ಗ್ಯಾರಂಟಿ ಭಾಗ್ಯಗಳ ಅನುಷ್ಠಾನ ಕುರಿತು ಸಿಎಂ ಸಿದ್ದರಾಮಯ್ಯ ಸರಣಿ ಸಭೆ: ಜೂನ್ 1ಕ್ಕೆ ಅಂತಿಮ ನಿರ್ಧಾರ

ವಿಧಾನಸಭಾ ಚುನಾವಣೆಗೂ ಮುನ್ನ ಕಾಂಗ್ರೆಸ್ ರಾಜ್ಯದ ಜನತೆಗೆ ನೀಡಿದ್ದ 5 ಭರವಸೆಗಳನ್ನು ಈಡೇರಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ನಿನ್ನೆ ಸೋಮವಾರ ವಿಧಾನಸೌಧದಲ್ಲಿ ಹಣಕಾಸು ಮತ್ತು ಇತರ ಇಲಾಖೆಗಳ ಉನ್ನತ ಅಧಿಕಾರಿಗಳೊಂದಿಗೆ ಸರಣಿ ಸಭೆ ನಡೆಸಿದರು. 
ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಸರ್ಕಾರಿ ಅಧಿಕಾರಿಗಳ ಸಭೆ
ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಸರ್ಕಾರಿ ಅಧಿಕಾರಿಗಳ ಸಭೆ

ಬೆಂಗಳೂರು: ವಿಧಾನಸಭಾ ಚುನಾವಣೆಗೂ ಮುನ್ನ ಕಾಂಗ್ರೆಸ್ ರಾಜ್ಯದ ಜನತೆಗೆ ನೀಡಿದ್ದ 5 ಭರವಸೆಗಳನ್ನು ಈಡೇರಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ನಿನ್ನೆ ಸೋಮವಾರ ವಿಧಾನಸೌಧದಲ್ಲಿ ಹಣಕಾಸು ಮತ್ತು ಇತರ ಇಲಾಖೆಗಳ ಉನ್ನತ ಅಧಿಕಾರಿಗಳೊಂದಿಗೆ ಸರಣಿ ಸಭೆ ನಡೆಸಿದರು. 

ಇಲಾಖೆಗಳಲ್ಲಿನ ಈಗಾಗಲೇ ಅಸ್ತಿತ್ವದಲ್ಲಿರುವ ಯೋಜನೆಗಳಿಂದ ಕಾಂಗ್ರೆಸ್ ನ 5 ಖಾತರಿಗಳನ್ನು ಕಾರ್ಯಗತಗೊಳಿಸಲು ಸಹ ಚರ್ಚಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಅವರು ಭಾಗವಹಿಸಿದ್ದ ಎರಡು ಗಂಟೆಗಳ ಕಾಲ ನಡೆದ ಸಂವಾದಾತ್ಮಕ ಸಭೆಯಲ್ಲಿ ವಿವಿಧ ಇಲಾಖೆಗಳಲ್ಲಿನ ಪರಿಸ್ಥಿತಿಯ ಬಗ್ಗೆ ಸಿಎಂಗೆ ಮಾಹಿತಿ ನೀಡಲಾಯಿತು, ಜೊತೆಗೆ ಹಣ ಕ್ರೋಢೀಕರಣದ ಬಗ್ಗೆ ಚರ್ಚಿಸಲಾಯಿತು.

ಇಂಧನ ಇಲಾಖೆಯ ಅಧಿಕಾರಿಗಳು ಮಾರ್ಚ್ 2023 ರಲ್ಲಿ 200 ಯೂನಿಟ್‌ಗಳಿಗಿಂತ ಕಡಿಮೆ ವಿದ್ಯುತ್ ನ್ನು ಖರ್ಚು ಮಾಡಿದ ಕುಟುಂಬಗಳು ಮತ್ತು ವಾರ್ಷಿಕ ಅಂದಾಜು ವೆಚ್ಚವನ್ನು ಆಧರಿಸಿ ಪ್ರಸ್ತಾವನೆಯನ್ನು ಮುಂದಿಟ್ಟರು. ರಾಜ್ಯಾದ್ಯಂತ 1.27 ಕೋಟಿ ಬಿಪಿಎಲ್ ಕಾರ್ಡ್‌ಗಳಿವೆ ಎಂಬ ಮಾಹಿತಿ ಸಂಗ್ರಹಿಸಲಾಯಿತು. ಫಲಾನುಭವಿಗಳಾಗುವ ಸಾಧ್ಯತೆಯಿರುವ 2.14 ಕೋಟಿ ಕುಟುಂಬಗಳು ವಾರ್ಷಿಕವಾಗಿ 13,575 ಮಿಲಿಯನ್ ಯೂನಿಟ್ ವಿದ್ಯುತ್ ನ್ನು ಬಳಸುತ್ತವೆ ಎಂದು ಅಂದಾಜಿಸಲಾಗಿದೆ, ಇದರ ವೆಚ್ಚ 8,008 ಕೋಟಿ ರೂಪಾಯಿಗಳಾಗುತ್ತವೆ. ತೆರಿಗೆ ಸೇರಿದಂತೆ, ಎಸ್ಕಾಂಗಳಿಗೆ ಸರ್ಕಾರದಿಂದ ಹಣಕಾಸಿನ ನೆರವು ರೂಪದಲ್ಲಿ 12,038 ಕೋಟಿ ರೂಪಾಯಿ ಬರುತ್ತಿವೆ.

ಹಣಕಾಸು, ಸಾರಿಗೆ, ಆಹಾರ ಮತ್ತು ನಾಗರಿಕ ಸರಬರಾಜು, ಇಂಧನ ಮತ್ತಿತರ ಇಲಾಖೆಗಳ ಹಿರಿಯ ಅಧಿಕಾರಿಗಳು ಅಭಿಪ್ರಾಯ ವ್ಯಕ್ತಪಡಿಸಿ, ಯೋಜನೆಗಳ ಅನುಷ್ಠಾನದ ಕುರಿತು ವರದಿ ಸಿದ್ಧಪಡಿಸುವಂತೆ ಸಿದ್ದರಾಮಯ್ಯ ತಿಳಿಸಿದರು. ಮೂಲಗಳ ಪ್ರಕಾರ, ಫಲಾನುಭವಿಗಳನ್ನು ಆಯ್ಕೆ ಮಾಡುವ ಮಾನದಂಡವನ್ನು ಸಡಿಲಿಸಿ ಸರ್ಕಾರ ಸ್ವಲ್ಪ ಉದಾರವಾದರೆ, ಸಿಎಂ ಅಂದಾಜಿಸಿದಂತೆ ವೆಚ್ಚವು ವಾರ್ಷಿಕ 50,000 ಕೋಟಿ ರೂಪಾಯಿಗಳಿಗಿಂತ ಸ್ವಲ್ಪ ಹೆಚ್ಚಾಗಬಹುದು. 

ಖಾತ್ರಿ ಯೋಜನೆಗಳ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಸಿಎಂ ತಮ್ಮ ಸಂಪುಟ ಸಹೋದ್ಯೋಗಿಗಳೊಂದಿಗೆ ನಾಳೆ ಬುಧವಾರ ಮತ್ತೊಮ್ಮೆ ಸಮಾಲೋಚನೆ ನಡೆಸಲಿದ್ದಾರೆ. ನಂತರ ಗುರುವಾರ ನಡೆಯಲಿರುವ ಸಂಪುಟ ಸಭೆಯ ವೇಳಾಪಟ್ಟಿಯಲ್ಲಿ ಈ ಕುರಿತು ನಿರ್ಧಾರ ಕೈಗೊಳ್ಳಲಾಗುವುದು.

ಗೃಹ ಜ್ಯೋತಿ - 200 ಯೂನಿಟ್ ಉಚಿತ ವಿದ್ಯುತ್, ಗೃಹ ಲಕ್ಷ್ಮಿ - ಕುಟುಂಬದ ಮಹಿಳಾ ಮುಖ್ಯಸ್ಥರಿಗೆ 2,000 ರೂಪಾಯಿ, ಅನ್ನಭಾಗ್ಯ - ಬಿಪಿಎಲ್ ಕುಟುಂಬದ ಪ್ರತಿಯೊಬ್ಬ ಸದಸ್ಯರಿಗೆ 10 ಕೆಜಿ ಅಕ್ಕಿ, ಯುವ ನಿಧಿ - 3,000 ರೂಪಾಯಿ ಮತ್ತು ನಿರುದ್ಯೋಗಿ ಪದವೀಧರರು ಮತ್ತು ಡಿಪ್ಲೋಮಾದಾರರಿಗೆ 1,500 ರೂಪಾಯಿಗಳನ್ನು ಮತ್ತು ಮಹಿಳೆಯರಿಗೆ ಸರ್ಕಾರಿ ಬಸ್‌ಗಳಲ್ಲಿ ಉಚಿತ ಪ್ರಯಾಣವನ್ನು ಒದಗಿಸುವ ಭರವಸೆಯನ್ನು ವಿಧಾನಸಭೆ ಚುನಾವಣೆಯ ಪೂರ್ವದಲ್ಲಿ ಕಾಂಗ್ರೆಸ್ ನೀಡಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com