ರೈತರ ಕೃಷಿ ಪಂಪ್ ಸೆಟ್ ಗಳಿಗೆ ಪ್ರತಿದಿನ 7 ತಾಸು ವಿದ್ಯುತ್ ಸರಬರಾಜು: ಸಿಎಂ ಸಿದ್ದರಾಮಯ್ಯ

ರಾಜ್ಯದಲ್ಲಿ ನೀರಾವರಿ ಪಂಪ್‍ಸೆಟ್‍ಗಳಿಗೆ 7 ಗಂಟೆಗಳ ವಿದ್ಯುತ್ ಸರಬರಾಜು ಮಾಡಲಾಗುವುದು ಎಂದು  ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಇಂಧನ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯ ನಂತರ ಈ ವಿಷಯ ತಿಳಿಸಿದರು.
ಸಿಎಂ ಸಿದ್ದರಾಮಯ್ಯ ಸಭೆ
ಸಿಎಂ ಸಿದ್ದರಾಮಯ್ಯ ಸಭೆ
Updated on

ಬೆಂಗಳೂರು: ರಾಜ್ಯದಲ್ಲಿ ನೀರಾವರಿ ಪಂಪ್‍ಸೆಟ್‍ಗಳಿಗೆ 7 ಗಂಟೆಗಳ ವಿದ್ಯುತ್ ಸರಬರಾಜು ಮಾಡಲಾಗುವುದು ಎಂದು  ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಇಂಧನ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯ ನಂತರ ಈ ವಿಷಯ ತಿಳಿಸಿದರು.

ರಾಜ್ಯದಲ್ಲಿ ವಿದ್ಯತ್ ಕೊರತೆಯಿದೆ ಎಂದು ನೀರಾವರಿ ಪಂಪ್‍ಸೆಟ್‍ಗಳಿಗೆ  ಏಳು ಗಂಟೆಗಳ ಕಾಲ ನೀರಾವರಿ ಪಂಪ್‍ಸೆಟ್‍ಗಳಿಗೆ ವಿದ್ಯುತ್ ನೀಡಲು ಮೊದಲೇ ಘೋಷಣೆ ಮಾಡಿದ್ದೆವು. ಕೆಲವು ಜನ ಸತತವಾಗಿ  ಮೂರು ಫೇಸ್‍ನಲ್ಲಿ 5 ಗಂಟೆ ವಿದ್ಯುತ್ ನೀಡಿದರೆ ಸಾಕು ಎಂದಿದ್ದರು. ಅದಕ್ಕಾಗಿ 5 ಗಂಟೆಗಳ ಕಾಲ  3 ಫೇಸ್‍ನಲ್ಲಿ ವಿದ್ಯುತ್ ನೀಡುವಂತೆ ಸೂಚನೆ ನೀಡಲಾಗಿತ್ತು.  ರಾಯಚೂರು, ಕೊಪ್ಪಳ, ಬಳ್ಳಾರಿ, ಯಾದಗಿರಿ ರೈತರು ಭೇಟಿ ಮಾಡಿ ಭತ್ತ ಬೆಳೆಯುವುದರಿಂದ  5 ಗಂಟೆಗಳ ಕಾಲ ವಿದ್ಯುತ್ ನೀಡುವುದು ಸಾಕಾಗುವುದಿಲ್ಲ, 7 ಗಂಟೆಗಳ ಕಾಲ ನೀಡಬೇಕೆಂದು ಎಂದು ಮನವಿ ಮಾಡಿದರು. ಕಬ್ಬು ಹಾಗೂ ಭತ್ತ ಕಟಾವಿಗೆ ಬಂದಿರುವುದರಿಂದ ಈ ಭಾಗದಲ್ಲಿ 7 ಗಂಟೆಗಳ ಕಾಲ ವಿದ್ಯುತ್ ನೀಡಬೇಕು ಎಂದು ಸೂಚನೆ ನೀಡಲಾಗಿದೆ. ಉಳಿದ ಭಾಗಗಳಿಗೆ ನೀಡುತ್ತಿದ್ದ 5 ಗಂಟೆಗಳ ವಿದ್ಯುತ್ ನ್ನು 7 ಗಂಟೆಗಳ ಕಾಲ ನೀಡಲು ಸಾಧ್ಯವಾಗುತ್ತದೆ ಎಂದು ಇಂದಿನ ಸಭೆಯಲ್ಲಿ ಅಭಿಪ್ರಾಯಕ್ಕೆ ಬರಲಾಗಿದೆ ಎಂದರು.

ವಿದ್ಯುತ್ ಉತ್ಪಾದನೆಯಲ್ಲಿ ಹೆಚ್ಚಳ
ರಾಯಚೂರು, ಬಳ್ಳಾರಿಯಲ್ಲಿ ಥರ್ಮಲ್ ಘಟಕಗಳಿದ್ದು, ರಾಜ್ಯದಲ್ಲಿ  ಥರ್ಮಲ್, ಜಲವಿದ್ಯುತ್, ಸೋಲಾರ್ ಮೂಲಕ ವಿದ್ಯುತ್ ಉತ್ಪಾದಿಸುತ್ತಿದ್ದು. ಥರ್ಮಲ್ ಘಟಕವು 1000 ಮೆಗಾ ವ್ಯಾಟ್ ಉತ್ಪಾದಿಸುತ್ತಿದೆ. ಸುಮಾರು 2400 ರಿಂದ 3200 ಮೆ.ವ್ಯಾ, ವಿದ್ಯುತ್ ಉತ್ಪಾದನೆ ಹೆಚ್ಚಾಗಿದೆ.  ಕಬ್ಬು ಅರೆಯುವುದು ಪ್ರಾರಮಭವಾಗಿ ಕೋ-ಜನರೇಷನ್ ಆಗಿರುವುದರಿಂದ 450 ಮೆ.ವ್ಯಾಟ್ ಉತ್ಪಾದನೆಯಾಗಿದೆ. ಕೂಡ್ಲಗಿಯಲ್ಲಿ 150 ಮೆ.ವ್ಯಾ ಕರ್ನಾಟಕಕ್ಕೆ ಉಳಿತಾಯವಾಗಲಿದೆ ಹಾಗೂ ಖರೀದಿ ಮಾಡುತ್ತಿರುವುದರಿಂದ ಹೆಚ್ಚು ವಿದ್ಯುತ್ ದೊರೆಯಲಿದೆ. ಹಾಗಾಗಿ ಇಂದಿನಿಂದ  7 ತಾಸು ವಿದ್ಯುತ್‍ನ್ನು ಪಂಪ್‍ಸೆಟ್‍ಗಳಿಗೆ ನೀಡುತ್ತಿದ್ದೇವೆ. ಕೈಗಾರಿಕೆಗಳಿಗೆ, ಗೃಹಬಳಕೆಗೆ  ವಿದ್ಯುತ್ ಕಡಿತ ಮಾಡಲಾಗುತ್ತಿಲ್ಲ. ಪಂಪ್‍ಸೆಟ್‍ಗಳಿಗೆ ನೀಡುವ ವಿದ್ಯುತ್ ಸಹಾಯಧನವನ್ನು ಸರ್ಕಾರವೇ ನೀಡಿದೆ. 13100 ಕೋಟಿ ರೂ.ಗಳನ್ನು ಬಜೆಟ್‍ನಲ್ಲಿ ಒದಗಿಸಲಾಗಿದೆ ಎಂದರು.

ವಿವಿಧ ವಿದ್ಯುತ್ ಕಂಪನಿಗಳ 389.66 ಕೋಟಿ ರೂ.ಗಳು ಬಾಕಿ ಮನ್ನಾ
ಭಾಗ್ಯಜ್ಯೋತಿ, ಕುಟೀರ ಜ್ಯೋತಿಗೆ 18 ಯೂನಿಟ್‍ಗಳ ಮಿತಿಯಿತ್ತು. ಅದನ್ನು 40 ಯೂನಿಟ್‍ಗಳಿಗೆ ನಮ್ಮ ಸರ್ಕಾರವೇ ಹಿಂದೆ ಹೆಚ್ಚಳ ಮಾಡಿತ್ತು. ಈ ಗೃಹಜ್ಯೋತಿ ಬಂದ ನಂತರ ಭಾಗ್ಯಜ್ಯೋತಿ, ಕುಟೀರ ಜ್ಯೋತಿ, ಅಮೃತಜ್ಯೋತಿಗಳನ್ನು ಗೃಹಜ್ಯೋತಿ ಯೋಜನೆಯಡಿ ಸೇರಿಸಿ, 58 ಯೂನಿಟ್‍ವರಗೆ ಉಚಿತವಾಗಿ ವಿದ್ಯುತ್ ನೀಡಲು ತೀರ್ಮಾನಿಸಿದೆ. ಭಾಗ್ಯಜ್ಯೋತಿ, ಕುಟೀರ ಜ್ಯೋತಿ, ಅಮೃತಜ್ಯೋತಿ ಯೋಜನೆಗಳಡಿ 389.66 ಕೋಟಿ ರೂ.ಗಳು ಬಾಕಿ ಉಳಿದಿದ್ದವು. ಬಾಕಿ ಇರುವುದರಿಂದ ಗೃಹಜ್ಯೋತಿಯಡಿ ಉಚಿತ ಕೊಡುವುದು ಕಷ್ಟವಾಗುತ್ತಿತ್ತು. ಆದ್ದರಿಂದ ಬಾಕಿ ಮೊತ್ತವನ್ನು ಒಂದು ಬಾರಿಗೆ ಮನ್ನಾ ಮಾಡಲಾಗುತ್ತಿದೆ. ಇನ್ನು ಮುಂದೆ ಬಾಕಿ ಕೊಡಬೇಕಾದ ಅಗತ್ಯವಿಲ್ಲ. ಸರ್ಕಾರಿ ಪ್ರಾಥಮಿಕ ಶಾಲೆ ಹಾಗೂ ಜೂನಿಯರ್ ಕಾಲೇಜುಗಳಿಗೆ ನವೆಂಬರ್ 1 ರಂದು ಘೋಷಿಸಿದಂತೆ ವಿದ್ಯುತ್ ಹಾಗೂ ನೀರಿನ ವೆಚವನ್ನು ಸರ್ಕಾರವ ಭರಿಸಲಿದೆ ಎಂದು ಸಭೆಯಲ್ಲಿ ತೀರ್ಮಾನ ಮಾಡಲಾಗಿದೆ.  ಮುಂದಿನ ಮುಂಗಾರಿನವರೆಗೆ ಮಳೆ ಬರುವುದಿಲ್ಲ ಎಂದು ಲೆಕ್ಕ ಹಾಕಿಯೇ ಈ ತೀರ್ಮಾನ ಮಾಡಲಾಗಿದೆ. ಜುಲೈ ಅಂತ್ಯದವರೆಗೆ ಲೆಕ್ಕ ಹಾಕಲಾಗಿದೆ ಎಂದರು.

ಶೇ 70 ರಷ್ಟು ಥರ್ಮಲ್ ವಿದ್ಯುತ್ ಉತ್ಪಾದನೆ:
ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿ ವಿದ್ಯುತ್ ಖರೀದಿಯ ಮೊತ್ತ ಎಷ್ಟು ವಿದ್ಯುತ್ ಖರೀದಿಸುತ್ತೇವೆ ಎನ್ನುವುದರ ಮೇಲೆ ಅವಲಂಬಿತವಾಗಿದೆ. ಶೇ 70 ರಷ್ಟು ಥರ್ಮಲ್ ವಿದ್ಯುತ್ ಉತ್ಪಾದನೆಯಾಗುತ್ತಿದೆ 1000 ಯೂನಿಟ್‍ವರೆಗೆ  ವಿದ್ಯುತ್‍ ಹೊರಗಿನಿಂದ ಖರೀದಿಯಾಗುತ್ತಿದೆ ಎಂದರು. ಸ್ಥಳೀಯ  ಹಾಗೂ ಆಮದು ಮಾಡಿದ ಕಲ್ಲಿದ್ದಲನ್ನು ಮಿಶ್ರ ಮಾಡಿ ಬಳಸುವುದರಿಂದ ವಿದ್ಯುತ್ ಉತ್ಪಾದನೆಯಾಗುತ್ತದೆ. ಉತ್ತರಪ್ರದೇಶ ಹಾಗೂ ಪಂಜಾಬ್ ನಡುವೆ ನಮ್ಮದು ವಿನಿಮಯ ಪದ್ದತಿ ಇದೆ. ಈಗ ಪಡೆದು, ಜೂನ್‍ನಿಂದ ನಾವು ಅವರಿಗೆ ಹಿಂದಿರುಗಿಸುತ್ತೇವೆ. ಯಾವುದೇ ಖಾಸಗಿಯವರಿಂದ ವಿದ್ಯುತ್ ಖರೀದಿಸಿಲ್ಲ ಎಂದು ವಿವರಿಸಿದರು.

ಗೃಹಲಕ್ಷ್ಮಿ ಯೋಜನೆಯ ಎರಡು ಸಾವಿರಗಳನ್ನು ಚಿಟ್ ಫಂಡ್ ಹೂಡಿಕೆ ಮಾಡುವ ಪ್ರಸ್ತಾಪ ಸರ್ಕಾರದ ಮುಂದಿದೆಯೇ ಎಂಬ ಪ್ರಶ್ನೆಗೆ ಉತ್ತರಿಸುತ್ತಾ, ಇಂತಹ ಯಾವುದೇ ಯೋಜನೆಗಳು ಸರ್ಕಾರದ ಮುಂದಿಲ್ಲ. ಮಹಿಳೆಯರಿಗೆ  ಡಿಬಿಟಿ ಮೂಲಕ ಎರಡು ಸಾವಿರ ರೂ.ಗಳು ನೀಡಲಾಗುತ್ತಿದ್ದು, ಇದನ್ನು ಮುಂದುವರೆಸಲಾಗುವುದು ಎಂದರು.

ಗಣಿ ಇಲಾಖೆಯ ಅಧಿಕಾರಿಗಳ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡುತ್ತಾ, ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿಯೊಬ್ಬರನ್ನು ವಶಕ್ಕೆ ಪಡೆಯಲಾಗಿದ್ದು, ಅವರು ಕೊಲೆಯಾದ ಅಧಿಕಾರಿಗಳ ವಾಹನಚಾಲಕರಾಗಿ ಕಾರ್ಯನಿರ್ವಹಿಸುತ್ತಿದ್ದ ಎನ್ನಲಾಗಿದೆ. ಈ ಬಗ್ಗೆ ತನಿಖೆ ನಡೆಯುತ್ತಿದೆ ಎಂದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com