್ಪಡುತಿದ್ದು ಇದೀಗ ನೌಕಾ ನೆಲೆಯಲ್ಲಿ ಎರಡನೇ ಹಂತದ ಕಾಮಗಾರಿಗಳು ಮುಕ್ತಾಯದ ಹಂತ ತಲುಪಿದೆ.

ಒಂದು ಲಕ್ಷ ಸಿಬ್ಬಂದಿಗೆ ವಸತಿ ನಿಲಯ ,ಕಚೇರಿ ಸಂಕೀರ್ಣ, ರಿಪೇರಿ ಯಾರ್ಡ್‌ಗಳು ಈಗಾಗಲೇ ನಿರ್ಮಾಣದ ಅಂತಿಮ ಹಂತ ತಲುಪಿದ್ದು ನೌಕಾ ದಳದ ಮಾಹಿತಿ ಪ್ರಕಾರ 2025ರ ವೇಳೆಗೆ ದೇಶಕ್ಕೆ ಸಮರ್ಪಣೆಗೊಳ್ಳಲಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com