ನಾಳೆ ಸಚಿವ ಸಂಪುಟ ವಿಸ್ತರಣೆ, ಖಾತೆ ಹಂಚಿಕೆಯೂ ಆಗಲಿದೆ: ಸಚಿವ ಕೆಎಚ್ ಮುನಿಯಪ್ಪ

ಶನಿವಾರ ಮಧ್ಯಾಹ್ನ ಸಚಿವ ಸಂಪುಟ ವಿಸ್ತರಣೆಯಾಗಲಿದ್ದು, ಸಂಜೆ ವೇಳೆಗೆ ಖಾತೆ ಹಂಚಿಕೆಯಾಗಲಿದೆ ಎಂದು ಸಚಿವ ಕೆಎಚ್ ಮುನಿಯಪ್ಪ ಶುಕ್ರವಾರ ಹೇಳಿದ್ದಾರೆ. ನಾಲ್ಕೈದು ಸಚಿವ ಸ್ಥಾನಗಳನ್ನು ಹೊರತುಪಡಿಸಿ ಉಳಿದ ಸ್ಥಾನಗಳನ್ನು ಒಂದೇ ದಿನದಲ್ಲಿ ಭರ್ತಿ ಮಾಡಲಾಗುವುದು ಎಂದು ಹೇಳಿದರು.
ಕೆಎಚ್ ಮುನಿಯಪ್ಪ- ಡಿಕೆ ಶಿವಕುಮಾರ್ - ಸಿದ್ದರಾಮಯ್ಯ
ಕೆಎಚ್ ಮುನಿಯಪ್ಪ- ಡಿಕೆ ಶಿವಕುಮಾರ್ - ಸಿದ್ದರಾಮಯ್ಯ

ಬೆಂಗಳೂರು: ಶನಿವಾರ ಮಧ್ಯಾಹ್ನ ಸಚಿವ ಸಂಪುಟ ವಿಸ್ತರಣೆಯಾಗಲಿದ್ದು, ಸಂಜೆ ವೇಳೆಗೆ ಖಾತೆ ಹಂಚಿಕೆಯಾಗಲಿದೆ ಎಂದು ಸಚಿವ ಕೆಎಚ್ ಮುನಿಯಪ್ಪ ಶುಕ್ರವಾರ ಹೇಳಿದ್ದಾರೆ. ನಾಲ್ಕೈದು ಸಚಿವ ಸ್ಥಾನಗಳನ್ನು ಹೊರತುಪಡಿಸಿ ಉಳಿದ ಸ್ಥಾನಗಳನ್ನು ಒಂದೇ ದಿನದಲ್ಲಿ ಭರ್ತಿ ಮಾಡಲಾಗುವುದು ಎಂದು ಹೇಳಿದರು.

ದೆಹಲಿಯಿಂದ ವಾಪಸಾದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮುನಿಯಪ್ಪ, ಸಚಿವ ಸಂಪುಟವು ಹಿರಿಯರು ಮತ್ತು ಯುವ ಜನರ ಮಿಶ್ರಣವಾಗಿದೆ. ನಾಳೆ ಸಚಿವ ಸಂಪುಟ ವಿಸ್ತರಣೆಯಾಗಲಿದೆ. ಸಮಯವೂ ನಿಗದಿಯಾಗಿದೆ. ಬಹುತೇಕ ಹುದ್ದೆಗಳನ್ನು ಭರ್ತಿ ಮಾಡಲಾಗುವುದು ಎಂದರು. 

ಎಷ್ಟು ಸಚಿವ ಸ್ಥಾನಗಳನ್ನು ಭರ್ತಿ ಮಾಡಲಾಗುವುದು ಎಂಬ ಪ್ರಶ್ನೆಗೆ, 'ನಾಲ್ಕು ಅಥವಾ ಐದು ಸ್ಥಾನಗಳನ್ನು ಹೊರತುಪಡಿಸಿ ಉಳಿದೆಲ್ಲವನ್ನೂ ಭರ್ತಿ ಮಾಡಲಾಗುವುದು' ಎಂದರು.

ಸಚಿವ ಸ್ಥಾನಕ್ಕೆ ಸಂಬಂಧಿಸಿದಂತೆ ಹಿರಿಯ ನಾಯಕರು ಪಕ್ಷದ ಹೈಕಮಾಂಡ್ ಮುಂದೆ ಏನಾದರೂ ಬೇಡಿಕೆ ಇಟ್ಟಿದ್ದಾರೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಮುನಿಯಪ್ಪ, ಈ ಹೊತ್ತಿನಲ್ಲಿ ಏನನ್ನೂ ಹೇಳುವುದು ಕಷ್ಟ. ಆದರೆ, ನಮಗೆ ಹಿರಿಯರು ಹಾಗೂ ಯುವಕರು ಇಬ್ಬರೂ ಬೇಕು. ಎರಡನ್ನೂ ಸಮತೋಲನದಲ್ಲಿಟ್ಟುಕೊಳ್ಳಬೇಕು ಎಂದು ಅವರು ಹೇಳಿದರು.

ಯಾವ ಖಾತೆಯನ್ನು ಯಾರಿಗೆ ನೀಡಬೇಕು ಎನ್ನುವುದನ್ನು ನಾಳೆ ನಿರ್ಧರಿಸಲಾಗುವುದು. ಶನಿವಾರ ಸಂಜೆಯೊಳಗೆ ಖಾತೆ ಹಂಚಿಕೆಯನ್ನು ಪ್ರಕಟಿಸಬೇಕಾಗಿದೆ ಎಂದರು.

ಮಾಜಿ ಕೇಂದ್ರ ಸಚಿವ ಮತ್ತು ಏಳು ಬಾರಿ ಲೋಕಸಭೆ ಸದಸ್ಯರಾಗಿರುವ ದೇವನಹಳ್ಳಿ ಶಾಸಕ ಮುನಿಯಪ್ಪ ಅವರು ಮೇ 20 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಕರ್ನಾಟಕದ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.

ಕರ್ನಾಟಕದಲ್ಲಿ ಗರಿಷ್ಠ 34 ಮಂದಿ ಸಚಿವರಾಗಬಹುದಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸೇರಿದಂತೆ 10 ಹುದ್ದೆಗಳನ್ನು ಇದುವರೆಗೆ ಭರ್ತಿ ಮಾಡಲಾಗಿದ್ದು, 24 ಸಚಿವ ಸ್ಥಾನಗಳು ಖಾಲಿ ಇವೆ.

ಸಿದ್ದರಾಮಯ್ಯ ಮತ್ತು ಶಿವಕುಮಾರ್ ಹೊರತುಪಡಿಸಿ ಡಾ.ಜಿ. ಪರಮೇಶ್ವರ, ಮುನಿಯಪ್ಪ, ಕೆ.ಜೆ. ಜಾರ್ಜ್, ಎಂ.ಬಿ. ಪಾಟೀಲ್, ಸತೀಶ್ ಜಾರಕಿಹೊಳಿ, ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಪುತ್ರ ಪ್ರಿಯಾಂಕ್ ಖರ್ಗೆ, ರಾಮಲಿಂಗಾರೆಡ್ಡಿ ಮತ್ತು ಬಿಝಡ್ ಜಮೀರ್ ಅಹಮದ್ ಖಾನ್ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ಸಚಿವ ಸ್ಥಾನಕ್ಕಾಗಿ ತೀವ್ರ ಲಾಬಿ ನಡೆಯುತ್ತಿದ್ದು, ತಮ್ಮ ಉಮೇದುವಾರಿಕೆಯ ಮೇಲೆ ಪ್ರಭಾವ ಬೀರಲು ಹಲವು ಆಕಾಂಕ್ಷಿಗಳು ದೆಹಲಿಯಲ್ಲಿ ಬೀಡುಬಿಟ್ಟಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com