ಮೇಕೆದಾಟು ವಿಚಾರವಾಗಿ ಆಕ್ರಮಣಕಾರಿ ವರ್ತನೆ ಬೇಡ; ಡಿಸಿಎಂ ಶಿವಕುಮಾರ್‌ಗೆ ತಮಿಳುನಾಡು ಕಿವಿಮಾತು

ಮೇಕೆದಾಟು ವಿಚಾರವಾಗಿ ಆಕ್ರಮಣಕಾರಿ ವರ್ತನೆ ಬೇಡ ಎಂದು ಕರ್ನಾಟಕ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರಿಗೆ ತಮಿಳುನಾಡು ಸರ್ಕಾರ ಕಿವಿಮಾತು ಹೇಳಿದೆ.
ಡಿ,ಕೆ ಶಿವಕುಮಾರ್
ಡಿ,ಕೆ ಶಿವಕುಮಾರ್
Updated on

ಚೆನ್ನೈ: ಮೇಕೆದಾಟು ವಿಚಾರವಾಗಿ ಆಕ್ರಮಣಕಾರಿ ವರ್ತನೆ ಬೇಡ ಎಂದು ಕರ್ನಾಟಕ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರಿಗೆ ತಮಿಳುನಾಡು ಸರ್ಕಾರ ಕಿವಿಮಾತು ಹೇಳಿದೆ.

ಮೇಕೆದಾಟುವಿನಲ್ಲಿ ಕಾವೇರಿ ನದಿಗೆ ಅಣೆಕಟ್ಟು ನಿರ್ಮಿಸುವುದಾಗಿ ಡಿ.ಕೆ.ಶಿವಕುಮಾರ್‌ ನೀಡಿರುವ ಹೇಳಿಕೆಯನ್ನು ಖಂಡಿಸಿರುವ ಡಿಎಂಕೆ ನೇತೃತ್ವದ ಸರ್ಕಾರ, ಮೇಕೆದಾಟು ಯೋಜನೆಯನ್ನು ವಿರೋಧಿಸುವುದಾಗಿ ಪುನರುಚ್ಚರಿಸಿದೆ. ಅಲ್ಲದೆ ಮೇಕೆದಾಟು ಯೋಜನೆಗೆ ಸಂಬಂಧಿಸಿ ಆಕ್ರಮಣಕಾರಿಯಾಗಿ ವರ್ತಿಸಬೇಡಿ ಎಂದು ಹೇಳಿದೆ.

ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ, ಡಿಎಂಕೆ ಪ್ರಧಾನ ಕಾರ್ಯದರ್ಶಿಯೂ ಆಗಿರುವ ಜಲ ಸಂಪನ್ಮೂಲ ಸಚಿವ ದೊರೈ ಮುರುಗನ್‌, ‘ಅಧಿಕಾರಕ್ಕೆ ಬಂದು ಕೆಲ ದಿನಗಳು ಕಳೆದಿವೆ. ಅಷ್ಟರಲ್ಲೇ, ನೆರೆಯ ರಾಜ್ಯದ ಬಗ್ಗೆ ಡಿಕೆ ಶಿವಕುಮಾರ್‌ ಅವರು ಆಕ್ರಮಣಕಾರಿಯಾಗಿ ವರ್ತಿಸುತ್ತಿರುವುದಕ್ಕೆ ಆಶ್ಚರ್ಯವಾಗಿದೆ. ಮೇಕೆದಾಟು ಯೋಜನೆ ಕುರಿತು ಅಧಿಕಾರಿಗಳು ಅವರಿಗೆ ವಿವರವಾದ ಮಾಹಿತಿ ನೀಡಿಲ್ಲ ಅನಿಸುತ್ತದೆ. ನಾನು ಶಿವಕುಮಾರ್ ಅವರನ್ನು ಭೇಟಿ ಮಾಡಿ, ಈ ವಿಷಯ ಕುರಿತು ವಿವರಿಸುತ್ತೇನೆ. ಅಲ್ಲಿಯವರೆಗೆ ಅವರು ತಾಳ್ಮೆಯಿಂದ ಇರುತ್ತಾರೆ ಎಂದು ಆಶಿಸುವೆ’ ಎಂದಿದ್ದಾರೆ.

‘ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಭಾರಿ ಗೆಲುವು ಸಾಧಿಸಿದ್ದಕ್ಕಾಗಿ ಕಾಂಗ್ರೆಸ್‌ ಪಕ್ಷಕ್ಕೆ ಹಾಗೂ ಶಿವಕುಮಾರ್‌ ಅವರಿಗೆ ಅಭಿನಂದನೆ ಸಲ್ಲಿಸಲು ಅವರನ್ನು ಭೇಟಿಯಾಗಲು ಯೋಜಿಸಿದ್ದೆ. ಆದರೆ, ಈಗ ಈ ಹೇಳಿಕೆ ಮೂಲಕವೇ ಅವರಿಗೆ ಶುಭಾಶಯಗಳನ್ನು ಕೋರುತ್ತಿದ್ದೇನೆ’ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಮಿಳುನಾಡು ಮತ್ತು ಕರ್ನಾಟಕ ನದಿ ನೀರು ಹಂಚಿಕೆ ವಿವಾದದಲ್ಲಿ ದಶಕಗಳಿಂದಲೂ ವಿವಾದದಲ್ಲಿ ಸಿಲುಕಿವೆ. ಮೇಕೆದಾಟು ವಿವಿಧೋದ್ದೇಶ (ಕುಡಿಯುವ ಮತ್ತು ವಿದ್ಯುತ್) ಯೋಜನೆಯು ಕರ್ನಾಟಕದ ರಾಮನಗರ ಜಿಲ್ಲೆಯ ಕನಕಪುರ ಬಳಿ ಸಮತೋಲನ ಜಲಾಶಯವನ್ನು ನಿರ್ಮಿಸುವುದನ್ನು ಒಳಗೊಂಡಿರುತ್ತದೆ.

ಯೋಜನೆಯು ಪೂರ್ಣಗೊಂಡ ನಂತರ ಬೆಂಗಳೂರು ಮತ್ತು ನೆರೆಯ ಪ್ರದೇಶಗಳಿಗೆ (4.75 ಟಿಎಂಸಿ) ಕುಡಿಯುವ ನೀರು ಮತ್ತು 400 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸುವ ಗುರಿಯನ್ನು ಹೊಂದಿದೆ. ಯೋಜನೆಯ ಅಂದಾಜು ವೆಚ್ಚ 9,000 ಕೋಟಿ ರೂ ಗಳಾಗಿದ್ದು, ಕನಕಪುರವನ್ನು ಪ್ರತಿನಿಧಿಸುತ್ತಿರುವ ಡಿಕೆ ಶಿವಕುಮಾರ್ ಅವರು ಮೇಕೆ ದಾಟು ಯೋಜನೆ ಅನುಷ್ಠಾನಕ್ಕೆ ಒತ್ತಾಯಿಸಿ ಕಳೆದ ವರ್ಷ ಜನವರಿಯಲ್ಲಿ 'ಪಾದಯಾತ್ರೆ' ಕೈಗೊಂಡಿದ್ದರು. ಆಗ ಅವರ ಪಕ್ಷ ಕಾಂಗ್ರೆಸ್ ವಿರೋಧ ಪಕ್ಷವಾಗಿತ್ತು.
 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com